ETV Bharat / city

'ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಲ್ಲ': ಸಚಿವ ಬಿ.ಸಿ.ನಾಗೇಶ್‌ಗೆ ಬರಗೂರು ತಿರುಗೇಟು

author img

By

Published : May 25, 2022, 10:32 AM IST

ಪಠ್ಯದಲ್ಲಿ ಬಸವಣ್ಣ, ಕುವೆಂಪು, ಅಂಬೇಡ್ಕರ್, ಗಾಂಧೀಜಿ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ, ಮದಕರಿ ನಾಯಕ ಮುಂತಾದವರ ಹೆಸರನ್ನು ಕೈಬಿಟ್ಟಿದ್ದೇವೆ ಎಂಬ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ ಬರಗೂರು ರಾಮಚಂದ್ರಪ್ಪ ತಿರುಗೇಟು ಕೊಟ್ಟರು.

ಬರಗೂರು ರಾಮಚಂದ್ರಪ್ಪ
ಬರಗೂರು ರಾಮಚಂದ್ರಪ್ಪ

ಬೆಂಗಳೂರು: ಪಠ್ಯಪುಸ್ತಕದ ಕದನ ಮುಗಿಯುವ ಹಾಗೆ ಕಾಣ್ತಿಲ್ಲ. ಸತ್ಯ-ಮಿಥ್ಯದ ಜೊತೆಗೆ ಪರ-ವಿರೋಧವೂ ಮುಂದುವರೆದಿದೆ. ರಾಜಕೀಯ ನಾಯಕ ಟೀಕೆಗಳ ನಡುವೆಯೇ ಮೊದಲ ಬಾರಿಗೆ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಮುಖ್ಯಸ್ಥರಾಗಿದ್ದ ಬರಗೂರು ರಾಮಚಂದ್ರಪ್ಪ ಪ್ರತಿಕ್ರಿಯೆ ನೀಡಿದರು. ‌

ಪಠ್ಯ ಪುಸ್ತಕದ ವಿಚಾರವಾಗಿ ಪೋಷಕರಿಗೆ, ಮಕ್ಕಳಿಗೆ ಕೆಟ್ಟ ಅಭಿಪ್ರಾಯ ಬಾರದಿರಲಿ. ಶಿಕ್ಷಣ ಕ್ಷೇತ್ರ ಹಾಗೂ ಪಠ್ಯ ಪುಸ್ತಕದ ಬಗ್ಗೆ ಗೊಂದಲ ಮೂಡದಿರಲಿ ಎಂದು ನಾನಿಷ್ಟು ದಿನ ಸುಮ್ಮನಿದ್ದೆ. ನನ್ನ ನೇತೃತ್ವದಲ್ಲಿ ನಡೆದ 1-10 ತರಗತಿ ಪಠ್ಯದ ಪರಿಷ್ಕರಣೆಯ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತೇನೆ. ಟೀಕಾಕಾರರಿಗೆ ಉತ್ತರ ಕೊಡೋದಕ್ಕೆ ಅಲ್ಲ, ನಿಜವಾದ ಕನ್ನಡ ಮನಸ್ಸುಗಳಿಗೆ ವಿಚಾರ ತಲುಪಿಸೋದಕ್ಕೆ ಸ್ಪಷ್ಟನೆ ರೂಪದಲ್ಲಿ ಮನವರಿಕೆ ಮಾಡಿಕೊಡಲು ಬಯಸುತ್ತೇನೆ ಎಂದರು.

ನಮಗಿಂತ ಹಿಂದೆ ಪಠ್ಯ ಪುಸ್ತಕಗಳನ್ನು ಯಾರು ರಚನೆ ಮಾಡಿದ್ರೋ, ಪರಿಷ್ಕರಣೆ ಮಾಡಿದ್ರೋ ಅವರ ಬಗ್ಗೆ ಒಂದೇ ಒಂದು ಮಾತನ್ನೂ ನಾನು ಆಡಿಲ್ಲ. 2014-15 ರ ಬಜೆಟ್‌ನಲ್ಲಿ ಅಂದಿನ ಮುಖ್ಯಮಂತ್ರಿಗಳು ಪಠ್ಯಕ್ಕೆ ಹೊಸದಾಗಿ ಸ್ವರೂಪ ಕೊಡಬೇಕು. ಸಾಮಾಜಿಕ ಸಾಮರಸ್ಯ, ಲೌಕಿಕ ಮೌಲ್ಯ, ವ್ಯಕ್ತಿತ್ವ ವಿಕಸನ, ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಹಾಗೂ ಜಾತ್ಯಾತೀತತೆ, ರಾಷ್ಟ್ರೀಯ ಬದ್ಧತೆಗೆ ಅನುಗುಣವಾಗಿ ತಜ್ಞರ ಸಮಿತಿಯನ್ನ ನೇಮಿಸಿತ್ತು. 24-11- 2014 ರಂದು ಸರ್ಕಾರದ ಆದೇಶದ ಪ್ರಕಾರ, 27 ತಜ್ಞರ ಸಮಿತಿಗಳನ್ನ ರಚನೆ ಮಾಡಲಾಗಿತ್ತು. ಭಾಷಾವಾರು ತಜ್ಞರನ್ನ ಆಯಾ ವಿಭಾಗಕ್ಕೆ ಅನುಗುಣವಾಗಿ ನೇಮಿಸಲಾಗಿತ್ತು. ಹಾಗೆಯೇ ಅಂದಿನ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ನನ್ನ ಮನೆಗೆ ಬಂದು ಈ ಸಮಿತಿಗೆ ಸರ್ವಾಧ್ಯಕ್ಷರಾಗಬೇಕೆಂದು ಕೇಳಿದ್ರು, ನಾನು ಒಪ್ಪಿಕೊಂಡೆ.

2015ರ ಏಪ್ರಿಲ್ 13ರಂದು ನನ್ನನ್ನು ಸರ್ವಾಧ್ಯಕ್ಷ ಅಂತ ಮಾಡಲಾಯಿತು. 27 ತಜ್ಞರ ಸಮಿತಿಗಳಲ್ಲಿ 172 ಜನ ತಜ್ಞರು ಕೆಲಸ ಮಾಡಿದ್ದಾರೆ. ನಾವು ಒಂದು ನಿಲುವಿಗೆ ಬದ್ಧರಾಗಿ ನಮಗೆ ಪಂಥ, ಪಕ್ಷಗಳು ಮುಖ್ಯ ಅಲ್ಲ ಅಂತ ನಿರ್ಧರಿಸಿ ರಚನೆ ಮಾಡಲಾಗಿದೆ. ಪಠ್ಯ ಪುಸ್ತಕಗಳ ವಿಚಾರದಲ್ಲಿ ಕೇಸರೀಕರಣಕ್ಕೆ, ಕಾಂಗ್ರೇಸಿಕರಣ ಪರ್ಯಾಯವಲ್ಲ. ಪಠ್ಯ ಪುಸ್ತಕಗಳು ಪಕ್ಷ ಪುಸ್ತಕಗಳಲ್ಲ ಅಂತ ಅವತ್ತೂ ಹೇಳಿದ್ದೇ, ಇವತ್ತೂ ಅದಕ್ಕೆ ಬದ್ಧನಾಗಿದ್ದೇನೆ. ಪಂಥ, ಪಕ್ಷಕ್ಕೆ ಮೀರಿ ಮಕ್ಕಳಿಗೆ ಯಾವ ತಿಳುವಳಿಕೆ ನೀಡಬೇಕು, ಯಾವ ಮಾಹಿತಿ ನೀಡಬೇಕು ಎಂದು ಹಿಂದಿನ ಪಠ್ಯವನ್ನ ಆಧಾರವಾಗಿಟ್ಟುಕೊಂಡು, ಹಿಂದಿನ ಪಠ್ಯಕ್ಕೆ ಧಕ್ಕೆಯಾಗದಂತೆ ಪರಿಷ್ಕರಣೆ ಮಾಡಲಾಗಿದೆ ಎಂದರು.

ಆ ಸಮಯದಲ್ಲಿ ವಿವಿಧ ಸಂಘಟನೆಗಳ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು, 30ಕ್ಕೂ ಹೆಚ್ಚು ಸಭೆ ನಡೆಸಿ ಅವರಿಂದ ಸಲಹೆ ಪಡೆಯಲಾಗಿದೆ. ಪ್ರಜಾಸತ್ತಾತ್ಮಕತೆಯ ಆಧಾರದ ಮೇಲೆ ಸಲಹೆ ಪಡೆದು ಅದರ ಆಧಾರದ ಮೇಲೆ ಪಠ್ಯ ರಚಿಸಲಾಗಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನ ಅನುಸರಿಸಿ ರಾಜ್ಯ ಪಠ್ಯಕ್ರಮ ಚೌಕಟ್ಟನ್ನು ರಚನೆ ಮಾಡಲಾಗಿದೆ. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಅದಕ್ಕೆ ಬದ್ಧರಾಗಿ ಪಠ್ಯ ರಚಿಸಲಾಗಿದೆ ಎಂದು ವಿವರಿಸಿದರು.

ಪಂಥ ಪೂರ್ವಾಗ್ರಹವಿಲ್ಲದೆ, ಪಕ್ಷ ಪೂರ್ವಾಗ್ರಹವಿಲ್ಲದೆ ಪುಸ್ತಕಗಳನ್ನು ಪರಿಷ್ಕರಣೆ ಮಾಡಿದ್ದೇವೆ ಮತ್ತು ಪ್ರಜಾಸತ್ತಾತ್ಮಕವಾಗಿ ಮಾಡಿದ್ದೇವೆ. ಸಮಿತಿಗಳು ಏಕಪಕ್ಷೀಯವಾಗಿ ಕೆಲಸ ಮಾಡಿಲ್ಲ, ನಾನು ವೈಯಕ್ತಿಕವಾಗಿ ಕೆಲಸ ಮಾಡಿಲ್ಲ. ಗೋಪಾಲಕೃಷ್ಣ ಅಡಿಗರು ಕನ್ನಡದ ಪ್ರಸಿದ್ಧ ಕವಿಗಳು, ಅವರು ಜನಸಂಘದಿಂದ ಚುನಾವಣೆಗೆ ನಿಂತಿದ್ರು. ಇವತ್ತಿನ ಬಿಜೆಪಿಯ ಮೂಲ ಜನಸಂಘ, ನಿಜವಾಗ್ಲೂ ನಾವು ಪಕ್ಷಪಾತ ಮಾಡಿದ್ರೆ ಏನು ಮಾಡ್ಬೋದಿತ್ತು. ಹಿಂದಿನ ಪಠ್ಯಗಳಲ್ಲಿ ಗೋಪಾಲಕೃಷ್ಣ ಅಡಿಗರದ್ದು ಒಂದು ರಚನೆಯೂ ಇರಲಿಲ್ಲ. ಆದರೂ, ಅವರು ನಮ್ಮ ಮಕ್ಕಳಿಗೆ ಪರಿಚಯ ಆಗಬೇಕು ಅಂತ ಸೇರಿಸಿದ್ವಿ. ಲಂಕೇಶ್ ಅವರದ್ದು ಯಾವುದೇ ಪಠ್ಯ ಇರಲಿಲ್ಲ, ಅದನ್ನೂ ಸೇರಿಸಿದ್ವಿ ಎಂದರು.

ಪಠ್ಯಗಳನ್ನು ಕೈಬಿಡಲು ಹಲವು ಕಾರಣಗಳಿವೆ: ಕೆಲವು ಕಡೆ ಒಬ್ಬರೇ ಲೇಖಕರದ್ದು 2-3 ಪಾಠಗಳು ಇದ್ದವು, ಅಂಥ ಸಂದರ್ಭದಲ್ಲಿ 1 ಪಾಠ ಉಳಿಸಿಕೊಂಡ್ವಿ. ಕುವೆಂಪು, ಬೇಂದ್ರೆ, ಶಿವರಾಮ ಕಾರಂತ ಸೇರಿದಂತೆ ಹಿರಿಯರಿದ್ರು. ಅಂತಹವರ ಪಾಠಗಳಿಗೆ ಪ್ರಾಥಮಿಕದಲ್ಲಿ 1 ಪಾಠ, ಫ್ರೌಡ ಶಾಲೆಯಲ್ಲಿ ಇನ್ನೊಂದು ಪಾಠ ಇಷ್ಟನ್ನ ಅಳವಡಿಸಲು ತೀರ್ಮಾನಕ್ಕೆ ಬಂದೆವು. ಸಭೆ ಹಾಗೂ ಸಲಹೆ ಮೇಲೆ ಪಠ್ಯ ಪರಿಷ್ಕರಣೆ ಮಾಡಲಾಗಿದೆ. ಇಷ್ಟಾಗಿಯೂ ಅರಿವಿಲ್ಲದೆ ಮಾಹಿತಿ ಕೊರತೆ ಇದ್ದರೆ ಪರಿಷ್ಕರಿಸಬಹುದು ಅಂತಾ ಮೊದಲಿನಿಂದಲೂ ಹೇಳುತ್ತಿದ್ದೇನೆ.ಆದರೆ ನನ್ನಗಿಂತ ಮೊದಲು ಪರಿಷ್ಕರಣೆ ಮಾಡದವರ ಬಗ್ಗೆ ಒಂದೇ ಒಂದು ಮಾತು ಟೀಕೆ ಮಾಡಿಲ್ಲ. ಶಿಕ್ಷಣ ಸಚಿವರು ವಾದಕ್ಕೆ ಇಳಿಯುವ ಬದಲು ವಿವಾದವನ್ನ ಬಗೆಹರಿಸಬೇಕು. ಶೈಕ್ಷಣಿಕ ಕ್ಷೇತ್ರದ ಘನತೆಯನ್ನ ಕಾಪಾಡಬೇಕು ಅಂತ ನೇರವಾಗಿ ಉಚ್ಚರಿಸಿದರು.‌

ಶಿಕ್ಷಣ ಸಚಿವರ ಆರೋಪ ಸತ್ಯಕ್ಕೆ ದೂರವಾದದ್ದು: ಪಠ್ಯಗಳನ್ನ ಕೈ ಬಿಟ್ಟಿದೆ ಎಂದು ಆರೋಪಿಸಿದ್ದ ಸಚಿವ ನಾಗೇಶ್ ಹೇಳಿಕೆಗೆ ಬರಗೂರು ರಾಮಚಂದ್ರಪ್ಪ ತಿರುಗೇಟು ಕೊಟ್ಟಿದ್ದು, ಬಸವಣ್ಣ, ಕುವೆಂಪು, ಅಂಬೇಡ್ಕರ್, ಗಾಂಧೀಜಿ, ಸಂಗೊಳ್ಳಿ ರಾಯಣ್ಣ, ರಾಣಿ ಅಬ್ಬಕ್ಕ, ಕಿತ್ತೂರು ರಾಣಿ ಚೆನ್ನಮ್ಮ, ಕೆಂಪೇಗೌಡ, ಮದಕರಿ ನಾಯಕ ಮುಂತಾದವರ ಹೆಸರನ್ನ ಕೈ ಬಿಟ್ಟಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ಇದು ಅಪ್ಪಟ ತಪ್ಪು ಮಾಹಿತಿ, ಸತ್ಯವೇನೆಂದರೆ ಕುವೆಂಪು ಅವರ ಪಠ್ಯ ಬಿಟ್ಟು ಕನ್ನಡ ಪುಸ್ತಕ ರಚನೆ ಮಾಡಲು ಸಾಧ್ಯವೇ?. ಕುವೆಂಪು ಅವರ ಪಾಠ ಕನ್ನಡ 10ನೇ ತರಗತಿ, 7ನೇ ತರಗತಿಯಲ್ಲಿದೆ. ಗಾಂಧೀಜಿ ಕುರಿತ ಪಾಠ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ-2ರಲ್ಲಿದೆ. 10ನೇ ತರಗತಿಯ ಸಮಾಜ ವಿಜ್ಞಾನ ಭಾಗ-2ರಲ್ಲಿ ಪಾಠ ಇದೆ.

ಅಂಬೇಡ್ಕರ್ ಅವರ ಕುರಿತು ಪಾಠ 8 ನೇ ತರಗತಿ ಭಾಗ 1 ಹಾಗೂ 10 ನೇ ತರಗತಿ ಭಾಗ 2 ರಲ್ಲಿದೆ. 9ನೇ ತರಗತಿಯಲ್ಲಿ ಸಂವಿಧಾನದ ಬಗ್ಗೆ ಇರುವ ಪಠ್ಯದಲ್ಲಿಯೂ ಅಂಬೇಡ್ಕರ್ ಅವರ ಭಾವಚಿತ್ರ ಹಾಕಿ ವಿವರ ಹಾಕಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಅವರ ಬಗ್ಗೆ 6ನೇ ತರಗತಿಯ ಭಾಗ-2 ಹಾಗೂ 10ನೇ ತರಗತಿ ಭಾಗ-1 ರಲ್ಲಿ ಇಬ್ಬರ ಬಗ್ಗೆ ಮಾಹಿತಿ ಇದೆ. ಅಲ್ಲದೇ, 5ನೇ ತರಗತಿ ಕನ್ನಡದಲ್ಲಿ ಪ್ರತ್ಯೇಕ ಪಾಠ ಹಾಕಲಾಗಿದೆ ಎಂದರು.

ಮದಕರಿ ನಾಯಕನ ಬಗ್ಗೆ ಇಲ್ಲ ಎಂದು ಹೇಳ್ತಿದ್ದಾರೆ, ನಾಡಪ್ರಭುಗಳು, ಪಾಳೇಗಾರರರು ಎಂಬ ಪ್ರತ್ಯೇಕ ಪಠ್ಯ ಬರೆಸಿ 7 ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಹಾಕಿದ್ದೇವೆ. ಯಲಹಂಕ ಪ್ರಭುಗಳು ಅಂತ ಪ್ರತ್ಯೇಕ ಭಾಗವನ್ನ 7ನೇ ತರಗತಿ ಭಾಗ 1 ರಲ್ಲಿ ಕೆಂಪೇಗೌಡರ ವಿವರಗಳನ್ನ ನೀಡಲಾಗಿದೆ.ಇದರಲ್ಲಿ ಕೆಂಪೇಗೌಡ ಕುರಿತು ಪಠ್ಯ ಇದೆ, ಹಾಗೂ ಅವರ ಕುಟುಂಬದ ಎಲ್ಲರ ಬಗೆಗೂ ಲೇಖನಗಳಿವೆ. ಸಚಿವರು ಹೇಳಿದ್ದು ಸುಳ್ಳು, ನಾನು ಹೇಳ್ತಿರೋದು ಸತ್ಯ. ದಾಖಲೆ ಸಹಿತ ಹೇಳ್ತಿದ್ದೇನೆ.

ಒಡೆಯರ್ ಬಗ್ಗೆ ಕಡಿಮೆ ಮಾಹಿತಿ ಇದೆ ಅಂತಾರೆ, ಪರಿಷ್ಕರಣೆಯಲ್ಲಿ ನೀವು ಹೆಚ್ಚು ಮಾಡಬಹುದಲ್ಲ. ಮೈಸೂರು ಒಡೆಯರ್ ಕುರಿತಂತೆ ಸೂಕ್ತ ವಿವರ ಇಲ್ಲ ಎಂದು ಸಚಿವರು ಹೇಳಿದ್ದಾರೆ. ವಾಸ್ತವ ಏನೆಂದರೆ, 7ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಮೈಸೂರು ಒಡೆಯರು ಎಂಬ ಪ್ರತ್ಯೇಕ ಅಧ್ಯಾಯ ಬರೆಯಲಾಗಿದೆ. ಇದರಲ್ಲಿ ಮೈಸೂರು ರಾಜರ ಎಲ್ಲಾ ಯುದ್ಧಗಳ ಬಗ್ಗೆ ವಿವರ ಕೊಡಲಾಗಿದೆ. ಈ ವೇಳೆ ಬರುವ ಟಿಪ್ಪು, ಹೈದರಾಲಿ ಬಗ್ಗೆ ಹೇಳಿದ್ದೇವೆ, ಯಾರ ಬಗ್ಗೆಯೇ ಆಗಲೀ, ಟಿಪ್ಪು ಇರಲಿ, ಸಾವರ್ಕರ್ ಬಗ್ಗೆ ಇರಲಿ ನಕಾರಾತ್ಮಕ ವಿಚಾರಗಳನ್ನ ಹೇಳಿಲ್ಲ. ಮಕ್ಕಳಿಗೆ ಸಕಾರಾತ್ಮಕ ಮಾಹಿತಿಯಲ್ಲಿ ಪ್ರೌಢಶಿಕ್ಷಣ ವ್ಯವಸ್ಥೆಯಲ್ಲಿ ಮಾಹಿತಿ ಕೊಡಬೇಕೆಂದು ತಿರುಗೇಟು ನೀಡಿದರು.

ಇದನ್ನೂ ಓದಿ: ನಾವು ಪಠ್ಯಪುಸ್ತಕವನ್ನು ಕೇಸರಿಮಯ ಮಾಡುತ್ತಿಲ್ಲ, ಕನ್ನಡಕ ಹಾಕಿ ನೋಡುತ್ತಿದ್ದೇವೆ : ಶಿಕ್ಷಣ ಸಚಿವ ಬಿ ಸಿ ನಾಗೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.