ETV Bharat / city

ಇಂದು ವಿಶ್ವ ಅಂಗಾಂಗ ದಾನ ದಿನ: ಅಂಗಾಂಗ ದಾನಕ್ಕೆ ಸಿಎಂ ಬೊಮ್ಮಾಯಿ, ಸಚಿವ ಸುಧಾಕರ್‌ ಹೆಸರು ನೋಂದಣಿ

author img

By

Published : Aug 13, 2022, 8:03 AM IST

ವಿಶ್ವ ಅಂಗಾಂಗ ದಾನ ದಿನಾಚರಣೆ
ವಿಶ್ವ ಅಂಗಾಂಗ ದಾನ ದಿನಾಚರಣೆ

ಇಂದು ವಿಶ್ವ ಅಂಗಾಂಗ ದಾನ ದಿನದ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ, ಸಚಿವ ಸುಧಾಕರ್ ಸೇರಿ ಹಲವರು ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಲಿದ್ದಾರೆ.

ಬೆಂಗಳೂರು: ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಇಂದು ರಾಜ್ಯದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಿಎಂ ಬೊಮ್ಮಾಯಿ ಸೇರಿ ಹಲವು ಸಚಿವರು ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಲಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಕಾಲದಲ್ಲಿ ಎಲ್ಲರೂ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಂಡು ಮತ್ತೊಬ್ಬರ ಬದುಕಿಗೆ ಅಮೃತವಾಗಬೇಕು. ಬೆಂಗಳೂರಿನ ಮೇಖ್ರಿ ಸರ್ಕಲ್‌ನಿಂದ ಫ್ರೀಡಂ ಪಾರ್ಕ್‌ವರೆಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಯುವಜನರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಸುಮಾರು 5 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾನವ ಸರಪಳಿ ನಿರ್ಮಿಸಿ ಒಬ್ಬರಿಗೊಬ್ಬರು ಸಹಕಾರ ನೀಡುವ ಸಂದೇಶ ಸಾರಲಾಗುವುದು. ಜೊತೆಗೆ ತ್ರಿಪುರ ವಾಸಿನಿಯಲ್ಲಿ ಬೆಳಗ್ಗೆ 8 ರಿಂದ 8.15 ರವರೆಗೆ ಆರೋಗ್ಯ ಕ್ಷೇತ್ರದ ಹಲವರು ಮೂತ್ರಪಿಂಡದ ಆಕಾರದಲ್ಲಿ ನಿಂತುಕೊಂಡು ಜಾಗೃತಿ ಮೂಡಿಸಲಿದ್ದಾರೆ ಎಂದು ವಿವರಿಸಿದರು.

ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂಗಾಂಗ ದಾನಿಗಳ ಕುಟುಂಬದವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸನ್ಮಾನ ಮಾಡಲಿದ್ದಾರೆ. ಹಾಗೆಯೇ ಅಂಗಾಂಗ ಪಡೆದವರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಮುಖ್ಯಮಂತ್ರಿ ಕೂಡ ಸ್ಥಳದಲ್ಲೇ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ. ಜೊತೆಗೆ ನಾನು ಹಾಗೂ ಅಧಿಕಾರಿಗಳು ಕೂಡ ಹೆಸರು ನೋಂದಾಯಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದರು.

ಅಂಗಾಂಗ ದಾನ ಸರ್ವಶ್ರೇಷ್ಠ ದಾನ. ಪ್ರಧಾನಿ ನರೇಂದ್ರ ಮೋದಿ ಕೂಡ ಮನ್‌ ಕೀ ಬಾತ್‌ನಲ್ಲಿ ಈ ಕುರಿತು ಕರೆ ನೀಡಿದ್ದಾರೆ. ದೇಶದಲ್ಲಿ 10 ಲಕ್ಷ ಸಾವುಗಳಾದರೆ, 0.08 ಜನರಿಂದ ಮಾತ್ರ ಅಂಗಾಂಗ ದಾನವಾಗುತ್ತಿದೆ. ಸ್ಪೇನ್‌ನಲ್ಲಿ ಈ ಪ್ರಮಾಣ 40 ಆಗಿದೆ. ಕೆಲ ಸಾಮಾಜಿಕ, ಧಾರ್ಮಿಕ ಹಿನ್ನೆಲೆಯಿಂದಲೂ ಅಂಗಾಂಗ ದಾನಕ್ಕೆ ತೊಡಕುಂಟಾಗುತ್ತಿದೆ.

ರಾಜ್ಯದಲ್ಲಿ ಅಂಗಾಂಗ ದಾನಕ್ಕೆ ಸಂಬಂಧಿಸಿದ ಚಟುವಟಿಕೆ ನಿರ್ವಹಣೆ ಮಾಡಲು ಜೀವಸಾರ್ಥಕತೆ ಎಂಬ ಸೊಸೈಟಿ ಇತ್ತು. ಈಗ ಸೊಟ್ಟೊ ಕರ್ನಾಟಕ ಇದೆ. ಸೊಟ್ಟೊ ಕರ್ನಾಟಕದಲ್ಲಿ ಆನ್‌ಲೈನ್‌ ನೋಂದಣಿಗೆ ಅವಕಾಶವಿದೆ. ಇದರಲ್ಲಿ 11 ಸಾವಿರ ಜನರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾಡಿದ್ದಾರೆ. ಕರ್ನಾಟಕ ಈ ವಿಚಾರದಲ್ಲಿ ಮಾದರಿಯಾಗಬೇಕಿದೆ.

ರಾಜ್ಯದಲ್ಲಿ ಮೂತ್ರಪಿಂಡ ಬೇಕೆಂದು 4,354 ಅರ್ಜಿ ಹಾಕಿದ್ದಾರೆ. ಅದೇ ರೀತಿ, 1,141 ಜನರು ಯಕೃತ್ತು, 91 ಜನರು ಹೃದಯ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ. ಸೀನಿಯಾರಿಟಿ ಆಧಾರದಲ್ಲಿ ಅವರಿಗೆ ಅಂಗಾಂಗ ನೀಡಲಾಗುತ್ತದೆ ಎಂದು ವಿವರಿಸಿದರು. ದೇಶದಲ್ಲಿ 3-4 ಲಕ್ಷ ಮೂತ್ರಪಿಂಡಗಳು ಅಂಗಾಂಗ ದಾನಕ್ಕೆ ಅಗತ್ಯವಿದೆ. ಕೋವಿಡ್‌ ಬಂದಾಗ ದಾನದ ಪ್ರಮಾಣ ಬಹಳ ಕಡಿಮೆಯಾಗಿತ್ತು. ರಾಜ್ಯದಲ್ಲಿ ನಿಮ್ಹಾನ್ಸ್‌ ಹಾಗೂ ಬೌರಿಂಗ್‌ ಸಂಸ್ಥೆಯಲ್ಲಿ ಮಾತ್ರ ಅಂಗಾಂಗ ದಾನ ಕೇಂದ್ರಗಳಿದ್ದವು.

ಎಲ್ಲ ವೈದ್ಯಕೀಯ ಕಾಲೇಜುಗಳಲ್ಲಿ ಈ ಕೇಂದ್ರಗಳನ್ನು ನಿರ್ಮಿಸಲು ಕ್ರಮ ವಹಿಸಿದ್ದರಿಂದ ಈಗ 18 ಅಂಗಾಂಗ ದಾನ ಕೇಂದ್ರಗಳಿವೆ. ಈಗ ಅಂಗಾಂಗ ದಾನ ಮಾಡಲು ಅನೇಕರು ಮುಂದೆ ಬರುತ್ತಿರುವುದು ಭರವಸೆ ಮೂಡಿಸಿದೆ. ನಟ ಪುನೀತ್‌ ರಾಜ್‌ಕುಮಾರ್‌ ಅವರ ನೇತ್ರದಾನದಿಂದ ಐದು ಜನರಿಗೆ ದೃಷ್ಟಿ ನೀಡಲಾಗಿದೆ. ನಟ ಸಂಚಾರಿ ವಿಜಯ್‌ ಅವರ ಅಂಗಾಂಗಳನ್ನು ನೀಡಿ ಐದು ಜನರಿಗೆ ಜೀವ ನೀಡಲಾಗಿದೆ ಎಂದರು.

ಅಂಗಾಂಗ ದಾನ ಹಾಗೂ ಕಸಿ ವೇಗವಾಗಿ ನಡೆಯಲು ಏರ್‌ ಆ್ಯಂಬುಲೆನ್ಸ್​​ ಸೌಲಭ್ಯ ತರಲಾಗುತ್ತಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗ್ಯಾಸ್ಟ್ರೊ ಎಂಟರಾಲಜಿ ಸಂಸ್ಥೆಯಲ್ಲಿ ಬಹಳ ಕಡಿಮೆ ವೆಚ್ಚದಲ್ಲಿ, ಆಯುಷ್ಮಾನ್‌ ಭಾರತ್‌ ಯೋಜನೆಯಡಿ ಕಸಿ ಸೌಲಭ್ಯವಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕಡಿಮೆ ಬೆಲೆ ನಿಗದಿ ಮಾಡಲು ಚರ್ಚಿಸಲಾಗುವುದು ಎಂದು ತಿಳಿಸಿದರು.

(ಇದನ್ನೂ ಓದಿ: ಅಂಗಾಂಗ ದಾನ ಎಂದರೇನು, ಈ ಕಾರ್ಯ ಹೇಗೆ ನಡೆಯುತ್ತದೆ? ವೈದ್ಯರ ವಿಶೇಷ ಸಂದರ್ಶನ)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.