ETV Bharat / bharat

2024ರಲ್ಲಿ ಅಧಿಕಾರಕ್ಕೆ ಬಂದರೆ 'ಮಹಿಳಾ ಮೀಸಲಾತಿ ಮಸೂದೆ'ಗೆ ತಿದ್ದುಪಡಿ: ಮಲ್ಲಿಕಾರ್ಜುನ ಖರ್ಗೆ

author img

By PTI

Published : Sep 24, 2023, 7:30 AM IST

ಸರೋಜಿನಿ ನಾಯ್ಡು ಕಾಂಗ್ರೆಸ್‌ನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು. ಆದರೆ, 100 ವರ್ಷಗಳಲ್ಲಿ ಯಾವುದೇ ಮಹಿಳೆ ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಅಧ್ಯಕ್ಷರಾಗಿದ್ದಾರೆಯೇ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.

Mallikarjun Kharge
ಮಲ್ಲಿಕಾರ್ಜುನ ಖರ್ಗೆ

ಜೈಪುರ (ರಾಜಸ್ಥಾನ): 2024ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ 'ಮಹಿಳಾ ಮೀಸಲಾತಿ ಮಸೂದೆ'ಗೆ ತಿದ್ದುಪಡಿ ತರಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ತಿಳಿಸಿದರು. ರಾಜಸ್ಥಾನದ ಜೈಪುರದಲ್ಲಿ ಶನಿವಾರ ಪಕ್ಷದ ರ‍್ಯಾಲಿ ಉದ್ದೇಶಿಸಿ ಅವರು ಮಾತನಾಡಿದರು.

"ಕೇಂದ್ರದಲ್ಲಿ ನಮ್ಮ‌ ಸರ್ಕಾರ ಅಧಿಕಾರಕ್ಕೆ ಬಂದರೆ ಮಾಡುವ ಮೊದಲ ಕೆಲಸವೆಂದರೆ ಮಸೂದೆಗೆ ತಿದ್ದುಪಡಿ ಮಾಡುವುದು. ಈಗ ಮಸೂದೆ ಜಾರಿಗೆ ತರಲು ಯಾವುದೇ ಪ್ರಮುಖ ಕಾನೂನು ತೊಡಕುಗಳಿಲ್ಲ. ಆದರೆ ನರೇಂದ್ರ ಮೋದಿ ಸರ್ಕಾರ ಅದನ್ನು 10 ವರ್ಷಗಳ ಕಾಲ ಮುಂದೂಡಿದೆ" ಎಂದು ದೂರಿದರು.

ಮಹಿಳಾ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆದ ಖರ್ಗೆ, "ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಮಹಿಳಾ ಮೀಸಲಾತಿಗಾಗಿ ಮಸೂದೆಯನ್ನು ತಂದಾಗ ಬಿಜೆಪಿ ಅದನ್ನು ವಿರೋಧಿಸಿತ್ತು. ಅವರಿಂದಲೇ ಅದು ನಿಂತು ಹೋಗಿತ್ತು. ಆದರೆ ಇಂದು ಅವರೇ ಹೀರೋಗಳಾಗಿ ವಿಹರಿಸುತ್ತಿದ್ದಾರೆ. ಇವರು ಬುದ್ದಿವಂತರು" ಎಂದರು.

ಅಸ್ಪೃಶ್ಯರೆಂಬ ಕಾರಣಕ್ಕೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರನ್ನು ಹೊಸ ಸಂಸತ್ ಭವನದ ಶಂಕುಸ್ಥಾಪನೆಗೆ ಆಹ್ವಾನಿಸಿರಲಿಲ್ಲ. ಅಸ್ಪೃಶ್ಯರು ಶಂಕುಸ್ಥಾಪನೆ ನೆರವೇರಿಸಿದರೆ ಸಹಜವಾಗಿ ಅದನ್ನು ಗಂಗಾಜಲದಿಂದ ತೊಳೆಯಬೇಕಾಗುತ್ತದೆ ಎಂದು ಅವರು ಟೀಕಿಸಿದರು. ಹೊಸ ಸಂಸತ್ ಕಟ್ಟಡದ ಉದ್ಘಾಟನೆಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಆಹ್ವಾನಿಸಿರಲಿಲ್ಲ. ಹಲವು ಗಣ್ಯರು ಮತ್ತು ಸಿನಿಮಾ ತಾರೆಯರನ್ನು ಆಹ್ವಾನಿಸಲಾಗಿತ್ತು. ಇದು ರಾಷ್ಟ್ರಪತಿ ಅವರಿಗೆ ಮಾಡಿದ ಅವಮಾನ ಎಂದರು.

ಬಿಜೆಪಿಯವರು ಮಹಿಳೆಯರನ್ನು ತುಂಬಾ ಗೌರವಿಸುತ್ತೇವೆ ಎಂದು ಹೇಳುತ್ತಾರೆ. ಮಹಿಳಾ ಮೀಸಲಾತಿ ಮಸೂದೆಯನ್ನು ತರುವುದರ ಹಿಂದೆ ನರೇಂದ್ರ ಮೋದಿ ಸರ್ಕಾರದ ಉದ್ದೇಶವೇನು ಎಂದು ಪ್ರಶ್ನಿಸಿದ ಕಾಂಗ್ರೆಸ್ ನಾಯಕ, ಬಿಜೆಪಿ ಹೇಳದಿದ್ದರೂ ಮಹಿಳೆಯರಿಗೆ ಮೀಸಲಾತಿ ನೀಡಲು ಬಯಸುವುದಿಲ್ಲ ಎಂದರು. ಹಲವಾರು ವಿರೋಧ ಪಕ್ಷಗಳು ಸೇರಿ 'ಇಂಡಿಯಾ' ಬಣವನ್ನು ರಚಿಸಿರುವುದರಿಂದ ಬಿಜೆಪಿ ಚುನಾವಣೆಗೆ ಮುಂಚೆಯೇ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಯೋಚಿಸಿದೆ ಎಂದು ಇದೇ ವೇಳೆ ಖರ್ಗೆ ಕುಟುಕಿದರು.

ಪ್ರದರ್ಶನ ಉದ್ದೇಶಕ್ಕಾಗಿ ಅಲ್ಲ: ಪ್ರಧಾನಿ ಮೋದಿ ಅವರು ಸಂಸತ್ತಿನ ಹೊಸ ಕಟ್ಟಡವನ್ನು ಪ್ರದರ್ಶಿಸಬೇಕು ಎಂಬ ಕಾರಣಕ್ಕಾಗಿ ಸಂಸತ್ತಿನ ವಿಶೇಷ ಅಧಿವೇಶನವನ್ನು 5 ದಿನಗಳವರೆಗೆ ಕರೆಯಲಾಯಿತು. ಆದರೆ ಅದು ನಾಲ್ಕು ದಿನಗಳಲ್ಲಿ ಕೊನೆಗೊಂಡಿತು. ಸಂಸತ್ತಿನ ವಿಶೇಷ ಅಧಿವೇಶನ ಲೋಕಸಭೆ ಮತ್ತು ರಾಜ್ಯಸಭೆಗಳು ಜನರ ಸಮಸ್ಯೆಗಳ ಬಗ್ಗೆ ಚರ್ಚೆಗಾಗಿ ಮತ್ತು ಅವುಗಳನ್ನು ಪರಿಹರಿಸಲು ಇರುತ್ತದೆ. ಪ್ರದರ್ಶನ ಉದ್ದೇಶಕ್ಕಾಗಿ ಅಲ್ಲ ಎಂದು ವಾಗ್ದಾಳಿ ನಡೆಸಿದರು.

"ಬಡವರಲ್ಲಿ ಬಡವರೂ ಸಹ ಈ ದೇಶವು ತಮ್ಮದು ಎಂದು ಭಾವಿಸುವಂತಹ ಭಾರತವನ್ನು ನಿರ್ಮಿಸಲು ನಾನು ಪ್ರಯತ್ನಿಸುತ್ತೇನೆ. ಅಲ್ಲಿ ಯಾವುದೇ ತಾರತಮ್ಯವಿಲ್ಲ. ಮಹಿಳೆಯರಿಗೆ ಪುರುಷರಿಗೆ ಸಮಾನ ಹಕ್ಕುಗಳಿವೆ" ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು. ಆರ್‌ಎಸ್‌ಎಸ್ ಮುಖಂಡ ಎಂ.ಎಸ್.ಗೋಳ್ವಾಲ್ಕರ್ ಇದನ್ನು ಹೇಳಿದ್ದಾರಾ ಅಥವಾ ಬಿಜೆಪಿಯ ಯಾವ ನಾಯಕರು ಹಾಗೆ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್​​ ಮಹಿಳೆಯರನ್ನು ಗೌರವಿಸುವ ಪಕ್ಷ: ಮಹಿಳೆಯರನ್ನು ಗೌರವಿಸುವ ಪಕ್ಷ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್. ಮೊದಲ ಮಹಿಳಾ ರಾಜ್ಯಪಾಲರು ಸರೋಜಿನಿ ನಾಯ್ಡು, ವಿಜಯಲಕ್ಷ್ಮಿ ಪಂಡಿತ್ ವಿಶ್ವಸಂಸ್ಥೆಯಲ್ಲಿದ್ದರು. ಮೀರಾ ಕುಮಾರ್ ಲೋಕಸಭೆಯ ಸ್ಪೀಕರ್. ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ. ಮೊದಲ ಮಹಿಳಾ ರಾಷ್ಟ್ರಪತಿ ಪ್ರತಿಭಾ ಪಾಟೀಲ್" ಎಂದು ಖರ್ಗೆ ಉದಾಹರಿಸಿದರು.

ಮಣಿಪುರದಲ್ಲಿ ನಡೆದ ಜನಾಂಗೀಯ ಹಿಂಸಾಚಾರದ ಬಗ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ತನ್ನ ಮಹಿಳಾ ನಾಯಕರಿಗೆ ಯಾವ ರೀತಿಯ ಗೌರವ ನೀಡುತ್ತದೆ ಎಂಬುವುದನ್ನು ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ನೀವು ನೋಡಿದ್ದೀರಿ ಎಂದರು. ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಬೇಕು ಎಂದು ಕೋರಿದ ಖರ್ಗೆ, ಹಾಗೆ ಮಾಡದಿದ್ದರೆ ಜನರು ಗುಲಾಮರಾಗುತ್ತಾರೆ ಎಂದು ಎಚ್ಚರಿಸಿದರು. ಗುಲಾಮರಾಗಲು ಬಯಸದಿದ್ದರೆ ಕಾಂಗ್ರೆಸ್‌ಗೆ ಮತ ನೀಡಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಿ ಎಂದರು.

ಮಹಿಳಾ ಮೀಸಲಾತಿ ಮಸೂದೆ: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ 3ನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು ಸಂವಿಧಾನ (128ನೇ ತಿದ್ದುಪಡಿ) ಮಸೂದೆಯನ್ನು ಈ ವಾರದ ಆರಂಭದಲ್ಲಿ ಸಂಸತ್ತು ಅಂಗೀಕರಿಸಿತು. ನೂತನ ಸಂಸತ್ ಭವನದಲ್ಲಿ ಅಂಗೀಕಾರಗೊಂಡ ಮೊದಲ ಮಸೂದೆ ಇದಾಗಿದೆ.

ಇದನ್ನೂ ಓದಿ: ಸಂಸತ್ತಿನಲ್ಲಿ ಮೀಸಲಾತಿ ಮಸೂದೆ ಪಾಸ್​: ಮಹಿಳಾ ಸಂಸದರಿಂದ ಪ್ರಧಾನಿ ಮೋದಿಗೆ ಜೈಕಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.