ETV Bharat / city

ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಗೆ ಕಾಯಕಲ್ಪ... 80 ರಿಂದ 300ಕ್ಕೇರಿದ ವಿದ್ಯಾರ್ಥಿಗಳ ಸಂಖ್ಯೆ!

author img

By

Published : Oct 24, 2021, 6:50 PM IST

ವಾಮಂಜೂರು ನಿವಾಸಿ ಸಿವಿಲ್ ಇಂಜಿನಿಯರ್ ರಘು ಸಾಲ್ಯಾನ್ ಹಾಗೂ ಮಂಗಳೂರು ಮನಪಾ ಸದಸ್ಯೆ ಹೇಮಲತಾ ರಘು ಸಾಲ್ಯಾನ್ ದಂಪತಿಗಳು ನಗರದ ಹೊರವಲಯದ ವಾಮಂಜೂರು ತಿರುವೈಲು ಮಾ.ಹಿ.ಪ್ರಾ‌.ಶಾಲೆಯನ್ನು ಮೇಲ್ದರ್ಜೆಗೇರಿಸಲು‌ ಶ್ರಮಿಸಿದ್ದಾರೆ. ಇದೀಗ ಈ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದೆ.

Vamanjoor Thiruvail Govt school
ವಾಮಂಜೂರು ತಿರುವೈಲು ಸರ್ಕಾರಿ ಶಾಲೆ

ಮಂಗಳೂರು: ಹೆಚ್ಚಾಗಿ ಸರ್ಕಾರಿ ಶಾಲೆಗಳು ಅವಜ್ಞೆಗೆ ಗುರಿಯಾಗುತ್ತಲೇ ಇರುತ್ತವೆ. ಬಹುತೇಕರು ಸರ್ಕಾರಿ ಶಾಲೆಗಳಲ್ಲಿ ವ್ಯವಸ್ಥೆ ಸರಿ ಇರಲ್ಲ, ಶಿಕ್ಷಣದ ಗುಣಮಟ್ಟ ಉತ್ತಮವಾಗಿಲ್ಲ ಎಂದು ಹೀಗೆ ಸಬೂಬುಗಳನ್ನು ಕೊಡುತ್ತಲೇ ಇರುತ್ತಾರೆ. ಆದರೆ ಇಲ್ಲೊಂದು ದಂಪತಿ ಇದೇ ರೀತಿ ನಗಣ್ಯತೆಗೆ ಒಳಗಾಗಿ ಮುಚ್ಚುವ ಹಂತದಲ್ಲಿದ್ದ ಸರ್ಕಾರಿ ಶಾಲೆಯೊಂದಕ್ಕೆ ಸಕಲ ಸವಲತ್ತುಗಳನ್ನು ಒದಗಿಸಿ ಮೇಲ್ದರ್ಜೆಗೇರಿಸುವ ಕಾರ್ಯ ಮಾಡಿದ್ದಾರೆ.

ವಾಮಂಜೂರು ನಿವಾಸಿ ಸಿವಿಲ್ ಇಂಜಿನಿಯರ್ ರಘು ಸಾಲ್ಯಾನ್ ಹಾಗೂ ಮಂಗಳೂರು ಮನಪಾ ಸದಸ್ಯೆ ಹೇಮಲತಾ ರಘು ಸಾಲ್ಯಾನ್ ದಂಪತಿಗಳು ನಗರದ ಹೊರವಲಯದ ವಾಮಂಜೂರು ತಿರುವೈಲು ದ‌.ಕ.ಜಿ.ಪಂ.ಮಾ.ಹಿ.ಪ್ರಾ‌.ಶಾಲೆಯನ್ನು ಮೇಲ್ದರ್ಜೆಗೇರಿಸಲು‌ ಶ್ರಮಿಸಿದ್ದಾರೆ. ಇದೀಗ ಈ ಸರ್ಕಾರಿ ಶಾಲೆ ಯಾವ ಖಾಸಗಿ ಶಾಲೆಗೂ ಕಡಿಮೆ ಇಲ್ಲದಂತೆ ಕಾರ್ಯ ನಿರ್ವಹಿಸುತ್ತಿದೆ.

ಮಕ್ಕಳ ದಾಖಲಾತಿ ಪ್ರಮಾಣ ಏರಿಕೆ:

ಶಾಲೆಯ ಗುಣಮಟ್ಟ ಉತ್ತಮವಾಗುತ್ತಿದ್ದಂತೆ ಇಂಗ್ಲೀಷ್ ಮಾಧ್ಯಮಕ್ಕೆ ಸೇರಲ್ಪಡುವ ವಿದ್ಯಾರ್ಥಿಗಳು ಕೂಡ ಈ ಕಡೆ ಮುಖ ಮಾಡಿದ್ದಾರೆ. ಪರಿಣಾಮ ಇಡೀ ಶಾಲೆಯಲ್ಲಿ 80ರಷ್ಟಿದ್ದ ಮಕ್ಕಳ ಸಂಖ್ಯೆ ಇದೀಗ 300ಕ್ಕೇರಿದೆ.

ಮುಚ್ಚುವ ಹಂತದಲ್ಲಿದ್ದ ವಾಮಂಜೂರು ತಿರುವೈಲು ಸರ್ಕಾರಿ ಶಾಲೆಗೆ ಕಾಯಕಲ್ಪ ಒದಗಿಸಿದ ದಂಪತಿ

5 ವರ್ಷಗಳಲ್ಲಿ ಶತಮಾನ ಪೂರೈಕೆ:

ವಿಶೇಷವೆಂದರೆ ಈ ಶಾಲೆ ಮುಂದಿನ ಐದು ವರ್ಷಗಳಲ್ಲಿ ಶತಮಾನ ಪೂರೈಸಲಿದೆ. ಸುಮಾರು 90-95 ವರ್ಷಗಳ ಕಾಲ ಈ ಶಾಲೆಯಿಂದ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಗಳಿಸಿದ್ದರು. ಹಿಂದೆ 800-900 ವಿದ್ಯಾರ್ಥಿಗಳು ಹಾಗೂ 9-10 ಶಿಕ್ಷಕರಿದ್ದ ಶಾಲೆಯಲ್ಲಿ 8 ವರ್ಷಗಳ ಹಿಂದೆ 80 ಮಕ್ಕಳಿರುವಲ್ಲಿಗೆ ಕುಸಿಯಿತು.

ಪ್ರಭಾರಿ ಮುಖ್ಯ ಶಿಕ್ಷಕರ ಸಹಕಾರ:

ಆಗ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕರಾದ ಗೋಪಾಲ್ ಎಂಬವರು ಶಾಲೆಯ ಹಳೆಯ ವಿದ್ಯಾರ್ಥಿಯಾದ ರಘು ಸಾಲ್ಯಾನ್ ಮತ್ತಿತರರನ್ನು ಕರೆದು ಶಾಲೆಯ ಪರಿಸ್ಥಿತಿಯನ್ನು ವಿವರಿಸಿದ್ದರು. ಪರಿಸ್ಥಿತಿಯನ್ನು ಅರಿತ ರಘು ಸಾಲ್ಯಾನ್-ಹೇಮಲತಾ ದಂಪತಿ ಈ ಶಾಲೆಗೆ ಕಾಯಕಲ್ಪ ಒದಗಿಸುವ ಚಿಂತನೆ ನಡೆಸಿದ್ದರು.

ತಕ್ಷಣ ಈ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳನ್ನು ಕರೆದು ಸಭೆ ಮಾಡಿ, ಹಳೆಯ ವಿದ್ಯಾರ್ಥಿಗಳು, ದಾನಿಗಳು ಸೇರಿ ಕೈಯಲ್ಲಿ ಇರುವಷ್ಟು ಹಣವನ್ನು ಒಟ್ಟುಗೂಡಿಸಿ ಶಾಲೆಯನ್ನು ಮೇಲ್ದರ್ಜೆಗೆ ಏರಿಸಬೇಕೆಂದು ನಿರ್ಧಾರ ಕೈಗೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಆಂಗ್ಲ ಮಾಧ್ಯಮ‌ ಶಾಲೆಯಂತೆ ಇಲ್ಲಿಯೂ ಎಲ್ ಕೆಜಿ ಹಾಗೂ ಯುಕೆಜಿ ಆರಂಭಿಸಲಾಯಿತು. ಜತೆಗೆ ಎಲ್ ಕೆಜಿ ಯುಕೆಜಿಗೆ ಬೋಧಿಸಲು ಇಬ್ಬರು ಶಿಕ್ಷಕರನ್ನು ನೇಮಕ ಮಾಡಲಾಯಿತು. ಅವರಿಗೆ ಇವರ ಕೈಯಿಂದಲೇ ಸಂಬಳ ಕೊಡುವ ವ್ಯವಸ್ಥೆ ಮಾಡಲಾಯಿತು.

ಮಕ್ಕಳನ್ನು ಮನೆಯಿಂದಲೇ ಕರೆದೊಯ್ಯಲು ಉಚಿತ ಕಾರು ವ್ಯವಸ್ಥೆ:

ಅಲ್ಲದೇ ತಮ್ಮ ಕಾರುಗಳಲ್ಲಿ ಮಕ್ಕಳನ್ನು ಮನೆಯಿಂದಲೇ ಉಚಿತವಾಗಿ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು. ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಒಂದು ಸೆಕೆಂಡ್ ಹ್ಯಾಂಡ್ ಬಸ್ ಖರೀದಿಸಲಾಯಿತು. ಆದರೆ ಕೊರೊನಾ ಲಾಕ್ ಡೌನ್ ಬಳಿಕ ಆ ಬಸ್ ಶಿಥಿಲಾವಸ್ಥೆ ತಲುಪಿತು. ಬಳಿಕ ಶಾಲೆ ಆರಂಭವಾದ ತಕ್ಷಣ ಮಕ್ಕಳಿಗೆ ಬಸ್ ವ್ಯವಸ್ಥೆ ಅಗತ್ಯವಿದೆ ಎನ್ನುವ ಕಾರಣಕ್ಕೆ ಹೇಮಲತಾ - ರಘುನಾಥ ಸಾಲ್ಯಾನ್ ದಂಪತಿ 10 ಲಕ್ಷ ರೂ. ವೆಚ್ಚದಲ್ಲಿ ಬಸ್ಸೊಂದನ್ನು ಖರೀದಿಸಿದ್ದಾರೆ. ಬಸ್ ಸುರಕ್ಷತೆಗೆ ಶೆಲ್ಟರ್ ನಿರ್ಮಿಸಲಾಗಿದೆ.

ಶಾಲೆಯ ಅಭಿವೃದ್ಧಿ ರೂವಾರಿ ರಘು ಸಾಲ್ಯಾನ್ ಮಾತನಾಡಿ, ಇದೀಗ ಈ‌ ಶಾಲೆ ಸ್ಥಳೀಯ ಶಾಸಕ ಡಾ.ವೈ.ಭರತ್ ಶೆಟ್ಟಿಯವರ ಮುತುವರ್ಜಿಯಿಂದ ಆಂಗ್ಲ ಮಾಧ್ಯಮ ಶಾಲೆಯಾಗಿ ಮೇಲ್ದರ್ಜೆಗೆ ಏರಿದೆ. ಈ ಮೂಲಕ ಈ ಬಾರಿಯಿಂದ 1ನೇ ಹಾಗೂ 2ನೇ ತರಗತಿಯಲ್ಲಿ ಆಂಗ್ಲ ಮಾಧ್ಯಮ ಬೋಧನೆ ಆರಂಭವಾಗಿದೆ.

ಈಗಲೂ‌ ಶಾಲೆಗೆ ತಿಂಗಳಿಗೆ 70 ಸಾವಿರ ರೂ. ಖರ್ಚು ಬೀಳುತ್ತದೆ. ಇದಕ್ಕೆ ದಾನಿಗಳ ನೆರವು ಅಗತ್ಯ. ಆದ್ದರಿಂದ ಇದೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ನೂರು ರೂ. ಕೊಟ್ಟರೂ ಎಲ್ಲರ ಕೈ ಜೋಡಿಸುವಿಕೆಯಿಂದ ದೊಡ್ಡ ಮೊತ್ತವಾಗಿ ಒದಗಿ ಬರುತ್ತದೆ ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.