ETV Bharat / city

ಕೇಂದ್ರ ಸರ್ಕಾರ 2014ರ ಮೊದಲಿನ ನೇಮಕಾತಿ ನೀತಿಯನ್ನು ಜಾರಿಗೊಳಿಸಲಿ: ಟಿ.ಎಸ್.ನಾಗಾಭರಣ ಒತ್ತಾಯ

author img

By

Published : Jun 30, 2020, 2:14 PM IST

ಕೇಂದ್ರೀಕೃತ ನೇಮಕಾತಿ ವ್ಯವಸ್ಥೆ ಮೂಲಕ ನೇಮಕಗೊಂಡ ನೌಕರರು ಸ್ಥಳೀಯ ಭಾಷೆ ಕಲಿಯದೆ ಬೇಜವಾಬ್ದಾರಿ ತೋರುತ್ತಿದ್ದಾರೆ . ಇದರಿಂದ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ಸಿಗದೆ ಕಷ್ಟಪಡುತ್ತಿದ್ದಾರೆ. ಆದ್ದರಿಂದ ರಾಜ್ಯದಲ್ಲಿ 2014 ಮೊದಲಿನ ನೇಮಕಾತಿ ನೀತಿಯನ್ನು ಜಾರಿಗೆ ತರುವಂತೆ ಟಿ. ಎಸ್. ನಾಗಾಭರಣ ಒತ್ತಾಯಿಸಿದ್ದಾರೆ.

Kannada Development Authority chairman Nagabhanara
ಟಿ.ಎಸ್ ನಾಗಾಭರಣ

ಬೆಂಗಳೂರು: ಕೇಂದ್ರ ಸರ್ಕಾರ ಆರೋಗ್ಯ ಯೋಜನೆಯ ವಲಯವಾರು ನೇಮಕಾತಿ ನಡೆಸುವುದನ್ನು ಕೈಬಿಟ್ಟು ಮೊದಲಿನಂತೆ ಆಯಾ ರಾಜ್ಯಗಳಿಗೆ ನೇಮಕಾತಿ ಅವಕಾಶ ನೀಡುವ ಸಂಬಂಧ ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾದೇಶಿಕ ನಿರ್ದೇಶಕರಿಗೆ ಸೂಚಿಸಿದ್ದಾರೆ.

2014 ಕ್ಕೂ ಮುನ್ನ ಕೇಂದ್ರದಿಂದ ಆಯಾ ರಾಜ್ಯಗಳಿಗೆ ಆಯ್ಕೆಯಾಗುವ ಅಧಿಕಾರಿ ಅಥವಾ ನೌಕರರು ಸ್ಥಳೀಯ ಭಾಷಾ ಪರೀಕ್ಷೆಯನ್ನು ತೇರ್ಗಡೆಯಾಗಬೇಕೆಂಬ ನೀತಿಯನ್ನು ಜಾರಿಗೊಳಿಸಲಾಗಿತ್ತು. ಅಂತಹ ಸಂದರ್ಭದಲ್ಲಿ ನೌಕರರು ಸ್ಥಳೀಯ ಭಾಷೆಯನ್ನು ಕಲಿತು ನೇಮಕಾತಿ ಆದೇಶವನ್ನು ಪಡೆಯುತ್ತಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ನೇಮಕಾತಿಗೊಂಡ ನಂತರ ಸ್ಥಳೀಯ ಭಾಷೆಯನ್ನು ಕಲಿಯಲು 2 ವರ್ಷಗಳ ಕಾಲಾವಕಾಶ ನೀಡಲಾಗುತ್ತಿದೆ. ಆದರೆ ಸ್ಥಳೀಯ ಭಾಷೆಯನ್ನು ಕಲಿಯಲು ನೌಕರರು ಬೇಜವಾಬ್ದಾರಿತನ ತೋರುತ್ತಿರುವುದರಿಂದ ಭಾಷಾ ಸಂಘರ್ಷಗಳು ಉಂಟಾಗುತ್ತಿವೆ. ಈ ಕಾರಣದಿಂದಾಗಿ ಸರ್ಕಾರದ ಯೋಜನೆಗಳನ್ನು ಅರಿಯುವಲ್ಲಿ ಜನಸಾಮಾನ್ಯರಿಗೆ ತುಂಬಾ ತೊಂದರೆಯಾಗುತ್ತಿದ್ದು, ಸ್ಥಳೀಯ ಭಾಷಾ ಪರೀಕ್ಷೆಯನ್ನು ಪಾಸು ಮಾಡಿದ ನಂತರವೇ ನೇಮಕಾತಿ ಆದೇಶವನ್ನು ನೀಡುವ ನಿಯಮ ಜಾರಿಯಾಗಬೇಕೆಂದು ಆಗ್ರಹಿಸಿದ್ದಾರೆ.

ನೇಮಕಾತಿ ಪ್ರಕ್ರಿಯೆಯನ್ನು ಸರಳೀಕರಣ ಹಾಗೂ ಅನಗತ್ಯ ವೆಚ್ಚಗಳನ್ನು ಉಳಿಸುವ ನೆಪದಲ್ಲಿ ಕೇಂದ್ರ ಸರ್ಕಾರವು ವಿಕೇಂದ್ರೀಕರಣ ವ್ಯವಸ್ಥೆಯನ್ನು ಮತ್ತೆ ಕೇಂದ್ರೀಕೃತ ವ್ಯವಸ್ಥೆಗೆ ಬದಲಿಸುತ್ತಿದೆ. ಪ್ರಾದೇಶಿಕ ಆಯ್ಕೆ ರದ್ದಾದ ನಂತರ ಗ್ರಾಮೀಣ ಪ್ರದೇಶದ ಬ್ಯಾಂಕ್​ಗಳಿಗೂ ಕನ್ನಡ ಬಾರದವರು ಬರುತ್ತಿದ್ದಾರೆ. ಅದೇ ಪರಿಸ್ಥಿತಿ ಆರೋಗ್ಯ ಇಲಾಖೆಗೂ ಬರುತ್ತದೆ ಮತ್ತು ನಿಧಾನವಾಗಿ ಎಲ್ಲಾ ಇಲಾಖೆಗಳ ಆಯ್ಕೆಗಳು ಕೇಂದ್ರೀಕೃತವಾಗಿ ಸ್ಥಳೀಯರು ಉದ್ಯೋಗದಿಂದ ವಂಚಿರಾಗುತ್ತಾರೆ. ಆದ್ದರಿಂದ ಈ ಹಿಂದೆ ಇದ್ದ ಮಾದರಿಯಲ್ಲಿ ಆಯಾ ರಾಜ್ಯಗಳಿಗೆ ನೇಮಕಾತಿ ಅವಕಾಶವನ್ನು ನೀಡಿದರೆ ಕರ್ನಾಟಕದ ನಿರುದ್ಯೋಗಿಗಳಿಗೆ ಉದ್ಯೋಗ ದೊರೆತು ಅವರ ಬದುಕು ಹಸನಾಗಲಿದೆ ಎಂದು ಟಿ.ಎಸ್. ನಾಗಾಭರಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕೇಂದ್ರೀಕೃತ ನೇಮಕಾತಿ ಇರುವ ವ್ಯವಸ್ಥೆಗಳಲ್ಲಿ ಸ್ಥಳೀಯ ಜನರಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಎಲ್ಲಾ ರಾಜ್ಯಗಳಿಂದಲೂ ಕೇಳಿಬರುತ್ತಿದೆ. ಅಲ್ಲದೆ ಕೇಂದ್ರೀಕೃತ ನೇಮಕಾತಿ ವ್ಯವಸ್ಥೆಯಲ್ಲಿ ಆಯ್ಕೆಗೊಂಡು ರಾಜ್ಯಗಳಿಗೆ ಬರುವ ನೌಕರರು ಸ್ಥಳೀಯ ಭಾಷೆಯನ್ನು ಸಂವಹನಕ್ಕಾದರೂ ಕಲಿಯದೆ ಬೇಜವಾಬ್ದಾರಿತನವನ್ನು ತೋರಿಸುತ್ತಿದ್ದು, ಇದರಿಂದ ಸಾರ್ವಜನಿಕರು ತೊಂದರೆಗೆ ಸಿಲುಕಿ ಸರಿಯಾದ ಮಾಹಿತಿ ಸಿಗದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಯೋಜನೆಗಳಿಂದ ವಂಚಿತರಾಗುತ್ತಾರೆ. ಇದು ದೇಶದ ಅಥವಾ ಆಯಾ ರಾಜ್ಯಗಳ ಅಭಿವೃದ್ಧಿ ಹಿತದೃಷ್ಠಿಯಿಂದಲೂ ಕೂಡಾ ಸಮ್ಮತವಾದ ಕ್ರಮವಾಗಿರುವುದಿಲ್ಲ. ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಈ ರೀತಿಯ ತೊಡಕುಗಳಿಂದ ರಾಜ್ಯದಲ್ಲೇ ನೂರಾರು ಸಂಘರ್ಷಗಳು ನಡೆದ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿರುವುದನ್ನು ತಾವು ಗಮನಿಸಿರಬಹುದು. ಆದ ಕಾರಣ ಕೂಡಲೇ ಆಯಾ ರಾಜ್ಯಗಳಿಗೆ ನೇಮಕಾತಿ ಅವಕಾಶವನ್ನು ಕಲ್ಪಿಸುವ ಸಂಬಂಧ ಕ್ರಮ ತೆಗೆದುಕೊಳ್ಳುವಂತೆ ಟಿ.ಎಸ್. ನಾಗಾಭರಣ ಒತ್ತಾಯಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.