ETV Bharat / city

ರಾಜಧಾನಿ ಘನತ್ಯಾಜ್ಯ ನಿರ್ವಹಣೆಗಾಗಿ ನೂತನ ಕಂಪನಿ ಸಿದ್ಧ: ಹೀಗಿರಲಿದೆ ಅದರ ಕಾರ್ಯವೈಖರಿ

author img

By

Published : Jun 15, 2021, 8:52 PM IST

Updated : Jun 16, 2021, 7:54 PM IST

ನಗರಾಭಿವೃದ್ಧಿ ಇಲಾಖೆಯ (ಎಸಿಎಸ್) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈ ಕಂಪನಿ ರಚನೆಯಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಇದರ ಸಹನಿರ್ದೇಶಕರಾಗಿರುತ್ತಾರೆ. ಕಂಪನಿ ತನ್ನದೇ ಆದ ಸಿಇಒ ಆಯ್ಕೆ ಮಾಡುತ್ತದೆ. ಬೋರ್ಡ್ ಆಫ್ ಡೈರೆಕ್ಟರ್ಸ್​ನಲ್ಲಿ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಮತ್ತು ಸದಸ್ಯರಿರುತ್ತಾರೆ. ಆದರೆ, ಇಡೀ ಕಂಪನಿಯು, ನಿರ್ದೇಶಕರು ಹಾಗೂ ಸಿಇಒ ಮೂಲಕ ನಡೆಯಲಿದೆ..

bangalore-solid-waste-management-limited-ready-for-work
ಘನತ್ಯಾಜ್ಯ ನಿರ್ವಹಣೆ

ಬೆಂಗಳೂರು : ನಗರದ ಕಸ ನಿರ್ವಹಣೆಯನ್ನು ಸರಿಪಡಿಸಲು ಬಿಬಿಎಂಪಿ ನಾನಾ ಕಸರತ್ತುಗಳನ್ನು ನಡೆಸುತ್ತಿದೆ. ಹೊಸ ಟೆಂಡರ್​​​ ಕರೆದರೂ, ನಿರೀಕ್ಷಿತ ಮಟ್ಟದಲ್ಲಿ ಫಲಿತಾಂಶ ಬರುತ್ತಿಲ್ಲ. ಸದ್ಯ ಇದನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಿ ವ್ಯವಸ್ಥಿತವಾಗಿ ತ್ಯಾಜ್ಯ ನಿರ್ವಹಣೆ ಮಾಡಲು ಸರ್ಕಾರ ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಎಂಬ ಪ್ರತ್ಯೇಕ ಕಂಪನಿಯನ್ನು ರಚಿಸಿದೆ.

ಜುಲೈ 1ರಿಂದಲೇ ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಎಲ್ಲಾ ಕಸ ನಿರ್ವಹಣೆ ಜವಾಬ್ದಾರಿಯನ್ನು ಈ ಕಂಪನಿ ನೋಡಿಕೊಳ್ಳಲಿದ್ದು, ಬಿಬಿಎಂಪಿಯ ಬಹುದೊಡ್ಡ ಜವಾಬ್ದಾರಿ ಈ ಮೂಲಕ ಕಳಚಿಕೊಳ್ಳಲಿದೆ. ಈಗಾಗಲೇ ನಗರಾಭಿವೃದ್ದಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳು, ಅಧಿಕಾರಿಗಳು, ಸಿಬ್ಬಂದಿಯ ಪಟ್ಟಿ ಮತ್ತು ಒಪ್ಪಂದಗಳ ಪ್ರತಿ, ಗುತ್ತಿಗೆಗಳು ಹಾಗೂ ಕೆಲಸ ಮಾಡುವ ಅಧಿಕಾರಿಗಳ ವಿವರ ನೀಡಲು ಬಿಬಿಎಂಪಿಗೆ ಸೂಚಿಸಿದ್ದಾರೆ. ಜುಲೈ ಒಂದರಿಂದ ಹೊಸ ಘನತ್ಯಾಜ್ಯ ಕಂಪನಿ ಕಾರ್ಯ ನಿರ್ವಹಿಸಲಿದೆ.

bangalore-solid-waste-management-limited-ready-for-work
ಬೆಂಗಳೂರು ಸಾಲಿಡ್ ವೇಸ್ಟ್ ಮ್ಯಾನೇಜ್ ಮೆಂಟ್ ಲಿಮಿಟೆಡ್ ಎಂಬ ಪ್ರತ್ಯೇಕ ಕಂಪನಿ ರಚನೆ

ಹೇಗಿರಲಿದೆ ಕಂಪನಿಯ ಆಡಳಿತ..?

ನಗರಾಭಿವೃದ್ಧಿ ಇಲಾಖೆಯ (ಎಸಿಎಸ್) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಈ ಕಂಪನಿ ರಚನೆಯಾಗಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಇದರ ಸಹ ನಿರ್ದೇಶಕರಾಗಿರುತ್ತಾರೆ. ಕಂಪನಿ ತನ್ನದೇ ಆದ ಸಿಇಒ ಆಯ್ಕೆ ಮಾಡುತ್ತದೆ. ಬೋರ್ಡ್ ಆಫ್ ಡೈರೆಕ್ಟರ್ಸ್​ನಲ್ಲಿ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆಯ ವಿಶೇಷ ಆಯುಕ್ತರು ಹಾಗೂ ಜಂಟಿ ಆಯುಕ್ತರು ಮತ್ತು ಸದಸ್ಯರಿರುತ್ತಾರೆ. ಆದರೆ, ಇಡೀ ಕಂಪನಿಯು, ನಿರ್ದೇಶಕರು ಹಾಗೂ ಸಿಇಒ ಮೂಲಕ ನಡೆಯಲಿದೆ. ಪಾಲಿಕೆಯಲ್ಲಿ ಸದ್ಯ ಕೆಲಸ ಮಾಡುತ್ತಿರುವ ಇಂಜಿನಿಯರ್​ಗಳು ಕೂಡ ಸ್ವಲ್ಪ ಸಮಯಕ್ಕೆ, ಪೂರ್ಣಪ್ರಮಾಣದಲ್ಲಿ ಕಂಪನಿ ದೃಢವಾಗಿ ನಿಲ್ಲುವವರೆಗೆ ಅಲ್ಲಿ ಕೆಲಸ ನಿರ್ವಹಿಸಲಿದ್ದಾರೆ.

ಕೆಎಸ್​ಪಿಸಿಬಿ ಮಂಡಳಿಯ ಮಾದರಿಯಲ್ಲೇ ಈ ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ಕಂಪನಿಯ ಆಡಳಿತವರ್ಗ ಕೆಲಸ ಮಾಡಲಿದೆ. ಬೋರ್ಡ್ ಸದಸ್ಯರು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರನ್ನು ಆಯ್ಕೆ ಮಾಡಲಿದ್ದಾರೆ. ಅದನ್ನು ಹೊರತುಪಡಿಸಿ, ಉಳಿದ ಅಧಿಕಾರಿಗಳು, ಮಾರ್ಷಲ್ಸ್, ಕಿರಿಯ ಆರೋಗ್ಯ ಪರಿವೀಕ್ಷಕರು ಎಲ್ಲರೂ ಬಿಬಿಎಂಪಿಯಿಂದ ಕಂಪನಿಗೆ ವರ್ಗಾವಣೆ ಆಗಲಿದ್ದಾರೆ. ಕೆಲ ಹಿರಿಯ ಅಧಿಕಾರಿಗಳು, ಇಂಜಿನಿಯರ್‌ಗಳು ಪಾಲಿಕೆಯಲ್ಲೇ ಕಾರ್ಯನಿರ್ವಹಿಸಲು ಇಚ್ಚಿಸಿದ್ದಲ್ಲಿ, ಕಾಲಮಿತಿಗೆ ಒಳಪಟ್ಟು ಕಂಪನಿಯಲ್ಲಿ ಹೆಚ್ಚುವರಿಯಾಗಿ ಕೆಲಸ ಮಾಡಲಿದ್ದಾರೆ. ಕಂಪನಿ ತನ್ನದೇ ಆದ ನಿಯಮ, ನೇಮಕಾತಿಗಳನ್ನು ಮಾಡಿದರೆ ಆರು ತಿಂಗಳ ಒಳಗಾಗಿ ಅವರದ್ದೇ ಸಿಬ್ಬಂದಿ ವರ್ಗ ರಚನೆಯಾಗಲಿದೆ.

ರಾಜಧಾನಿ ಘನತ್ಯಾಜ್ಯ ನಿರ್ವಹಣೆಗಾಗಿ ನೂತನ ಕಂಪನಿ ಸಿದ್ಧ: ಹೀಗಿರಲಿದೆ ಅದರ ಕಾರ್ಯವೈಖರಿ

ಕಂಪನಿಯ ಕೆಲಸಗಳು ಏನೇನು?

ರಸ್ತೆಗುಡಿಸುವಿಕೆ ಹಾಗೂ ಸಾರ್ವಜನಿಕ ಶೌಚಾಲಯದ ಕೆಲಸ ಬಿಟ್ಟು ಎಲ್ಲಾ ಕೆಲಸಗಳನ್ನೂ ಕಂಪನಿ ನಿರ್ವಹಿಸಲಿದೆ. ಘನತ್ಯಾಜ್ಯ ನಿರ್ವಹಣೆ ವಿಭಾಗದ ಕೆಲಸಗಳಾದ ಮನೆಮನೆ ಕಸ ಸಂಗ್ರಹ, ಸಾಗಾಣಿಕೆ, ಲ್ಯಾಂಡ್ ಫಿಲ್, ಘಟಕಗಳ ನಿರ್ವಹಣೆ, ಒಣಕಸ ಸಂಗ್ರಹ ಕೇಂದ್ರಗಳು, ಬಯೋಮೈನಿಂಗ್ ಸೇರಿದಂತೆ ಹಸಿ ಕಸ, ಒಣ ಕಸ, ಸ್ಯಾನಿಟರಿ ತ್ಯಾಜ್ಯ, ಪ್ರಾಣಿ ತ್ಯಾಜ್ಯ, ಡೆಬ್ರೀಸ್, ಪ್ಲಾಸ್ಟಿಕ್ ಕಸದ ಸಂಪೂರ್ಣ ಜವಾಬ್ದಾರಿಯೂ ಈ ಕಂಪನಿ ಅಡಿ ಬರಲಿದೆ. ರಸ್ತೆ ಕಸಗುಡಿಸುವಿಕೆ ಹಾಗೂ ಸಾರ್ವಜನಿಕ ಶೌಚಾಲಯದ ನಿರ್ವಹಣೆ ಸಾರ್ವಜನಿಕ ಆರೋಗ್ಯ ಇಲಾಖೆಯಡಿ ಉಳಿಯಲಿದೆ ಎಂದು ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರಾದ ಡಿ.ರಂದೀಪ್ ಈಟಿವಿ ಭಾರತ್​ಗೆ ತಿಳಿಸಿದರು.

ಸರ್ಕಾರದ ನಿರ್ಧಾರದ ಪ್ರಕಾರ ಈ ಕಂಪನಿ ಸ್ಥಾಪನೆಯಾಗಿದೆ. ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿಗೆ ಈ ವಿಶೇಷ ಕಾರ್ಪೊರೇಷನ್ ರಚನೆಯಾಗಿದೆ. ಅತ್ಯಂತ ಶಿಸ್ತುಬದ್ಧವಾಗಿ ತ್ಯಾಜ್ಯ ನಿರ್ವಹಣೆ ಮಾಡಲು ರಚನೆ ಮಾಡಲಾಗಿದೆ. ಒಂದಷ್ಟು ದಿನ ಬಿಬಿಎಂಪಿಯ ಸಹಕಾರವೂ ಬೇಕಾಗಲಿದೆ. ನಂತರ ಕಂಪನಿ ತನ್ನದೇ ಆದ ಆಡಳಿತ ವ್ಯವಸ್ಥೆ, ಸಿಬ್ಬಂದಿಯೊಂದಿಗೆ ನಡೆಯಲಿದೆ ಎಂದು ರಂದೀಪ್​​ ತಿಳಿಸಿದರು.

ಜನರಿಗೆ ಹೆಚ್ಚುವರಿ ಬಳಕೆದಾರರ ಶುಲ್ಕದ ಬಿಸಿ?

ಈಗಾಗಲೇ ಘನತ್ಯಾಜ್ಯ ನಿರ್ವಹಣೆ ಬೈಲಾದ ಪ್ರಕಾರ ಘನತ್ಯಾಜ್ಯ ನಿರ್ವಹಣೆ ಸೆಸ್ ಜೊತೆಗೆ ಬಳಕೆದಾರರ ಶುಲ್ಕ ತರುವ ಬಗ್ಗೆಯೂ ನಿರ್ಧಾರ ಆಗಿತ್ತು. ಮುಂದಿನ ದಿನಗಳಲ್ಲಿ ಸರ್ಕಾರ ಆದೇಶ ಮಾಡಿದರೆ, ಬೋರ್ಡ್ ಈ ಬಳಕೆದಾರರ ಶುಲ್ಕವನ್ನೂ ಸಂಗ್ರಹಿಸುವ ಸಾಧ್ಯತೆ ಇದೆ. ಆ ಮೂಲಕ ಕಂಪನಿ ನಿರ್ವಹಣೆಗೆ ತನ್ನದೇ ಆದ ಆದಾಯ ಕ್ರೋಢೀಕರಿಸಿಕೊಳ್ಳುವ ಚಿಂತನೆಯೂ ಇದೆ ಎನ್ನಲಾಗಿದೆ. ಘನತ್ಯಾಜ್ಯ ನಿರ್ವಹಣೆಗೆ ಸರ್ಕಾರ ಕೊಡುತ್ತಿದ್ದ ಅನುದಾನವೂ ಕಂಪನಿಗೆ ಹೋಗಲಿದೆ. ಬಿಬಿಎಂಪಿ ವಾರ್ಷಿಕವಾಗಿ ವೆಚ್ಚ ಮಾಡುತ್ತಿದ್ದ ₹1200 ಕೋಟಿ ಪಾಲಿಕೆಯ ಬಳಿಯೇ ಉಳಿಯಬಹುದು. ಅಥವಾ ಸರ್ಕಾರದ ನಿರ್ದೇಶನದಂತೆ ಪಾಲಿಕೆ ಕ್ರಮವಹಿಸಲಿದೆ.

ಸದ್ಯ ಹೊಸದಾಗಿ ನೇಮಕವಾಗಿರುವ ಹಸಿ ತ್ಯಾಜ್ಯದ ಟೆಂಡರ್​ದಾರರ ಬಗ್ಗೆಯೂ ಕಂಪನಿಯೇ ನಿರ್ಧಾರ ತೆಗೆದುಕೊಳ್ಳಲಿದೆ. ಬಿಬಿಎಂಪಿ ಕಡೆಯಿಂದ ಈಗಾಗಲೇ ಎಷ್ಟು ಹೊಸ ಟೆಂಡರ್ ನೀಡಲಾಗಿದೆ ಎಂಬ ಮಾಹಿತಿ ನೀಡಲಿದ್ದೇವೆ. ಇದರ ಸಾಧಕ-ಬಾಧಕ ನೋಡಿಕೊಂಡು, ತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ಉತ್ತಮಗೊಳಿಸಲು ಕೆಲಸ ಮಾಡಲಿದೆ.

Last Updated : Jun 16, 2021, 7:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.