ಆಗ್ರಾ(ಉತ್ತರ ಪ್ರದೇಶ): ಆಗ್ರಾದಲ್ಲಿ ಮಹಿಳಾ ಶಿಕ್ಷಕಿಯೊಬ್ಬರು ಭದ್ರತಾ ಸಿಬ್ಬಂದಿಗೆ ದೊಣ್ಣೆಯಿಂದ ಥಳಿಸಿ ನಿಂದಿಸುವ ವಿಡಿಯೋವೊಂದು ವೈರಲ್ ಆಗಿದೆ. ಎಲ್‌ಐಸಿಯ ವಸತಿ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿ (ಮಾಜಿ ಸೈನಿಕ)ಗೆ ಅಖಿಲೇಶ್ ಎಂಬುವವರಿಗೆ ಮಹಿಳಾ ಶಿಕ್ಷಕಿ ಡಿಂಪಿ ಮಹೇಂದ್ರು ಲಾಠಿಯಿಂದ ಥಳಿಸಿ, ನಿಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ವಿಡಿಯೋ ವೈರಲ್ ಆದ ನಂತರ ಎಸ್ಪಿ ವಿಕಾಸ್ ಕುಮಾರ್ ಪ್ರತಿಕ್ರಿಯಿಸಿದ್ದು, ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆದ ವಿಡಿಯೋದಲ್ಲಿ ಮಹಿಳೆಯೊಬ್ಬರು ಭದ್ರತಾ ಸಿಬ್ಬಂದಿಯನ್ನು ನಿಂದಿಸಿ ಥಳಿಸುವ ದೃಶ್ಯ ಕಂಡು ಬಂದಿದೆ. ಈ ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಇದೇ ವೇಳೆ ಮಹಿಳೆ ಕೂಡ ತನ್ನ ರಕ್ಷಣೆಗಾಗಿ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಮಹಿಳಾ ಶಿಕ್ಷಕಿ ಡಿಂಪಿ ಮಹೇಂದ್ರು ಅವರು ವಿಡಿಯೋದಲ್ಲಿ ತನ್ನನ್ನು ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಎಂದು ಹೇಳಿಕೊಂಡಿದ್ದಾರೆ. ಎಲ್ಲಿ ಪ್ರಾಣಿಗಳ ಮೇಲೆ ದೌರ್ಜನ್ಯ ನಡೆದರೂ ಜನರ ದೂರಿನ ಮೇರೆಗೆ ಅಲ್ಲಿಗೆ ತಲುಪುತ್ತೇನೆ. ನ್ಯೂ ಆಗ್ರಾದ ಎಲ್‌ಐಸಿ ಕಟ್ಟಡದಿಂದ ನನಗೆ ದೂರು ಬಂದಿತ್ತು.
ನಾನು ಅಲ್ಲಿಗೆ ತಲುಪಿದಾಗ ಸಿಬ್ಬಂದಿ ಅಖಿಲೇಶ್ ಕೋಲಿನಿಂದ ನಾಯಿಗಳನ್ನು ಹೊಡೆಯುತ್ತಿದ್ದ. ನಾನು ಅವನನ್ನು ತಡೆದ ನಂತರ ಅವನು ನನಗೆ ಕಪಾಳಮೋಕ್ಷ ಮಾಡಲು ಪ್ರಯತ್ನಿಸಿದರು. ಆದರೆ, ನಾನು ತಪ್ಪಿಸಿಕೊಂಡೆ. ನನ್ನ ವಿಡಿಯೋ ಮಾಡುವ ಯಾವುದೇ ವ್ಯಕ್ತಿ ನನ್ನೊಂದಿಗೆ ಇರಲಿಲ್ಲ. ಆದರೆ, ಆ ಸಿಬ್ಬಂದಿ ನನ್ನ ವಿಡಿಯೋ ವೈರಲ್ ಮಾಡಿದ್ದಾರೆ ಎಂದು ದೂರಿದ್ದಾರೆ.
ಘಟನೆಯ ವಿವರ: ಮೂಲಗಳ ಪ್ರಕಾರ, ನ್ಯೂ ಆಗ್ರಾ ಕಾಲೋನಿಯ ಬಿ ಬ್ಲಾಕ್‌ನಲ್ಲಿ ಎಲ್‌ಐಸಿ ವಸತಿ ಸಂಕೀರ್ಣವಿದ್ದು, ಮಾಜಿ ಸೈನಿಕ ಸಿಬ್ಬಂದಿ ಅಖಿಲೇಶ್ ಎಂಬುವವರು ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ಶನಿವಾರ ಸಂಜೆ 5:15 ಗಂಟೆಗೆ ಕೆಲವು ಮಹಿಳೆಯರು ವಸತಿ ಆವರಣಕ್ಕೆ ಬಂದರು. ಅವರಲ್ಲಿ ಶಿಕ್ಷಕಿಯೊಬ್ಬರು ಮಾಜಿ ಸೈನಿಕ ಸಿಬ್ಬಂದಿ ನಾಯಿಗಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಗಲಾಟೆ ಆರಂಭಿಸಿದರು. ಗಲಾಟೆಯಲ್ಲಿ ಮಹಿಳೆ ಹಲವು ಬಾರಿ ಸಿಬ್ಬಂದಿಯನ್ನು ನಿಂದಿಸಿದ್ದು, ಕೈಯಲ್ಲಿದ್ದ ಕೋಲಿನಿಂದ ಸಿಬ್ಬಂದಿಗೆ ಥಳಿಸಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ಓದಿ: ಆಂಟಿಲಿಯಾ ಪ್ರಕರಣದ ಬಳಿಕ ಮತ್ತೆ ಅಂಬಾನಿ ಕುಟುಂಬಕ್ಕೆ ಬೆದರಿಕೆ ಕರೆ