ETV Bharat / bharat

ಮೇಕೆದಾಟು ವಿಷಯದಲ್ಲಿ ಕರ್ನಾಟಕವನ್ನು ಏಕೆ ಖಂಡಿಸಿಲ್ಲ? ಸಿಎಂ ಸ್ಟಾಲಿನ್​ಗೆ ಅಣ್ಣಾಮಲೈ ಪ್ರಶ್ನೆ

author img

By

Published : Jul 3, 2023, 1:16 PM IST

ಮೇಕೆದಾಟು ವಿಷಯದಲ್ಲಿ ಕರ್ನಾಟಕ ಹಠಮಾರಿ ಧೋರಣೆ ಹೊಂದಿರುವುದರಿಂದ ಸಿಎಂ ಸ್ಟಾಲಿನ್ ಬೆಂಗಳೂರಿನಲ್ಲಿ ನಡೆಯುವ ವಿರೋಧ ಪಕ್ಷ ನಾಯಕರ ಸಭೆಯಲ್ಲಿ ಭಾಗವಹಿಸಕೂಡದು ಎಂದು ಒತ್ತಾಯಿಸಿದ್ದಾರೆ.

TN BJP chief Annamalai slams CM Stalin for not condemning
TN BJP chief Annamalai slams CM Stalin for not condemning

ಚೆನ್ನೈ : ಮೇಕೆದಾಟು ಅಣೆಕಟ್ಟೆ ಕಟ್ಟುವ ವಿಚಾರದಲ್ಲಿ ಕರ್ನಾಟಕ ಸರ್ಕಾರ ಹಠಮಾರಿ ಧೋರಣೆ ಹೊಂದಿದ್ದು, ಒಂದೊಮ್ಮೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಪಕ್ಷಗಳ ನಾಯಕರ ಸಭೆಗೆ ಹಾಜರಾದಲ್ಲಿ ಅದು ಮೇಕೆದಾಟು ವಿಷಯದಲ್ಲಿ ತಮಿಳುನಾಡಿನ ಹಿತಾಸಕ್ತಿ ಬಲಿಕೊಟ್ಟಂತೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಪ್ರತಿಪಾದಿಸಿದ್ದಾರೆ. ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದರೆ ಪಕ್ಷವು ಗೋ ಬ್ಯಾಕ್ ಸ್ಟಾಲಿನ್ ಆಂದೋಲನ ನಡೆಸಲಿದೆ ಎಂದು ಅವರು ಹೇಳಿದರು.

ಮೇಕೆದಾಟು ಅಣೆಕಟ್ಟನ್ನು ಚುನಾವಣಾ ವಿಷಯವನ್ನಾಗಿ ಮಾಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕರ್ನಾಟಕದಲ್ಲಿ ತಮ್ಮ ಮಿತ್ರ ಪಕ್ಷವನ್ನು ಖಂಡಿಸಿಲ್ಲ ಎಂದು ಆರೋಪಿಸಿದ ಅಣ್ಣಾಮಲೈ, "ಕಾಂಗ್ರೆಸ್ ಅಥವಾ ಶಿವಕುಮಾರ್ ಅವರನ್ನು ಖಂಡಿಸಲು ಮುಖ್ಯಮಂತ್ರಿಗೆ ಮನಸಿಲ್ಲ. ಆದರೆ ರಾಷ್ಟ್ರಮಟ್ಟದಲ್ಲಿ ತಮಗೆ ಸ್ಥಾನಮಾನ ಸಿಗಲಿದೆ ಎಂದು ಭಾವಿಸಿ ಅವರು ವಿರೋಧ ಪಕ್ಷದ ಸಭೆಗೆ ಹಾಜರಾಗಲು ಉತ್ಸುಕರಾಗಿದ್ದಾರೆ" ಎಂದರು.

ಇಂತಹ ಸಭೆಗಳಲ್ಲಿ ಪಾಲ್ಗೊಳ್ಳುವ ಮೂಲಕ ತನ್ನ ಪ್ರತಿಷ್ಠೆ ಹೆಚ್ಚಾಗಲಿದೆ ಎಂದು ಸ್ಟಾಲಿನ್ ಭಾವಿಸಿದ್ದಾರೆ ಎಂದು ಅಣ್ಣಾಮಲೈ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ತಮಿಳುನಾಡಿನ ಸ್ವಾಭಿಮಾನವನ್ನು ಬಿಟ್ಟುಕೊಡುವ ಮೂಲಕ ಮುಖ್ಯಮಂತ್ರಿಗಳು ಈ ತಿಂಗಳ ಕೊನೆಯಲ್ಲಿ ನಡೆಯುವ ಸಭೆಗೆ ಹಾಜರಾಗುತ್ತಾರೆಯೇ ಎಂದು ಅವರು ಪ್ರಶ್ನಿಸಿದರು. "ಸ್ಟಾಲಿನ್‌ಗೆ ಸಭೆಗೆ ಹಾಜರಾಗಲು ಹಕ್ಕಿದೆ ಆದರೆ ಅವರು ಹಿಂದಿರುಗಿದಾಗ, ರೈತರು ಮತ್ತು ಸಾರ್ವಜನಿಕರೊಂದಿಗೆ 'ಗೋ ಬ್ಯಾಕ್ ಸ್ಟಾಲಿನ್' ಆಂದೋಲನವನ್ನು ನಾನೇ ನೇತೃತ್ವ ವಹಿಸಿ ಮುನ್ನಡೆಸುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಹೇಳಿದರು.

ಡಿಎಂಕೆ ಮತ್ತು ಅದರ ಮಿತ್ರಪಕ್ಷಗಳು ಕಾವೇರಿ ವಿಷಯದಲ್ಲಿ ರಾಜಕೀಯ ಮಾಡುತ್ತವೆ. ಆದರೆ ತಮಿಳುನಾಡು ರೈತರ ಜೀವನಾಡಿಯಾಗಿರುವ ಕಾವೇರಿ ನೀರಿನ ವಿಚಾರದಲ್ಲಿ ಬಿಜೆಪಿ ಯಾವತ್ತೂ ರಾಜಕೀಯ ಮಾಡಿಲ್ಲ ಎಂದು ಹೇಳಿದರು. ನದಿಯ ಕೆಳಭಾಗದ ರಾಜ್ಯಗಳ ಒಪ್ಪಿಗೆಯಿಲ್ಲದೆ ಅಣೆಕಟ್ಟು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ಅಣ್ಣಾಮಲೈ ತಿಳಿಸಿದರು.

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ದಶಕಗಳಿಂದಲೂ ವಿವಾದವಿದೆ. ಕರ್ನಾಟಕ ಸರ್ಕಾರ ತಮಿಳುನಾಡಿಗೆ 177.25 ಟಿಎಂಸಿ ಅಡಿ ಕಾವೇರಿ ನೀರು ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಪ್ರಕರಣದ ತೀರ್ಪು ನೀಡಿದೆ. ತೀರ್ಪಿನಲ್ಲಿ ಕರ್ನಾಟಕದ ಪಾಲನ್ನು ವರ್ಷಕ್ಕೆ 14.75 ಟಿಎಂಸಿ ಅಡಿ ಹೆಚ್ಚಿಸಿದರೆ ತಮಿಳುನಾಡಿಗೆ 404.25 ಟಿಎಂಸಿ ಅಡಿ ನೀರು ಸಿಗಲಿದೆ.

2019 ರಲ್ಲಿ ಕರ್ನಾಟಕ ಸರ್ಕಾರವು ಬೆಂಗಳೂರಿನಿಂದ 90 ಕಿಮೀ ಮತ್ತು ಕರ್ನಾಟಕ ತಮಿಳುನಾಡು ಗಡಿಯಿಂದ 4 ಕಿಮೀ ದೂರದಲ್ಲಿರುವ ರಾಮನಗರ ಜಿಲ್ಲೆಯ ಮೇಕೆದಾಟು ಎಂಬಲ್ಲಿ ಜಲಾಶಯವನ್ನು ನಿರ್ಮಿಸುವ ಯೋಜನೆ ಕುರಿತು ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತ್ತು. ಈ ಯೋಜನೆಯು ಬೆಂಗಳೂರಿಗೆ ಸಮರ್ಪಕ ಕುಡಿಯುವ ನೀರು ಪೂರೈಕೆಯ ಉದ್ದೇಶ ಹೊಂದಿದೆ.

ಇದನ್ನೂ ಓದಿ : China & Tibet: ಟಿಬೆಟಿಯನ್ನರ ಮೇಲೆ ಚೀನಾ ಕಣ್ಗಾವಲು; ದಲೈ ಲಾಮಾರೊಂದಿಗೆ ಸಂಪರ್ಕ ಕಡಿದುಕೊಳ್ಳುವಂತೆ ಒತ್ತಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.