ETV Bharat / city

ಅಂತಾರಾಜ್ಯ ಗಡಿ ಬಂದ್ ಇಲ್ಲ, ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುತ್ತಿದ್ದೇವೆ: ಸಚಿವ ಅಶ್ವತ್ಥ ನಾರಾಯಣ

author img

By

Published : Jan 5, 2022, 12:50 PM IST

ಬೆಳಗಾವಿ ಸೇರಿದಂತೆ ರಾಜ್ಯದ ಯಾವ ಕಡೆಗಳಲ್ಲೂ ಅಂತಾರಾಜ್ಯ ಗಡಿಗಳನ್ನು ಬಂದ್ ಮಾಡುವ ಆಲೋಚನೆ ಸರ್ಕಾರದ ಮುಂದಿಲ್ಲ. ಆದರೆ, ಕೋವಿಡ್​ ನಿಯಂತ್ರಣಕ್ಕೆ ಸಮಯಾನುಸಾರ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.

minister Ashwat Narayana
ಸಚಿವ ಅಶ್ವತ್ಥ್ ನಾರಾಯಣ

ಬೆಳಗಾವಿ: ಕೊರೊನಾ ಮತ್ತು ರೂಪಾಂತರಿ ಒಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾದರೂ ಬೆಳಗಾವಿ ಸೇರಿದಂತೆ ರಾಜ್ಯದ ಯಾವ ಕಡೆಗಳಲ್ಲೂ ಅಂತಾರಾಜ್ಯ ಗಡಿಗಳನ್ನು ಬಂದ್ ಮಾಡುವ ಆಲೋಚನೆ ಸರ್ಕಾರದ ಮುಂದಿಲ್ಲ ಎಂದು ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಸಚಿವ ಅಶ್ವತ್ಥ್ ನಾರಾಯಣ ಮಾತನಾಡಿರುವುದು..

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಂತಾರಾಜ್ಯ ಗಡಿಗಳಲ್ಲಿ ರಾಜ್ಯದೊಳಕ್ಕೆ ಬರುವವರನ್ನು ಪರೀಕ್ಷೆಗೆ ಒಳಪಡಿಸಿ, ಹೆಚ್ಚಿನ ನಿಗಾ ವಹಿಸಲಾಗುವುದು. ಸೋಂಕಿತರು ಕಂಡುಬಂದರೆ ಅಂತಹವರನ್ನು ಮಾತ್ರ ನಿಯಂತ್ರಿಸಲಾಗುವುದು. ಉಳಿದಂತೆ ಅಂತಾರಾಜ್ಯ ಚಟುವಟಿಕೆ ಮತ್ತು ಓಡಾಟಗಳಿಗೆ ಮುಕ್ತ ಅವಕಾಶ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು.

ಮುನ್ನೆಚ್ಚರಿಕೆ ಕ್ರಮಗಳು:

ಪರಿಸ್ಥಿತಿ ಕೈಮೀರಿ ಹೋಗಬಾರದೆಂದು 15 ದಿನಗಳ ಮಟ್ಟಿಗೆ ಸರ್ಕಾರವು ವಾರಾಂತ್ಯದ ಕರ್ಫ್ಯೂ ಸೇರಿದಂತೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸಂಪೂರ್ಣ ಲಾಕ್​ಡೌನ್​ ಅನ್ನು ತಡೆಯುವುದೇ ಇದರ ಹಿಂದಿನ ಸದುದ್ದೇಶವಾಗಿದೆ. ಕಚೇರಿಗಳು ಸೇರಿದಂತೆ ಪಬ್, ಬಾರ್, ಚಿತ್ರಮಂದಿರ ಇತ್ಯಾದಿಗಳಲ್ಲಿ ಶೇ.50ರಷ್ಟು ಮಾತ್ರ ಜನ ಸೇರುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಮುಂಜಾಗ್ರತಾ ಕ್ರಮಗಳ ಹಿಂದೆ ಮುಖ್ಯವಾಗಿ ಬೆಂಗಳೂರಿನಲ್ಲಿ ಪರಿಸ್ಥಿತಿ ತಹಬಂದಿಗೆ ತರುವ ಚಿಂತನೆ ಇದೆ. ಹೀಗಾಗಿಯೇ ಅಲ್ಲಿ ಎರಡು ವಾರಗಳ ಮಟ್ಟಿಗೆ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಇದರ ಜೊತೆಯಲ್ಲೇ 15ರಿಂದ 18 ವರ್ಷದವರಿಗೂ ಲಸಿಕೆ ಹಾಕಲಾಗುತ್ತಿದೆ. ಹಾಗಾಗಿ ಯಾರೂ ಆತಂಕಕ್ಕೆ ಒಳಪಡಬೇಕಾಗಿಲ್ಲ ಎಂದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಸೋಂಕಿತರ ಸಂಖ್ಯೆ: ಬೊಮ್ಮನಹಳ್ಳಿ ವಲಯದಲ್ಲಿ ಹೆಚ್ಚು ಮೈಕ್ರೋ ಕಂಟೇನ್​ಮೆಂಟ್ ಝೋನ್

ವೈದ್ಯಕೀಯ ಕಾಲೇಜುಗಳಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಬೂಸ್ಟರ್ ಡೋಸ್ ಕೊಡಲಾಗುತ್ತಿದ್ದು, ಪರಿಸ್ಥಿತಿಯನ್ನು ಎದುರಿಸಲು ಸಜ್ಜುಗೊಳಿಸಲಾಗಿದೆ. ಹತ್ತು ದಿನಗಳ ನಂತರ ಮತ್ತೊಮ್ಮೆ ಸಮಾಲೋಚಿಸಿ, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.