ETV Bharat / city

ಕಾವೇರಿ ಕೂಗು ಅಭಿಯಾನ: ಸರ್ಕಾರದ ಪಾತ್ರ ಸ್ಪಷ್ಟಪಡಿಸಲು ಗಡುವು ನೀಡಿದ ಹೈಕೋರ್ಟ್

author img

By

Published : Dec 9, 2020, 7:32 PM IST

ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಶನ್ ಕಾವೇರಿ ಕೂಗು ಅಭಿಯಾನ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

Isha Foundation Kaveri Shout Campaign
ಕಾವೇರಿ ಕೂಗು ಅಭಿಯಾನ: ಸರ್ಕಾರದ ಪಾತ್ರ ಸ್ಪಷ್ಟಪಡಿಸಲು ಗಡುವು ನೀಡಿದ ಹೈಕೋರ್ಟ್

ಬೆಂಗಳೂರು: ಈಶ ಫೌಂಡೇಶನ್ ಕೈಗೊಂಡಿರುವ ಕಾವೇರಿ ಕೂಗು ಯೋಜನೆಯಲ್ಲಿ ತನ್ನ ಪಾತ್ರ ಸ್ಪಷ್ಟಪಡಿಸಲು ಮೀನಾಮೇಷ ಎಣಿಸುತ್ತಿರುವ ಸರ್ಕಾರದ ನಡೆಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಯೋಜನೆಯಲ್ಲಿ ತನ್ನ ಪಾತ್ರ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿ, ಮುಂದಿನ ಜನವರಿ 30ರೊಳಗೆ ಪ್ರಮಾಣಪತ್ರ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಶನ್ ಕಾವೇರಿ ಕೂಗು ಅಭಿಯಾನ ಹೆಸರಿನಲ್ಲಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ವಾದಿಸಿ, ಈಶ ಫೌಂಡೇಶನ್ ಕೈಗೊಂಡಿರುವ ಯೋಜನೆಯಲ್ಲಿ ಸರ್ಕಾರದ ಪಾತ್ರ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಸ್ಪಷ್ಟವಾಗಿ ತಿಳಿಯಲು ಅರಣ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ತಿಳಿಸಬೇಕಿದೆ. ಅದಕ್ಕಾಗಿ ಕಾಲಾವಕಾಶ ನೀಡಬೇಕೆಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಾವೇರಿ ಕೂಗು ಯೋಜನೆಯಲ್ಲಿ ಸರ್ಕಾರದ ಪಾತ್ರ ಇರುವ ಬಗ್ಗೆ ಸಾಕಷ್ಟು ಗೊಂದಲಗಳಿವೆ. ಈ ಹಿಂದೆ ಯೋಜನೆಯನ್ನು ಒಪ್ಪಿರುವುದಾಗಿ ಸರ್ಕಾರ ತಿಳಿಸಿತ್ತು. ಈಶ ಫೌಂಡೇಶನ್ ಸಲ್ಲಿಸಿರುವ ಡಿಪಿಆರ್​​ಅನ್ನು ಸರ್ಕಾರವೇ ಅನುಮೋದಿಸಿತ್ತು. ಅದಕ್ಕೆ ಪೂರಕವಾಗಿ ಸರ್ಕಾರದ ಮಟ್ಟದಲ್ಲಿ ಸಭೆ ನಡೆಸಲಾಗಿತ್ತು. ಕೆಲ ದಿನಗಳ ಬಳಿಕ ಒಪ್ಪಿಗೆ ಸೂಚಿಸಿಲ್ಲ ಎಂದಿದ್ದೀರಿ.
ಇದೇ ವೇಳೆ ಈಶ ಫೌಂಡೇಶನ್ ಯೋಜನೆಯನ್ನು ತಾವಲ್ಲ ಈಶ ಔಟ್‌ರೀಟ್ ಸಂಸ್ಥೆಯು ಹಮ್ಮಿಕೊಂಡಿದೆ. ಅದಕ್ಕೆ ಫೌಂಡೇಶನ್ ಯೋಜನೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿರುವುದಾಗಿ ಹೇಳುತ್ತಿದೆ. ಇವೆಲ್ಲದರಿಂದ ಯೋಜನೆ ಯಾರದ್ದು ಎಂಬ ಬಗ್ಗೆ ಜನರಲ್ಲಿ ಸಾಕಷ್ಟು ಗೊಂದಲ ಮೂಡಿದೆ.

ಇದನ್ನೂ ಓದಿ: ರಾತ್ರಿ ಹೊತ್ತಲ್ಲಿ ಲೌಡ್ ಸ್ಪೀಕರ್ ಬಳಕೆ: ಕೆಎಸ್​ಪಿಸಿಬಿ ವಿರುದ್ಧ ಹೈಕೋರ್ಟ್ ಅಸಮಾಧಾನ

ಆದ್ದರಿಂದ ಸರ್ಕಾರ ಈ ಕುರಿತು ಸ್ಪಷ್ಟತೆ ನೀಡಿ ವಿವಾದಗಳನ್ನು ಕೊನೆಗೊಳಿಸಬೇಕಿದೆ. ಹೀಗಾಗಿ ಕಾವೇರಿ ಕೂಗು ಯೋಜನೆಯಲ್ಲಿ ತನ್ನ ಪಾತ್ರ ಇದೆಯೋ ಅಥವಾ ಇಲ್ಲವೋ ಎಂಬುದನ್ನು ಖಚಿತಪಡಿಸಿ ಜ. 30ರೊಳಗೆ ನಿಖರವಾದ ಪ್ರಮಾಣಪತ್ರ ಸಲ್ಲಿಸಿ ಎಂದು ಸರ್ಕಾರಕ್ಕೆ ಸೂಚಿಸಿದ ಪೀಠ ವಿಚಾರಣೆಯನ್ನು ಫೆ. 2ಕ್ಕೆ ಮುಂದೂಡಿತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.