ETV Bharat / business

ಸಿರಿವಂತರ ಪಟ್ಟಿ: ಅಗ್ರಸ್ಥಾನದಲ್ಲಿ ಅಂಬಾನಿ, 2ನೇ ಸ್ಥಾನದಲ್ಲಿ ಅದಾನಿ; ರತನ್ ಟಾಟಾಗೆ 12.6 ಮಿಲಿಯನ್ X ಫಾಲೋವರ್ಸ್

author img

By ETV Bharat Karnataka Team

Published : Oct 10, 2023, 7:24 PM IST

ಭಾರತದ ಅತ್ಯಂತ ಸಿರಿವಂತ ವ್ಯಕ್ತಿಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಪ್ರಥಮ ಸ್ಥಾನದಲ್ಲಿದ್ದರೆ, ಉದ್ಯಮಿ ಗೌತಮ್ ಅದಾನಿ ಎರಡನೇ ಸ್ಥಾನದಲ್ಲಿದ್ದಾರೆ.

Mukesh Ambani reclaims richest Indian tag, Ratan Tata has most followers on X
Mukesh Ambani reclaims richest Indian tag, Ratan Tata has most followers on X

ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ಬಿಲಿಯನೇರ್ ಮುಖೇಶ್ ಅಂಬಾನಿ ಒಂದು ವರ್ಷದ ನಂತರ '360 ಒನ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2023' ನ ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮರಳಿ ಪಡೆದಿದ್ದಾರೆ. ಅಂಬಾನಿ 8,08,800 ಕೋಟಿ ರೂ.ಗಳ ಸಂಪತ್ತಿನೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅವರ ಸಂಪತ್ತು ಶೇಕಡಾ 2 ರಷ್ಟು ಹೆಚ್ಚಳವಾಗಿದೆ.

ಕೈಗಾರಿಕೋದ್ಯಮಿ ಗೌತಮ್ ಅದಾನಿ 4,74,800 ಕೋಟಿ ರೂ.ಗಳ ಸಂಪತ್ತಿನೊಂದಿಗೆ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಕಳೆದ ವರ್ಷ ಅದಾನಿ ಅಂಬಾನಿಗಿಂತ 3 ಲಕ್ಷ ಕೋಟಿ ರೂ.ಗಳಷ್ಟು ಮುಂದಿದ್ದರು. ಲಸಿಕೆ ತಯಾರಕ ಸೈರಸ್ ಎಸ್ ಪೂನಾವಾಲಾ (278,500 ಕೋಟಿ ರೂ.), ಎಚ್​ಸಿಎಲ್​ ಗ್ರೂಪ್​ನ ಶಿವ ನಾಡಾರ್ (228,900 ಕೋಟಿ ರೂ.), ಹಿಂದೂಜಾ ಗ್ರೂಪ್​ನ ಗೋಪಿಚಂದ್ ಹಿಂದೂಜಾ (176,500 ಕೋಟಿ ರೂ.) ಮತ್ತು ಸನ್ ಫಾರ್ಮಾಸ್ಯುಟಿಕಲ್ಸ್​ನ ದಿಲೀಪ್ ಶಾಂಘ್ವಿ (164,300 ಕೋಟಿ ರೂ.) ಇವರು ಅಂಬಾನಿ ಹಾಗೂ ಅದಾನಿ ನಂತರದ ಸ್ಥಾನಗಳಲ್ಲಿದ್ದಾರೆ.

ವರದಿಯ ಪ್ರಕಾರ, 1,000 ಕೋಟಿ ರೂ.ಗಳ ಶ್ರೀಮಂತ ವ್ಯಕ್ತಿಗಳ ಕ್ಲಬ್ 216 ರಿಂದ 1,319 ಕ್ಕೆ ಏರಿದೆ. ಭಾರತದ ಶ್ರೀಮಂತರ ಪಟ್ಟಿಯ ಸಂಚಿತ ಸಂಪತ್ತು 109 ಲಕ್ಷ ಕೋಟಿ ರೂ.ಗಳಾಗಿದ್ದು, ಇದು ಸಿಂಗಾಪುರ್, ಯುಎಇ ಮತ್ತು ಸೌದಿ ಅರೇಬಿಯಾದ ಸಂಯೋಜಿತ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಗಿಂತ ಹೆಚ್ಚಾಗಿದೆ. ಜೆಪ್ಟೊ ಸ್ಥಾಪಕ 20 ವರ್ಷದ ಕೈವಲ್ಯ ವೋಹ್ರಾ ಅತ್ಯಂತ ಕಿರಿಯ ಶ್ರೀಮಂತ ಭಾರತೀಯ ವ್ಯಕ್ತಿಯ ಗರಿಮೆಗೆ ಪಾತ್ರರಾಗಿದ್ದಾರೆ.

ಮತ್ತೊಂದೆಡೆ, ಪ್ರೆಸಿಷನ್ ವೈರ್ಸ್ ಇಂಡಿಯಾದ ಸಂಸ್ಥಾಪಕ 94 ವರ್ಷದ ಮಹೇಂದ್ರ ರತಿಲಾಲ್ ಮೆಹ್ತಾ 2023 ರಲ್ಲಿ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಬಾರಿಗೆ ಪ್ರವೇಶಿಸಿದ್ದಾರೆ. ಪಟ್ಟಿಯ ಪ್ರಕಾರ, 4,23,600 ಕೋಟಿ ರೂ.ಗಳ ಸಂಚಿತ ಸಂಪತ್ತನ್ನು ಹೊಂದಿರುವ 84 ಸ್ಟಾರ್ಟ್ಅಪ್ ಸಂಸ್ಥಾಪಕರು 2023 ರ ಶ್ರೇಯಾಂಕದಲ್ಲಿ ಸರಾಸರಿ 41 ವರ್ಷ ವಯಸ್ಸಿನವರಾಗಿದ್ದಾರೆ. ಜೊಹೋದ ರಾಧಾ ವೆಂಬು (50) 2023 ರ ಪಟ್ಟಿಯಲ್ಲಿ ಫಾಲ್ಗುಣಿ ನಾಯರ್ ಅವರನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ರತನ್ ಟಾಟಾಗೆ 12.6 ಮಿಲಿಯನ್ X ಫಾಲೋವರ್ಸ್: ತಮಿಳುನಾಡಿನ ತಿರುಪ್ಪೂರು 328 ವ್ಯಕ್ತಿಗಳನ್ನು ಅತಿ ಹೆಚ್ಚು ಶ್ರೀಮಂತರ ಪಟ್ಟಿಗೆ ಸೇರಿಸುವ ಮೂಲಕ ಟಾಪ್ 20 ನಗರಗಳಲ್ಲಿ ಪಾದಾರ್ಪಣೆ ಮಾಡಿದೆ. ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​ನಲ್ಲಿ ಪಾಲೋವರ್ಸ್​ಗಳ ಸಂಖ್ಯೆ ನೋಡುವುದಾದರೆ- ಟಾಟಾ ಗ್ರೂಪ್​ನ ರತನ್ ಟಾಟಾ 12.6 ಮಿಲಿಯನ್ ಫಾಲೋವರ್​ಗಳನ್ನು ಹೊಂದಿದ್ದು, ಮಹೀಂದ್ರಾ & ಮಹೀಂದ್ರಾ ಗ್ರೂಪ್​ನ ಆನಂದ್ ಮಹೀಂದ್ರಾ 10.8 ಮಿಲಿಯನ್ ಫಾಲೋವರ್​ಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ : ನೆಟ್​ಫ್ಲಿಕ್ಸ್​ನ ವ್ಯವಹಾರ ವಿಸ್ತರಣೆಗೆ ಅಡ್ಡಿಯಾದ ಲೋಕಲ್ ಕಂಟೆಂಟ್​ ಕೊರತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.