ETV Bharat / city

ಢವ.. ಢವ.. ಸಿಂದಗಿ, ಹಾನಗಲ್ ಉಪಚುನಾವಣೆ.. ನಾಳೆ ಮತ ಎಣಿಕೆ..

author img

By

Published : Nov 1, 2021, 3:31 PM IST

ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಾಳೆ ( ನ.2 ) ನಡೆಯಲಿದೆ. ಮಧ್ಯಾಹ್ನದ ವೇಳೆಗೆ ಎರಡೂ ಕ್ಷೇತ್ರಗಳ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರ ಬೀಳಲಿದೆ..

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ಮೂರು ಪಕ್ಷಗಳಿಗೂ ಪ್ರತಿಷ್ಠೆಯ ಕಣವಾಗಿರುವ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ನಾಳೆ ( ನ.2 ) ನಡೆಯಲಿದೆ. ಚುನಾವಣಾ ಆಯೋಗ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ.

ಎರಡೂ ಕ್ಷೇತ್ರಗಳಿಗೆ ಅ.30ರಂದು ಮತದಾನ ನಡೆದಿದೆ. ಸಿಂದಗಿ ಕ್ಷೇತ್ರದಲ್ಲಿ ಶೇ.69.41ರಷ್ಟು ಹಾಗೂ ಹಾನಗಲ್ ಕ್ಷೇತ್ರದಲ್ಲಿ ಶೇ.83.72ರಷ್ಟು ಮತದಾನವಾಗಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಕಣದಲ್ಲಿದ್ದ ಒಟ್ಟು 19 ಅಭ್ಯರ್ಥಿಗಳ ಭವಿಷ್ಯ ನಾಳೆ ಹೊರ ಬೀಳಲಿದೆ.

ನಾಳೆ ಮತ ಎಣಿಕೆ : ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಸಿಂದಗಿ ಕ್ಷೇತ್ರದ ಮತ ಎಣಿಕೆ ಕಾರ್ಯ ವಿಜಯಪುರದ ಸೈನಿಕ ಶಾಲೆಯಲ್ಲಿ ನಡೆಯಲಿದೆ. ಆರ್.ಡಿ.ಪಾಟೀಲ್ ಕಾಲೇಜಿನಲ್ಲಿ ಮಸ್ಟರಿಂಗ್, ಡಿ–ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ.

ಹಾನಗಲ್ ಕ್ಷೇತ್ರದ ಮತ ಎಣಿಕೆ ಕಾರ್ಯ ಬೆಳಗ್ಗೆ 8 ಗಂಟೆಯಿಂದ ಹಾವೇರಿ ನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ. ಹಾನಗಲ್‌ ಪಟ್ಟಣದ ಕುಮಾರೇಶ್ವರ ಕಾಲೇಜಿನಲ್ಲಿ ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ನಾಳೆ ಮಧ್ಯಾಹ್ನದ ವೇಳೆಗೆ ಎರಡೂ ಕ್ಷೇತ್ರಗಳ ಫಲಿತಾಂಶದ ಸ್ಪಷ್ಟ ಚಿತ್ರಣ ಹೊರ ಬೀಳುವ ಸಾಧ್ಯತೆಯಿದೆ.

ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಭೂಸನೂರ ರಮೇಶ ಬಾಳಪ್ಪ, ಕಾಂಗ್ರೆಸ್​​ನಿಂದ ಅಶೋಕ ಮಲ್ಲಪ್ಪ ಮನಗೂಳಿ, ಜೆಡಿಎಸ್‍ ನಾಝಿಯಾ ಶಕೀಲ್ ಅಂಗಡಿ ಸೇರಿದಂತೆ 6 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ನಾಯಕರು ಈ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಹರಸಾಹಸ ನಡೆಸಿದ್ದರು.

ಅದೇ ರೀತಿ ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಶಿವರಾಜ ಶರಣಪ್ಪ ಸಜ್ಜನರ್, ಕಾಂಗ್ರೆಸ್​​ನ ಶ್ರೀನಿವಾಸ ಮಾನೆ, ಜೆಡಿಎಸ್​​ನಿಂದ ನಿಯಾಜ್ ಶೇಖ್ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಸಿಎಂ ಸಾಮರ್ಥ್ಯ ಪರೀಕ್ಷೆ : ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅತ್ಯಂತ ಪ್ರತಿಷ್ಠೆ ಮತ್ತು ಸಾಮರ್ಥ್ಯ ಪರೀಕ್ಷೆಯ ಚುನಾವಣೆಯಾಗಿದೆ. ಜತೆಗೆ ಹಾನಗಲ್ ತವರು ಜಿಲ್ಲೆಯಾಗಿರುವುದರಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಾಗಿದೆ. ಹಾಗಾಗಿ, ಇಡೀ ತಮ್ಮ ಮಂತ್ರಿ ಮಂಡಲವನ್ನೇ ಕರೆದೊಯ್ದು ಚುನಾವಣಾ ಪ್ರಚಾರ ನಡೆಸಿದ್ದರು. ಹಾನಗಲ್ ಬಿಜೆಪಿ ಕ್ಷೇತ್ರವಾಗಿರುವುದರಿಂದ ಉಳಿಸಿಕೊಳ್ಳಬೇಕಾದ ಅನಿವಾರ್ಯತೆಯೂ ಇದೆ.

ಅದೇ ರೀತಿ ಕಾಂಗ್ರೆಸ್​​ಗೂ ಪ್ರತಿಷ್ಠೆಯಾಗಿರುವ ಉಪಚುನಾವಣೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಪ್ರಮುಖ ನಾಯಕರು ಪ್ರಚಾರ ನಡೆಸಿದ್ದರು. ಅವರಿಗೂ ಎರಡೂ ಕ್ಷೇತ್ರಗಳಲ್ಲಿ ಗೆಲುವು ಅನಿವಾರ್ಯವಾಗಿದೆ.

ಜೆಡಿಎಸ್‍ ಸಹ ಹಿಂದೆ ಬಿದ್ದಿಲ್ಲ. ಜೆಡಿಎಸ್ ಕ್ಷೇತ್ರವಾಗಿದ್ದ ಸಿಂದಗಿ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕೆಂದು ಇಳಿವಯಸ್ಸಿನಲ್ಲೂ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಂಸದ ಪ್ರಜ್ವಲ್ ರೇವಣ್ಣ, ಯುವ ನಾಯಕ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ. ಕುಮಾರಸ್ವಾಮಿ ಸೇರಿದಂತೆ ಹಲವಾರು ನಾಯಕರು ಪ್ರಚಾರ ನಡೆಸಿದ್ದರು.

2023ರ ಸಾರ್ವತ್ರಿಕ ಚುನಾವಣೆಗೆ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರಗಳ ಉಪಚುನಾವಣೆ ದಿಕ್ಸೂಚಿ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದರೆ, ಮೂರು ಪಕ್ಷಗಳಿಗೂ ಈ ಕ್ಷೇತ್ರಗಳ ಗೆಲುವು ಬಹಳ ಮುಖ್ಯವಾಗಿದೆ ಎಂದೇ ಹೇಳಲಾಗುತ್ತಿದೆ.

ಇದನ್ನೂ ಓದಿ: ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ ಅಭ್ಯರ್ಥಿಗಳೇ ಗೆಲ್ಲಲಿದ್ದಾರೆ : ಸಚಿವ ಅಶ್ವತ್ಥ್​​ ನಾರಾಯಣ​​ ವಿಶ್ವಾಸ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.