ETV Bharat / city

ದಾವಣಗೆರೆ: ಉದ್ಯಮಕ್ಕೆ ಕೊರೊನಾ ಬಿಸಿ; ಬೆಣ್ಣೆಯಂತೆ ಕರಗಿದ ವಹಿವಾಟು

author img

By

Published : Aug 22, 2020, 5:27 PM IST

ಕೊರೊನಾ ವೈರಸ್​ ಹೊಡೆತಕ್ಕೆ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ತತ್ತರಗೊಂಡಿರುವ ಉದ್ಯಮ ವಲಯ ಚೇತರಿಕೆ ಕಾಣಲು ಅಸ್ತವ್ಯಸ್ತಗೊಂಡಿರುವ ಜನಜೀವನ ಸಹಜ ಸ್ಥಿತಿಗೆ ಮರಳಬೇಕಿದೆ. ಅಲ್ಲಿಯವರೆಗೂ ಉದ್ಯಮ ವಲಯ ನಷ್ಟದಲ್ಲೇ ಮುಂದುವರಿಯುವ ಸಾಧ್ಯತೆ ಇದೆ ಎಂದು ತಜ್ಞರು ಹೇಳುತ್ತಿದ್ದಾರೆ.

Cloths shop
ಬಟ್ಟೆ ಅಂಗಡಿ

ದಾವಣಗೆರೆ: ಅನ್​ಲಾಕ್ 3.0 ಜಾರಿ ಮಾಡಲಾಗಿದ್ದರೂ ವ್ಯಾಪಾರೋದ್ಯಮ ಇನ್ನೂ ಚೇತರಿಸಿಕೊಂಡಿಲ್ಲ. ಟೆಕ್ಸ್​​ಟೈಲ್​, ಹೊಲಿಗೆ, ಹೋಟೆಲ್ ಸೇರಿದಂತೆ ಎಲ್ಲಾ ಉದ್ಯಮಗಳು ಸಂಪೂರ್ಣವಾಗಿ ನೆಲಕಚ್ಚಿದ್ದು, ವರ್ತಕರು ವ್ಯಾಪಾರಕ್ಕೆ ಮರಳಿದರೂ ವಹಿವಾಟು ಅಷ್ಟಕಷ್ಟೆ.

ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ ಜಿಲ್ಲೆ ವಾಣಿಜ್ಯೋದ್ಯಮದಲ್ಲಿ ಮುಂಚೂಣಿಯಲ್ಲಿದೆ. ಬೆಣ್ಣೆದೋಸೆ, ಖಾರ, ಮಂಡಕ್ಕಿ, ಬಟ್ಟೆ ವ್ಯಾಪಾರ ಸೇರಿದಂತೆ ಇತರೆ ವ್ಯಾಪಾರವು ಕೊರೊನಾ ಬರುವುದಕ್ಕೂ ಮುನ್ನ ಉತ್ತಮವಾಗಿಯೇ ನಡೆಯುತ್ತಿತ್ತು. ಲಾಕ್​ಡೌನ್​ ಬಳಿಕ ಅದರ ವಾತಾವರಣವೇ ಬದಲಾಯಿತು. ಇದರಿಂದಾಗಿ ಶೇ.75ರಷ್ಟು ವಾಪಾರ ವಹಿವಾಟು ಕುಸಿದಿದೆ ಎನ್ನಲಾಗ್ತಿದೆ.

ಆನ್‌ಲೈನ್‌ ವ್ಯವಹಾರವೂ ಸ್ಥಗಿತ:

ಬೆಣ್ಣೆದೋಸೆ ರುಚಿ ಸವಿಯಲು ಬೇರೆ ಬೇರೆ ಜಿಲ್ಲೆಗಳಿಂದ ಜನರು, ಸೆಲೆಬ್ರಿಟಿಗಳು, ರಾಜಕಾರಣಿಗಳು, ನಟ-ನಟಿಯರು ಬರುತ್ತಿದ್ದರು. ಆನ್​ಲೈನ್ ಮೂಲಕವೂ ಬುಕ್ಕಿಂಗ್ ಜೋರು‌ ನಡೆಯುತಿತ್ತು. ಕೋವಿಡ್​-19 ಭೀತಿಯಿಂದಾಗಿ ಈಗ ಅದಕ್ಕೆ ಕೊಕ್ಕೆ ಬಿದ್ದಿದೆ.

ನಗರದ ಬಿ.ಎಸ್.ಚನ್ನಬಸಪ್ಪ, ಅಂಬಾರ್ಕರ್, ರವಿತೇಜ ಸೇರಿದಂತೆ ದೊಡ್ಡ ದೊಡ್ಡ ಟೆಕ್ಸ್​​ಟೈಲ್‌​​​ಗಳಲ್ಲಿ ಜನ ಕಾಣಸಿಗುವುದೇ ವಿರಳ.‌ ತೀರಾ ಅನಿವಾರ್ಯ ಇದ್ದರೆ ಮಾತ್ರ ಬಟ್ಟೆ ಖರೀದಿಸುತ್ತಿದ್ದಾರೆ. ಇನ್ನು ಹೊಲಿಗೆ ಅಂಗಡಿಗಳ ಗೋಳು ಹೇಳತೀರದು. 18 ಕಾರ್ಮಿಕರಿದ್ದ ಸ್ಥಳಗಳಲ್ಲಿ‌ ಮೂವರು ಮಾತ್ರ ಕೆಲಸ ಮಾಡುತ್ತಿದ್ದಾರೆ. ಇವರಿಗೂ ಸಂಬಳ ಕೊಡಲು ಆಗದಂಥ ಸ್ಥಿತಿ ಬಂದೊದಗಿದೆ. ಇನ್ನೂ ಕೆಲ ದಿನ ಬೋಣಿಯೇ ಆಗದಿರುವ ಪರಿಸ್ಥಿತಿ ಕಾಣುತ್ತಿದೆ.

ಲಾಕ್​ಡೌನ್​ ನಂತರವೂ ವ್ಯಾಪಾರ ವಹಿವಾಟು ಕುಸಿತ

ಒಂದೆಡೆ ವ್ಯಾಪಾರ ಇಲ್ಲ, ಮತ್ತೊಂದೆಡೆ ಉದ್ಯೋಗವಿಲ್ಲ. ಜನರ ಕೈಯಲ್ಲಿ ಹಣವೂ ಇಲ್ಲ. ಹಳ್ಳಿ ಜನರು ಸಿಟಿಯತ್ತ ಬರುತ್ತಿಲ್ಲ. ಗ್ರಾಮೀಣ ಪ್ರದೇಶಗಳಲ್ಲಿಯೂ ಕೊರೊನಾ ಹೆಚ್ಚುತ್ತಿರುವ ಕಾರಣ ನಗರಕ್ಕೆ ಬರುವವರು ಕಡಿಮೆ‌ ಆಗುತ್ತಿದ್ದಾರೆ. ಅಗತ್ಯ ವಸ್ತುಗಳ ಖರೀದಿ ಬಿಟ್ಟರೆ ಬೇರೆ ಯಾವ ಉದ್ಯಮವೂ ಅಷ್ಟಕಷ್ಟೆ. ನನ್ನ 30 ವರ್ಷದ ಹೊಲಿಗೆ ವೃತ್ತಿಯಲ್ಲಿ ಎಂದೂ ಇಂಥ ಸಂಕಷ್ಟ ಕಂಡಿರಲಿಲ್ಲ ಎನ್ನುತ್ತಾರೆ ರಾಜ್ಯ ಹೊಲಿಗೆ ನೌಕರರ ಅಧ್ಯಕ್ಷ ಕೆ.ಜಿ.ಯಲ್ಲಪ್ಪ.

ಗ್ಯಾರೇಜ್, ಆಟೋ ಮೊಬೈಲ್ ಅಂಗಡಿಗಳು ಇದಕ್ಕೆ ಹೊರತಾಗಿಲ್ಲ. ವಾಹನಗಳು ರಿಪೇರಿ‌ ಇದ್ದರೂ ಮಾಡಿಸುತ್ತಿಲ್ಲ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಕಾರಣ ಹೆಚ್ಚು ವಾಹನಗಳನ್ನು ಉಪಯೋಗಿಸುತ್ತಿಲ್ಲ. ಆದ ಕಾರಣ ನಮ್ಮ ವ್ಯಾಪಾರವೂ ಇಲ್ಲ.‌ ಈಗಲೇ ಪರಿಸ್ಥಿತಿ ಹೀಗಾದರೆ ಮುಂದೆ ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ವರ್ತಕರು. ಈ ಎಲ್ಲಗಳ ನಡುವೆ ಭಾರಿ ಪ್ರಮಾಣದಲ್ಲಿ ಉದ್ಯೋಗ ಕುಸಿತವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.