ETV Bharat / city

ಹಸಿರು ಇಂಧನ ಬಳಕೆ ಉತ್ತೇಜಿಸುವ ನವೀಕರಿಸಬಹುದಾದ ಇಂಧನ ನೀತಿಗೆ ಸಚಿವ ಸಂಪುಟ ಸಭೆ ಅಸ್ತು!

author img

By

Published : Mar 31, 2022, 10:02 AM IST

ಹಸಿರು ಇಂಧನಕ್ಕೆ ಆದ್ಯತೆ ನೀಡುವ ಕರ್ನಾಟಕದ ನವೀಕರಿಸಬಹುದಾದ ಇಂಧನ ನೀತಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

Karmataka cabinet approves Renewable Energy Policy for 2022-27
ಹಸಿರು ಇಂಧನ ಬಳಕೆ ಉತ್ತೇಜಿಸುವ ನವೀಕರಿಸಬಹುದಾದ ಇಂಧನ ನೀತಿ-2022-27ಗೆ ಸಚಿವ ಸಂಪುಟ ಸಭೆ ಅಸ್ತು!

ಬೆಂಗಳೂರು: ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಹೂಡಿಕೆಗೆ ಉತ್ತೇಜನ, ಉದ್ಯೋಗ ಅವಕಾಶಗಳೊಂದಿಗೆ ಹಸಿರು ಇಂಧನಕ್ಕೆ ಆದ್ಯತೆ ನೀಡುವ ಕರ್ನಾಟಕದ ನವೀಕರಿಸಬಹುದಾದ ಇಂಧನ ನೀತಿ- 2022-27ಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿ ಮಹತ್ವದ ತೀರ್ಮಾನ ಕೈಗೊಂಡಿದೆ. ಬುಧವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ನವೀಕರಿಸಬಹುದಾದ ಇಂಧನ ಬೇಡಿಕೆಯನ್ನು ಪೂರೈಸಲು ಲಭ್ಯ ಇರುವ ಸಂಪನ್ಮೂಲ ಬಳಕೆ ಮಾಡುವುದು. ವಿದ್ಯುತ್ ವಾಹನಗಳ ಬಳಕೆ ಮತ್ತು ಚಾರ್ಜಿಂಗ್ ವ್ಯವಸ್ಥೆಗೆ ಪ್ರೋತ್ಸಾಹ ನೀಡುವುದು ನೀತಿಯಲ್ಲಿರುವ ಅಂಶವಾಗಿದೆ ಎಂದು ಹೇಳಲಾಗಿದೆ. ನವೀಕರಿಸಬಹುದಾದ ಇಂಧನ ನೀತಿಯಿಂದ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಅವಲಂಬನೆ ಪ್ರಮಾಣ ತಗ್ಗಿಸುವುದು ನೀತಿಯ ಪ್ರಮುಖ ಅಂಶವಾಗಿದೆ. ಪವನ - ಸೌರ ಹೈಬ್ರಿಡ್ ಯೋಜನೆಗೆ ಒತ್ತು. ಜೈವಿಕ ಮತ್ತು ತ್ಯಾಜ್ಯದಿಂದ ಇಂಧನ ಉತ್ಪಾದನೆಗೆ ಆದ್ಯತೆ ನೀಡುವುದು ನೀತಿಯಲ್ಲಿದೆ.

ಸಂಪುಟ ಸಭೆಯಲ್ಲಿ ಜಂಟಿ ಅಧಿವೇಶನದಲ್ಲಿ ಅಂಗೀಕಾರವಾದ ಸಚಿವರ, ಶಾಸಕರು, ಸಭಾಧ್ಯಕ್ಷರ, ಸಭಾಪತಿಗಳ ವೇತನ ಹೆಚ್ಚಳ ಮತ್ತು ನಿವೃತ್ತಿ ವೇತನಗಳು, ಭತ್ಯೆಗಳ ಅಧಿನಿಯಮಕ್ಕೆ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಲಾಯಿತು. ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಅಧೀನಕ್ಕೆ ಬರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಅವಧಿಯನ್ನು ಮತ್ತೆ ಒಂದು ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ.

ಸಚಿವ ಸಂಪುಟದ ಇತರ ತೀರ್ಮಾನಗಳೇನು?

  • ಕರ್ನಾಟಕ ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸ್‌ಗಳ ನೌಕರರನ್ನು ವಿಲೀನಗೊಳಿಸುವ ಅಧಿನಿಯಮ - 2011ರಂತೆ ವಿಲೀನಗೊಳ್ಳಲು ಬಾಕಿ ಉಳಿದಿರುವ 10 ಅರೆಕಾಲಿಕ ವೃತ್ತಿ ಆಧಾರಿತ ಕೋರ್ಸ್‌ಗಳ (JOC) ಉಪನ್ಯಾಸಕರುಗಳನ್ನು ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಹುದ್ದೆಯಲ್ಲಿ ವಿಲೀನಗೊಳಿಸಲು ಒಪ್ಪಿಗೆ
  • 2022-23ನೇ ಶೈಕ್ಷಣಿಕ ಸಾಲಿಗೆ 'ಕಲಿಕಾ ಚೇತರಿಕೆ' ಕಾರ್ಯಕ್ರಮ ಅನುಷ್ಟಾನಗೊಳಿಸಲು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿ (ಅಭ್ಯಾಸ ಪುಸ್ತಕ) ಹಾಗೂ ಶಿಕ್ಷಕರಿಗೆ ಕೈಪಿಡಿಗಳನ್ನು ರೂ. 107.72 ಕೋಟಿಗಳ ಅಂದಾಜು ಮೊತ್ತದಲ್ಲಿ ಒದಗಿಸಲು ಅನುಮೋದನೆ
  • ಉಡುಪಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ 200 ಹಾಸಿಗೆಗಳ ಕೂಸಮ್ಮ ಶಂಭುಶೆಟ್ಟಿ ಮೆಮೋರಿಯಲ್, ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರ್ಕಾರದ ಸುಪರ್ದಿಗೆ ಪಡೆಯಲು ತೀರ್ಮಾನ
  • ರಾಮನಗರದ ಜಿಲ್ಲಾ ಆಸ್ಪತ್ರೆ ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು ಮೊತ್ತ ರೂ.99.93 ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ
  • ರಾಜ್ಯದ ವಿವಿಧ ಕೇಂದ್ರ ಕಾರಾಗೃಹಗಳಲ್ಲಿರುವ 114 ಜೀವಾವಧಿ ಶಿಕ್ಷಾ ಬಂಧಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ
  • ರಾಯಚೂರಿನ ಗ್ರೀನ್‌ಫೀಲ್ಡ್ ದೇಶೀಯ ಪ್ರಯಾಣಿಕ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೆ.ರೈಟ್ಸ್ ಇಂಡಿಯಾ ಲಿಮಿಟೆಡ್ ಇವರು ಸಿದ್ಧಪಡಿಸಿರುವ ರೂ. 185.57 ಕೋಟಿಗಳ ವಿಸ್ತತ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ
  • ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಹೋಬಳಿ ಚಿಕ್ಕಮುದ್ದೇನಹಳ್ಳಿ ಗ್ರಾಮದ ಸ.ನಂ.27ರಲ್ಲಿ 4-00 ಎಕರೆ ಸರ್ಕಾರಿ ಖರಾಬು ಗೋಮಾಳ ಜಮೀನನ್ನು ಉಚಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಪ್ರಶಾಂತಿ ಬಾಲ ಮಂದಿರ ಟ್ರಸ್ಟ್​ಗೆ (ರಿ) ಮಂಜೂರು
  • ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಬರುವ ವಸತಿ ಶಾಲೆ / ಕಾಲೇಜುಗಳ ವಿದ್ಯಾರ್ಥಿಗಳಿಗೆ 2021-22 ಸಾಲಿಗೆ ಸಿದ್ಧಪಡಿಸಿದ ಸಮವಸ್ತ್ರಗಳ ಸರಬರಾಜು ಮಾಡಲು ಕೆಹೆಚ್‌ಡಿಸಿಯು ಸ್ಥಳೀಯ ನೇಕಾರರಿಂದ ಸಮವಸ್ತ್ರ ಬಟ್ಟೆ ಖರೀದಿಸುವ ಬದಲಾಗಿ ಸರ್ಕಾರದ ಸಂಸ್ಥೆಗಳಿಂದ ಖರೀದಿಸಲು 12.11.2021ರಂದು ತಿದ್ದುಪಡಿ ಆದೇಶ ಹೊರಡಿಸಿರುವ ಕ್ರಮಕ್ಕೆ ಘಟನೋತ್ತರ ಅನುಮೋದನೆ
  • ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ 52.20 ಕೋಟಿ ರು. ವೆಚ್ಚದಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಸ್ಮಾರ್ಟ್ ಅಗ್ರಿಕಲ್ಚರ್ ಸ್ಥಾಪನೆಗೆ ಒಪ್ಪಿಗೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ದಾಖಲೆ ಬಿಸಿಲಿನ ಬೇಗೆ.. ಕರ್ನಾಟಕ ಸೇರಿ ಎಲ್ಲೆಲ್ಲಿ ತಾಪಮಾನ ಹೆಚ್ಚಿದೆ ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.