ETV Bharat / city

ಬೀಟ್‌ ಮಾಡೋದು ಬಿಟ್ಟು ಮೈಸೂರು ಪೊಲೀಸರು ಲಿಕ್ಕರ್ ಶಾಪ್ ಬಳಿ ದುಡ್ಡು ವಸೂಲಿ ಮಾಡ್ತಾರೆ: ಸಿದ್ದರಾಮಯ್ಯ ಕಿಡಿ

author img

By

Published : Sep 22, 2021, 4:43 PM IST

Opposition leader Siddaramaiah talking in Assembly Session
ಬೀಟ್‌ ಮಾಡೋದು ಬಿಟ್ಟು ಮೈಸೂರು ಪೊಲೀಸರು ಲಿಕ್ಕರ್ ಶಾಪ್ ಬಳಿ ದುಡ್ಡು ವಸೂಲಿ ಮಾಡ್ತಾರೆ: ಸಿದ್ದರಾಮಯ್ಯ ಕಿಡಿ

ಇಂತಹ ಘಟನೆ ನಡೆದಾಗ ಗೃಹ ಸಚಿವರು ಸ್ಥಳಕ್ಕೆ ಹೋಗದೆ ಯಾರು ಹೋಗ್ತಾರೆ? ಯಾವ ವಕೀಲರು ನಿಮಗೆ ಆ ರೀತಿ ಸಲಹೆ ಕೊಡ್ತಾರೆ? ಅದು ಸರಿಯಾದ ಸಲಹೆ ಅಲ್ಲ. ನಿಮಗೆ ಆ ರೀತಿ ಹೇಳಿರೋದು ವಕೀಲರಲ್ಲ. ಬಹುಶಃ ಪೊಲೀಸರೇ ಇರಬೇಕು ಎಂದು ಗೃಹ ಸಚಿವರಿಗೆ ಕಿವಿ ಮಾತು ಹೇಳಿದರು..

ಬೆಂಗಳೂರು : ಮೈಸೂರಿನ‌ ಪೊಲೀಸರು ಬೀಟ್ ಮಾಡಲ್ಲ. ಲಿಕ್ಕರ್ ಶಾಪ್ ಬಳಿ ಹೋಗಿ ದುಡ್ಡು ವಸೂಲಿ ಮಾಡುತ್ತಿರುತ್ತಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಬೀಟ್‌ ಮಾಡೋದು ಬಿಟ್ಟು ಮೈಸೂರು ಪೊಲೀಸರು ಲಿಕ್ಕರ್ ಶಾಪ್ ಬಳಿ ದುಡ್ಡು ವಸೂಲಿ ಮಾಡ್ತಾರೆ : ಸಿದ್ದರಾಮಯ್ಯ ಕಿಡಿ
ವಿಧಾನಾಭೆ ಕಲಾಪದಲ್ಲಿ ಮೈಸೂರು ಅತ್ಯಾಚಾರ ಪ್ರಕರಣ ಸಂಬಂಧ ಚರ್ಚೆ ವೇಳೆ ಮಾತನಾಡಿದ ಅವರು, ಮೈಸೂರಿನಲ್ಲಿ 16 ಸುಲಿಗೆ, ಶೂಟೌಟ್, 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಎರಡು ಕೊಲೆ, ದರೋಡೆಗಳು ಕಳೆದ ಒಂದು ತಿಂಗಳಲ್ಲಿ ನಡೆದಿವೆ. ಪೊಲೀಸರು ಏನ್‌ ನಿದ್ದೆ ಮಾಡ್ತಾ ಇದ್ರಾ?. ಪೊಲೀಸರು ಲಿಕ್ಕರ್ ಶಾಪ್ ಬಳಿ ವಸೂಲಿ ಮಾಡುವುದಕ್ಕೆ ಹೋಗ್ತಾರೆ, ಮೈಸೂರು ನಗರಕ್ಕೆ ಕೆಟ್ಟ ಹೆಸರು ಬರುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅತ್ಯಾಚಾರದ ಬಗ್ಗೆ ಅಪ್ಪಯ್ಯ ಎಂಬಾತ ದೂರು ಕೊಟ್ಟಿದ್ದಾನೆ. ಘಟನೆ ನಡೆದ ಜಾಗ ಯಾರ ವ್ಯಾಪ್ತಿಗೆ ಬರುತ್ತೆ ಅನ್ನೋದು ಗೊತ್ತಿಲ್ಲ. ಇವರು ಇನ್ನೆಂಥಾ ಪೊಲೀಸ್ ಕೆಲಸ ಮಾಡ್ತಾರೆ. ಇವರಿಂದ ಇನ್ನೆಂಥಾ ರಕ್ಷಣೆ ಸಿಗೋಕೆ ಸಾಧ್ಯ? ಪೊಲೀಸರು ಯುವತಿ ಸ್ಟೇಟ್‌ಮೆಂಟ್ ತೆಗೆದುಕೊಂಡಿಲ್ಲ. ಯುವತಿ ಹೇಳಿಕೆ ಏಕೆ‌ ತೆಗೆದುಕೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬೊಮ್ಮಾಯಿ, ಅತ್ಯಾಚಾರಕ್ಕೆ ಒಳಗಾದ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ಹೇಳಿಕೆ ನೀಡಿದ್ದಾರೆ. ಯುವತಿಯ ಹೇಳಿಕೆ ಪಡೆದುಕೊಳ್ಳುವಲ್ಲಿ ಪೊಲೀಸರು ಯಶಸ್ವಿ ಆಗಿದ್ದಾರೆ ಎಂದು ಸದನಕ್ಕೆ ಮಾಹಿತಿ ಕೊಟ್ಟರು.

ಪೊಲೀಸ್ ಅಧಿಕಾರಿಗಳನ್ನು ನನ್ನ ಜೊತೆ ಕೂರಿಸಿಕೊಂಡ್ರೆ..?: ಅತ್ಯಾಚಾರ ನಡೆದ ಬಳಿಕ ಅಂದು ಬೆಳಗ್ಗೆ ಚಾಮುಂಡಿಬೆಟ್ಟ, ಆಮೇಲೆ ಪೊಲೀಸ್‌ ಅಕಾಡೆಮಿಗೆ ಹೋಗಿ ಗನ್ ಹಿಡಿದು ಫೋಸ್ ಕೊಟ್ಟರು ಎಂದು ಗೃಹ ಸಚಿವರನ್ನು ತರಾಟೆಗೆ ತೆಗದುಕೊಂಡರು. ಆಗ ಎದ್ದು ನಿಂತ ಗೃಹ ಸಚಿವ ಆರಗ ಜ್ಞಾನೇಂದ್ರ, ಮೊದಲೇ ಅಕಾಡೆಮಿ ಕಾರ್ಯಕ್ರಮ ಇತ್ತು. ಮೊದಲ ದಿನ ಮೈಸೂರಿಗೆ ಹೋದೆ. ಹೋದ ಕೂಡಲೇ ಪೊಲೀಸರ ಜೊತೆ ಚರ್ಚೆ ಮಾಡಿದೆ.

ಮಾರನೇ ದಿನವೂ ಕೂಡ ಚರ್ಚೆ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ನನ್ನ ಜೊತೆ ಕೂರಿಸಿಕೊಂಡ್ರೆ, ಅವ್ರು ಕೆಲಸ ಮಾಡೋದು ಬೇಡ್ವಾ? ಘಟನಾ ಸ್ಥಳಕ್ಕೆ ಹೋಗುವ ನನಗೆ ಜಿಜ್ಞಾಸೆ ಇತ್ತು. ಕೃತ್ಯ ನಡೆದ ಸ್ಥಳಕ್ಕೆ ಹೋದ್ರೆ ಸರಿಯಾಗೋದಿಲ್ಲ ಎಂದು ಕೆಲ ಕಾನೂನು ತಜ್ಞರು ಹೇಳಿದರು. ಇನ್ನೂ ಕೆಲವರು ನೀವು ಹೋಗಿಲ್ಲ ಅಂದರೆ ಕಷ್ಟ ಆಗುತ್ತೆ ಎಂದರು. ಇಷ್ಟು ಇದ್ರೂ ಕೂಡ ನಾನು ಅಲ್ಲಿಗೆ ಹೋಗಿ ನನ್ನ ಕೆಲಸ ನಾನು ಮಾಡಿದ್ದೇನೆ ಎಂದು ವಿವರಿಸಿದರು.

ಪೊಲೀಸ್ ಅಕಾಡೆಮಿ ಕಾರ್ಯಕ್ರಮಕ್ಕೆ ಹೋಗಿದ್ದೆ ನಾನು. ಹಾಗಂತಾ, ನಾನು ಫೋಸ್ ಕೊಟ್ಟಿದ್ದೆ ಅನ್ನೋದು ಏನು ಅರ್ಥ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ರು, ನಿಮ್ಮಂತವರ ಬಾಯಲ್ಲಿ ಈ ರೀತಿ ಮಾತು ಬಂದ್ರೆ ಏನು ಅರ್ಥ? ಎಂದು ಸಿದ್ದರಾಮಯ್ಯ ಆರೋಪಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಬೇಸರ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಇಂತಹ ಘಟನೆ ನಡೆದಾಗ ಗೃಹ ಸಚಿವರು ಸ್ಥಳಕ್ಕೆ ಹೋಗದೆ ಯಾರು ಹೋಗ್ತಾರೆ? ಯಾವ ವಕೀಲರು ನಿಮಗೆ ಆ ರೀತಿ ಸಲಹೆ ಕೊಡ್ತಾರೆ? ಅದು ಸರಿಯಾದ ಸಲಹೆ ಅಲ್ಲ. ನಿಮಗೆ ಆ ರೀತಿ ಹೇಳಿರೋದು ವಕೀಲರಲ್ಲ. ಬಹುಶಃ ಪೊಲೀಸರೇ ಇರಬೇಕು ಎಂದು ಗೃಹ ಸಚಿವರಿಗೆ ಕಿವಿ ಮಾತು ಹೇಳಿದರು.

'ನನಗೂ ಶಾಕ್ ಆಗಿತ್ತು': ಮತ್ತೆ ಎದ್ದು ನಿಂತ ಗೃಹ ಸಚಿವ ಆರಗ ಜ್ಞಾನೇಂದ್ರ, ನಾನು ಅಧಿಕಾರ ವಹಿಸಿಕೊಂಡು ಎರಡು ವಾರ ಆಗುವಷ್ಟರಲ್ಲೇ ಮೈಸೂರಿನಲ್ಲಿ 2 ಪ್ರಕರಣ ಆಗಿದ್ದವು. ಇದ್ರಿಂದ ನನಗೂ ಶಾಕ್ ಆಗಿತ್ತು. ಹಾಗಾಗಿ, ಈ ರೀತಿಯಾಗಿದೆ ಎಂದು ಸಮಜಾಯಿಷಿ ನೀಡಿದರು.

ಈ ವೇಳೆ ಮಧ್ಯಪ್ರವೇಶಿಸಿದ ಡಿ ಕೆ ಶಿವಕುಮಾರ್, ಪಾಪ ಶಾಕ್‌ಗೊಳಗಾಗಿ ಕಾಂಗ್ರೆಸ್‌ನವರು ರೇಪ್ ಮಾಡಿದ್ದು ಅಂದ್ರಿ ಎಂದು ಕಾಲೆಳೆದರು. ಅದಕ್ಕೆ ಪ್ರತಿಕ್ರಿಯಿಸಿದ ಆರಗ ಜ್ಞಾನೇಂದ್ರ, ಶಿವಕುಮಾರ್ ನಾನು ನಿಮ್ಮಂತೇ ಹಳ್ಳಿಯಿಂದ ಬಂದವನು. ಮಾತನಾಡುವಾಗ ಪದಗಳ ಸೂಕ್ಷ್ಮತೆ ಗೊತ್ತಾಗಲ್ಲ. ಪ್ರಕರಣ ಆದ ಕೂಡಲೇ ರಾಜೀನಾಮೆ ಕೊಡಿ ಎಂದಾಗ ಆ ಕ್ಷಣಕ್ಕೆ ಆಡಿರೋ ಮಾತದು. ದಯಮಾಡಿ ಈ ಹೇಳಿಕೆ ಬಗ್ಗೆ ಬೇರೆ ಅರ್ಥ ಮಾಡಿಕೊಳ್ಳೋದು ಬೇಡ ಎಂದು ಮನವಿ ಮಾಡಿದರು.

ಸಂಜೆ ಏಳು ಗಂಟೆಗೆ ಆ ಹುಡುಗಿ ಆ ಸ್ಥಳಕ್ಕೆ ಹೋಗಬಾರದಾ?: ಮಾತು ಮುಂದುವರಿಸಿದ ಸಿದ್ದರಾಮಯ್ಯ, ಸಂಜೆ ಏಳು ಗಂಟೆಗೆ ಆ ಹುಡುಗಿ ಆ ಸ್ಥಳಕ್ಕೆ ಹೋಗಬಾರದಾ? ಮಹಾತ್ಮಾ ಗಾಂಧಿಯವರು ಅದನ್ನೇ ಹೇಳಿದ್ದು, ರಾತ್ರಿ 12 ಗಂಟೆಯಲ್ಲೂ ಹುಡುಗಿಯರು ನಿರ್ಭೀತಿಯಿಂದ ಓಡಾಡುವಂತೆ ಆದರೆ ಆಗ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಎಂದರ್ಥ ಎಂದು ಉಲ್ಲೇಖಿಸುತ್ತಾ, ಸಂಜೆ 7 ಗಂಟೆಗೆ ಏಕೆ ಹೋದರು ಎಂಬುದು ಜವಾಬ್ದಾರಿಯುತ ಹೇಳಿಕೆ ಎಂದರು.

ಆಗ ಮಧ್ಯ ಪ್ರವೇಶಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, 12 ಗಂಟೆ ರಾತ್ರಿ ಹುಡುಗಿಯರು ನಿರ್ಭೀತಿಯಾಗಿ ಹೋಗಬೇಕು ಎಂಬುದು ಆಶಯ. ಆದರೆ ಸ್ಥಿತಿ ಹಾಗಿದೆಯಾ ಎಂದು ಪ್ರಶ್ನಿಸಿದರು. ಇದಕ್ಕೆ ಕಾಂಗ್ರೆಸ್‌ ಮಹಿಳಾ ಶಾಸಕಿಯರು ಆಕ್ಷೇಪ ವ್ಯಕ್ತಪಡಿಸಿದರು. ಹಾಗಾದರೆ ಹೆಣ್ಣುಮಕ್ಕಳು ಓಡಾಡೋದು ಸರಿಯಲ್ವೇ? ಗೃಹ ಸಚಿವರಾಗಿ ನೀವು ಈ ರೀತಿ ಹೇಳಿಕೆ ಕೊಟ್ಟರೆ ಹೇಗೆ ಎಂದು ಕಿಡಿ ಕಾರಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.