ETV Bharat / bharat

ಆಪ್​ ಆರೋಪ ತಳ್ಳಿ ಹಾಕಿದ ತಿಹಾರ್​ ಜೈಲು​ ಆಡಳಿತ: ಕೈದಿಗಳೊಂದಿಗೆ ಪ್ರತ್ಯೇಕ ಸೆಲ್​ನಲ್ಲಿರುವ ಸಿಸೋಡಿಯಾ.. ಅಧಿಕಾರಿಗಳ ಸ್ಪಷ್ಟನೆ

author img

By

Published : Mar 8, 2023, 8:31 PM IST

ಸಿಸೋಡಿಯಾ ಅವರನ್ನು ದರೋಡೆಕೋರರು ಇರುವ ಸೆಲ್​ನಲ್ಲಿ ಇರಿಸಿ ಕೊಲ್ಲಲು ಬಿಜೆಪಿ ಸಂಚು ರೂಪಿಸಿದೆ ಎಂದು ಆಪ್​ ಶಾಸಕ ಸೌರಭ್​ ಭಾರದ್ವಾಜ್​ ಆರೋಪಿಸಿದ್ದಾರೆ. ಆದರೆ ಈ ಆರೋಪವನ್ನು ತಿಹಾರ್​​ ಜೈಲು ಆಡಳಿತ ತಳ್ಳಿ ಹಾಕಿದೆ.

Former Deputy Chief Minister Manish Sisodia
ಮಾಜಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ

ನವದೆಹಲಿ: ಆಮ್​ ಆದ್ಮಿ ಪಕ್ಷದ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿ ಹಾಕಿರುವ ದೆಹಲಿ ಕಾರಾಗೃಹದ ಅಧಿಕಾರಿಗಳು, ಮಾಜಿ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರನ್ನು ತಿಹಾರ್ ಸೆಂಟ್ರಲ್​ ಜೈಲ್​ನ ನಂ. 1 ವಾರ್ಡ್​ನಲ್ಲಿ ಇರಿಸಲಾಗಿದ್ದು, ಅಲ್ಲಿ ಯಾವುದೇ ದರೋಡೆಕೋರರಿಲ್ಲ. ಹಾಗೂ ಅಲ್ಲಿ ಅತ್ಯಂತ ಕಡಿಮೆ ಸಂಖ್ಯೆ ಕೈದಿಗಳಿದ್ದಾರೆ ಎಂದು ಹೇಳಿದ್ದಾರೆ. ಆಮ್​ ಆದ್ಮಿ ಪಕ್ಷದ ಸಂಸದ ಸಂಜಯ್​ ಸಿಂಗ್​ ಹಾಗೂ ಶಾಸಕ ಸೌರಭ್​ ಭಾರದ್ವಾಜ್​ ಅವರು ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಜೈಲು ಆಡಳಿತ ಈ ಸ್ಪಷ್ಟನೆ ಕೊಟ್ಟಿದೆ.

ಮದ್ಯ ನೀತಿ ಹಗರಣ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸಿಬಿಐ ಕಸ್ಟಡಿಯಲ್ಲಿದ್ದ ಆಪ್​ ನಾಯಕ ಮನೀಶ್​ ಸಿಸೋಡಿಯಾ ಅವರಿಗೆ 6 ರಂದು ದೆಹಲಿ ವಿಶೇಷ ನ್ಯಾಯಾಲಯ ಮಾರ್ಚ್​ 20 ವರೆಗೆ ನ್ಯಾಯಾಂಗ ಬಂಧನ ವಿಧಿಸಿ, ತಿಹಾರ್​ ಜೈಲಿಗೆ ಕಳುಹಿಸಿತ್ತು. ಹೀಗೆ ತಿಹಾರ್​ಗೆ ಜೈಲಿಗೆ ಹೋಗಿರುವ ಸಿಸೋಡಿಯಾ ಅವರನ್ನು ಇತರ ಕೈದಿಗಳೊಂದಿಗೆ ಸಾಮಾನ್ಯ ಸೆಲ್​ನಲ್ಲಿ ಇರಿಸಲಾಗಿದೆ. ಮತ್ತು ಅವರಿಗೆ 'ವಿಪಸ್ಸನಾ' ಸೆಲ್​ ಅನ್ನು ನಿರಾಕರಿಸಲಾಗಿದೆ ಎಂದು ಭಾರದ್ವಾಜ್​ ಇಂದು ಬೆಳಗ್ಗೆ ಹೇಳಿಕೆ ನೀಡಿದ್ದರು.

ಮನೀಶ್​ ಸಿಸೋಡಿಯಾ ಅವರನ್ನು ಜೈಲಿನ ವಿಪಸ್ಸನಾ ಸೆಲ್​ನಲ್ಲಿ ಇರಿಸುವಂತೆ ಮನವಿ ಮಾಡಲಾಗಿತ್ತು ಮತ್ತು ಅದನ್ನು ನ್ಯಾಯಾಲಯ ಕೂಡ ಅನುಮೋದಿಸಿದೆ. ಆದರೆ, ನ್ಯಾಯಾಲಯದ ಅನುಮೋದನೆ ಹೊರತಾಗಿಯೂ ಸಿಸೋಡಿಯಾ ಅವರನ್ನು ಜೈಲು ಸಂಖ್ಯೆ 1 ರಲ್ಲಿ ಅಪರಾಧಿಗಳೊಂದಿಗೆ ಇರಿಸಲಾಗಿದೆ. ಇದು ಕೆಲವು ಭಯಾನಕ ಅಪರಾಧಿಗಳು ಮತ್ತು ಕೊಲೆಗಾರರಿರುವ ಸೆಲ್​ ಆಗಿದೆ. ತಮ್ಮ ಪಕ್ಷದ ನಾಯಕನನ್ನು ಕೊಲ್ಲಲು ಬಿಜೆಪಿ ಸಂಚು ನಡೆಸುತ್ತಿದೆ ಎಂದು ಭಾರದ್ವಾಜ್ ಆರೋಪಿಸಿದ್ದರು. ಇದಕ್ಕೆ ಕೇಂದ್ರ ಉತ್ತರ ನೀಡಬೇಕು ಎಂದು ಭಾರದ್ವಾಜ್​ ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೈಲು ಅಧಿಕಾರಿಗಳು, 'ಮನೀಶ್​ ಸಿಸೋಡಿಯಾ ಅವರ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ಪ್ರತ್ಯೇಕ ವಾರ್ಡ್​ನಲ್ಲಿ ಇರಿಸಲಾಗಿದೆ. ದರೋಡೆಕೋರರಿಲ್ಲದ, ಮತ್ತು ಜೈಲಿನೊಳಗೆ ಉತ್ತಮ ನಡವಳಿಕೆ ನಿರ್ವಹಿಸುವ ಕನಿಷ್ಠ ಸಂಖ್ಯೆಯ ಕೈದಿಗಳಿರುವ ಸೆಲ್​ನಲ್ಲಿ ಅವರನ್ನು ಇರಿಸಲಾಗಿದೆ. ಮಾಜಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರಿಗೆ ಪ್ರತ್ಯೇಕ ಸೆಲ್​ ನೀಡಿರುವುದರಿಂದ ಇಲ್ಲಿ ಅವರು ಯಾವುದೇ ತೊಂದರೆಯಿಲ್ಲದೇ ಧ್ಯಾನ ಮಾಡಲು ಅಥವಾ ಇತರ ಚಟುವಟಿಕೆಗಳನ್ನು ಮಾಡಲು ಸಾಧ್ಯ ಎಂದು ತಿಳಿಸಿದರು.

ಜೈಲಿನ ನಿಯಮಗಳ ಪ್ರಕಾರ ಅವರ ಸುರಕ್ಷತೆ ಮತ್ತು ಭದ್ರತೆ ಖಚಿತಪಡಿಸಿಕೊಳ್ಳಲು ಎಲ್ಲ ವ್ಯವಸ್ಥೆಗಳು ಜಾರಿಯಲ್ಲಿವೆ. ಅವರಿಗೆ ಜೈಲಿನಲ್ಲಿ ಕಲ್ಪಿಸಿರುವ ವ್ಯವಸ್ಥೆಗಳ ಬಗ್ಗೆ ಮಾಡಿರುವ ಆರೋಪಗಳು ಆಧಾರರಹಿತವಾಗಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರಾಂತ್ಯದ (ಜಿಎನ್‌ಸಿಟಿಡಿ) ಅಬಕಾರಿ ನೀತಿಯ ರಚನೆ ಮತ್ತು ಅನುಷ್ಠಾನದಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದ ತನಿಖೆಯಲ್ಲಿ ಫೆಬ್ರವರಿ 26 ರಂದು ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿತ್ತು.

ಪ್ರಕರಣದಲ್ಲಿ ಸಿಬಿಐ ಕಸ್ಟಡಿ ಅವಧಿ ಮುಕ್ತಾಯವಾಗಿದ್ದು, ಸಿಬಿಐ ಸಿಸೋಡಿಯಾ ಅವರು ಸದ್ಯಕ್ಕೆ ತಮ್ಮ ಕಸ್ಟಡಿಗೆ ಅಗತ್ಯವಿಲ್ಲ ಎಂದು ಹೇಳಿದ ಹಿನ್ನೆಲೆ ವಿಶೇಷ ನ್ಯಾಯಾಲಯ ಮಾರ್ಚ್ 6 ರಂದು ಸಿಸೋಡಿಯಾ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ತಿಹಾರ್​ ಜೈಲಿಗೆ ಕಳುಹಿಸಿದೆ. ಅಗತ್ಯ ಬಿದ್ದರೆ ಸಿಬಿಐ ಸಿಸೋಡಿಯಾ ಅವರನ್ನು ತಮ್ಮ ಕಸ್ಟಡಿಗೆ ಕೋರಬಹುದು ಎಂದು ನ್ಯಾಯಾಧೀಶ ಎಂ ಕೆ ನಾಗ್ಪಾಲ್​ ಅವರಿದ್ದ ಪೀಠ ತಿಳಿಸಿದೆ.

ವೈದ್ಯರು ಶಿಫಾರಸು ಮಾಡಿರುವ ಔಷಧಗಳನ್ನು, ಕನ್ನಡಕ, ಡೈರಿ, ಪೆನ್ನು ಮತ್ತು ಭಗವದ್ಗೀತೆ ಪ್ರತಿಯನ್ನು ಕೊಂಡೊಯ್ಯಲು ಸಿಸೋಡಿಯಾ ಅವರಿಗೆ ನ್ಯಾಯಾಲಯ ಅನುಮತಿ ನೀಡಿದೆ. ಸಿಸೋಡಿಯಾ ಅವರು ವಿನಂತಿಸಿದಂತೆ, ಆರೋಪಿಯನ್ನು ವಿಪಸ್ಸನಾ ಸೆಲ್ ಅಥವಾ ಧ್ಯಾನ ಸೆಲ್‌ನಲ್ಲಿ ಇರಿಸುವ ಕೋರಿಕೆ ಪರಿಗಣಿಸುವಂತೆ ಜೈಲು ಅಧೀಕ್ಷಕರಿಗೆ ನ್ಯಾಯಾಲಯ ಸೂಚಿಸಿತ್ತು.

ಇದನ್ನೂ ಓದಿ: ಮನೀಶ್​ ಸಿಸೋಡಿಯಾಗೆ 14 ದಿನ ನ್ಯಾಯಾಂಗ ಬಂಧನ: ತಿಹಾರ್​ ಜೈಲ್​ಗೆ ಶಿಫ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.