ETV Bharat / city

ಸಿಡಿ ಪ್ರಕರಣ: ನಗರ ಪೊಲೀಸ್ ಆಯುಕ್ತರ ವಿರುದ್ಧ ತನಿಖೆ ಆದೇಶ ರದ್ದುಪಡಿಸಿದ ಹೈಕೋರ್ಟ್

author img

By

Published : Dec 14, 2021, 7:42 PM IST

karnataka high court
ಹೈಕೋರ್ಟ್

ಸಿಡಿ ಪ್ರಕರಣ ಸಂಬಂಧ ನಗರ ಪೊಲೀಸ್ ಆಯುಕ್ತ ಹಾಗೂ ಇತರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವ 8ನೇ ಎಸಿಎಂಎಂ ಕೋರ್ಟ್ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಿಸದ ಆರೋಪದಡಿ ನಗರ ಪೊಲೀಸ್ ಆಯುಕ್ತ ಹಾಗೂ ಇತರ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಆದೇಶಿಸಿದ್ದ ನಗರದ 8ನೇ ಎಸಿಎಂಎಂ ಕೋರ್ಟ್ ನೀಡಿದ್ದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.

ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್​, ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಹಾಗೂ ಕಬ್ಬನ್ ಪಾರ್ಕ್ ಠಾಣೆ ಪೊಲೀಸ್ ಇನ್ಸ್​​​ಪೆಕ್ಟರ್ ಬಿ. ಮಾರುತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರಿದ್ಧ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಿತು.

ಈ ವೇಳೆ, ಅರ್ಜಿದಾರರ ಪರ ವಕೀಲರ ಪಿ. ಪ್ರಸನ್ನ ಕುಮಾರ್ ವಾದ ಮಂಡಿಸಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಂದ ಯಾವುದೇ ಕರ್ತವ್ಯ ಲೋಪವಾಗಿಲ್ಲ. ದೂರುದಾರರು ದೂರು ಸಲ್ಲಿಸಿದ ವೇಳೆ ಸಂತ್ರಸ್ತೆಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ನೀಡಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತರಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ತನಿಖೆ ನಡೆಸಲಾಗಿದೆ.

ಹಾಗಿದ್ದೂ ಮ್ಯಾಜಿಸ್ಟ್ರೇಟ್ ಕೋರ್ಟ್ ಖಾಸಗಿ ದೂರು ಆಧರಿಸಿ ಅರ್ಜಿದಾರರ ವಿರುದ್ಧ ತನಿಖೆಗೆ ಆದೇಶಿಸಿರುವ ಕ್ರಮ ನ್ಯಾಯ ಸಮ್ಮತವಲ್ಲ. ಆದ್ದರಿಂದ ಕರ್ತವ್ಯ ಲೋಪ ಆರೋಪದಡಿ ಮ್ಯಾಜಿಸ್ಟ್ರೇಟ್ ಕೋರ್ಟ್ ತನಿಖೆ ನಡೆಸುವಂತೆ ಹೊರಡಿಸಿರರುವ ಆದೇಶವನ್ನು ರದ್ದುಪಡಿಸಬೇಕು ಎಂದು ಕೋರಿದರು. ವಾದ ಪರಿಗಣಿಸಿದ ಪೀಠ, ಅಧಿಕಾರಿಗಳ ವಿರುದ್ಧದ ತನಿಖೆ ಆದೇಶವನ್ನು ರದ್ದುಪಡಿಸಿ ಆದೇಶಿಸಿತು.

ಇದನ್ನೂ ಓದಿ: CD Case: ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಡಿಸಿಪಿ ಅನುಚೇತ್​ಗೆ ತಾತ್ಕಾಲಿಕ ರಿಲೀಫ್

ಪ್ರಕರಣದ ಹಿನ್ನೆಲೆ

ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧದ ಸಿಡಿ ಕೇಸ್ ಬೆಳಕಿಗೆ ಬಂದ ಆರಂಭದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನೇಶ್ ಕಲ್ಲಳ್ಳಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ, ಪೊಲೀಸರು ಈ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿರಲಿಲ್ಲ.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸುವಂತೆ ಕೋರಿ ಜನಾಧಿಕಾರ ಸಂಘರ್ಷ ಪರಿಷತ್‌ ನ ಅಧ್ಯಕ್ಷ ಆದರ್ಶ ಬಿ. ಅಯ್ಯರ್ ನಗರದ 8ನೇ ಎಸಿಎಂಎಂ ಕೋರ್ಟ್‌ನಲ್ಲಿ ಪಿಸಿಆರ್ ದಾಖಲಿಸಿದ್ದರು. ದೂರಿನಲ್ಲಿ ಎಫ್ಐಆರ್ ದಾಖಲಿಸದ ಅಧಿಕಾರಿಗಳ ನಡೆ ಐಪಿಸಿ ಸೆಕ್ಷನ್ 166(ಎ) ಅಡಿ ಅಪರಾಧವಾಗಿದೆ ಎಂದು ಆರೋಪಿಸಿದ್ದರು.

ಪಿಸಿಆರ್ ವಿಚಾರಣೆ ನಡೆಸಿದ್ದ ಮ್ಯಾಜಿಸ್ಟ್ರೇಟ್‌ ಕೋರ್ಟ್, ಆರೋಪಿತ ಅಧಿಕಾರಿಗಳ ವಿರುದ್ಧ ‘ಅಪರಾಧ ದಂಡ ಪ್ರಕ್ರಿಯಾ ಸಂಹಿತೆ'1973ರ ಕಲಂ 156 (3)ರ ಅನುಸಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಈ ಕುರಿತ ವರದಿಯನ್ನು 2022ರ ಫೆಬ್ರವರಿ 1ರಂದು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಈ ಆದೇಶ ರದ್ದು ಕೋರಿ ಅಧಿಕಾರಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.