ETV Bharat / city

ಗುತ್ತಿಗೆದಾರರ ಮೇಲೆ ಐಟಿ ದಾಳಿ ಅಂತ್ಯ: ದಾಖಲೆಗಳ ಪರಿಶೀಲನೆ, ಮುಂದೇನು?

author img

By

Published : Oct 8, 2021, 11:52 AM IST

bengaluru-income-tax-raid-updates
ಗುತ್ತಿಗೆದಾರರ ಮೇಲೆ ಐಟಿ ದಾಳಿ ಅಂತ್ಯ: ದಾಖಲೆಗಳ ಪರಿಶೀಲನೆ, ಮುಂದೇನು?

ಗುತ್ತಿಗೆದಾರರು ಪರವಾನಗಿ ಪಡೆದ ನಂತರದ ಕಾಮಗಾರಿಗಳ ಪಟ್ಟಿಯನ್ನು ಅಧಿಕಾರಿಗಳು ಮಾಡಿಕೊಂಡಿದ್ದು, ಒಟ್ಟು ಟೆಂಡರ್​​ಗಳಲ್ಲಿ‌ ಎಷ್ಟು ಅಕ್ರಮವಾಗಿದೆ ಎಂಬುದರ ಬಗ್ಗೆ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.

ಬೆಂಗಳೂರು: ಅಕ್ರಮ ಆಸ್ತಿ ಹಾಗೂ ತೆರಿಗೆ ವಂಚನೆ ಆರೋಪ ಸಂಬಂಧ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಆಪ್ತ ಸೇರಿದಂತೆ ಗುತ್ತಿಗೆದಾರರು ಹಾಗೂ ಲೆಕ್ಕ ಪರಿಶೋಧಕರ ಮನೆ ಹಾಗೂ ಕಚೇರಿಗಳ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಡೆಸಿದ ದಾಳಿ ಅಂತ್ಯಗೊಂಡಿದೆ.

ಬೆಂಗಳೂರಿನ ಉತ್ತರಹಳ್ಳಿ, ವಸಂತ ನಗರ, ಆರ್‌‌.ಟಿ.ನಗರ, ಸದಾಶಿವನಗರ, ಹೆಗಡೆ ನಗರ ಮುಂತಾದ ಕಡೆಗಳಲ್ಲಿ ದಾಳಿ ನಡೆಸಿರುವ ಅಧಿಕಾರಿಗಳು ಕೆಲವೊಂದು ದಾಖಲೆಗಳನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ನೀರಾವರಿ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಟೆಂಡರ್ ಗೋಲ್​ಮಾಲ್​ನಲ್ಲಿ ಕೋಟ್ಯಂತರ ರೂಪಾಯಿ ಅವ್ಯವಹಾರ ಹಾಗೂ ತೆರಿಗೆ ವಂಚನೆ ಸಂಬಂಧ ಕೆಲವು ತಿಂಗಳ ಹಿಂದೆ ಅಕ್ರಮದ ಕುರಿತ ದೂರಿನನ್ವಯ ಅಧಿಕಾರಿಗಳು ಆಂತರಿಕ ತನಿಖೆ ನಡೆಸಿದ್ದರು‌. ನಿನ್ನೆ ದಾಳಿ ವೇಳೆ ಪತ್ತೆಯಾದ ಒಟ್ಟು ಆಸ್ತಿ ಮೌಲ್ಯದ ದಾಖಲೆಗಳನ್ನು ಸಂಗ್ರಹಿಸಲಾಗಿದೆ‌.

ಪತ್ತೆಯಾಗಿರುವ ಆಸ್ತಿ ಬಗ್ಗೆ ಸೂಕ್ತ ದಾಖಲೆ ಒದಗಿಸಲು‌ ನೋಟಿಸ್ ನೀಡಲು ಸಿದ್ಧತೆ ನಡೆಸಲಾಗುತ್ತಿದೆ. ಆದಾಯಕ್ಕೂ ಮೀರಿ ಆಸ್ತಿ ಪತ್ತೆಯಾದರೆ ವಿಚಾರಣೆಗೆ ಹಾಜರಾಗಲು ಐಟಿ ನೋಟಿಸ್ ನೀಡಲಿದೆ. ಒಂದು ವೇಳೆ, ಅಕ್ರಮದ ಸಾಕ್ಷ್ಯ ಸಿಕ್ಕರೆ, ಆಯಾ ವ್ಯಕ್ತಿಯನ್ನು ವಶಕ್ಕೆ ಪಡೆಯಲು ಸಾಧ್ಯತೆಯಿದೆ.

ನಿನ್ನೆ ದಾಳಿ ವೇಳೆ ಪ್ರಭಾವಿಗಳ ಮನೆಗಳಲ್ಲಿ ಮಹತ್ವದ ದಾಖಲೆಗಳು ಕಡತಗಳು ವಶಕ್ಕೆ ಪಡೆದುಕೊಳ್ಳಲಾಗಿದೆ. ಗುತ್ತಿಗೆದಾರರು ಪರವಾನಗಿ ಪಡೆದ ನಂತರದ ಒಟ್ಟು ಕಾಮಗಾರಿಗಳ ಪಟ್ಟಿಯನ್ನು ಅಧಿಕಾರಿಗಳು ಮಾಡಿಕೊಂಡಿದ್ದಾರೆ. ಒಟ್ಟು ಟೆಂಡರ್​​ಗಳಲ್ಲಿ‌ ಎಷ್ಟು ಅಕ್ರಮವಾಗಿದೆ ಎಂಬುದರ ಬಗ್ಗೆ ದಾಖಲೆಗಳನ್ನು ಕಲೆ ಹಾಕುತ್ತಿದ್ದಾರೆ.

ದಾಖಲೆಗಳಲ್ಲಿನ ಮೌಲ್ಯ ಹಾಗೂ ಒಟ್ಟು ಆಸ್ತಿಗೂ ಹೋಲಿಕೆ ಮಾಡಲಾಗುತ್ತಿದೆ. ಅಕ್ರಮ ಹಣ ವರ್ಗಾವಣೆ ಹಾಗೂ ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಬಗ್ಗೆ ಸಾಕ್ಷಿ ದೊರೆತರೆ ಈ ಬಗ್ಗೆ ಜಾರಿ‌ ನಿರ್ದೇಶನಾಲಯಕ್ಕೆ ಐಟಿ ಮಾಹಿತಿ ನೀಡಲಿದೆ.

ಮತ್ತೆ ಪರಿಶೀಲನೆ

ಸಹಕಾರ ನಗರದಲ್ಲಿರುವ ರಾಹುಲ್ ಎಂಟರ್ ಪ್ರೈಸಸ್ ಮೇಲೆ ಮತ್ತೆ ಇಂದು ಅಧಿಕಾರಿಗಳು ಬಂದು ಪರಿಶೀಲನೆ ಮಾಡುತ್ತಿದ್ದಾರೆ. ನಿನ್ನೆ ದಾಳಿ ಮುಗಿಸಿ ಡೋರ್ ಲಾಕ್ ಮಾಡಿ ತೆರಳಿದ್ದ ಅಧಿಕಾರಿಗಳು ಇಂದು ಬಂದು ಮತ್ತೆ ಕಚೇರಿಯಲ್ಲಿ ಹಾರ್ಡ್ ಡಿಸ್ಕ್, ಲ್ಯಾಪ್ ಟಾಪ್ ಪರಿಶೀಲನೆ ಮಾಡುತ್ತಿದ್ದಾರೆ.

ಇದನ್ನೂ ಓದಿ: ಮಹಿಮೆ ಗ್ರಾಮಸ್ಥರಿಗೆ ಕಂಟಕವಾದ ಹಳ್ಳ: ಶಾಲೆಯಿಂದ ದೂರವಾಗುತ್ತಿರುವ ಮಕ್ಕಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.