ETV Bharat / bharat

ಭಾರತದಲ್ಲಿ ಇಂಧನ ಕೊರತೆ ಉಂಟಾಗದು; ಅನಗತ್ಯ ಆತಂಕ ಸೃಷ್ಟಿ ಬೇಡ: ಕೇಂದ್ರ ಸರ್ಕಾರ

author img

By

Published : Oct 10, 2021, 2:20 PM IST

Union Power Minister R K Singh
Union Power Minister R K SinghUnion Power Minister R K Singh

ದೇಶಾದ್ಯಂತ ಕಲ್ಲಿದ್ದಲು ಪೂರೈಕೆ, ದೆಹಲಿಗೆ ವಿದ್ಯುತ್​ ಪೂರೈಕೆಯನ್ನು ಮುಂದುವರಿಸಲಾಗುವುದು. ಯಾವುದೇ ರೀತಿಯ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನವದೆಹಲಿ: "ಕಲ್ಲಿದ್ದಲು ಕೊರತೆ, ವಿದ್ಯುತ್ ಬಿಕ್ಕಟ್ಟು ಎಂದೆಲ್ಲಾ ಅನಗತ್ಯವಾಗಿ ಆತಂಕ ಸೃಷ್ಟಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿಗೆ ದೆಹಲಿಗೆ ವಿದ್ಯುತ್​ ಪೂರೈಕೆ ಮುಂದುವರೆಯಲಿದೆ" ಎಂದು ಕೇಂದ್ರ ವಿದ್ಯುತ್ ಸಚಿವ ಆರ್‌.ಕೆ.ಸಿಂಗ್ ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕ, ಗುಜರಾತ್, ಪಂಜಾಬ್, ರಾಜಸ್ಥಾನ, ದೆಹಲಿ ಮತ್ತು ತಮಿಳುನಾಡು ಸೇರಿದಂತೆ ದೇಶಾದ್ಯಂತ ಕಲ್ಲಿದ್ದಲು ಕೊರತೆ ಇದೆ. ಹೀಗಾಗಿ ಕಲ್ಲಿದ್ದಲು ಆಧರಿಸಿ ವಿದ್ಯುತ್ ಉತ್ಪಾದನೆ ಮಾಡುವ 64 ಸ್ಥಾವರಗಳಲ್ಲಿ ದಾಸ್ತಾನು ಖಾಲಿಯಾಗುತ್ತಿದೆ. ಪಂಜಾಬ್ ಈಗಾಗಲೇ ಲೋಡ್ ಶೆಡ್ಡಿಂಗ್ ವಿಧಿಸಿದೆ ಎಂದು ಸುದ್ದಿ ಎಲ್ಲೆಡೆ ಹರಡಿತ್ತು.

ಈ ಬಗ್ಗೆ ನಿನ್ನೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು, ಅಮರ್ಪಕ ವಿದ್ಯುತ್​ ಪೂರೈಕೆ ಆಗದಿದ್ದರೆ ಮುಂದಿನ ಎರಡು ದಿನಗಳಲ್ಲಿ ರಾಷ್ಟ್ರ ರಾಜಧಾನಿ ಅಂಧಕಾರವನ್ನು ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬಿಎಸ್‌ಇಎಸ್ ಅಧಿಕಾರಿಗಳು, ನ್ಯಾಷನಲ್ ಥರ್ಮಲ್ ಪವರ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಟಿಪಿಸಿ) ಮತ್ತು ವಿದ್ಯುತ್ ಸಚಿವಾಲಯದ ಅಧಿಕಾರಿಗಳೊಂದಿಗೆ ಕೇಂದ್ರ ವಿದ್ಯುತ್ ಸಚಿವ ಆರ್‌.ಕೆ.ಸಿಂಗ್ ಸಭೆ ನಡೆಸಿದ್ದರು.

ಇದನ್ನೂ ಓದಿ: ದೇಶದಲ್ಲಿ ಕಲ್ಲಿದ್ದಲು ಕೊರತೆ: 64 ಸ್ಥಾವರಗಳಲ್ಲಿ ನಾಲ್ಕೇ ದಿನದಲ್ಲಿ ಮುಗಿಯಲಿದೆ ದಾಸ್ತಾನು

ಈ ಕುರಿತು ಇಂದು ಸುದ್ದಿಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿರುವ ಆರ್‌.ಕೆ.ಸಿಂಗ್, ಕಲ್ಲಿದ್ದಲು ಕೊರತೆಯಿಲ್ಲ. ದೇಶಾದ್ಯಂತ ಕಲ್ಲಿದ್ದಲು ಪೂರೈಕೆ ಹಾಗು ದೆಹಲಿಗೆ ವಿದ್ಯುತ್​ ಪೂರೈಕೆ ಮುಂದುವರಿಸಲಾಗುವುದು. ಯಾವುದೇ ಸಂದರ್ಭದಲ್ಲಿ ಗ್ಯಾಸ್ ಪೂರೈಕೆ ಕಡಿಮೆಯಾಗುವುದಿಲ್ಲ. ಲೋಡ್ ಶೆಡ್ಡಿಂಗ್ ಇರುವುದಿಲ್ಲ. ನಮ್ಮ ಅಧಿಕಾರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಮತ್ತು ಅಂತಹ ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ ಎಂದು ಭರವಸೆ ನೀಡಿದರು.

ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ (GAIL) ದೆಹಲಿ ಡಿಸ್ಕಾಂಗಳಿಗೆ ಗ್ಯಾಸ್ ಪೂರೈಕೆ ನಿಲ್ಲಿಸುವ ಬಗ್ಗೆ ಸಂದೇಶ ರವಾನಿಸಿದ ಕಾರಣ ವಿದ್ಯುತ್ ಕೊರತೆಯ ಬಗ್ಗೆ ಭಯ ಶುರುವಾಗಿತ್ತು. ಆದರೆ ಯಾವುದೇ ಅನಿಲದ ಕೊರತೆಯಿರಲಿಲ್ಲ ಅಥವಾ ಭವಿಷ್ಯದಲ್ಲಿ ಕೊರತೆ ಆಗುವುದಿಲ್ಲ. ದೇಶಾದ್ಯಂತ ವಿದ್ಯುತ್ ಕೇಂದ್ರಗಳಿಗೆ ಅಗತ್ಯ ಪ್ರಮಾಣದ ಗ್ಯಾಸ್ ಪೂರೈಕೆಯನ್ನು ಮುಂದುವರಿಸಲು ನಾನು GAIL ಸಿಎಮ್‌ಡಿಗೆ ಹೇಳಿದ್ದೇನೆ. ಸರಬರಾಜು ಮುಂದುವರಿಯುತ್ತದೆ ಎಂದು ಅವರು ನನಗೆ ಭರವಸೆ ನೀಡಿದ್ದಾರೆ ಎಂದು ಸಚಿವರು ತಿಳಿಸಿದರು.

ಇದನ್ನೂ ಓದಿ: ಕಲ್ಲಿದ್ದಲು ಕೊರತೆ: ಆರ್‌ಟಿಪಿಎಸ್​ನ 8 ಘಟಕಗಳಲ್ಲಿ 4 ಸ್ಥಗಿತ!

ವಿದ್ಯುತ್ ಅಡಚಣೆಯ ಬಗ್ಗೆ ಗ್ರಾಹಕರಿಗೆ ಸಂದೇಶ ಕಳುಹಿಸಿದ ಆರೋಪದ ಮೇಲೆ ನಾನು ಟಾಟಾ ಪವರ್‌ಗೆ ಎಚ್ಚರಿಕೆ ನೀಡಿದ್ದು, ವಿದ್ಯುತ್ ಪೂರೈಕೆಯ ಕೊರತೆಯಾಗಬಾರದು ಎಂದು ಸೂಚಿಸಿದ್ದೇನೆ ಎಂದು ಸಿಂಗ್​ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.