ETV Bharat / city

ಸಾರ್ವಜನಿಕ ಉದ್ದಿಮೆಗಳಿಗೆ ನೀಡಿದ ಸಾಲ ವಸೂಲಾತಿಯಲ್ಲಿ ಹಿಂದೆ ಬಿದ್ದ ಸರ್ಕಾರ; ವಸೂಲಾತಿ ಬಾಕಿ ಎಷ್ಟು?

author img

By

Published : Oct 27, 2021, 12:41 AM IST

State Govt
State Govt

ಆರ್ಥಿಕ ಸಂಕಷ್ಟದಿಂದ ರಾಜ್ಯ ಸರ್ಕಾರ ಸಾಕಷ್ಟು ಒದ್ದಾಡುವಂತಾಗಿದೆ. ಆದಾಯ ಕೊರತೆಯಿಂದ ಬಜೆಟ್ ಅನುಷ್ಠಾನವೂ ಕಷ್ಟಸಾಧ್ಯವಾಗುತ್ತಿದ್ದರೆ, ಅಭಿವೃದ್ಧಿ ಕೆಲಸಗಳಿಗೂ ಹಣದ ಕೊರತೆ ಉಂಟಾಗಿದೆ.

ಬೆಂಗಳೂರು: ಆರ್ಥಿಕ ನಿರ್ವಹಣೆಗಾಗಿ ಸಾವಿರಾರು ಕೋಟಿ ಸಾಲ ಮಾಡುವ ರಾಜ್ಯ ಸರ್ಕಾರ, ಅದೇ ರೀತಿ ವಿವಿಧ ಸಾರ್ವಜನಿಕ ಉದ್ದಿಮೆ, ನಿಗಮ ಮಂಡಳಿ, ಸಹಕಾರ ಬ್ಯಾಂಕ್​​​ಗಳಿಗೆ ವರ್ಷಪೂರ್ಣ ಸಾವಿರಾರು ಕೋಟಿ ಸಾಲವನ್ನೂ ನೀಡುತ್ತದೆ. ಆದರೆ ಈ ಸಾಲ ವಸೂಲಿ ಮಾಡುವಲ್ಲಿ ಮಾತ್ರ ಸರ್ಕಾರ ಹಿಂದೆ ಬಿದ್ದಿದೆ. ಇದರಿಂದ ರಾಜ್ಯದ ಬೊಕ್ಕಸದ ಮೇಲೆ ತೀವ್ರ ಹೊರೆ ಬೀಳುತ್ತಿದೆ.

ಆರ್ಥಿಕ ಸಂಕಷ್ಟದಿಂದ ರಾಜ್ಯ ಸರ್ಕಾರ ಸಾಕಷ್ಟು ಒದ್ದಾಡುವಂತಾಗಿದೆ. ಆದಾಯ ಕೊರತೆಯಿಂದ ಬಜೆಟ್ ಅನುಷ್ಠಾನವೂ ಕಷ್ಟಸಾಧ್ಯವಾಗುತ್ತಿದ್ದರೆ, ಅಭಿವೃದ್ಧಿ ಕೆಲಸಗಳಿಗೂ ಹಣದ ಕೊರತೆ ಉಂಟಾಗಿದೆ. ಕೋವಿಡ್-ಲಾಕ್‌ಡೌನ್​​ನಿಂದ ಆದಾಯ ಮೂಲಗಳಿಂದ ನಿರೀಕ್ಷಿತ ಪ್ರಮಾಣದ ಆದಾಯ ಹರಿದು ಬರುತ್ತಿಲ್ಲ. ಇದು ರಾಜ್ಯದ ಬೊಕ್ಕಸವನ್ನು ಸೊರಗುವಂತೆ ಮಾಡಿದೆ. ಇದಕ್ಕಾಗಿ ಸರ್ಕಾರ ಅನ್ಯ ಮಾರ್ಗೋಪಾಯಗಳತ್ತ ಚಿತ್ತ ಹರಿಸಿದೆ. ಸದ್ಯ ಸಾಲದ ಮೂಲಕ ಆದಾಯ ಕೊರತೆ ನೀಗಿಸುತ್ತಿದೆ. ಅದರ ಜೊತೆಗೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ನಾನಾ ಕಸರತ್ತು ನಡೆಸುತ್ತಿದೆ.

ವೆಚ್ಚ ಕಡಿತ, ಜೊತೆಗೆ ಸರ್ಕಾರ ವಿವಿಧ ಸಾರ್ವಜನಿಕ ಉದ್ದಿಮೆ, ಸಹಕಾರ ಬ್ಯಾಂಕ್, ನಿಗಮ ಮಂಡಳಿಗೆ ನೀಡಿದ ಸಾಲದ ವಸೂಲಾತಿಯತ್ತ ಹೆಚ್ಚಿನ ಗಮನ ಹರಿಸಲು ಮುಂದಾಗಿದೆ.

ಸಾಲ ವಸೂಲಾತಿಯಲ್ಲಿ ಹಿಂದೆ ಬಿದ್ದ ಸರ್ಕಾರ: ರಾಜ್ಯ ಸರ್ಕಾರ ಪ್ರತಿ ವರ್ಷ ವಿವಿಧ ಸಾರ್ವಜನಿಕ ಉದ್ದಿಮೆ, ಸರ್ಕಾರಿ ಕಂಪನಿಗಳು, ಸಹಕಾರ ಬ್ಯಾಂಕ್, ನಿಗಮ ಮಂಡಳಿಗಳಿಗೆ ಸಾವಿರಾರು ಕೋಟಿ ರೂ. ಸಾಲ ನೀಡುತ್ತದೆ. ಇದರಲ್ಲಿ ಕೆಲವು ನಿಗಮಗಳಿಗೆ ಬಡ್ಡಿರಹಿತ ಸಾಲವನ್ನೂ ನೀಡುತ್ತದೆ. ಆದರೆ ಈ ಸಾಲಗಳ ವಸೂಲಾತಿ ಮಾತ್ರ ಸಾಧ್ಯವಾಗುತ್ತಿಲ್ಲ. ಸಾವಿರಾರು ಕೋಟಿ ರೂಪಾಯಿ ಸಾಲ ವಸೂಲಾತಿಯಾಗದೇ ಇರುವುದು ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಹೊರೆ ಬಿದ್ದಿದೆ.

ಇದನ್ನೂ ಓದಿರಿ: ಸಿಎಂ ಬೊಮ್ಮಾಯಿ, ನಿಮಗೆ ಧಮ್​ ಇದ್ರೆ ಒಂದೇ ವೇದಿಕೆ ಮೇಲೆ ಬಹಿರಂಗ ಚರ್ಚೆಗೆ ಬನ್ನಿ: ಸಿದ್ದು ಸವಾಲು

ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸರ್ಕಾರಕ್ಕೆ ಸಮರ್ಪಕ ಸಾಲ ವಸೂಲಾತಿಯಾಗದೇ ಇರುವುದು ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಸೊರಗಿದ ಖಜಾನೆಗೆ ಹೆಚ್ಚುತ್ತಿರುವ ಸಾಲ ವಸೂಲಾತಿಯಾಗದೇ ಬಾಕಿ ಉಳಿದಿರುವ ಮೊತ್ತ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಆರ್ಥಿಕ ಇಲಾಖೆ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಪ್ರತಿ ವರ್ಷ ಸರ್ಕಾರ ನೀಡುತ್ತಿರುವ ಸಾಲದ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದರೆ, ಇತ್ತ ಸಾಲದ ವಸೂಲಾತಿ ಪ್ರಮಾಣದಲ್ಲಿ ಮಾತ್ರ ಕುಂಠಿತವಾಗುತ್ತಿದೆ. ಇದು ಸರ್ಕಾರದ ಸಂಪನ್ಮೂಲ ಕ್ರೋಢೀಕರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

ಸಾಲ ವಸೂಲಾತಿಗೆ ಗಂಭೀರ ಕ್ರಮ ಕೈಗೊಳ್ಳಲು ಸೂಚನೆ: ಸಾಲ ವಸೂಲಾತಿಯಲ್ಲಿನ ಕಳಪೆ ಫಲಿತಾಂಶದಿಂದ ಎಚ್ಚೆತ್ತುಕೊಂಡಿರುವ ಆರ್ಥಿಕ ಇಲಾಖೆ ಈ ಕುರಿತು ಸಂಬಂಧಿತ ಇಲಾಖೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಆರ್ಥಿಕ ಇಲಾಖೆ ಎಲ್ಲಾ ಇಲಾಖೆಗಳಿಗೆ ಸುತ್ತೋಲೆ ಹೊರಡಿಸಿ, ಸಾಲ ವಸೂಲಾತಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ. ಬದ್ಧ ವೆಚ್ಚ, ಆಡಳಿತ ವೆಚ್ಚ ಭರಿಸುವ ನಿಟ್ಟಿನಲ್ಲಿ ಮುಂದಿನ ಬಜೆಟ್​ಗೆ ಹಣ ಹೊಂದಿಸಲು ಸಂಪನ್ಮೂಲ ವೃದ್ಧಿಸುವುದು ಅನಿವಾರ್ಯವಾಗಿದೆ. ಇದಕ್ಕಾಗಿ ವಸೂಲಾತಿಯಾಗದೇ ಬಾಕಿ ಇರುವ ಸಾವಿರಾರು ಕೋಟಿ ರೂ. ಸಾಲದ ಮೊತ್ತವನ್ನು ವಸೂಲಾತಿ ಮಾಡಲು ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದೆ.

ಸರ್ಕಾರಿ ಕಂಪೆನಿಗಳು, ಸಾರ್ವಜನಿಕ ಉದ್ದಿಮೆ, ಸಹಕಾರ ಬ್ಯಾಂಕ್, ಸ್ಥಳೀಯ ಸಂಸ್ಥೆ, ಎನ್​ಜಿಒಗಳಿಗೆ ಮಂಜೂರಾದ ಸಾಲಗಳ ವಸೂಲಾತಿ ಹಲವು ವರ್ಷಗಳಿಂದ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು ಆರ್ಥಿಕ ಇಲಾಖೆ ಆಕ್ಷೇಪ ವ್ಯಕ್ತಪಡಿಸಿದೆ. ಸಾಲ ನೀಡುವ ಪ್ರಮಾಣ ಹೆಚ್ಚಾಗಿದ್ದರೆ, ಸಾಲ ವಸೂಲಾತಿ ಪ್ರಮಾಣ ನಿಂತಲ್ಲೇ ನಿಂತಿದೆ. ಹೀಗಾಗಿ ಈ ಬಗ್ಗೆ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಿದೆ.

ಕಳೆದ ಆರ್ಥಿಕ ವರ್ಷ ನೀಡಿದ ಪ್ರಮುಖ ಸಾಲದ ವಿವರ?: ಕಳೆದ ಆರ್ಥಿಕ ವರ್ಷದಲ್ಲಿ ಪ್ರಮುಖವಾಗಿ ಜಲಮಂಡಳಿಗೆ ಸರ್ಕಾರ 625.94 ಕೋಟಿ ರೂ.‌ ಮುಂಗಡ ನೀಡಿತ್ತು. ಬಿಎಂಆರ್​ಸಿಗೆ 1,825 ಕೋಟಿ ರೂ. ಸಾಲ ನೀಡಲಾಗಿತ್ತು. ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗೆ 414.98 ಕೋಟಿ ರೂ.‌ ಹಾಗೂ ವಿದ್ಯುತ್ ಯೋಜನೆಗಳಿಗೆ 2,500 ಕೋಟಿ ರೂ. ಸಾಲ ನೀಡಲಾಗಿತ್ತು.ಇನ್ನು ಮೈಸೂರು ಪೇಪರ್ ಮಿಲ್ಸ್​​ಗೆ 60.16 ಕೋಟಿ ರೂ., ಸರ್ಕಾರಿ ನೌಕರರಿಗೆ 6.04 ಕೋಟಿ ರೂ., ಸಹಕಾರ ಬ್ಯಾಂಕ್​ಗೆ 3 ಕೋಟಿ ರೂ., ಕೈಮಗ್ಗ ಅಭಿವೃದ್ಧಿ ನಿಗಮಕ್ಕೆ 13.73 ಕೋಟಿ ರೂ. ಸೇರಿ ಒಟ್ಟು 5,463.86 ಕೋಟಿ ರೂ.‌ ಸಾಲ ನೀಡಲಾಗಿದೆ.

ಎಲ್ಲೆಲ್ಲಿ ಎಷ್ಟು ಸಾಲ ವಸೂಲಾತಿ ಬಾಕಿ?: ಕೃಷ್ಣ ಭಾಗ್ಯ ಜಲ ನಿಗಮ, ಕರ್ನಾಟಕ ನೀರಾವರಿ ನಿಗಮ, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ, ರಾಜ್ಯ ಪೊಲೀಸ್ ವಸತಿ ನಿಗಮ, ಕಾವೇರಿ ನೀರಾವರಿ ನಿಗಮ, ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ಹಾಗೂ ವಿಶ್ವೇಶ್ವರಯ್ಯ ಜಲ ನಿಗಮಗಳಿಗೆ ನೀಡಿದ ಸಾಲದಲ್ಲಿ ಮಾರ್ಚ್ 2020ವರೆಗೆ ಒಟ್ಟು 18,102 ಕೋಟಿ ರೂ. ವಸೂಲಾತಿ ಆಗದೆ ಬಾಕಿ ಉಳಿದುಕೊಂಡಿದೆ. ವಿವಿಧ ಸಾರ್ವಜನಿಕ ಉದ್ದಿಮೆ ಹಾಗೂ ಕಂಪೆನಿಗಳಿಗೆ ಸರ್ಕಾರ ನೀಡಿದ ಸಾಲದಲ್ಲಿ ಮಾರ್ಚ್ 2020 ವರೆಗೆ ಸುಮಾರು 17,698 ಕೋಟಿ ರೂ. ಸಾಲ ವಸೂಲಾತಿಯಾಗದೆ ಬಾಕಿ ಉಳಿದುಕೊಂಡಿತ್ತು. ಉಳಿದಂತೆ ಜಲಮಂಡಳಿಯಿಂದ 4,594 ಕೋಟಿ ರೂ. ಸಾಲ ವಸೂಲಾತಿ ಬಾಕಿ ಉಳಿದುಕೊಂಡಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಕೊಳಚೆ ಮಂಡಳಿ 260.65 ಕೋಟಿ ರೂ., ಬಿಡಿಎಯಿಂದ 225.32 ಕೋಟಿ ರೂ., ಮೈಶುಗರ್ ಕಂಪೆನಿಯಿಂದ 136.04 ಕೋಟಿ ರೂ., ಕರ್ನಾಟಕ ರಾಜ್ಯ ಹಣಕಾಸು ನಿಗಮದಿಂದ 13.08 ಕೋಟಿ ರೂ., ಮೈಸೂರು ಟೊಬ್ಯಾಕೋ ಕಂ.ಯಿಂದ 3.87 ಕೋಟಿ ರೂ., ಚಾಮುಂಡಿ ಮೆಷಿನ್ ಟೂಲ್ಸ್ ನಿಂದ 2.21 ಕೋಟಿ ರೂ., ಗೋಲ್ಡ್ ಮೈನ್ಸ್ ಕಂ.ಯಿಂದ 3.01 ಕೋಟಿ ರೂ. ಸಾಲ ವಸೂಲಾತಿಯಾಗದೇ ಬಾಕಿ ಉಳಿದುಕೊಂಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.