ETV Bharat / city

ಅಪ್ಪು ಅಗಲಿಕೆಗೆ ಮಾಜಿ ಪಿಎಂ ದೇವೇಗೌಡ, ಎಸ್ಎಂಕೆ, ಸಿದ್ದರಾಮಯ್ಯ ಸೇರಿ ಗಣ್ಯರ ಕಂಬನಿ

author img

By

Published : Oct 29, 2021, 3:14 PM IST

Updated : Oct 29, 2021, 4:45 PM IST

ಈ ದಿನ ಅವರಿಲ್ಲ ಎಂದರೆ ನಂಬಲಸಾಧ್ಯವಾಗಿದೆ. ಈ ದಿನ ಯುವರತ್ನನನ್ನು ಕಳೆದುಕೊಂಡು ನಮ್ಮ ಕರುನಾಡು ಬರಿದಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ..

ಅಪ್ಪು ಅಗಲಿಕೆಗೆ ಕಂಬನಿ ಮಿಡಿದ ರಾಜಕೀಯ ನಾಯಕರು
ಅಪ್ಪು ಅಗಲಿಕೆಗೆ ಕಂಬನಿ ಮಿಡಿದ ರಾಜಕೀಯ ನಾಯಕರು

ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇಂದು ಬೆಳಗ್ಗೆ ಜಿಮ್‌ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಅವರಿಗೆ ಎದೆನೋವು ಕಾಣಿಸಿತ್ತು.

ಮೊದಲು ರಮಣಶ್ರೀ ಕ್ಲಿನಿಕ್‌ಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಅವರನ್ನು ತಕ್ಷಣವೇ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಜ್ಞ ವೈದ್ಯರ ತಂಡ ತೀವ್ರ ನಿಗಾ ಘಟಕದಲ್ಲಿ ತುರ್ತು ಚಿಕಿತ್ಸೆ ನೀಡಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಅಪ್ಪು ಇಹಲೋಕ ತ್ಯಜಿಸಿದ್ದಾರೆ.

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದ ದೊಡ್ಮನೆ ಹುಡುಗನ ಅಗಲಿಕೆಗೆ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ. ನಟ ಪುನೀತ್ ರಾಜ್​ಕುಮಾರ್​ ನಿಧನಕ್ಕೆ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಿಎಂ ಎಸ್​ ಎಂ ಕೃಷ್ಣ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ದರ್ಶಿ ಸಿ ಟಿ ರವಿ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಯುವರತ್ನನನ್ನು ಕಳೆದುಕೊಂಡು ಕರುನಾಡು ಬರಿದು : ಕನ್ನಡ ಚಿತ್ರ ರಂಗದ ಖ್ಯಾತ ಚಿತ್ರನಟ ಯುವರತ್ನ ಪುನೀತ್ ರಾಜ್ ಕುಮಾರ್ ಅವರ ನಿಧನದ ಸುದ್ದಿ ತಿಳಿದು ಮನಸ್ಸಿಗೆ ತೀವ್ರ ಆಘಾತವಾಗಿದೆ. ಅವರು ನಟಿಸಿದ್ದ ಪೃಥ್ವಿ ಮತ್ತು ರಾಜಕುಮಾರ ಚಿತ್ರವನ್ನು ಅಪ್ಪು ಅವರ ಜೊತೆಯಲ್ಲೇ ನೋಡಿದ್ದೆ.

ಮಾಜಿ ಪ್ರಧಾನಿ ದೇವೇಗೌಡರ ಸಂತಾಪ

ಈ ದಿನ ಅವರಿಲ್ಲ ಎಂದರೆ ನಂಬಲಸಾಧ್ಯವಾಗಿದೆ. ಈ ದಿನ ಯುವರತ್ನನನ್ನು ಕಳೆದುಕೊಂಡು ನಮ್ಮ ಕರುನಾಡು ಬರಿದಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ. ದೇವರು ಅವರ ಕುಟುಂಬ ವರ್ಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಮಾಜಿ ಪ್ರಧಾನಿ ದೇವೇಗೌಡರು ಸಂತಾಪ ಸೂಚಿಸಿದ್ದಾರೆ.

ಕರ್ನಾಟಕದ ಜನತೆಗೆ ದೊಡ್ಡ ಆಘಾತ : ಕನ್ನಡ ಚಿತ್ರರಂಗದ ಮೇರುನಟ, ಪುನೀತ್ ರಾಜ್​ಕುಮಾರ್ ಅವರ ಮರಣದ ಸುದ್ದಿ ಇಡೀ ಕರ್ನಾಟಕದ ಜನತೆಗೆ ದೊಡ್ಡ ಆಘಾತವಾಗಿದೆ. ಕೇವಲ 46 ವರ್ಷ ವಯಸ್ಸಿನ ಪುನೀತ್​ ರಾಜ್​ಕುಮಾರ್​ ಅವರು ಇಷ್ಟು ಚಿಕ್ಕ ವಯಸ್ಸಿಗೆ ನಮ್ಮನ್ನಗರಲಿರುವುದು ಅತ್ಯಂತ ದುಃಖಕರ ಎಂದು ಮಾಜಿ ಸಿಎಂ ಎಸ್​.ಎಂ ಕೃಷ್ಣ ಸಂತಾಪ ಸೂಚಿಸಿದ್ದಾರೆ.

ಓದಿ: ನಮ್ಮ ಪ್ರೀತಿಯ ಅಪ್ಪು, ಕನ್ನಡದ ರಾಜರತ್ನ ಪುನೀತ್ ರಾಜಕುಮಾರ್.. ಅಣ್ಣಾಬಾಂಡ್‌ ಅಮರವಾದರು..

ಹಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ:

ಹಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ. ಜನಪ್ರಿಯ ನಟ ಪುನೀತ್ ರಾಜ್​ಕುಮಾರ್ ಅವರ ಅಕಾಲಿಕ ನಿಧನ ಜನತೆ ಹಾಗೂ ಚಿತ್ರರಂಗಕ್ಕೆ ಅತಿದೊಡ್ಡ ನಷ್ಟ. ದೇವರು ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿಯನ್ನು ಅವರ ಕುಟುಂಬ ಮತ್ತು ಅಭಿಮಾನಿ ವರ್ಗಕ್ಕೆ ನೀಡಲಿ. ಅಗಲಿದ ಅವರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.

ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ:

ಕನ್ನಡದ ಪ್ರತಿಭಾವಂತ ಯುವ ನಟ ಪುನೀತ್ ರಾಜ್​ಕುಮಾರ್. ಹಠಾತ್ ನಿಧನದಿಂದ ಆಘಾತಕ್ಕೀಡಾಗಿದ್ದೇನೆ. ನಟನಾ ಕೌಶಲದ ಜೊತೆ ಸರಳ-ಸಜ್ಜನಿಕೆಯ ನಡವಳಿಕೆಯಿಂದಲೂ ಕನ್ನಡಿಗರ ಮ‌ನೆ ಮಗನಂತಿದ್ದ ಪುನೀತ್ ಸಾವು ತುಂಬಿಬಾರದ ನಷ್ಟ ಎಂದು ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ:

ನಾಡಿನ ಜನಪ್ರಿಯ ಕಲಾವಿದ, ಡಾ.ರಾಜ್ ವಂಶದ ಕುಡಿ ಪುನೀತ್ ರಾಜಕುಮಾರ್ ಹಠಾತ್ ನಿಧನರಾದ ವಿಷಯ ದಿಗ್ಭ್ರಮೆ ಮೂಡಿಸಿದೆ. ಕಿರುವಯಸ್ಸಿನಲ್ಲೇ ಅವರು ನಮ್ಮನ್ನು ಅಗಲಿದ್ದು ತೀವ್ರ ಆಘಾತ ತಂದಿದೆ. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ ಅವರ ಕುಟುಂಬ, ಅಪಾರ ಅಭಿಮಾನಿಗಳಿಗೆ ಆಘಾತವನ್ನು ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ.

ಅಣ್ಣಾವ್ರ ಜೊತೆ ಬಾಲ ಕಲಾವಿದರಾಗಿ ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ಅವರ ಅಭಿನಯ, ಬೆಟ್ಟದ ಹೂವು, ನಟಸಾರ್ವಭೌಮ ಮೊದಲಾದ ಅನೇಕ ಯಶಸ್ವಿ ಚಿತ್ರಗಳ ಮೂಲಕ ಕನ್ನಡಿಗರ ಹೃದಯದಲ್ಲಿ ಚಿರಸ್ಥಾನ ಪಡೆದ ಅಭಿಮಾನಿಗಳ ಪ್ರೀತಿಯ ಅಪ್ಪು ಅಮರರಾಗಿಯೇ ಉಳಿಯಲಿದ್ದಾರೆ. ನಿಮ್ಮ ನೆನಪು ಚಿರಾಯು ಪುನೀತ್. ಓಂ ಶಾಂತಿ ಎಂದು ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಓದಿ: 6 ತಿಂಗಳ ಶಿಶುವಾಗಿದ್ದಾಗಲೇ ಬೆಳ್ಳಿ ತೆರೆಗೆ ಕಾಲಿಟ್ಟಿದ್ದ ಪುನೀತ್​!

ಕನ್ನಡನಾಡು ಅಕ್ಷರಶಃ ಬಡವಾಗಿದೆ:

ಜನಪ್ರಿಯ ನಟ ಪುನೀತ್ ರಾಜಕುಮಾರ್ ಅವರ ಹಠಾತ್ ನಿಧನಕ್ಕೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತೀವ್ರ ಸಂತಾಪ ಸೂಚಿಸಿದ್ದಾರೆ. ಪುನೀತ್ ಅವರು ಚಿಕ್ಕ ವಯಸ್ಸಿನಲ್ಲೇ ಅಪಾರ ಸಾಧನೆ ಮಾಡಿದ್ದರು. ನಾಡು-ನುಡಿ ಮತ್ತು ಸಮಾಜದ ಬಗ್ಗೆ ಅಪಾರ ಕಳಕಳಿ ಹೊಂದಿದ್ದ ಅವರನ್ನು ಕಳೆದುಕೊಂಡಿರುವುದರಿಂದ ಕನ್ನಡ ನಾಡು ಅಕ್ಷರಶಃ ಬಡವಾಗಿದೆ ಎಂದು ಶೋಕಸಂದೇಶದಲ್ಲಿ ದುಃಖಿಸಿದ್ದಾರೆ.

ರಚನಾತ್ಮಕ ಕಾರ್ಯಕ್ರಮಗಳಿಗೆ ಸದಾ ಬೆನ್ನೆಲುಬಾಗಿ ನಿಂತುಕೊಳ್ಳುತ್ತಿದ್ದ ಪುನೀತ್ ಅವರು ಇನ್ನಿಲ್ಲವೆಂದರೆ ನಂಬುವುದು ಕಷ್ಟವಾಗುತ್ತದೆ. ಅವರ ಸ್ಥಾನವನ್ನು ಬೇರೆ ಯಾರಿಂದಲೂ ತುಂಬುವುದು ಸಾಧ್ಯವಿಲ್ಲ ಎಂದು ಸಚಿವರು ಕಂಬನಿ ಮಿಡಿದಿದ್ದಾರೆ. ಪುನೀತ್ ಅವರ ನಿಧನದ ನೋವನ್ನು ತಡೆದುಕೊಳ್ಳುವಂತಹ ಶಕ್ತಿಯನ್ನು ಭಗವಂತನು ಅವರ ಕುಟುಂಬದ ಸದಸ್ಯರಿಗೆ, ಬಂಧುಬಾಂಧವರಿಗೆ ಮತ್ತು ಅಭಿಮಾನಿ ಬಳಗಕ್ಕೆ ನೀಡಲಿ. ಪರಮಾತ್ಮನು ಅವರ ಆತ್ಮಕ್ಕೆ ಶಾಂತಿಯನ್ನು ಕೊಡಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

ಪುನೀತ್​ ನಿಧನ ನಿಜಕ್ಕೂ ಆಘಾತಕರ ಸುದ್ದಿ:

“ಪವರ್ ಸ್ಟಾರ್” ಎಂದೇ ಖ್ಯಾತಿ ಪಡೆದಿದ್ದ ಕನ್ನಡ ಚಿತ್ರರಂಗದ ಯುವ ನಟರಾದ ಪುನೀತ್ ರಾಜ್‍ಕುಮಾರ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ. ಕನ್ನಡ ಚಿತ್ರರಂಗದ ಪ್ರತಿಭಾವಂತ ಮತ್ತು ಪ್ರಖ್ಯಾತ ನಟರಾದ ಡಾ. ರಾಜ್‍ಕುಮಾರ್ ಅವರ ಪುತ್ರರಾದ ಪುನೀತ್ ಅಪ್ಪು ಎಂದೇ ಖ್ಯಾತಿ ಪಡೆದಿದ್ದು, ಕನ್ನಡಿಗರ ಕಣ್ಮಣಿ ಎನಿಸಿದ್ದರು.

ಬಾಲ್ಯದಲ್ಲೇ ಚಿತ್ರರಂಗ ಪ್ರವೇಶಿಸಿದ್ದ ಅವರ ನಿಧನ ನಿಜಕ್ಕೂ ಆಘಾತಕರ ಸುದ್ದಿ. ನಾಡಿನ ಸಮಸ್ತ ಕನ್ನಡಿಗರಿಗೆ ಈ ವಿಷಯ ಆಘಾತವನ್ನು ತಂದಿದೆ ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜನರು ಶಾಂತಿ-ಸಂಯಮದಿಂದ ವರ್ತಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಮೃತರ ಕುಟುಂಬ, ಬಂಧುಮಿತ್ರರಿಗೆ ಹಾಗೂ ಅಭಿಮಾನಿಗಳಿಗೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ನಳಿನ್‍ಕುಮಾರ್ ಕಟೀಲ್ ಪ್ರಾರ್ಥಿಸಿದ್ದಾರೆ.

ಕಂಬನಿ ಮಿಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್:

ಕನ್ನಡದ ಖ್ಯಾತ ನಟ, ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಂಬನಿ ಮಿಡಿದಿದ್ದಾರೆ. ನನ್ನ ನೆರೆಹೊರೆಯವರಾದ, ಸ್ವಂತ ಸಹೋದರನಂತಿದ್ದ ಪುನೀತ್ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇಷ್ಟು ಚಿಕ್ಕವಯಸ್ಸಿನಲ್ಲಿ ಅವರನ್ನು ಕೊಂಡೊಯ್ದ ವಿಧಿ ಬಹಳ ಕ್ರೂರಿ ಎಂದು ಕಂಬನಿ ಮಿಡಿದಿದ್ದಾರೆ.

ಪುನೀತ್ ಅವರು ನನಗೆ ಆತ್ಮೀಯರಾಗಿದ್ದರು. ಕುಟುಂಬದ ಸ್ನೇಹಿತರಾಗಿದ್ದರು. ನಮ್ಮಿಬ್ಬರ ಕುಟುಂಬ ಸದಸ್ಯರ ನಡುವೆ ಉತ್ತಮ ಒಡನಾಟವಿತ್ತು. ನಾವಿಬ್ಬರೂ ಒಟ್ಟಿಗೆ ವಾಕಿಂಗ್ ಮಾಡಿದ್ದೇವೆ. ಜಿಮ್ ಮಾಡಿದ್ದೇವೆ. ಚಿತ್ರರಂಗ ಸೇರಿ ಅನೇಕ ವಿಚಾರಗಳನ್ನು ಚರ್ಚೆ ಮಾಡಿದ್ದೇವೆ.

ಶಿಸ್ತುಬದ್ಧ ಜೀವನ, ಕಟ್ಟುನಿಟ್ಟಿನ ವ್ಯಾಯಾಮದ ಮೂಲಕ ಪುನೀತ್ ಉತ್ತಮ ಆರೋಗ್ಯ ಕಾಪಾಡಿಕೊಂಡಿದ್ದರು. ಫಿಟ್ನೆಸ್ ವಿಚಾರವಾಗಿ ಯುವಕರಿಗೆ ರೋಲ್ ಮಾಡೆಲ್ ಆಗಿದ್ದರು. ಅಂತಹವರನ್ನು ಭಗವಂತ ಇಷ್ಟು ಬೇಗ ಕರೆಸಿಕೊಳ್ಳುತ್ತಾನೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ ಎಂದು ಡಿಕೆಶಿ ದುಃಖ ವ್ಯಕ್ತಪಡಿಸಿದ್ದಾರೆ.

6 ತಿಂಗಳ ಮಗುವಾಗಿದ್ದಾಗಿನಿಂದಲೇ (ಪ್ರೇಮದ ಕಾಣಿಕೆ) ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ನಟಿಸಿದ್ದ ಪುನೀತ್, ನಂತರ ವಸಂತಾ ಗೀತಾ, ಚಲಿಸುವ ಮೋಡಗಳು, ಬೆಟ್ಟದ ಹೂವು ಸೇರಿದಂತೆ ಅನೇಕ ಚಿತ್ರಗಳಲ್ಲಿ ಬಾಲ ನಟರಾಗಿ ಮನಗೆದ್ದಿದ್ದರು.

ಬೆಟ್ಟದ ಹೂವು ಚಿತ್ರದ ನಟನೆಗೆವರಾಷ್ಟ್ರ ಪ್ರಶಸ್ತಿ ಬಂದಿದಗದು ಮಾತ್ರವಲ್ಲದೇ, ತಂದೆಗೆ ತಕ್ಕ ಮಗನಂತೆ ಕೌಟುಂಬಿಕ ಚಿತ್ರಗಳಲ್ಲಿ ಅಭಿನಯಿಸಿ ಎಲ್ಲ ವರ್ಗದ ಜನರ ಅಭಿಮಾನ ಗಳಿಸಿದ ಧ್ರುವ ನಕ್ಷತ್ರ ಪುನೀತ್ ಅವರು. ಕನ್ನಡ ಪ್ರೇಕ್ಷಕರು ಮಾತ್ರವಲ್ಲದೆ ಅನ್ಯ ಭಾಷಿಕ ಪ್ರೇಕ್ಷಕರನ್ನು ತಮ್ಮ ಅಭಿಮಾನಿಯಾಗಿ ಮಾಡಿಕೊಂಡಿದ್ದು ಪುನೀತ್ ಅವರಲ್ಲಿದ್ದ ಕಲಾ ಶಕ್ತಿಗೆ ಸಾಕ್ಷಿ.

ನಾನು ರಾಜ್ ಕುಮಾರ್ ಚಿತ್ರಗಳನ್ನು ನೋಡುತ್ತಾ ಬೆಳೆದವನು. ಅದೇ ರೀತಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ಅವರ ಚಿತ್ರಗಳನ್ನು ನೋಡುತ್ತಾ ಬಂದಿದ್ದೇನೆ. ಒಬ್ಬರಿಗಿಂತ ಮತ್ತೊಬ್ಬರು ಮಿಗಿಲಾದ ನಟರು ಎಂದು ಮೆಲುಕು ಹಾಕಿದ್ದಾರೆ.

ಪುನೀತ್ ಅವರ ಅಗಲಿಕೆ ಕೇವಲ ಚಿತ್ರರಂಗಕ್ಕಷ್ಟೇ ಅಲ್ಲ, ಇಡೀ ನಾಡಿಗೆ ತುಂಬಲಾರದ ನಷ್ಟ'. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಅವರ ಕುಟುಂಬ ಸದಸ್ಯರಿಗಷ್ಟೇ ಅಲ್ಲ, ಇಡೀ ನಾಡಿಗೇ ಆ ಭಗವಂತ ನೀಡಲಿ ಎಂದು ಶೋಕಸಂದೇಶದಲ್ಲಿ ಎಂದು ತಿಳಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್​.ಸಂತೋಷ್ ಸಂತಾಪ:

"ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ .... ನೀನೇ ರಾಜಕುಮಾರ ....... ಓಂ ಶಾಂತಿಃ ಶಾಂತಿಃ ಶಾಂತಿಃ ..." ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್​.ಸಂತೋಷ್ ಟ್ವೀಟ್ ಮಾಡಿದ್ದು, ಸಂತಾಪ ಸೂಚಿಸಿದ್ದಾರೆ.

ಓದಿ: ಹುಟ್ಟೂರಿನ ಅಭಿಮಾನ ಮೆರೆದಿದ್ದ ಯುವರತ್ನ.. ಚಾಮರಾಜನಗರ ಜಿಲ್ಲೆಗೆ ರಾಯಭಾರಿಯಾಗಿದ್ದರು ಪುನೀತ್..

Last Updated : Oct 29, 2021, 4:45 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.