ETV Bharat / city

ಹೈಕೋರ್ಟ್​ನಿಂದ ಗ್ರೀನ್ ಸಿಗ್ನಲ್: ಶಿವಾನಂದ ಸರ್ಕಲ್ ಸ್ಟೀಲ್ ಬ್ರಿಡ್ಜ್‌ ಲೋಕಾರ್ಪಣೆಗೆ ಕೂಡಿ ಬಂತು ಮುಹೂರ್ತ

author img

By

Published : Jul 9, 2022, 7:22 AM IST

chief engineer Lokesh
ವಿಭಾಗದ ಪಾಲಿಕೆ ಮುಖ್ಯ ಅಭಿಯಂತರ ಲೋಕೇಶ್

ಕಾನೂನಾತ್ಮಕ ತೊಡಕು ನಿವಾರಣೆ- ಹೈಕೋರ್ಟ್​ ಗ್ರೀನ್​ ಸಿಗ್ನಲ್​- 5 ವರ್ಷಗಳಿಂದ ಅರ್ಧಕ್ಕೇ ನಿಂತಿದ್ದ ಶಿವನಾಂದ ಸರ್ಕಲ್ ಸ್ಟೀಲ್ ಬ್ರಿಡ್ಜ್‌ ಕಾಮಗಾರಿ ಲೋಕಾರ್ಪಣೆಗೆ ಸಿದ್ಧ

ಬೆಂಗಳೂರು: ಹಲವು ಕಾರಣಗಳಿಂದ ಕುಂಟುತ್ತ ಸಾಗಿದ್ದ ಶಿವನಾಂದ ಸರ್ಕಲ್ ಸ್ಟೀಲ್ ಬ್ರಿಡ್ಜ್‌ ಲೋಕಾರ್ಪಣೆಗೆ ಮುಹೂರ್ತ ಕೂಡಿ ಬಂದಿದೆ. ಕಳೆದ 5 ವರ್ಷಗಳಿಂದ ತಯಾರಾಗುತ್ತಿರುವ ಮೇಲ್ಸೇತುವೆಗೆ ಆ.15 ರಂದು ಸಂಚಾರದ ಭಾಗ್ಯ ಸಿಗಲಿದೆ. ಕೆಲ ಕಾನೂನಾತ್ಮಕ ತೊಡಕಿನಿಂದ ಕಾಮಗಾರಿ ಕಳೆದ 5 ವರ್ಷಗಳಿಂದ ಅರ್ಧಕ್ಕೆ ನಿಂತಿತ್ತು. ಆದರೆ ಈಗ ಹೈಕೋರ್ಟ್ ಆದೇಶದಂತೆ ಬ್ರಿಡ್ಜ್ ಓಪನ್ ಮಾಡಲು ಬಿಬಿಎಂಪಿ ಮುಂದಾಗಿದೆ.

ವಿಭಾಗದ ಪಾಲಿಕೆ ಮುಖ್ಯ ಅಭಿಯಂತರ ಲೋಕೇಶ್

ಮೇಲ್ಸೇತುವೆಯಿಂದ ಶೇಷಾದ್ರಿಪುರದ ಕಡೆಗೆ ಇಳಿಜಾರು ನಿರ್ಮಿಸಲು ಭೂಸ್ವಾಧೀನಕ್ಕೆ ಸ್ಥಳೀಯರಿಂದ 40 ಕೋಟಿ ರೂ. ಬೇಡಿಕೆ ಬಂದಿತು. ಇಷ್ಟೊಂದು ವೆಚ್ಚ ಪಾವತಿಸಲಾಗದ ಪಾಲಿಕೆ ಡೌನ್ ರ‍್ಯಾಂಪ್‌ನ ವಿನ್ಯಾಸವನ್ನು ಬದಲಾಯಿಸಿತು. ಈ ವಿನ್ಯಾಸದ ಬಗ್ಗೆ ಸಾರ್ವಜನಿಕರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಕೋರ್ಟ್ ಈಗ ಗ್ರೀನ್ ಸಿಗ್ನಲ್ ನೀಡಿದ್ದು, ಕಾಮಗಾರಿಯ ಕೊನೆಯ ಹಂತದ ಕೆಲಸಗಳು ಭರದಿಂದ ಸಾಗಿವೆ ಎಂದು ಯೋಜನೆ ವಿಭಾಗದ ಪಾಲಿಕೆ ಮುಖ್ಯ ಅಭಿಯಂತರರಾದ ಲೋಕೇಶ್ ತಿಳಿಸಿದ್ದಾರೆ.

ಕಾಮಗಾರಿ ಶೇ.90 ರಷ್ಟು ಪೂರ್ಣ: ಫ್ಲೈ ಓವರ್ ನಿರ್ಮಾಣ ಕಾರ್ಯ ಶೇ.90ರಷ್ಟು ಪೂರ್ಣಗೊಂಡಿದೆ. ಶೇಷಾದ್ರಿಪುರ ಕಡೆಗೆ ಸಂಪರ್ಕಿಸುವ ಇಳಿಜಾರು ಬಳಿಯ ಕಾಲುವೆ ಅಭಿವೃದ್ಧಿಪಡಿಸಿ ಇಳಿಜಾರು ರಸ್ತೆ ನಿರ್ಮಿಸಿ ಡಾಂಬರೀಕರಣ ಮಾಡುವುದು ಮಾತ್ರ ಬಾಕಿಯಿದೆ. ಕಾಮಗಾರಿ ಪೂರ್ಣಗೊಳಿಸಲು ಅಂದಾಜು 30 ದಿನಗಳು ಬೇಕಾಗುತ್ತದೆ. ಹೀಗಾಗಿ ಸರಿ ಸುಮಾರು ಆ.15 ರಂದು ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಅವರು ಮಾಹಿತಿ ನೀಡಿದರು.

ಐಆರ್​​ಸಿ ಶೇ. 5.5 ನಿಂದ ಶೇ.6.6ಗೆ ಬದಲು: ರೈಲ್ವೆ ಅಂಡರ್ ಪಾಸ್ ಕಡೆಯ ಇಳಿಜಾರನ್ನು ಇಂಡಿಯನ್ ರೋಡ್ ಕಾಂಗ್ರೆಸ್ 5.5% ಮಾದರಿಯಲ್ಲಿ ನಿರ್ಮಿಸಲು ಭೂಸ್ವಾಧೀನದ ಸಮಸ್ಯೆ ಎದುರಾಯಿತು. ವೆಚ್ಚ ತಗ್ಗಿಸುವ ದೃಷ್ಟಿಯಿಂದ ಡೌನ್ ರ‍್ಯಾಂಪ್‌ನ ವಿನ್ಯಾಸವನ್ನು ಐಆರ್​​ಸಿ ಅನ್ವಯ 6.6% ಮಾಡಲು ಮರು ಯೋಜನೆ ಮಾಡಲಾಯಿತು. ಸ್ಥಳೀಯರು ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಸರ್ಜಿ ಸಲ್ಲಿಸಿದ್ದರು.

ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾಯಾಲಯ, ವೈಜ್ಞಾನಿಕ ವರದಿ ನೀಡುವಂತೆ ಭಾರತೀಯ ವಿಜ್ಞಾನ ಸಂಸ್ಥೆಗೆ ಸೂಚಿಸಿತ್ತು. ನಂತರ ಬಂದ ವರದಿಯಲ್ಲಿ ಪಾಲಿಕೆಯು ಮರು ಯೋಜಿಸಿದ ಡೌನ್ ರ‍್ಯಾಂಪ್‌ ನಿರ್ಮಾಣ ಯೋಗ್ಯವಾಗಿದೆ ಎಂದು ತಿಳಿಸಲಾಯಿತು. ಹೀಗಾಗಿ ಕಾಮಗಾರಿ ಮುಂದುವರಿಸಲು ಹೈಕೋರ್ಟ್‌ ವಿಭಾಗೀಯ ಪೀಠ ಒಪ್ಪಿಗೆ ನೀಡಿದೆ ಎಂದು ಲೋಕೇಶ್ ಹೇಳಿದರು.

ಇದನ್ನೂ ಓದಿ: ರಸ್ತೆ ಗುಂಡಿ ಕುರಿತು ಹೈಕೋರ್ಟ್​ಗೆ ಸಂಕ್ಷಿಪ್ತ ದಾಖಲೆ ಸಲ್ಲಿಸಲಾಗಿದೆ: ಪಾಲಿಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.