ETV Bharat / city

ಬೆಂಗಳೂರಿನಲ್ಲಿ ಪವರ್ ಸ್ಟಾರ್ ಪುತ್ಥಳಿ‌ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ: 50-60 ಜನರಿಂದ ಆರ್ಡರ್​​

author img

By

Published : Nov 5, 2021, 1:51 PM IST

ಶಿಲ್ಪಿ ಚನ್ನಸಂದ್ರ ಶಿವಕುಮಾರ್ ಹಾಗು ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್
ಶಿಲ್ಪಿ ಚನ್ನಸಂದ್ರ ಶಿವಕುಮಾರ್ ಹಾಗು ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್

ಹೃದಯಾಘಾತದಿಂದ ನಿಧನರಾದ ಕರುನಾಡು ಯುವರತ್ನ ಅಪ್ಪು ಎಲ್ಲೂ ಹೋಗಿಲ್ಲ. ನಮ್ಮೊಂದಿಗೆ ಇದ್ದಾರೆಂಬ ಭಾವ ಅಭಿಮಾನಿಗಳಲ್ಲಿದೆ. ಹೀಗಾಗಿ ಪುನೀತ್ ರಾಜ್​​​ಕುಮಾರ್ ನೆನಪು ಸದಾ ಉಳಿಯಲಿ ಎಂದು ಪುತ್ಥಳಿ‌ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್​​ಕುಮಾರ್​​ ಅಗಲಿಕೆ ಅಭಿಮಾನಿಗಳಿಗೆ ನಂಬಲಸಾಧ್ಯವಾಗಿದೆ. ಹೀಗಾಗಿ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆಗಳಿಗೆ ಪುನೀತ್ ಅವರನ್ನು ತಮ್ಮ ನಡುವೆ ಜೀವಂತವಾಗಿಸುವ ಆಸೆಯಿಂದ ಪುತ್ಥಳಿ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಪವರ್ ಸ್ಟಾರ್ ಪುತ್ಥಳಿ‌ ನಿರ್ಮಾಣಕ್ಕೆ ಹೆಚ್ಚಿದ ಬೇಡಿಕೆ..

ನಗರದಲ್ಲಿ ಅಪ್ಪು ಅವರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಆರ್ಡರ್​​ಗಳು ಹೆಚ್ಚಾಗಿವೆ. ಶಿಲ್ಪಿ ಚನ್ನಸಂದ್ರ ಶಿವಕುಮಾರ್ ಮಾತನಾಡಿ, ಇತ್ತೀಚೆಗಷ್ಟೇ ಅಗಲಿದ ಪುನೀತ್ ರಾಜ್​​ಕುಮಾರ್ ಅವರ ಪುತ್ಥಳಿ ಬೇಕೆಂದು ಬೆಂಗಳೂರಿನ ನಾನಾ ಸಂಘ ಸಂಸ್ಥೆಗಳಿಂದ ಈಗಾಗಲೇ 50-60 ಜನ ಕೇಳಿದ್ದಾರೆ. 10ಕ್ಕೂ ಹೆಚ್ಚು ಜನ ಈಗಲೇ ಮಾಡಿ ಎಂದು ಹೇಳಿದ್ದಾರೆ.

ಮುಂಗಾರು ಮಳೆಯ ಕೋ-ಡೈರೆಕ್ಟರ್ ಗಂಗಾಧರ್, ಎನ್.ಆರ್ ರಮೇಶ್ ಹೀಗೆ ಹಲವಾರು ಜನ ಪುತ್ಥಳಿ ಮಾಡಲು ತಿಳಿಸಿದ್ದಾರೆ. ಸದ್ಯ ಪ್ರತಿಮೆ ಹೇಗೆ ಬರಬೇಕು ಎಂದು ರೂಪುರೇಷೆ‌ ಸಿದ್ಧಪಡಿಸಲಾಗುತ್ತಿದೆ. ನಂತರ ಮಾಡಿಕೊಡಲಾಗುವುದು ಎಂದರು.

ಬಿಬಿಎಂಪಿಯಲ್ಲಿಯೂ ಪ್ರತಿಮೆ:

ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ಮಾತನಾಡಿ, ಬಿಬಿಎಂಪಿ ನೌಕರರ ಕನ್ನಡ ಸಂಘದ ವತಿಯಿಂದ ರಾಜ್​​ಕುಮಾರ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಿದ್ದೇವೆ. ಅದೇ ರೀತಿ ಪುನೀತ್ ಅವರ ಪ್ರತಿಮೆ ಮಾಡಲು ಆಯುಕ್ತರ ಅನುಮತಿ ಕೇಳಿದ್ದೇವೆ. ಹೀಗಾಗಿ 3 ಅಡಿ ಎತ್ತರದ ಕಂಚಿನ ಪ್ರತಿಮೆ ಸಿದ್ಧ ಮಾಡಲು ಸಪ್ತಪದಿ ಕ್ರಿಯೇಷನ್ ನ ಶಿವದತ್ತ ಅವರಿಗೆ ತಿಳಿಸಲಾಗಿದೆ. ಆಯುಕ್ತರ ಅನುಮತಿ ಸಿಕ್ಕ ಕೂಡಲೇ ಕನ್ನಡ ಸಂಘದ ಮುಂಭಾಗ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.