ETV Bharat / city

ವಿನೂತನ ನಿಯಮ ಹೊರಡಿಸಿದ ಅಜ್ಜಾವರ ಗ್ರಾಮ ಪಂಚಾಯತ್: ಅನಧಿಕೃತ ವ್ಯಕ್ತಿಗಳಿಗೆ ಈ ಗ್ರಾಮಕ್ಕೆ ಪ್ರವೇಶ ಇಲ್ಲ

author img

By

Published : Aug 13, 2022, 6:45 AM IST

ಜನರ ಹಿತಕ್ಕಾಗಿ ಸುಳ್ಯದ ಅಜ್ಜಾವರ ಗ್ರಾಮ ಪಂಚಾಯತ್ ವಿನೂತನ ನಿಯಮ ಹೊರಡಿಸಿದೆ. ಅನಧಿಕೃತ ವ್ಯಕ್ತಿಗಳಿಗೆ ಈ ಗ್ರಾಮ ಪ್ರವೇಶಿಸುವುದಕ್ಕೆ ನಿರ್ಬಂಧ ವಿಧಿಸಿದೆ.

Sullia
ಸುಳ್ಯ

ಸುಳ್ಯ(ದಕ್ಷಿಣ ಕನ್ನಡ): ಪ್ರಸ್ತುತ ಕರಾವಳಿಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳನ್ನು ಮನಗಂಡು ಸುಳ್ಯದ ಅಜ್ಜಾವರ ಗ್ರಾಮ ಪಂಚಾಯತ್ ಆಡಳಿತವು ಇದೀಗ ಒಂದು ವಿನೂತನ ಕಾರ್ಯಕ್ಕೆ ಮುಂದಾಗಿದೆ. ಅನಧಿಕೃತ ವ್ಯಕ್ತಿಗಳಿಗೆ ಈ ಗ್ರಾಮಕ್ಕೆ ಪ್ರವೇಶ ಮಾಡುವುದನ್ನು ನಿರ್ಬಂಧಿಸಿದೆ.

Sullia
ಅನಧಿಕೃತ ವ್ಯಕ್ತಿಗಳ ಪ್ರವೇಶಕ್ಕೆ ನಿರ್ಬಂಧ

ಅನಧಿಕೃತ ಮತ್ತು ಸಂಶಯಾಸ್ಪದ ವ್ಯಕ್ತಿಗಳು ಕೆಲವು ದಿನಗಳಿಂದ ಸುಳ್ಯ, ಅಜ್ಜಾವರ ಪ್ರದೇಶಗಳಲ್ಲಿ ತಿರುಗುತ್ತಿರುವ ವಿಚಾರವನ್ನು ಹಲವರು ಗ್ರಾಮ ಪಂಚಾಯತ್​ಗೆ ಮೌಖಿಕವಾಗಿ ದೂರುಗಳು ನೀಡಿದ ಹಿನ್ನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಮನೆ ಮನೆಗೆ ತಿರುಗಾಟ ನಡೆಸಿ ವಸ್ತುಗಳನ್ನು ಮಾರಾಟ ಮಾಡುವ ರೀತಿಯಲ್ಲಿ, ಕೆಲವು ಸಂಘಟನೆಗಳ ಮುಖಂಡರ ಮನೆಗಳ ಸಮೀಪ ತಿರುಗಾಡುತ್ತಿರುವುದು ಗಮನಕ್ಕೆ ಬಂದಿರುತ್ತದೆ.

ಈ ಹಿನ್ನೆಲೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಪರಿಚಿತರು ಮನೆ ಮನೆಗೆ ಭೇಟಿ ನೀಡುವುದನ್ನು ಸಂಪೂರ್ಣವಾಗಿ ತಡೆಹಿಡಿಯಲಾಗಿದೆ. ಸಂಶಯಾಸ್ಪದ ವ್ಯಕ್ತಿಗಳು ತಿರುಗುತ್ತಿರುವುದು ಕಂಡು ಬಂದಿದ್ದು, ಯಾವುದೇ ರೀತಿಯಲ್ಲಿ ಮನೆ ಮನೆಗೆ ವ್ಯಾಪಾರ ಮಾಡುವ ಉದ್ದೇಶದಿಂದ ಬರುವುದಿದ್ದರೆ ಇಲ್ಲಿನ ಗ್ರಾಮ ಪಂಚಾಯತ್​​ನಿಂದ ಪ್ರತ್ಯೇಕ ಪರವಾನಗಿ ಪಡೆಯುವುದು ಕಡ್ಡಾಯವಾಗಿದೆ.

ಈ ಕುರಿತಾಗಿ ಅಧಿಕೃತವಾಗಿ ಸುಳ್ಯ ಪೋಲಿಸ್ ಠಾಣೆಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಗ್ರಾಮದಲ್ಲಿ ಇಂತಹ ಯಾವುದೇ ತರಹದ ವ್ಯಕ್ತಿಗಳು ಕಂಡು ಬಂದಲ್ಲಿ ಗ್ರಾಮ ಪಂಚಾಯತ್ ಅಥವಾ ಪೊಲೀಸ್​​ ಇಲಾಖೆಗೆ ಅವರನ್ನು ತಕ್ಷಣವೇ ಹಿಡಿದು ಕೊಡಬೇಕು ಎಂದು ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮಸ್ಥರಿಗೆ ಮತ್ತು ಸುಳ್ಯ ಪೊಲೀಸ್​​ ಇಲಾಖೆಗೆ ತಿಳಿಸಿದ್ದಾರೆ.

ಇದನ್ನೂ ಓದಿ: ರಸ್ತೆ ಹೊಂಡದಿಂದ ಯುವಕನ‌ ಸಾವು: ಪಾಲಿಕೆ ಮುಂದೆ ಸ್ನೇಹಿತನ ಏಕಾಂಗಿ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.