ETV Bharat / bharat

Honor Killing: ಪ್ರಿಯಕರನೊಂದಿಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಯುವತಿ.. ಕುಟುಂಬಸ್ಥರಿಂದ ಮರ್ಯಾದಾ ಹತ್ಯೆ

author img

By ETV Bharat Karnataka Team

Published : Aug 26, 2023, 9:58 PM IST

ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ತನ್ನ ಪ್ರಿಯಕರನೊಂದಿಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಯುವತಿಯನ್ನು ಕುಟುಂಬಸ್ಥರು ಹತ್ಯೆ ಮಾಡಿದೆ ಘಟನೆ ನಡೆದಿದೆ.

UP crime: kaushambi-honor-killing: relatives-cut-girl-with-ax-after-talking-lover-on-mobile
ಪ್ರಿಯಕರನೊಂದಿಗೆ ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಯುವತಿಯ ಹತ್ಯೆಗೈದ ಕುಟುಂಬಸ್ಥರು

ಕೌಶಾಂಬಿ (ಉತ್ತರ ಪ್ರದೇಶ): ಯುವಕನೊಂದಿಗೆ ಮೊಬೈಲ್​ ಫೋನ್​ನಲ್ಲಿ ಮಾತನಾಡುತ್ತಿದ್ದ ಕಾರಣಕ್ಕೆ ಯುವತಿಯನ್ನು ಕುಟುಂಬಸ್ಥರೇ ಬರ್ಬರ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಸರಾಯ್​ ಅಕಿಲ್ ಪ್ರದೇಶದಲ್ಲಿ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು, ಇದೊಂದು ಮರ್ಯಾದಾ ಹತ್ಯೆ ಎಂಬ ಶಂಕೆ ವ್ಯಕ್ತವಾಗಿದೆ. ಈ ಘಟನೆಯ ಸಂಬಂಧ ಈಗಾಗಲೇ ಹತ್ಯೆಯಾದ ಯುವತಿಯ ತಂದೆ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಸರಾಯ್‌ ಅಕಿಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ 17 ವರ್ಷದ ಹದಿಹರೆಯದ ಯುವತಿ ತಮ್ಮದೇ ಗ್ರಾಮದ ಯುವಕನೊಂದಿಗೆ ಪ್ರೇಮ ಸಂಬಂಧ ಹೊಂದಿದ್ದಳು. ಇಬ್ಬರೂ ಆಗಾಗ ಭೇಟಿಯಾಗುತ್ತಿದ್ದರು. ಇದಲ್ಲದೇ ಮೊಬೈಲ್‌ ಫೋನ್​ನಲ್ಲೂ ಇಬ್ಬರು ಮಾತನಾಡುತ್ತಿದ್ದರು. ಆದರೆ, ಯುವಕ ಬೇರೆ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಯುವತಿಯ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸುತ್ತಿದ್ದರು. ಸದ್ಯ ಬಂಧಿತ ಆರೋಪಿಗಳನ್ನು ತಂದೆ ಮನ್ರಾಖಾನ್ ಮತ್ತು ಇಬ್ಬರು ಸಹೋದರರಾದ ಘನಶ್ಯಾಮ್ ಮತ್ತು ರಾಧೇಶ್ಯಾಮ್ ಎಂದು ಗುರುತಿಸಲಾಗಿದೆ. ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇತ್ತೀಚಿಗೆ ಕೂಡ ಯುವತಿ ತನ್ನ ಪ್ರಿಯಕರನೊಂದಿಗೆ ಮಾತನಾಡುತ್ತಿದ್ದಳು. ಈ ವೇಳೆ ಪೋಷಕರು ಆಕೆಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇದೇ ವಿಚಾರವಾಗಿ ಮನೆಯಲ್ಲಿ ಜಗಳ ನಡೆದಿದೆ. ಇದಾದ ನಂತರ ಆಕೆಯ ತಂದೆ ಮತ್ತು ಇಬ್ಬರು ಸಹೋದರರು ಸೇರಿ ಯುವತಿಯನ್ನು ಕೊಡಲಿಯಿಂದ ಕೊಚ್ಚಿ ಹಾಕಿದ್ದಾರೆ. ಇದರ ಪರಿಣಾಮ ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ್​ ತಿಳಿಸಿದ್ದಾರೆ.

ಯುವತಿ ಹಾಗೂ ಯುವಕನ ಪ್ರೇಮದ ವಿಷಯ ಕುಟುಂಬಸ್ಥರಿಗೆ ಈ ಹಿಂದೆಯೇ ಗೊತ್ತಾಗಿತ್ತು. ಆಗಲೇ ಯುವಕನೊಂದಿಗೆ ಮಾತನಾಡಬಾರದು ಎಂದು ಯುವತಿಗೆ ಪೊಲೀಸರು ಎಚ್ಚರಿಸಿದ್ದರು. ಇಷ್ಟಾದರೂ ಯುವತಿ ತನ್ನ ಪ್ರಿಯಕರನೊಂದಿಗೆ ರಹಸ್ಯವಾಗಿ ಮಾತನಾಡುತ್ತಿದ್ದಳು. ಈಗ ಯುವತಿ ತನ್ನ ಗೆಳೆಯನೊಂದಿಗೆ ಮೊಬೈಲ್‌ನಲ್ಲಿ ಮಾತನಾಡುವಾಗಲೇ ಕುಟುಂಬಸ್ಥರಿಗೆ ಸಿಕ್ಕಿಬಿದ್ದಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದ್ದಾರೆ.

ಈ ಘಟನೆ ಮಾಹಿತಿ ತಿಳಿದ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಜಿತ್ ಕುಮಾರ್, ಎಸ್​ಪಿ ಬ್ರಿಜೇಶ್ ಕುಮಾರ್ ಶ್ರೀವಾಸ್ತವ್​ ಸೇರಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ, ವಿಧಿವಿಜ್ಞಾನ ತಂಡ ಕೂಡ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದೆ. ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮೂವರು ಆರೋಪಿಗಳು ಯುವತಿಯನ್ನು ಕೊಂದ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.

ಇದನ್ನೂ ಓದಿ: ರಾಖಿ ಕಟ್ಟಬೇಕೆಂಬ ಮಗಳ ಬೇಡಿಕೆ ಈಡೇರಿಸಲು ಫುಟ್‌ಪಾತ್‌ನಲ್ಲಿ ಮಲಗಿದ್ದ ಮಗು ಅಪಹರಿಸಿದ ದಂಪತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.