ETV Bharat / business

Stock Market: ಇಕ್ವಿಟಿ ಮಾರುಕಟ್ಟೆಯಲ್ಲಿ ಎಫ್​ಪಿಐಗಳಿಂದ 30,600 ಕೋಟಿ ರೂ. ಹೂಡಿಕೆ

author img

By

Published : Jun 25, 2023, 5:27 PM IST

FPIs continue to bet on Indian equities
FPIs continue to bet on Indian equities

ಭಾರತದ ಷೇರು ಮಾರುಕಟ್ಟೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಜೂನ್​ನಲ್ಲಿ ಈವರೆಗೆ 30,600 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಮುಂಬೈ : ಭಾರತೀಯ ಷೇರು ಮಾರುಕಟ್ಟೆಯ ಮೇಲೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಪಿಐ) ಹೊಂದಿರುವ ವಿಶ್ವಾಸ ಮುಂದುವರೆದಿದ್ದು, ಅವರು ಜೂನ್‌ನಲ್ಲಿ ಇಲ್ಲಿಯವರೆಗೆ 30,600 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. ದೇಶದ ಸ್ಥಿರವಾದ ಸ್ಥೂಲ ಆರ್ಥಿಕ ಸ್ಥಿತಿ ಮತ್ತು ಗಟ್ಟಿಮುಟ್ಟಾದ ಕಾರ್ಪೊರೇಟ್ ಗಳಿಕೆಯ ದೃಷ್ಟಿಕೋನದ ಮೇಲೆ ಎಫ್​ಪಿಐಗಳು ತಮ್ಮ ನಂಬಿಕೆಯನ್ನಿರಿಸಿ ಭಾರತದ ಮಾರುಕಟ್ಟೆಯಲ್ಲಿ ಅವರು ಹೂಡಿಕೆ ಮಾಡುತ್ತಿದ್ದಾರೆ.

ಹಿಂದಿನ ಒಂಬತ್ತು ತಿಂಗಳಲ್ಲಿ ಎಫ್​ಪಿಐಗಳು ಭಾರತದ ಮಾರುಕಟ್ಟೆಯಲ್ಲಿ ಅತ್ಯಧಿಕವಾಗಿ ಹೂಡಿಕೆ ಮಾಡಿದ್ದಾರೆ. ಮೇ ತಿಂಗಳಲ್ಲಿ ಈಕ್ವಿಟಿಗಳಲ್ಲಿ 43,838 ಕೋಟಿ ರೂ., ಏಪ್ರಿಲ್‌ನಲ್ಲಿ 11,631 ಕೋಟಿ ಮತ್ತು ಮಾರ್ಚ್‌ನಲ್ಲಿ 7,936 ಕೋಟಿ ರೂ.ಗಳನ್ನು ಎಫ್​ಪಿಐಗಳು ಹೂಡಿಕೆ ಮಾಡಿದ್ದರು.

ಈ ಹಿಂದೆ ಜನವರಿಯಿಂದ ಫೆಬ್ರವರಿ ಅವಧಿಯಲ್ಲಿ ಎಫ್​ಪಿಐಗಳು ಭಾರತದ ಮಾರುಕಟ್ಟೆಯಿಂದ 34 ಸಾವಿರ ಕೋಟಿ ರೂಪಾಯಿಗಳನ್ನು ಹಿಂಪಡೆದಿದ್ದರು. ಮುಂದಿನ ದಿನಗಳಲ್ಲಿ ಎಫ್​ಪಿಐಗಳ ಬಂಡವಾಳ ಹರಿವಿನಲ್ಲಿ ಏರಿಳಿತವಾಗಬಹುದು. ಅಮೆರಿಕದಲ್ಲಿನ ಹಣದುಬ್ಬರವನ್ನು ಹತೋಟಿಗೆ ತರಲು ಬಡ್ಡಿದರಗಳನ್ನು ಇನ್ನಷ್ಟು ಹೆಚ್ಚಿಸಬೇಕಾಗಬಹುದು ಎಂಬ ಯುಎಸ್​ ಕೇಂದ್ರ ಬ್ಯಾಂಕ್​ನ ನಿರ್ಧಾರ ಇದಕ್ಕೆ ಕಾರಣವಾಗಬಹುದು ಎನ್ನುತ್ತಾರೆ ಕೋಟಕ್ ಸೆಕ್ಯೂರಿಟೀಸ್​ನ ಈಕ್ವಿಟಿ ರಿಸರ್ಚ್ ಮುಖ್ಯಸ್ಥ (ರಿಟೇಲ್) ಶ್ರೀಕಾಂತ್ ಚೌಹಾನ್.

ಇದಲ್ಲದೆ, ಬ್ಯಾಂಕ್ ಆಫ್ ಇಂಗ್ಲೆಂಡ್ ಬಡ್ಡಿದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸುವುದರಿಂದ ಹೂಡಿಕೆದಾರರಿಗೆ, ವಿಶೇಷವಾಗಿ ಎಫ್‌ಪಿಐಗಳಿಗೆ ಮುನ್ನೆಚ್ಚರಿಕೆ ಗಂಟೆಯಾಗಬಹುದು. ಏಕೆಂದರೆ ಭಾರತೀಯ ಮಾರುಕಟ್ಟೆಗಳ ಹೆಚ್ಚುತ್ತಿರುವ ಮೌಲ್ಯಮಾಪನವು ಅವರಿಗೆ ಸವಾಲಾಗಬಹುದು ಎಂದು ಅವರು ಹೇಳಿದರು. ಅಂಕಿಅಂಶಗಳ ಪ್ರಕಾರ, ಜೂನ್ 1-23 ರ ಅವಧಿಯಲ್ಲಿ ಎಫ್‌ಪಿಐಗಳು ಭಾರತೀಯ ಷೇರುಗಳಲ್ಲಿ 30,664 ಕೋಟಿ ರೂಪಾಯಿಗಳ ನಿವ್ವಳ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ.

ಎಫ್‌ಪಿಐಗಳು ಭಾರತೀಯ ಷೇರುಗಳ ಮೇಲೆ ವಿಶ್ವಾಸ ತೋರಿಸುತ್ತಿದ್ದಾರೆ. ಮುಖ್ಯವಾಗಿ ಭಾರತದ ಸ್ಥಿರ ಸ್ಥೂಲ ಆರ್ಥಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಮತ್ತು ಗಟ್ಟಿಮುಟ್ಟಾದ ಕಾರ್ಪೊರೇಟ್ ಗಳಿಕೆಯ ದೃಷ್ಟಿಕೋನದಿಂದಾಗಿ ಹಣ ಹೂಡಿಕೆ ಮಾಡುತ್ತಿದ್ದಾರೆ ಎಂದು ಯೆಸ್ ಸೆಕ್ಯುರಿಟೀಸ್‌ನ ಪ್ರಮುಖ ಸಾಂಸ್ಥಿಕ ಷೇರುಗಳ ವಿಭಾಗದ ಮುಖ್ಯಸ್ಥ ಹಿತೇಶ್ ಜೈನ್ ಹೇಳಿದ್ದಾರೆ.

ಚೀನಾದ ಆರ್ಥಿಕ ಚೇತರಿಕೆಯ ಬಗ್ಗೆ ಸಂಶಗಳಿರುವುದರಿಂದ ಭಾರತದ ಮಾರುಕಟ್ಟೆಗಳಿಗೆ ಹೆಚ್ಚಿನ ಬಂಡವಾಳ ಹರಿದು ಬರಲು ಕಾರಣವಾಗಿದೆ. ಜೊತೆಗೆ ಯುಎಸ್ ಮತ್ತು ಯುಕೆಯಲ್ಲಿ ಕೂಡ ಅನಿಶ್ಚಿತ ವಾತಾವರಣವಿದೆ. ಇತ್ತೀಚಿನ ದಿನಗಳಲ್ಲಿ ಬಂಡವಾಳ ಹರಿವುಗಳು MSCI ಇಂಡೆಕ್ಸ್‌ನ ಮರುಸಮತೋಲನದ ಮುಂದೆ ನಿಷ್ಕ್ರಿಯವಾಗಬಹುದು, ಇದು ಭಾರತೀಯ ಷೇರುಗಳಿಗೆ ಹೆಚ್ಚುವರಿ ಹರಿವುಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ಮಾರ್ನಿಂಗ್ ಸ್ಟಾರ್ ಇಂಡಿಯಾದ ಅಸೋಸಿಯೇಟ್ ಡೈರೆಕ್ಟರ್ ಹಿಮಾಂಶು ಶ್ರೀವಾಸ್ತವ.

ಷೇರುಗಳ ಹೊರತಾಗಿ ಎಫ್‌ಪಿಐಗಳು ಡೆಬ್ಟ್​ ಮಾರುಕಟ್ಟೆಯಲ್ಲಿ 3,051 ಕೋಟಿ ರೂ. ಹೂಡಿಕೆ ಮಾಡಿದ್ದಾರೆ. 2023 ರಲ್ಲಿ ಇಲ್ಲಿಯವರೆಗೆ ವಿದೇಶಿ ಹೂಡಿಕೆದಾರರು ಭಾರತೀಯ ಷೇರುಗಳಲ್ಲಿ 59,900 ಕೋಟಿ ರೂಪಾಯಿಗಳನ್ನು ಮತ್ತು ಡೆಬ್ಟ್​ ಮಾರುಕಟ್ಟೆಗಳಲ್ಲಿ 4,500 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ : 2000 ರೂ. ಮುಖಬೆಲೆಯ ನೋಟುಗಳಿವೆಯಾ? Amazon pay ಮೂಲಕ ಮನೆಯಲ್ಲೇ ಕುಳಿತು ಬದಲಾಯಿಸಿಕೊಳ್ಳಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.