ETV Bharat / city

PSI ಮರು ಪರೀಕ್ಷೆಗೆ ಒತ್ತಾಯ..ಇನ್ನೊಂದೆಡೆ ಪರೀಕ್ಷೆ ಬೇಡವೆಂದು ನೇಮಕಗೊಂಡ ಅಭ್ಯರ್ಥಿಗಳ ಆಗ್ರಹ

author img

By

Published : Jun 16, 2022, 2:27 PM IST

PSI
PSI

ಪಿಎಸ್ಐ‌ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಸಾಬೀತಾಗುತ್ತಿದ್ದಂತೆ ಸರ್ಕಾರ ತಾತ್ಕಾಲಿಕ‌ ನೇಮಕಾತಿ ಪಟ್ಟಿ ರದ್ದುಗೊಳಿಸಿ ಪ್ರಕರಣದ ತನಿಖೆಯನ್ನು ಸಿಐಡಿ ಹೆಗಲಿಗೆ ವಹಿಸಿತ್ತು‌. ಪ್ರಕರಣದ ತನಿಖೆ ಮುಕ್ತಾಯವಾಗುವವರೆಗೂ ಮರು ಪರೀಕ್ಷೆ ನಡೆಸದಿರಲು ನಿರ್ಧರಿಸಿದ್ದ ಸರ್ಕಾರ‌, ಇದೀಗ ಕೋರ್ಟ್ ಆದೇಶ ನೋಡಿಕೊಂಡು ಮುಂದಿನ‌‌‌ ಹೆಜ್ಜೆ ಇಡುವುದಾಗಿ ಹೇಳಿದೆ.

ಬೆಂಗಳೂರು: ರಾಜ್ಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಪಿಎಸ್ಐ ಪರೀಕ್ಷೆ‌ ಅಕ್ರಮ ನೇಮಕಾತಿ ಹಗರಣದ ತನಿಖೆ ಸಿಐಡಿ ನಡೆಸುತ್ತಿದೆ. ಮತ್ತೊಂದೆಡೆ, ತಾತ್ಕಾಲಿಕ ನೇಮಕಾತಿ ಆಯ್ಕೆ‌‌ ಪಟ್ಟಿ ಸರ್ಕಾರ ರದ್ದು ಮಾಡಿರುವುದನ್ನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಕೋರ್ಟ್​ನಲ್ಲಿ ಅರ್ಜಿ ವಿಚಾರಣೆ ವಿಳಂಬ ಸಾಧ್ಯತೆ ಹಿನ್ನೆಲೆಯಲ್ಲಿ ಮರುಪರೀಕ್ಷೆ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳಿಗೆ ನುಂಗಲಾರದ ತುತ್ತಾಗಿ‌‌‌ ಪರಿಣಮಿಸಿದ್ದು, ಮರುಪರೀಕ್ಷೆ ವಿರೋಧಿಸುತ್ತಿರುವ ಅಭ್ಯರ್ಥಿಗಳಿಗೂ ಪರೋಕ್ಷವಾಗಿ ಹಿನ್ನೆಡೆಯಾಗಿದೆ.

ಪಿಎಸ್ಐ‌ ನೇಮಕ ಪರೀಕ್ಷೆಯಲ್ಲಿ ಅಕ್ರಮ ಸಾಬೀತಾಗುತ್ತಿದ್ದಂತೆ ಸರ್ಕಾರ ತಾತ್ಕಾಲಿಕ‌ ನೇಮಕಾತಿ ಪಟ್ಟಿ ರದ್ದುಗೊಳಿಸಿ ಪ್ರಕರಣದ ತನಿಖೆಯನ್ನು ಸಿಐಡಿ ಹೆಗಲಿಗೆ ವಹಿಸಿತ್ತು‌. ರಾಜಕೀಯ ಮುಖಂಡರು, ನೇಮಕಾತಿ ವಿಭಾಗದ ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳು ಸೇರಿ ಸುಮಾರು 50 ಕ್ಕಿಂತ ಹೆಚ್ಚು ಮಂದಿಯನ್ನು ಬಂಧಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವತ್ತ ಸಿಐಡಿ ತನಿಖೆ ಚುರುಕಿನಿಂದ‌‌ ನಡೆಸುತ್ತಿದೆ.

ಪ್ರಕರಣದ ತನಿಖೆ ಮುಕ್ತಾಯವಾಗುವವರೆಗೂ ಮರು ಪರೀಕ್ಷೆ ನಡೆಸದಿರಲು ನಿರ್ಧರಿಸಿದ್ದ ಸರ್ಕಾರ‌, ಇದೀಗ ಕೋರ್ಟ್ ಆದೇಶ ನೋಡಿಕೊಂಡು ಮುಂದಿನ‌‌‌ ಹೆಜ್ಜೆ ಇಡುವುದಾಗಿ ಹೇಳಿದೆ. ಮತ್ತೊಂದೆಡೆ, ನೇಮಕಾತಿ ಪಟ್ಟಿ ರದ್ದುಗೊಳಿಸಿ‌ದ್ದನ್ನು ಪ್ರಶ್ನಿಸಿ ಸುಮಾರು 24 ಅಭ್ಯರ್ಥಿಗಳು ಕರ್ನಾಟಕ ಆಡಳಿತ ನ್ಯಾಯಮಂಡಳಿಗೆ (ಕೆಎಟಿ) ಹಾಕಿದ್ದ ಅರ್ಜಿಗಳು ವಿಚಾರಣೆ ಹಂತದಲ್ಲಿವೆ.‌ ವಿಚಾರಣೆ ಮುಗಿಯುವವರೆಗೂ ಮರುಪರೀಕ್ಷೆ ನಡೆಸಬೇಕಾ ?, ಬೇಡವೇ? ಎಂಬುದರ ಕುರಿತು ಸರ್ಕಾರ‌ ಜಿಜ್ಞಾಸೆಯಲ್ಲಿದೆ.

ಮರುಪರೀಕ್ಷೆ ನಡೆಸಬೇಕೆಂಬ ಕೂಗು ಜೋರು: ಶತಾಯಗತಾಯ ಪಿಎಸ್ಐ ಆಗಲು‌ ಪರೀಕ್ಷೆಯಲ್ಲಿ ವಾಮಮಾರ್ಗ ಬಳಸಿ ಲಕ್ಷಾಂತರ ರೂಪಾಯಿ ನೀಡಿ ಅಕ್ರಮವಾಗಿ ಕೆಲ ಅಭ್ಯರ್ಥಿಗಳು ನೇಮಕಾತಿಯಾಗಿರುವುದು ತನಿಖೆಯಲ್ಲಿ‌ ಗೊತ್ತಾಗಿದೆ. ಕಷ್ಟಪಟ್ಟು ಓದಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ನೇಮಕಗೊಂಡಿದ್ದ ಅಭ್ಯರ್ಥಿಗಳಿಗೆ ಅನ್ಯಾಯವಾದಂತಿದೆ.

ಜೊತೆಗೆ ಕೆಲವೇ ಅಂಕಗಳಿಂದ ನೇಮಕವಾಗದ ಸಾವಿರಾರು ಅಭ್ಯರ್ಥಿಗಳು ಮರುಪರೀಕ್ಷೆ ನಡೆಸಬೇಕೆಂದು‌‌ ಪಟ್ಟು ಹಿಡಿದಿದ್ದಾರೆ. ಕಷ್ಟಪಟ್ಟು ಓದಿ ಪರೀಕ್ಷೆ ಬರೆದು ಸರ್ಕಾರಿ ಕೆಲಸ ಸಿಕ್ತು ಅಂದುಕೊಳ್ಳುವಾಗಲೇ ಕೈ ಜಾರಿದ್ದು, ನೇಮಕವಾದ ಅಭ್ಯರ್ಥಿಗಳ ಪಾಲಿಗೆ ಜೀರ್ಣಿಸಿಕೊಳ್ಳಲಾಗದ ಸತ್ಯ. ಆದರೂ ಬದಲಾದ ಮನಸ್ಥಿತಿಯಿಂದ ಮತ್ತೆ ಓದಿ ಪರೀಕ್ಷೆಯಲ್ಲಿ ನೇಮಕವಾಗುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸುತ್ತಾರೆ ಕೆಲ ಅಭ್ಯರ್ಥಿಗಳು.

ಮರು ಪರೀಕ್ಷೆ ಬೇಡವೇ ಬೇಡ: ನಾವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದು ಪಿಎಸ್ಐ ಆಗಿ ನೇಮಕಾತಿಯಾಗಿದ್ದೇವೆ. ಕೆಲ ಅಭ್ಯರ್ಥಿಗಳು‌ ಮಾಡಿದ ತಪ್ಪಿನಿಂದಾಗಿ ನಾವು ಯಾಕೆ‌‌ ಶಿಕ್ಷೆ ಅನುಭವಿಸಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಇನ್ನುಳಿದವರಿಗೆ ನೇಮಕಾತಿ ಆದೇಶವನ್ನ ಸರ್ಕಾರ ಹೊರಡಿಸಲಿ. ಅಕ್ರಮ ಹಾಗೂ ಸಕ್ರಮ ಮಾರ್ಗದಲ್ಲಿ ಪರೀಕ್ಷೆ ಬರೆದು ನೇಮಕವಾಗಿದ್ದ ಅಭ್ಯರ್ಥಿಗಳನ್ನು ಒಂದೇ ತಕ್ಕಡಿಯಲ್ಲಿ ತೂಗುಯ್ಯುವುದು ಎಷ್ಟು ಸರಿ ?, ಪಿಎಸ್ಐ ನೇಮಕ ವಿಚಾರದಲ್ಲಿ ಸರ್ಕಾರದ ಧೋರಣೆ ಬದಲಾಗಬೇಕು. 545 ಮಂದಿ‌ಯಲ್ಲಿ ಮೋಸದಿಂದ ಪರೀಕ್ಷೆ ಬರೆದಿದ್ದ ತಪ್ಪಿತಸ್ಥರನ್ನು ತ್ವರಿತಗತಿಯಲ್ಲಿ ಸಿಐಡಿ ಬಂಧಿಸಲಿ.‌ ಪ್ರಾಮಾಣಿಕ ಅಭ್ಯರ್ಥಿಗಳಿಗೆ ಸರ್ಕಾರ ಉದ್ಯೋಗದ ಭರವಸೆ ನೀಡಬೇಕು. ಈ ನಿಟ್ಟಿನಲ್ಲಿ ನ್ಯಾಯ ಸಿಗುವ ವಿಶ್ವಾಸದಿಂದ ಕೆಎಟಿ ಮೆಟ್ಟಿಲೇರಿದ್ದೇವೆ ಎನ್ನುತ್ತಾರೆ ನೇಮಕವಾದ ಅಭ್ಯರ್ಥಿಗಳು.

ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ: ಜೈಲು ಪಾಲಾದ ಶಾಂತಿಬಾಯಿ ದಂಪತಿ ಜಾಮೀನು ಅರ್ಜಿ ವಜಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.