ETV Bharat / city

ಬೆಂಗಳೂರಿನ ಮತ್ತೊಂದು ಶಾಲೆಗೂ ಬಾಂಬ್​ ಬೆದರಿಕೆ.. ಇ-ಮೇಲ್​ ಬಂದಿದ್ದು ಶುಕ್ರವಾರ, ನೋಡಿದ್ದು ಸೋಮವಾರ!

author img

By

Published : Apr 12, 2022, 6:58 AM IST

Updated : Apr 12, 2022, 7:35 AM IST

Bishop Cotton Girl school
ಬಿಷಪ್‌ ಕಾಟನ್‌ ಬಾಲಕಿಯರ ಶಾಲೆ

ಬೆಂಗಳೂರಿನ ಬಿಷಪ್‌ ಕಾಟನ್‌ ಬಾಲಕಿಯರ ಶಾಲೆಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಶಾಲೆಯ ಆಡಳಿತ ಮಂಡಳಿ ನಿನ್ನೆ (ಸೋಮವಾರ) ಮಧ್ಯಾಹ್ನ ಮೇಲ್ ಪರಿಶೀಲಿಸುವಾಗ ವಿಷಯ ತಿಳಿದಿದೆ.

ಬೆಂಗಳೂರು: ಕಳೆದ ನಾಲ್ಕು ದಿನಗಳ ಹಿಂದೆ ನಗರದ ಜನತೆ ಬೆಚ್ಚಿಬಿದ್ದಿದ್ದರು. ಪೊಲೀಸರು ಹೈಅಲರ್ಟ್​ ಆಗಿದ್ದರು. ಕಾರಣ ಬೆಂಗಳೂರಿನ ಕೆಲ ಶಾಲೆಗಳಲ್ಲಿ ಬಾಂಬ್​ ಇಟ್ಟಿರುವುದಾಗಿ ದುಷ್ಕರ್ಮಿಗಳು ಇ-ಮೇಲ್​ ಮಾಡಿದ್ದು. ಅಂದು ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು ಎಲ್ಲಾ ಶಾಲೆಗಳಲ್ಲಿ ಶೋಧಕಾರ್ಯ ನಡೆಸಿದ್ದರು. ಬಳಿಕ ಅದು ಹುಸಿಬಾಂಬ್​ ಬೆದರಿಕೆ ಅನ್ನೋದು ಖಚಿತವಾಗಿತ್ತು. ಇದಾದ ನಾಲ್ಕು ದಿನಕ್ಕೆ ನಗರದ ಮತ್ತೊಂದು ಶಾಲೆಗೂ ಇ-ಮೇಲ್​ ಮೂಲಕ ಬಾಂಬ್​ ಬೆದರಿಕೆ ಬಂದಿರೋದು ಗೊತ್ತಾಗಿದೆ.

ಹೌದು, ಶುಕ್ರವಾರ ಈ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ ಬಂದಿದ್ದರೆ, ಶಾಲೆಯವರು ಸೋಮವಾರ ಇ-ಮೇಲ್​ ನೋಡಿದ್ದಾರೆ. ಬಿಷಪ್‌ ಕಾಟನ್‌ ಬಾಲಕಿಯರ ಶಾಲೆಗೆ ಶುಕ್ರವಾರ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಶಾಲೆಯ ಆಡಳಿತ ಮಂಡಳಿ ನಿನ್ನೆ ಮಧ್ಯಾಹ್ನ ಇ-ಮೇಲ್ ಪರಿಶೀಲಿಸುವಾಗ ವಿಷಯ ಬೆಳಕಿಗೆ ಬಂದಿದೆ.

ತಕ್ಷಣ ಶಾಲಾ ಆಡಳಿತ ಮಂಡಳಿ ಕಬ್ಬನ್‌ ಪಾರ್ಕ್‌ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಾಂಬ್ ನಿಷ್ಕ್ರಿಯ ದಳದೊಂದಿಗೆ ಪೊಲೀಸರ ತಂಡ ಶಾಲೆಗೆ ಧಾವಿಸಿ ಪರಿಶೀಲನೆ ನಡೆಸಿದಾಗ ಅದು ಹುಸಿ ಬಾಂಬ್ ಬೆದರಿಕೆ ಎಂದು ಖಚಿತವಾಗಿದೆ. ಏ. 8ರಂದು ನಗರದ 14 ಶಾಲೆಗಳಿಗೆ ಬಾಂಬ್‌ ಇಟ್ಟಿರುವುದಾಗಿ ಅನಾಮಿಕ ಬೆದರಿಕೆ ಇ-ಮೇಲ್‌ ಬಂದಿತ್ತು.

ಇದನ್ನೂ ಓದಿ: ಬೆಂಗಳೂರಿನ ಶಾಲೆಗಳಿಗೆ ಬಂದಿದ್ದು ಹುಸಿ ಬಾಂಬ್‌ ಬೆದರಿಕೆ: ಪೋಷಕರ ನಿಟ್ಟುಸಿರು

ಶಾಲೆಗಳಲ್ಲಿ ಬಾಂಬ್ ಇಡಲಾಗಿದೆ ಎಂಬ ಇ-ಮೇಲ್ ಬೆದರಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ನುರಿತ ತಜ್ಞರು, ಸೈಬರ್ ಕ್ರೈಂ ಮತ್ತು ಸ್ಪೇಷಲ್ ಟೀಂ ಜೊತೆಗೆ ಬೇರೆ ಬೇರೆ ಇಲಾಖೆಗಳಿಂದ ತನಿಖೆ ನಡೆಯುತ್ತಿದೆ. ವಿದೇಶದಿಂದಲೂ ಈ ಪ್ರಕರಣದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಆದಷ್ಟು ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಮೈಸೂರು ರಸ್ತೆಯಲ್ಲಿನ ಸಿಎಆರ್ ಕೇಂದ್ರದಲ್ಲಿ ಏರ್ಪಡಿಸಿದ್ದ ಸೇವಾ ಕವಾಯತು ವಂದನೆ ಸ್ವೀಕರಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

Last Updated :Apr 12, 2022, 7:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.