ETV Bharat / city

ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳ ನಿದ್ದೆಗೆಡಿಸಿದ IT,ED, ACB .. 2021ರ ಪ್ರಮುಖ ದಾಳಿಯ ಹೈಲೈಟ್ಸ್..

author img

By

Published : Dec 29, 2021, 11:54 AM IST

ED, ACB, IT raids in Karnataka
ತನಿಖಾ ಸಂಸ್ಥೆಗಳ ದಾಳಿ

ಆರ್ಥಿಕ ಅಪರಾಧಗಳಲ್ಲಿ ಸದ್ದಿಲ್ಲದೇ ತೊಡಗಿದ್ದವರ ಮೇಲೆ ತನಿಖಾ ಸಂಸ್ಥೆಗಳು (ಇಡಿ, ಎಸಿಬಿ, ಐಟಿ) ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಹಣಕಾಸಿನ ಅವ್ಯವಹಾರ ಬಯಲಿಗೆಳೆದಿವೆ. 2021ರ ಪ್ರಮುಖ ದಾಳಿಯ ವಿವರ ಹೀಗಿದೆ..

ಬೆಂಗಳೂರು : ಆದಾಯಕ್ಕಿಂತ ಹೆಚ್ಚು ಆಸ್ತಿ, ಕೋಟ್ಯಂತರ ರೂ. ತೆರಿಗೆ ವಂಚನೆ ಹಾಗೂ ಇನ್ನಿತರ ಆರ್ಥಿಕ ಅಪರಾಧಗಳಲ್ಲಿ ಸದ್ದಿಲ್ಲದೇ ತೊಡಗಿದ್ದ ರಾಜಕಾರಣಿ, ಉದ್ಯಮಿ ಹಾಗೂ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳು ಈ ವರ್ಷ ದಾಳಿ ನಡೆಸಿ ಅಪಾರ ಪ್ರಮಾಣದ ಅಘೋಷಿತ ಆಸ್ತಿ ಪತ್ತೆ ಹಚ್ಚಿವೆ.

ಮುಖ್ಯವಾಗಿ..

  • ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ವಿಜಯೇಂದ್ರ ಬೆಂಬಲಿಗರ ಮೇಲೆ ನಡೆದ ಐಟಿ ದಾಳಿ
  • ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್, ಮಾಜಿ ಸಚಿವ ಆರ್‌.ರೋಷನ್ ಬೇಗ್ ಮನೆಗಳ ಮೇಲೆ ನಡೆದ ಜಾರಿ ನಿರ್ದೇಶನಾಲಯ (ಇಡಿ) ದಾಳಿ
  • ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಪ್ರಧಾನ ಕಚೇರಿ ಹಾಗೂ ಉಪಕಚೇರಿಗಳ ಮೇಲೆ ಹಾಗೂ 15 ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ಹಣಕಾಸಿನ ಅವ್ಯವಹಾರ ಬಯಲಿಗೆಳೆದಿವೆ.

ವಿಕ್ರಂ ಇನ್‌ವೆಸ್ಟ್ ಕಂಪನಿಯ ಬಹುಕೋಟಿ ಹಣ ಹೂಡಿಕೆ ಸಂಬಂಧ ಜಾರಿ ನಿರ್ದೇಶನಾಲಯವು (ಇಡಿ) 35.70 ಕೋಟಿ ರೂ. ಆಸ್ತಿ ಜಪ್ತಿ ಮಾಡಿಕೊಂಡರೆ, ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಅಲಾಯನ್ಸ್ ವಿವಿ ಮಾಜಿ ಕುಲಪತಿ ಮಧುಕರ್ ಅಂಗೂರ್ ಹಾಗೂ ಆತನ ಕುಟುಂಬಸ್ಥರಿಗೆ ಸೇರಿದ 19.43 ಕೋಟಿ ರೂ. ಆಸ್ತಿ ಜಪ್ತಿ ಮಾಡಿಕೊಂಡಿತ್ತು.

ಮತ್ತೊಂದೆಡೆ ಫೋನ್ ಟ್ಯಾಪಿಂಗ್ ಪ್ರಕರಣ ಕೈಗೆತ್ತಿಕೊಂಡು ತನಿಖೆ ನಡೆಸಿದ್ದ ಸಿಬಿಐ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿತ್ತು. ಇದಕ್ಕೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಕ್ಷೇಪ ವ್ಯಕ್ತಪಡಿಸಿದ್ದರು. ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸುವ ಮೂಲಕ ಸುದ್ದಿಯ ಕೇಂದ್ರ ಬಿಂದುವಾಗಿದ್ದರು.

  1. 750 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆ ಹಚ್ಚಿದ ಐಟಿ :

ಜಲಸಂಪನ್ಮೂಲ ಇಲಾಖೆ ಹಾಗೂ ಹೆದ್ದಾರಿ ಕಾಮಗಾರಿಯಲ್ಲಿ ಕೋಟ್ಯಂತರ ರೂ.ತೆರಿಗೆ ವಂಚನೆ ಆರೋಪದಡಿ ಮೂವರು ಗುತ್ತಿಗೆದಾರರ ಕಂಪನಿಗಳ ಮೇಲೆ ನಡೆದಿದ್ದ ಐಟಿ ಅಧಿಕಾರಿಗಳ ದಾಳಿಯಲ್ಲಿ‌ ಸುಮಾರು 750 ಕೋಟಿ ರೂ.ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ

ಬೆಂಗಳೂರು ಸೇರಿದಂತೆ 47 ಕಡೆಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು. ಮುಖ್ಯವಾಗಿ ನೀರಾವರಿ ಇಲಾಖೆ ಹಾಗೂ ರಾಜ್ಯ ಹೆದ್ದಾರಿ ಕಾಮಗಾರಿಯಲ್ಲಿ ಕೋಟ್ಯಂತರ ರೂ.ತೆರಿಗೆ ವಂಚನೆ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತ ಉಮೇಶ್ ಸೇರಿದಂತೆ ಮೂವರು ಗುತ್ತಿಗೆದಾರರ ಮನೆ ಸೇರಿ ವಿವಿಧ ಕಡೆಗಳಲ್ಲಿ ದಾಳಿ ನಡೆಸಲಾಗಿತ್ತು.‌

ದಾಳಿಯಲ್ಲಿ ಮಹತ್ವದ ದಾಖಲಾತಿ, ಆಸ್ತಿ ಪತ್ರ, ನಕಲಿ ಬಿಲ್ ಜಪ್ತಿ ಮಾಡಿಕೊಂಡು‌ ಪರಿಶೀಲಿಸಿದಾಗ ಮೂವರು ಗುತ್ತಿಗೆದಾರರ ಒಟ್ಟು 750 ಕೋಟಿ ರೂ. ಆಸ್ತಿ ಪತ್ತೆ ಹಚ್ಚಿದ್ದಾರೆ. ಈ ಪೈಕಿ 487 ಕೋಟಿ ರೂ. ಅಕ್ರಮ ಎಂದು ಗುತ್ತಿಗೆದಾರರು ಒಪ್ಪಿಕೊಂಡಿದ್ದರು.

ಇದನ್ನೂ ಓದಿ: ಬಿಎಸ್​ವೈ ಆಪ್ತನ ಮನೆ ಸೇರಿ ಬೆಂಗಳೂರಿನ ಹಲವೆಡೆ IT ದಾಳಿ: ಕಾಂಟ್ರಾಕ್ಟರ್ಸ್​, ಉದ್ಯಮಿಗಳಿಗೆ ಆಘಾತ

2.ಬಿಡಿಎ ಕಚೇರಿಗಳ ಮೇಲೆ‌ ದಾಳಿ : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬಹುಕೋಟಿ ಹಗರಣ ಬಯಲಿಗೆಳೆದಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿ 134 ಕೋಟಿ ರೂ. ಮೌಲ್ಯದ ಭೂ ಅಕ್ರಮವನ್ನು ಪತ್ತೆ ಹಚ್ಚಿದ್ದರು. ಅಕ್ರಮಕ್ಕೆ ಸಂಬಂಧಿಸಿದ ದಾಖಲಾತಿ ಜಪ್ತಿ ಮಾಡಿಕೊಂಡಿದ್ದರು.‌ ನಗರದಲ್ಲಿರುವ ಉಪ ಬಿಡಿಎ ಕಚೇರಿಗಳ ಮೇಲೆ ದಾಳಿ ನಡೆಸಿ ಲಕ್ಷಾಂತರ ಮೌಲ್ಯದ ಅವ್ಯವಹಾರವನ್ನು ಎಸಿಬಿ ಬಯಲಿಗೆಳೆದಿತ್ತು.

ಇದನ್ನೂ ಓದಿ: ನಗರದ ನಾಲ್ಕು ಬಿಡಿಎ ಕಚೇರಿಗಳ ಮೇಲೆ‌ ಎಸಿಬಿ ದಾಳಿ

3.15 ಮಂದಿ ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಎಸಿಬಿ ಭರ್ಜರಿ ಬೇಟೆ : ಬಿಡಿಎ ಕಚೇರಿಗಳ ಮೇಲೆ ದಾಳಿ ನಡೆಸಿದ ಬೆರಳೆಣಿಕೆ ದಿನಗಳ ಅಂತರದಲ್ಲಿ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಎಸಿಬಿ ಅಧಿಕಾರಿಗಳು ರಾಜ್ಯದೆಲ್ಲೆಡೆ 15 ಮಂದಿ ಸರ್ಕಾರಿ ಅಧಿಕಾರಿಗಳ ಹಾಗೂ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ. ಮೌಲ್ಯದ ನಗದು, ಆಸ್ತಿ ಪತ್ರ ಹಾಗೂ ಚಿನ್ನಾಭರಣ ಪತ್ತೆ ಹಚ್ಚಿದ್ದರು. ಎಸಿಬಿ ಇತಿಹಾಸದಲ್ಲೇ ಇದು ದೊಡ್ಡ ದಾಳಿ ಎನ್ನಲಾಗಿದೆ.

15 ಅಧಿಕಾರಿಗಳ ಮನೆಗಳಲ್ಲಿ ಸಿಕ್ಕಿರುವ ಸಂಪತ್ತು
15 ಅಧಿಕಾರಿಗಳ ಮನೆಗಳಲ್ಲಿ ಸಿಕ್ಕಿರುವ ಸಂಪತ್ತು

15 ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂ.ಮೌಲ್ಯದ ಚಿನ್ನಾಭರಣ ಹಾಗೂ ಆಸ್ತಿ ಪತ್ರ ಜಪ್ತಿ ಮಾಡಿಕೊಂಡು ಪರಿಶೀಲಿಸಿದಾಗ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗೂ, ಅಧಿಕಾರಿಗಳು ಸಂಪಾದಿಸಿರುವ ಆಸ್ತಿಗೂ ದೊಡ್ಡ ಪ್ರಮಾಣದಲ್ಲಿ ವ್ಯತ್ಯಾಸ ಇರುವುದನ್ನು ಬಹಿರಂಗಪಡಿಸಿದ್ದರು.

ಇದನ್ನೂ ಓದಿ: Karnataka ACB Raid: 15 ಅಧಿಕಾರಿಗಳ ಮನೆಗಳಲ್ಲಿ ಸಿಕ್ಕಿರುವ ಸಂಪತ್ತಿನ ಕಂಪ್ಲೀಟ್ ಡೀಟೆಲ್ಸ್​

4.ಜಮೀರ್ ಮನೆ ಮೇಲೆ ಇಡಿ ದಾಳಿ : ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಮನೆ ಹಾಗೂ ಕಚೇರಿಗಳ ಮೇಲೆ ಜಾರಿ ನಿರ್ದೇಶಾಲಯ (ಇಡಿ) ಅಧಿಕಾರಿಗಳು ದಾಳಿ ನಡೆಸಿದ್ದರು.

ಯುಬಿ ಸಿಟಿ ಹಾಗೂ ಕಂಟೇನ್ಮೆಂಟ್ ರೈಲ್ವೆ ನಿಲ್ದಾಣದ ಬಳಿಯಿರುವ ನಿವಾಸ ಹಾಗೂ ಕಲಾಸಿಪಾಳ್ಯದಲ್ಲಿರುವ ನ್ಯಾಷನಲ್ ಟ್ರಾವೆಲ್ಸ್ ಕಚೇರಿಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲಾತಿ ಜಪ್ತಿ ಮಾಡಿಕೊಂಡಿದ್ದರು.‌ ಈ ಬೆಳವಣಿಗೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಜಮೀರ್ ಅಹಮದ್ ಐಷಾರಾಮಿ ಮನೆ, ಕಚೇರಿಗಳ ಮೇಲೆ ಇಡಿ ದಾಳಿ
ಜಮೀರ್ ಅಹಮದ್ ಐಷಾರಾಮಿ ಮನೆ, ಕಚೇರಿಗಳ ಮೇಲೆ ಇಡಿ ದಾಳಿ

ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಐಷಾರಾಮಿ ಮನೆ, ಕಚೇರಿಗಳ ಮೇಲೆ ಇಡಿ ದಾಳಿ

5.ಐಎಂಎ ನಂಟು ಮಾಜಿ ಸಚಿವ ರೋಷನ್ ಬೇಗ್ ವಶ : ಐಎಂಎ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲ್ಸ್ ಪಾರ್ಕ್‌ನಲ್ಲಿರುವ ‌ಮಾಜಿ ಸಚಿವ ಆರ್.ರೋಷನ್ ಬೇಗ್ ಮನೆ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಬಿಐನಿಂದ ತನಿಖೆ ನಡೆಯುತ್ತಿದೆ.

ರೋಷನ್ ಬೇಗ್ ನಿವಾಸದ ಮೇಲೆ ಇಡಿ ದಾಳಿ
ರೋಷನ್ ಬೇಗ್ ನಿವಾಸದ ಮೇಲೆ ಇಡಿ ದಾಳಿ

ಮತ್ತೊಂದೆಡೆ ಐಎಂಎ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ರೋಷನ್ ಬೇಗ್ ಆಸ್ತಿ ಜಪ್ತಿಗೆ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳು 16.81 ಕೋಟಿ ಆಸ್ತಿ ಜಪ್ತಿ ಮಾಡಿದ್ದರು. ವಶಕ್ಕೆ ಪಡೆದುಕೊಂಡಿದ್ದ ಆಸ್ತಿ ಮೌಲ್ಯದ ವರದಿಯನ್ನು ಇಡಿ ಅಧಿಕಾರಿಗಳಿಗೆ ಸಕ್ಷಮ ಪ್ರಾಧಿಕಾರ ಕಳುಹಿಸಿತ್ತು. ಈ ವರದಿ ಆಧರಿಸಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದರು.

ಇದನ್ನೂ ಓದಿ: IMA ಹಗರಣ: ಮಾಜಿ ಸಚಿವ ರೋಷನ್ ಬೇಗ್​ ನಿವಾಸ, ಮುಂಬೈನ 4 ಕಡೆ ಇಡಿ ದಾಳಿ

6. 70 ಕೋಟಿ ರೂ. ಸುಳ್ಳು ಲೆಕ್ಕ ಬೆಳಕಿಗೆ : ರಾಜ್ಯ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ರಾಜಕೀಯ‌ ಪಕ್ಷಗಳ ಪ್ರಚಾರದ ಹೊಣೆ ಹೊತ್ತಿಕೊಂಡು ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಡಿಜಿಟಲ್ ಮಾರ್ಕೆಟಿಂಗ್ ಹಾಗೂ ಕ್ಯಾಂಪೇನ್ ಮ್ಯಾನೇಜ್​ಮೆಂಟ್ ಕಂಪನಿಗಳ ಮೇಲೆ ಬೆಂಗಳೂರು ಸೇರಿದಂತೆ ದೇಶದ ಏಳು ಕಡೆಗಳಲ್ಲಿ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು, ಸುಮಾರು 70 ಕೋಟಿ‌ ರೂ.ಸುಳ್ಳು ಲೆಕ್ಕ ತೋರಿಸಿ ತೆರಿಗೆ ವಂಚಿಸಿದ್ದನ್ನು ಬಹಿರಂಗ ಪಡಿಸಿದರು.

  • ಅಂತಾರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳಾಗಿ ಪರಿವರ್ತಿಸುವ ಜಾಲದ ಪ್ರಕರಣದ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸುತ್ತಿರುವ ಭಯೋತ್ಪಾದನಾ ನಿಗ್ರಹ ದಳದ (ಎಟಿಸಿ) ಅಧಿಕಾರಿಗಳು ಈವರೆಗೆ 5,500ಕ್ಕೂ ಹೆಚ್ಚು ಸಿಮ್ ಕಾರ್ಡ್ ಜಪ್ತಿ ಮಾಡಿದ್ದಾರೆ.
  • ಐಸಿಸ್ ಸಂಘಟನೆ ನಂಟು ಆರೋಪ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಏಕ ಕಾಲದಲ್ಲಿ ಬೆಂಗಳೂರು ಮತ್ತು ಮಂಗಳೂರಿನಲ್ಲಿ ದಾಳಿ ನಡೆಸಿ‌ ಬೆಂಗಳೂರಿನ ಶಂಕರ್ ವೆಂಕಟೇಶ್ ಪೆರುಮಾಳ್, ಮಂಗಳೂರಿನ ಅಮರ್ ಅಬ್ದುಲ್ ರೆಹಮಾನ್ ಸೇರಿ ನಾಲ್ವರು ಶಂಕಿತರನ್ನು ಬಂಧಿಸಿತ್ತು.
  • ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ‌ ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ ಹಾಗೂ ನಗರ ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿತ್ತು.
  • ‌ಸಗಾಯಪುರ ವಾರ್ಡ್​ನ ಸೋಷಿಯಲ್‌ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್​​ಡಿಪಿಐ) ಕಾರ್ಯಕರ್ತನಾಗಿದ್ದ ತಬ್ರೇಜ್ (35) ಎಂಬಾತನನ್ನು ಬಂಧಿಸಿತ್ತು.

ಇದನ್ನೂ ಓದಿ: ನಮಗೆ 1 ಕೋಟಿ ಮತ ನೀಡಿ, 70 ರೂಪಾಯಿಗೆ ಮದ್ಯ ನೀಡುತ್ತೇವೆ: ಆಂಧ್ರ ಬಿಜೆಪಿ ಅಧ್ಯಕ್ಷರ ಆಮಿಷ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.