ETV Bharat / city

ಮೇಕೆದಾಟು ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ: ಸಿದ್ಧರಾಮಯ್ಯ ಪತ್ರ

author img

By

Published : Mar 9, 2022, 7:39 PM IST

2022ರ ಫೆಬ್ರವರಿ 5ರಂದು ಕೇಂದ್ರ ಸಚಿವ ಗಜೇಂದ್ರ ಶೇಖಾವತ್ ಅವರು ಮೇಕೆದಾಟು ಯೋಜನೆ ವಿಚಾರವಾಗಿ ನೀಡಿದ ಹೇಳಿಕೆ ಕನ್ನಡಿಗರ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರದ ಪೂರ್ಣ ಸಾರಾಂಶ ಇಲ್ಲಿದೆ..

Opposition Leader Siddaramaiah
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು: ಕೇಂದ್ರ ಜಲ ಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಮೇಕೆದಾಟು ಕುರಿತಂತೆ ನೀಡಿರುವ ಹೇಳಿಕೆ ಖಂಡಿಸಿ ಪ್ರಧಾನಿ ನರೇಂದ್ರ ಮೋದಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಇದೇ ವೇಳೆ ಯೋಜನೆ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Siddaramaiah wrote a letter to Prime Minister Narendra Modi

2022ರ ಫೆಬ್ರವರಿ 5ರಂದು ಸಚಿವ ಶೇಖಾವತ್ ಅವರು ನೀಡಿದ ಹೇಳಿಕೆಯಲ್ಲಿ, 'ಕರ್ನಾಟಕ ಮತ್ತು ತಮಿಳುನಾಡು ಸರ್ಕಾರಗಳು ಒಟ್ಟಿಗೆ ಕುಳಿತು ವಿವಾದ ಬಗೆಹರಿಸಿಕೊಳ್ಳಬೇಕು. ಎರಡೂ ರಾಜ್ಯಗಳೂ ಒಟ್ಟಿಗೆ ಕುಳಿತುಕೊಳ್ಳಲು ಅಗತ್ಯವಾದ ವ್ಯವಸ್ಥೆಯನ್ನು ಮಾತ್ರ ನಾವು ಒದಗಿಸಿಕೊಡುತ್ತೇವೆ' ಎಂದು ಹೇಳಿದ್ದಾರೆ.

ಎರಡು ರಾಜ್ಯಗಳೇ ಕುಳಿತು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳುವುದಾದರೆ, ಕೇಂದ್ರದ ಜಲ ಪ್ರಾಧಿಕಾರಗಳು ಮತ್ತಿತರ ಕೇಂದ್ರ ಮಟ್ಟದ ವ್ಯವಸ್ಥೆಗಳ ಅಗತ್ಯವಾದರೂ ಏನು?, ಹೀಗಾಗಿ ಸಚಿವರ ಮಾತುಗಳು ಅತ್ಯಂತ ಬೇಜವಾಬ್ದಾರಿತನದ್ದು ಎಂದಿದ್ದಾರೆ.

ಬೆಂಗಳೂರು ನಗರದ ಜನಸಂಖ್ಯೆ 1.5 ಕೋಟಿ ದಾಟಿದೆ. ಉಳಿದ 12 ಜಿಲ್ಲೆಗಳ 3.5 ಕೋಟಿ ಜನರ ವ್ಯಾಪ್ತಿಯಲ್ಲಿ ಕಾವೇರಿ ನೀರು ವಿತರಣೆಯಾಗುತ್ತಿದೆ. ದೇಶದ ಒಟ್ಟು ಆರ್ಥಿಕತೆ ಮತ್ತು ದೇಶದ ಒಟ್ಟು ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿರುವ ಬೆಂಗಳೂರು ನಗರದ ಶೇ. 30ರಷ್ಟು ಮಂದಿಗೆ ಮಾತ್ರ ಕಾವೇರಿ ಕುಡಿಯುವ ನೀರಿನ ಲಭ್ಯತೆ ಇದೆ.

ಬೇಸಿಗೆ ಮತ್ತು ಬರಗಾಲದ ಸ್ಥಿತಿಯಲ್ಲಿ ಬೆಂಗಳೂರು ಜನರಿಗೆ ಆಗುವ ಕುಡಿಯುವ ನೀರಿನ ಪರಿಹರಿಸಲು ಮೇಕೆದಾಟು ಯೋಜನೆ ಜಾರಿ ಆಗುವುದು ಅತ್ಯಗತ್ಯ ಮತ್ತು ಮುಂದಿನ 50 ವರ್ಷಗಳ ನೀರಿನ ಅಗತ್ಯವನ್ನು ಈ ಯೋಜನೆ ಪೂರೈಸುತ್ತದೆ.

ಇಷ್ಟು ಮಹತ್ವದ ಯೋಜನೆಗೆ ಕೇಂದ್ರ ಸರ್ಕಾರ ಅನುಮತಿ ಕೊಡದೆ ಸತಾಯಿಸುತ್ತಿರುವುದಲ್ಲದೆ ಸಚಿವ ಶೇಖಾವತ್ ಅವರು ನಮ್ಮ ಕುಡಿಯುವ ನೀರಿನ ಮಹತ್ವವನ್ನು ಅರಿಯದೆ ಅತ್ಯಂತ ನಿರ್ಲಕ್ಷ್ಯತನದಿಂದ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದ್ದಾರೆ.

ಈ ಕೂಡಲೇ ಕೇಂದ್ರ ಸರ್ಕಾರ ಕಾಲಹರಣ ಮಾಡದೆ ತಕ್ಷಣ ಪರಿಸರ ಅನುಮತಿ ಕೊಡಬೇಕು. ಇಲ್ಲದ ನೆಪಗಳನ್ನು ಹೇಳಿಕೊಂಡು ರಾಜಕಾರಣ ಮಾಡದೆ ಮೇಕೆದಾಟು ಯೋಜನೆ ಜಾರಿ ಆಗಿ ಕೆಲಸ ಆರಂಭಿಸಬೇಕು ಎಂದು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಅಭಿಪ್ರಾಯ ಪಟ್ಟಿದ್ದಾರೆ.

ಇದನ್ನೂ ಓದಿ: ದೇಶದ ಇಂದಿನ ಪ್ರಗತಿಗೆ 60 ವರ್ಷದಲ್ಲಿ ಕಾಂಗ್ರೆಸ್‌ ಕೊಟ್ಟ ಕೊಡುಗೆ ಕಾರಣ: ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.