ETV Bharat / city

ಅಪ್ಪಾ ಬೇಡಪ್ಪ.. ಪ್ಲೀಸ್​ ಬೇಡಪ್ಪ ಅಂತಾ ಗೋಗರೆದ್ರೂ ಕರಗದ ಮನಸ್ಸು.. ಮಗನಿಗೆ ಬೆಂಕಿ ಹಚ್ಚಿ ತಂದೆ ಕ್ರೌರ್ಯ!

author img

By

Published : Apr 7, 2022, 1:45 PM IST

Updated : Apr 7, 2022, 10:20 PM IST

ತಂದೆಯೊಬ್ಬ ತಾನು ಪ್ರೀತಿಯಿಂದ ಸಾಕಿ, ಸಲುಹಿದ ಮಗನ ಮೈಮೇಲೆ ಟಿನ್ನರ್ ಸುರಿದು ಬೆಂಕಿ ಹಚ್ಚಿದ ಹೃದಯವಿದ್ರಾವಕ ಘಟನೆ ಸಿಲಿಕಾನ್​ ಸಿಟಿಯನ್ನು ಬೆಚ್ಚಿಬಿಳಿಸಿದೆ.

father poured petrol on his son and set fire in Bengaluru, Bengaluru crime news,  Father killed to son in Bengaluru, inhumanity incident in Bengaluru, ಬೆಂಗಳೂರಿನಲ್ಲಿ ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ, ಬೆಂಗಳೂರು ಕ್ರೈಂ ಸುದ್ದಿ, ಬೆಂಗಳೂರಿನಲ್ಲಿ ತಂದೆಯಿಂದ ಮಗನ ಹತ್ಯೆ, ಬೆಂಗಳೂರಿನಲ್ಲಿ ಅಮಾನವೀಯ ಘಟನೆ,
ಮಗನ ಮೈಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ತಂದೆ

ಬೆಂಗಳೂರು: ಕೇವಲ ಹಣಕ್ಕಾಗಿ ತಾನು ಮುದ್ದಾಗಿ ಸಾಕಿ ಬೆಳೆಸಿದ್ದ ಮಗನನ್ನೇ ತಂದೆಯೊಬ್ಬ ಜೀವಂತವಾಗಿ ಸುಟ್ಟು ಹಾಕಿರುವ ಅಮಾನವೀಯ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ವ್ಯವಹಾರವೊಂದರಲ್ಲಿ ಲೆಕ್ಕದ ವಿಚಾರಕ್ಕೆ ನಡೆದ ಜಗಳವು ತಾರಕಕ್ಕೇರಿ ಸ್ವಂತ ಮಗನ ಮೇಲೆಯೇ ತಂದೆಯು ಟಿನ್ನರ್​​ ಸುರಿದು ಬೆಂಕಿ ಹಚ್ಚಿ ಕೊಂದಿರುವ ಈ ಘಟನೆ ನಗರದ ಚಾಮರಾಜಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಆಜಾದ್ ನಗರದಲ್ಲಿ ನಡೆದಿದೆ.

ಓದಿ: ಇಲಿ ಆಟಕ್ಕೆ ಹೊತ್ತಿ ಉರಿದ ಮನೆ.. 2 ಲಕ್ಷ ನಗದು ಸೇರಿ ಇಡೀ ಮನೆ ಸುಟ್ಟು ಭಸ್ಮ!

ಆಜಾದ್​ ನಗರದ ನಿವಾಸಿ ಸುರೇಂದ್ರ ಅವರು ಬಿಲ್ಡಿಂಗ್​ ಫಾಬ್ರಿಕೇಷನ್​ ವ್ಯವಹಾರ ನಡೆಸುತ್ತಿದ್ದರು. ಇವರಿಗೆ ಅರ್ಪಿತ್ ಎಂಬ ಮಗನಿದ್ದ. ಆದರೆ ಅರ್ಪಿತ್ ವ್ಯವಹಾರದಲ್ಲಿ ಸಾಕಷ್ಟು ಏರುಪೇರು ಮಾಡಿದ್ದ. ಸುಮಾರು 1.5 ಕೋಟಿ ರೂಪಾಯಿ ಬಗ್ಗೆ ಸರಿಯಾದ ಲೆಕ್ಕ ನೀಡಿರಲಿಲ್ಲ. ಹೀಗಾಗಿ ಅಪ್ಪನಿಗೆ ಮಗನ ಮೇಲೆ ಸಿಟ್ಟಿತ್ತು. ಈ ಬಗ್ಗೆ ಅಪ್ಪ ಮಗನ ಮಧ್ಯೆ ಕಳೆದ ಶುಕ್ರವಾರ ಮಧ್ಯಾಹ್ನ ಜೋರು ಗಲಾಟೆ ನಡೆದಿತ್ತು. ವ್ಯವಹಾರದ ಸಾಮಗ್ರಿಗಳನ್ನು ಇರಿಸಿದ್ದ ಗೋಡೌನ್​ನಲ್ಲಿ ಶುರುವಾಗಿದ್ದ ಗಲಾಟೆ ತಾರಕಕ್ಕೆ ಏರಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಮಗನ ಮೈಮೇಲೆ ಟಿನ್ನರ್​ ಸುರಿದು ಬೆಂಕಿ ಹಚ್ಚಿದ ತಂದೆ

ಹೀಗೆ ಗೋಡೌನ್​ನಲ್ಲಿದ್ದ ಕೆಲಸಗಾರರ ಮುಂದೆಯೇ ಜಗಳ ಮುಂದುವರೆದು ಸುರೇಂದ್ರ ಅವರು ಅರ್ಪಿತ್ ಮೇಲೆ ಟಿನ್ನರ್​ ಸುರಿದಿದ್ದಾರೆ. ಇದರಿಂದ​ ಅರ್ಪಿತ್​ ಗೋಡೌನ್​ನಿಂದ ಹೊರಗೆ ಬಂದಿದ್ದಾನೆ. ಈ ವೇಳೆ ಅರ್ಪಿತ್​ ತನ್ನ ತಂದೆಗೆ ಬೇಡಿಕೊಂಡಿದ್ದಾರೆ. ಆದರೂ ಸಹಿತ ಸುರೇಂದ್ರ ತನ್ನ ಮಗನ ಮೇಲೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾನೆ. ಆದರೆ ಮೊದಲನೇ ಬಾರಿ ಬೆಂಕಿ ಹೊತ್ತದ ಕಾರಣ, ಮತ್ತೊಮ್ಮೆ ಬೆಂಕಿ ಕಡ್ಡಿ ಗೀರಿ ಎಸೆದಿದ್ದಾರೆ. ಬಳಿಕ ಅರ್ಪಿತ್​ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ನಗರದ ತುಂಬೆಲ್ಲಾ ಓಡಾಡಿದ್ದಾನೆ.

ಅರ್ಪಿತ್​ ದೇಹಕ್ಕೆ ಬೆಂಕಿ ಹೊತ್ತಿಕೊಂಡಿದ್ದರಿಂದ ದೇಹದ ಬಹುಪಾಲು ಭಾಗ ಸುಟ್ಟುಹೋಗಿತ್ತು. ಬಳಿಕ ಸ್ಥಳೀಯರು ಬೆಂಕಿ ನಂದಿಸಿ ಅರ್ಪಿತ್‌ನನ್ನು ಚಿಕಿತ್ಸೆಗಾಗಿ ವಿಕ್ಟೋರಿಯಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ತೀವ್ರ ನಿಗಾ ಘಟಕದಲ್ಲಿಟ್ಟು ಅರ್ಪಿತ್​ಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ ಚಿಕಿತ್ಸೆ ಫಲಿಸದೇ ಅರ್ಪಿತ್​ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್​ ಇಲಾಖೆ ತಿಳಿಸಿದೆ.

ಓದಿ: ಇಂದೋರ್: ಗುಡಿಸಲಿಗೆ ಬೆಂಕಿ ಬಿದ್ದು ಮಲಗಿದ್ದ ಇಬ್ಬರು ಸಹೋದರಿಯರ ಸಜೀವ ದಹನ

ಸುರೇಂದ್ರ ಎನ್ನುವವರು ತಮ್ಮ ಮಗ ಅರ್ಪಿತ್​ ಮೇಲೆ ಟಿನ್ನರ್ ಸುರಿದು ಬೆಂಕಿ ಹಚ್ಚಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಅಮಾನವೀಯ ಘಟನೆಯ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆರೋಪಿ ಸುರೇಂದ್ರನನ್ನು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Last Updated : Apr 7, 2022, 10:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.