ETV Bharat / city

ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯೋ ಅಗತ್ಯವಿಲ್ಲ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಕುರಿತು ಸಿ.ಟಿ ರವಿ ಪ್ರತಿಕ್ರಿಯೆ

author img

By

Published : May 16, 2022, 2:33 PM IST

ಮೊಘಲರು ಇತರೆ ಮುಸ್ಲಿಂ ದೊರೆಗಳ ಕಾಲದಲ್ಲಿ ಸಾವಿರಾರು ಗುಡಿಗಳನ್ನು ನಾಶ ಮಾಡಿಯೇ ಮಸಿದಿ ಕಟ್ಟಿದ್ದು ಜಾಗತಿಕ ಸತ್ಯ. ಇದಕ್ಕೆ ಕನ್ನಡಿ ಹಿಡಿಯುವ ಕೆಲಸ ನ್ಯಾಯಾಲಯ ಮಾಡುತ್ತಿದೆ. ಜ್ಞಾನ ವಾಪಿ ಮಸೀದಿಯಲ್ಲಿ ಸರ್ವೇ ಕಾರ್ಯ ನಡೆದಿದೆ. ವರದಿ ಸಲ್ಲಿಕೆಯ ನಂತರ ಸತ್ಯಾಂಶ ಹೊರ ಬರಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ..

ಸಿ ಟಿ ರವಿ
ಸಿ ಟಿ ರವಿ

ಕಲಬುರಗಿ : ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಪ್ರಕರಣ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದಾರೆ. ಮಸೀದಿಯಲ್ಲಿ ಸರ್ವೇ ಕಾರ್ಯ ನಡೆದಿದೆ. ವರದಿ ಸಲ್ಲಿಕೆಯ ನಂತರ ಸತ್ಯಾಂಶ ಹೊರ ಬರಲಿದೆ. ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯೋ ಅಗತ್ಯ ಇಲ್ಲ ಎಂದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತಮಾಡಿದ ಅವರು, ಮೊಘಲರು ಇತರೆ ಮುಸ್ಲಿಂ ದೊರೆಗಳ ಕಾಲದಲ್ಲಿ ಸಾವಿರಾರು ಗುಡಿಗಳನ್ನು ನಾಶ ಮಾಡಿಯೇ ಮಸೀದಿ ಕಟ್ಟಿದ್ದು ಜಾಗತಿಕ ಸತ್ಯವಾಗಿದೆ. ಇದಕ್ಕೆ ಕನ್ನಡಿ ಹಿಡಿಯುವ ಕೆಲಸ ನ್ಯಾಯಾಲಯ ಮಾಡುತ್ತಿದೆ. ಸರ್ವೇಕ್ಷಣಾ ವರದಿ ನಂತರ ಸರ್ಕಾರ ಸೂಕ್ತ ಕ್ರಮಕೈಗೊಳ್ಳುತ್ತದೆ ಎಂದರು.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಸಿ.ಟಿ ರವಿ ಮಾತನಾಡಿರುವುದು..

ಪರ್ಷಿಯನ್ ಭಾಷೆ ಹೇರಿದ್ದು ಟಿಪ್ಪು ಕಾಲದಲ್ಲೇ : ಇದೇ ವೇಳೆ ಶ್ರೀರಂಗಪಟ್ಟಣ ಮಸೀದಿ ವಿವಾದ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಶ್ರೀರಂಗಪಟ್ಟಣದಲ್ಲಿ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಸ್ಥಾನದ ಹೆಸರಿನಲ್ಲೇ ದಾಖಲೆ ಇರೋದು. ಟಿಪ್ಪು ಕಾಲದಲ್ಲಿ ದೇವಸ್ಥಾನದ ಮೇಲೆಯೇ ಅರ್ಧ ಮಸೀದಿ ಕಟ್ಟಲಾಗಿದೆ.

ಈ ಕುರಿತು ಸರ್ವೇಕ್ಷಣೆ ನಡೆಸಿದ್ರೆ ಸತ್ಯ ಹೊರಗೆ ಬರುತ್ತದೆ. ಟಿಪ್ಪು ಸುಲ್ತಾನ್​ನನ್ನು​ ಕೆಲವರು ಕನ್ನಡ ಪ್ರೇಮಿ ಅಂತಾರಲ್ಲ, ಕನ್ನಡವನ್ನು ಆಡಳಿತ ಭಾಷೆಯಿಂದ ತೆಗೆದು ಪರ್ಷಿಯನ್ ಭಾಷೆ ಹೇರಿದ್ದು ಟಿಪ್ಪು ಕಾಲದಲ್ಲೇ. ಕೆಲವರು ತಪ್ಪು ಮಾಹಿತಿಯಿಂದ ಟಿಪ್ಪು ಕನ್ನಡ ಪ್ರೇಮಿ ಅಂತಾರೆ. ಇನ್ನು ಕೆಲವರು ದುರುದ್ದೇಶದಿಂದ ಟಿಪ್ಪುವನ್ನು ಕನ್ನಡ ಪ್ರೇಮಿ ಅಂತಾರೆ ಎಂದು ಆರೋಪಿಸಿದರು.

ಮಡಿಕೇರಿಯ ಶಾಲೆಯಲ್ಲಿ ಮಕ್ಕಳಿಗೆ ಶಸ್ತ್ರಾಸ್ತ್ರ ತರಬೇತಿ ವಿಚಾರದ ಕುರಿತು ಮಾತನಾಡಿದ ಅವರು, ಮಡಿಕೇರಿಯ ಶಾಲೆಯಲ್ಲಿ ಭಜರಂಗದಳದ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಇಲ್ಲಿ ಮಕ್ಕಳಿಗೆ ಅಥವಾ ವಿದ್ಯಾರ್ಥಿಗಳಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿಲ್ಲ. ಆತ್ಮರಕ್ಷಣೆಗಾಗಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ. ಪೊಲೀಸರಿಗೆ ಯಾವ ರೀತಿ ತರಬೇತಿ ನೀಡಲಾಗುತ್ತದೆಯೋ ಹಾಗೆ ತರಬೇತಿ ನೀಡಲಾಗಿದೆ ಎಂದರು.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಸಿ.ಟಿ ರವಿ ಮಾತನಾಡಿರುವುದು..

ಭ್ರಷ್ಟಾಚಾರ ರಹಿತ ಆಡಳಿತ ಕಾಂಗ್ರೆಸ್​ನಿಂದ ಅಸಾಧ್ಯ : ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಕಾಂಗ್ರೆಸ್ ನಿಯಮದ ಕುರಿತು ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ, ಕಾಂಗ್ರೆಸ್​ಗೆ ನಿಯಮ ಮಾಡೋದು ಗೊತ್ತು, ಅದನ್ನು ಬೈಪಾಸ್ ಮಾಡೋದು ಗೊತ್ತು. ಐದು ವರ್ಷ ಕಾರ್ಯಕರ್ತನಾಗಿ ದುಡಿದಿದ್ರೆ ಟಿಕೆಟ್ ನೀಡಬಹುದು ಎನ್ನುವ ಪರ್ಯಾಯ ಮಾರ್ಗವನ್ನು ಹುಡುಕಿಕೊಂಡಿದ್ದಾರೆ. ಕಾಂಗ್ರೆಸ್‌ನಿಂದ ಪ್ರಾಮಾಣಿಕತೆ, ದೇಶಭಕ್ತಿ ನಿರೀಕ್ಷೆ ಮಾಡಬೇಡಿ. ವಂಶವಾಹಿನಿ ಹೊರತಾದ ರಾಜಕಾರಣ. ಮತೀಯ ಓಲೈಕೆ ಇಲ್ಲದ ರಾಜಕಾರಣ, ಭ್ರಷ್ಟಾಚಾರ ರಹಿತ ಆಡಳಿತ ಕಾಂಗ್ರೆಸ್​ನಿಂದ ನಿರೀಕ್ಷೆ ಮಾಡಿದ್ರೆ ಭ್ರಮನಿರಸನವಾಗುತ್ತದೆ ಎಂದರು‌.

ನಮಗೆ ಅಂಬೇಡ್ಕರ್ ಸಂವಿಧಾನ‌ ಮಾತ್ರ ಗೊತ್ತು: ಬಿಜೆಪಿಯವರಿಗೆ ಸಂವಿಧಾನ ಕಲಿಸಬೇಕಾಗಿದೆ ಎನ್ನುವ ಶಾಸಕ ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಸಿಟಿ ರವಿ, ನಮಗೆ ಅಂಬೇಡ್ಕರ್ ಸಂವಿಧಾನದ ಬಗ್ಗೆ ಗೊತ್ತು. ಆದರೆ, ಖರ್ಗೆ ಅವರ ಸಂವಿಧಾನದ ಬಗ್ಗೆ ಗೊತ್ತಿಲ್ಲ ಎಂದರು.

ಕಾಂಗ್ರೆಸ್​ನಲ್ಲೇ ಇದ್ರೆ ಮೂರ್ಖರು : ಬುದ್ಧಿವಂತರು ಕಾಂಗ್ರೆಸ್​ನಲ್ಲಿ ಇರಲ್ಲ, ಮಹಾ ಮೂರ್ಖರು ಮಾತ್ರ ಕಾಂಗ್ರೆಸ್​ನಲ್ಲಿ ಉಳಿಯುತ್ತಿದ್ದಾರೆ. ಬಿಜೆಪಿಗೆ ಬರೋಕೆ ಬಹಳಷ್ಟು ನಾಯಕರು ಕಾಯುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಇದ್ರೆ ಉಳಿಗಾಲವಿಲ್ಲ ಅನ್ನೋದು ಬಹಳಷ್ಟು ಜನರಿಗೆ ಗೊತ್ತಾಗಿದೆ. ಮೈಸೂರು-ಕಲ್ಯಾಣ ಕರ್ನಾಟಕದಲ್ಲೂ ಆಪರೇಷನ್ ಶುರುವಾಗುತ್ತದೆ. ಎಲ್ಲರ ಸಂಪರ್ಕ ಆಗುತ್ತಿದೆ, ಮುಹೂರ್ತ ಮಾತ್ರ ಬಾಕಿ ಎಂದು ತಿಳಿಸಿದರು.

ಮದರಸಾಗಳಲ್ಲಿ ಕಡ್ಡಾಯ ರಾಷ್ಟ್ರಗೀತೆ : ರಾಷ್ಟ್ರಗೀತೆ ಹೇಳುವ ವಿಚಾರ ವಿವಾದ ಆಗಬೇಕಾ?, ಇದು ಚರ್ಚೆಯ ವಿಚಾರ ಆಗಬೇಕಾ?, ಇದನ್ನು ವಿವಾದ ಮಾಡಲು ಬಯಸಿದ್ರೆ ಅವರನ್ನು ದೇಶಭಕ್ತರು ಎನ್ನಲು ಆಗುತ್ತಾ ಎಂದರು. ವಿಧಾನ ಪರಿಷತ್ ಚುನಾವಣೆಗೆ ವಿಜಯೇಂದ್ರ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ರಾಜಕೀಯ ಧ್ರುವೀಕರಣ ನಿಂತ ನೀರಲ್ಲ. ಪಕ್ಷ ಮನಸು ಮಾಡಿದ್ರೆ ಪ್ರತಾಪ್​ ಸಿಂಹರಂತೆ ನಿಮ್ಮನ್ನು ಮಾಡಬಹುದು. ಯಾರನ್ನು ಬೇಕಾದ್ರೂ ಪಕ್ಷ ಎಂಎಲ್‌ಸಿ ಮಾಡಬಹುದು ಎಂದರು.

ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಸಮೀಕ್ಷೆ: ಬಾವಿಯೊಳಗೆ ಶಿವಲಿಂಗ ಪತ್ತೆಯಾಗಿದೆ ಎಂದ ಹಿಂದೂ ವಕೀಲರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.