ETV Bharat / city

ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡಲು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸಲಹೆ

author img

By

Published : Jul 10, 2022, 6:59 AM IST

ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ಲಾಟಿನಂ ಜ್ಯೂಬಿಲಿ ಸಮಾರಂಭದಲ್ಲಿ ಭಾಗವಹಿಸಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಮಾತನಾಡಿದರು.

vice-president-venkaiah-naidu
ಮೌಂಟ್ ಕಾರ್ಮೆಲ್ ಕಾಲೇಜಿನ ಪ್ಲಾಟಿನಂ ಜ್ಯೂಬಿಲಿ ಸಮಾರಂಭ

ಬೆಂಗಳೂರು: ಮಾತೃಭಾಷೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ನೀಡುವುದು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚು ಪ್ರಯೋಜನಕಾರಿ ಎಂದು ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಪ್ರತಿಪಾದಿಸಿದ್ದಾರೆ. ಶಿಕ್ಷಣದ ಆಯಾ ಕ್ಷೇತ್ರಗಳಲ್ಲಿ ಮಾತೃಭಾಷೆಗೆ ಆದ್ಯತೆ ನೀಡಬೇಕು. ಇದರ ಜೊತೆಗೆ, ದೇಶದಲ್ಲಿ ಮಹಿಳಾ ಸಬಲೀಕರಣಕ್ಕಿರುವ ಅಡೆತಡೆಗಳನ್ನು ನಿವಾರಿಸಿ ಉನ್ನತ ಶಿಕ್ಷಣದತ್ತ ಅವರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.

ಭಾರತೀಯ ನಾಗರಿಕತೆಯ ತತ್ವಶಾಸ್ತ್ರವು ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರ ಸಮಾನ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆಯಾದರೂ ಮಹಿಳೆಯರು ಇನ್ನೂ ಅನೇಕ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಮತ್ತು ಪ್ರದರ್ಶಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಈ ಪರಿಸ್ಥಿತಿ ಬದಲಾಗಬೇಕಾದರೆ ಮೊದಲು ಸಮಾಜದ ಮನಸ್ಥಿತಿ ಬದಲಾಗಬೇಕು ಎಂದು ಅಭಿಪ್ರಾಯಪಟ್ಟರು.

ಮೌಂಟ್ ಕಾರ್ಮೆಲ್ ಕಾಲೇಜಿನ ಪ್ಲಾಟಿನಂ ಜ್ಯೂಬಿಲಿ ಸಮಾರಂಭ
ಮೌಂಟ್ ಕಾರ್ಮೆಲ್ ಕಾಲೇಜಿನ ಪ್ಲಾಟಿನಂ ಜ್ಯುಬಿಲಿ ಕಾರ್ಯಕ್ರಮ

ಮಹಿಳೆಯರ ಶಿಕ್ಷಣಕ್ಕಾಗಿ ಸರ್ಕಾರಗಳು ನಿರಂತರವಾಗಿ ಪ್ರಯತ್ನಿಸುತ್ತಿರಬೇಕು. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವ ಅವಕಾಶ ಸಿಕ್ಕಾಗಲೆಲ್ಲ ಮಹಿಳೆಯರು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಭಾರತೀಯರು ವಿಶ್ವದ ಎಲ್ಲ ರಂಗಗಳಲ್ಲೂ ನಾಯಕರಾಗಿ ಹೊರಹೊಮ್ಮುತ್ತಿದ್ದಾರೆ. ಭಾರತದ ಈ ಏಳಿಗೆಯನ್ನು ವಿಶ್ವಮಟ್ಟದಲ್ಲಿ ಅಚ್ಚರಿಯ ಕಂಗಳಿಂದ ನೋಡಲಾಗುತ್ತಿದೆ ಎಂದು ಸಂತಸಪಟ್ಟರು.

ಧಾರ್ಮಿಕ ಅಸಹಿಷ್ಣುತೆಯ ಬಗ್ಗೆ ಮಾತನಾಡುತ್ತಾ, ಧರ್ಮ ಎಂಬುದು ಒಬ್ಬನ ವೈಯಕ್ತಿಕ ವಿಷಯ. ತನ್ನ ಧರ್ಮದ ಆಚರಣೆಯ ಬಗ್ಗೆ ಹೆಮ್ಮೆ ಪಡುವುದು ಸರಿ. ಆದರೆ, ಹಾಗಂತ ಬೇರೊಬ್ಬರ ಧರ್ಮದ ನಂಬಿಕೆಗಳ ಬಗ್ಗೆ ಕೀಳಾಗಿ ಭಾವಿಸುವ ಹಕ್ಕು ಯಾರಿಗೂ ಇಲ್ಲ. ಜಾತ್ಯತೀತತೆ ಮತ್ತು ಇತರರ ದೃಷ್ಟಿಕೋನಗಳಿಗೆ ಸಹಿಷ್ಣುತೆಯು ಭಾರತೀಯ ನೈತಿಕತೆಯ ಪ್ರಮುಖ ಭಾಗವಾಗಿದೆ ಮತ್ತು ಕೆಲವೇ ಕೆಲ ಘಟನೆಗಳು ಬಹುತ್ವ ಮತ್ತು ಒಳಗೊಳ್ಳುವಿಕೆಯ ಮೌಲ್ಯಗಳಿಗೆ ಭಾರತದ ಬದ್ಧತೆಯನ್ನು ಹಾಳುಮಾಡಲು ಸಾಧ್ಯವಿಲ್ಲ ಎಂದು ಅವರು ಒತ್ತಿ ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಭವ್ಯ ಪರಂಪರೆಯನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿ, ಪ್ರಾಚೀನ ಕಾಲದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಭಾರತ ನೀಡಿದ ಅದ್ಭುತ ಕೊಡುಗೆಯೇ ಇಂದು ದೇಶವನ್ನು ಜಾಗತಿಕ ಭೂಪಟದಲ್ಲಿ 'ವಿಶ್ವ ಗುರು'ವಿನ ಸ್ಥಾನದಲ್ಲಿ ನಿಲ್ಲಿಸಿದೆ. ಪ್ರಾಚೀನ ಭಾರತದ ಶ್ರೇಷ್ಠ ಮಹಿಳಾ ವಿದ್ವಾಂಸರಾದ ಗಾರ್ಗಿ ಮತ್ತು ಮೈತ್ರೇಯಿ ಹೆಸರನ್ನು ಪ್ರಸ್ತಾಪಿಸಿದ ಅವರು, ಪ್ರಾಚೀನ ಕಾಲದಿಂದಲೂ ಮಹಿಳಾ ಶಿಕ್ಷಣಕ್ಕೆ ಸ್ಪಷ್ಟವಾದ ಒತ್ತು ನೀಡಲಾಯಿತು. ಕರ್ನಾಟಕದ ಅನೇಕ ಪ್ರಗತಿಪರ ಆಡಳಿತಗಾರರು ಮತ್ತು ಸುಧಾರಕರಾದ ಅತ್ತಿಮಬ್ಬೆ ಮತ್ತು ಸೋವಲದೇವಿಯಂಥವರು ಶಿಕ್ಷಣದ ಮಹಾನ್ ಪೋಷಕರಾಗಿದ್ದರು. ಶಿಕ್ಷಣದ ಮೂಲಕ ಮಹಿಳಾ ವಿಮೋಚನೆಗೆ ಒತ್ತು ನೀಡಿದ ವೀರಶೈವ ಚಳುವಳಿಯನ್ನು ವೆಂಕಯ್ಯ ನಾಯ್ಡು ಶ್ಲಾಘಿಸಿದರು. ಇದೇ ಸಂದರ್ಭದಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕಲಿತು ಪ್ರಸಿದ್ಧರಾದ ಹಳೆಯ ಮಹಿಳಾ ವಿದ್ಯಾರ್ಥಿಗಳ ಹೆಸರುಗಳನ್ನು ಪ್ರಸ್ತಾಪಿಸಿದ ಉಪರಾಷ್ಟ್ರಪತಿಗಳು, ಶಿಕ್ಷಣದಲ್ಲಿ ಲಿಂಗ ಅಸಮಾನತೆಯನ್ನು ನಿವಾರಿಸುವ ಮೂಲಕ ಸ್ವಾತಂತ್ರ್ಯದ ನಂತರ ಮಹಿಳೆಯರನ್ನು ಸಬಲೀಕರಣಗೊಳಿಸಿದ್ದಕ್ಕಾಗಿ ಕಾಲೇಜನ್ನು ಶ್ಲಾಘಿಸಿದರು.

ಕಾರ್ಯಕ್ಷೇತ್ರಗಳು ಕ್ಷಿಪ್ರಗತಿಯಲ್ಲಿ ಬದಲಾಗುತ್ತಿರುವುದನ್ನು ಪ್ರಸ್ತಾಪಿಸಿದ ನಾಯ್ಡು, ಕೃತಕ ಬುದ್ಧಿಮತ್ತೆಯಿಂದ ದತ್ತಾಂಶಗಳ ವಿಶ್ಲೇಷಣೆಯವರೆಗಿನ ವಿದ್ಯಾರ್ಥಿಗಳ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಶಿಕ್ಷಣಕ್ಕೆ ಭವಿಷ್ಯದ ವಿಧಾನವನ್ನು ಅಳವಡಿಸಿಕೊಳ್ಳುವ ಮಹತ್ವವನ್ನು ಒತ್ತಿ ಹೇಳಿದರು. ನಾವು ಪರಿಣಾಮಕಾರಿ ಸಂವಹನ ಕೌಶಲ್ಯಗಳನ್ನು ಹೊಂದಿರುವುದು ಅಷ್ಟೇ ಮುಖ್ಯ. ನ್ಯಾಯಯುತ ಮತ್ತು ಸರ್ವಸಮಾನ ಸಮಾಜವನ್ನು ನಿರ್ಮಿಸಲು ಶಿಕ್ಷಣವು ಅತ್ಯಂತ ಶಕ್ತಿಶಾಲಿ ಸಾಧನ. ಶಿಕ್ಷಣ ಸಂಸ್ಥೆಗಳು ಯುವಜನರನ್ನು ಸರಿಯಾದ ಕೌಶಲ್ಯದ ಜ್ಞಾನದಿಂದ ಸಜ್ಜುಗೊಳಿಸಬೇಕೆಂದು ಸಲಹೆ ಕೊಟ್ಟರು.

ಇದೇ ಸಂದರ್ಭದಲ್ಲಿ ಮೌಂಟ್ ಕಾರ್ಮೆಲ್ ಕಾಲೇಜಿನ ಪ್ಲಾಟಿನಂ ಜ್ಯುಬಿಲಿ ವರ್ಷದ ಅಂಗವಾಗಿ ಅಂಚೆ ಇಲಾಖೆಯ ಸ್ಮರಣಿಕೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ರಾಜ್ಯಪಾಲ ತಾವರಚಂದ್ ಗೆಹ್ಲೋಟ್, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಐಟಿ-ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್​ ನಾರಾಯಣ, ಬೆಂಗಳೂರು ಸಿಟಿ ವಿವಿಯ ಉಪಕುಲಪತಿ ಡಾ.ಲಿಂಗರಾಜ್ ಗಾಂಧಿ, ಕರ್ನಾಟಕ ಸರ್ಕಲ್ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್.ರಾಜೇಂದ್ರ ಕುಮಾರ್, ಬೆಂಗಳೂರಿನ ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೊ, ಮೌಂಟ್ ಕಾರ್ಮೆಲ್ ಕಾಲೇಜಿನ ಪ್ರಾಂಶುಪಾಲೆ ಡಾ.ಎಸ್ಆರ್.ಅರ್ಪಣಾ, ಇತರೆ ಗಣ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಭಾರತದ ಆತ್ಮ ಅಧ್ಯಯನಕ್ಕೆ ಸಂಸ್ಕೃತ ಭಾಷೆ ಕಲಿಕೆ ಬಹಳ ಮುಖ್ಯ: ಉಪರಾಷ್ಟ್ರಪತಿ ಪ್ರತಿಪಾದನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.