ETV Bharat / bharat

ಮನೀಶ್​ ಸಿಸೋಡಿಯಾಗೆ 14 ದಿನ ನ್ಯಾಯಾಂಗ ಬಂಧನ: ತಿಹಾರ್​ ಜೈಲ್​ಗೆ ಶಿಫ್ಟ್​

author img

By

Published : Mar 6, 2023, 5:57 PM IST

ಸಿಬಿಐ ಸದ್ಯಕ್ಕೆ ಮನೀಶ್​ ಸಿಸೋಡಿಯಾ ತಮ್ಮ ಕಸ್ಟಡಿಯಲ್ಲಿ ಬೇಡವೆಂದ ಕಾರಣ ವಿಶೇಷ ನ್ಯಾಯಾಲಯ ಅವರಿಗೆ ಮಾರ್ಚ್​ 20ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ತಿಹಾರ್​ ಜೈಲಿಗೆ ಕಳುಹಿಸಿದೆ.

14 days judicial custody for Manish Sisodia taken to Tihar Jail
ಮನೀಶ್​ ಸಿಸೋಡಿಯಾಗೆ 14 ದಿನ ನ್ಯಾಯಾಂಗ ಬಂಧನ

ನವದೆಹಲಿ: ಕಳೆದ ಒಂದು ವಾರದಿಂದ ಸಿಬಿಐ ಕಸ್ಟಡಿಯಲ್ಲಿದ್ದ ಆಮ್​ ಆದ್ಮಿ ಪಕ್ಷದ ನಾಯಕ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಲಾಗಿದ್ದು, ಅವರನ್ನು ತಿಹಾರ್​ ಜೈಲಿಗೆ ಕಳುಹಿಸಲಾಗಿದೆ. ಮದ್ಯ ನೀತಿ ಪ್ರಕರಣದಲ್ಲಿ ಮನೀಶ್​ ಸಿಸೋಡಿಯಾ ಅವರನ್ನು ಸಿಬಿಐ ಬಂಧಿಸಿ ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದರು. ಸಿಬಿಐ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ವಿಶೇಷ ನ್ಯಾಯಾಲಯ ಇಂದು ಮಧ್ಯಾಹ್ನ ಸಿಸೋಡಿಯಾ ಅವರಿಗೆ ಮಾರ್ಚ್​ 20 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ, ತಿಹಾರ್​ ಜೈಲಿಗೆ ಕಳುಹಿಸಿದೆ.

ಭಗವದ್ಗೀತೆ ಕೊಂಡೊಯ್ಯಲು ಅನುಮತಿ: ಸಿಸೋಡಿಯಾ ಅವರನ್ನು ಈಗಾಗಲೇ ತಿಹಾರ್​ ಜೈಲಿಗೆ ಕರೆದೊಯ್ಯಲಾಗಿದ್ದು, ಅವರನ್ನು ನಂ. 1 ಜೈಲಿನಲ್ಲಿ ಇರಿಸಲಾಗಿದೆ ಎಂದು ಜೈಲಿನ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಎಎಪಿ ನಾಯಕ ಸಿಸೋಡಿಯಾ ಅವರ ವೈದ್ಯಕೀಯ ಪರೀಕ್ಷೆಯ ವೇಳೆ ಸೂಚಿಸಿದ ಔಷಧಗಳನ್ನು ಕೊಂಡೊಯ್ಯಲು ಕೋರ್ಟ್ ಅನುಮತಿ ನೀಡಿದೆ. ಒಂದು ಜೊತೆ ಕನ್ನಡಕ, ಡೈರಿ, ಪೆನ್ನು ಮತ್ತು ಭಗವದ್ಗೀತೆಯ ಪ್ರತಿಯನ್ನು ಕೊಂಡೊಯ್ಯಲು ಸಹ ಅನುಮತಿ ನೀಡಲಾಗಿದೆ. ಸಿಸೋಡಿಯಾ ಅವರ ವಕೀಲರ ಕೋರಿಕೆಯಂತೆ, ಅವರನ್ನು ಮೆಡಿಟೇಶನ್​ ಸೆಲ್​ನಲ್ಲಿ ಇರಿಸುವ ಕೋರಿಕೆಯನ್ನು ಪರಿಗಣಿಸುವಂತೆ ನ್ಯಾಯಾಲಯ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ವಿಚಾರಣೆಯ ಸಂದರ್ಭದಲ್ಲಿ, 'ಸದ್ಯ ಸಂಸ್ಥೆ ಸಿಸೋಡಿಯಾ ಅವರನ್ನು ಹೆಚ್ಚಿನ ಕಸ್ಟಡಿಗೆ ಕೇಳುತ್ತಿಲ್ಲ. ಆದರೆ ಭವಿಷ್ಯದಲ್ಲಿ ಕೇಳುತ್ತೇವೆ. ಆರೋಪಿ ವ್ಯಕ್ತಿಯ ನಡವಳಿಕೆ ಸರಿಯಾಗಿಲ್ಲ. ಅವರು ಸಾಕ್ಷಿಗಳನ್ನು ಭಯಭೀತಗೊಳಿಸುತ್ತಿದ್ದಾರೆ. ವಿಚಾರಣೆಗೆ ರಾಜಕೀಯ ಬಣ್ಣ ನೀಡುತ್ತಿದ್ದಾರೆ' ಎಂದು ಸಿಬಿಐ ನ್ಯಾಯಾಲಯಕ್ಕೆ ತಿಳಿಸಿದೆ. 'ಇಡೀ ದಿನ ಬೆಳಗ್ಗೆಯಿಂದ ಸಂಜೆಯವರೆಗೆ ನನಗೆ ಒಂದೇ ರೀತಿಯ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇದು ನನಗೆ ಮಾನಸಿಕ ಕಿರುಕುಳವಾಗಿದೆ' ಎಂದು ಸಿಸೋಡಿಯಾ ಅವರ ಸಿಬಿಐ ಬಂಧನವನ್ನು ಶನಿವಾರ ಇನ್ನೂ ಎರಡು ದಿನಗಳವರೆಗೆ ವಿಸ್ತರಿಸಿದ ಕೂಡಲೇ ಹೇಳಿದ್ದರು. ನ್ಯಾಯಾಲಯವು ಈ ಹಿಂದೆ ಅನುಮತಿಸಿದ್ದ 7 ದಿನಗಳ ಕಸ್ಟಡಿ ವಿಚಾರಣೆಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಇಂದು ವಿಶೇಷ ನ್ಯಾಯಾಧೀಶ ಎಂ.ಕೆ. ನಾಗ್ಪಾಲ್ ಅವರ ಮುಂದೆ ಹಾಜರುಪಡಿಸಲಾಯಿತು.

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್​ ಅವರ ನೇತೃತ್ವದಲ್ಲಿ 2021-22ಕ್ಕೆ ಜಾರಿಗೆ ತರಲು ನಿರ್ಧರಿಸಿದ್ದ ಹೊಸ ಅಬಕಾರಿ ನೀತಿ ಸಾಕಷ್ಟು ವಿವಾದ ಹುಟ್ಟುಹಾಕಿದ್ದು, ಇದರಲ್ಲಿ ಕೋಟ್ಯಾಂತರ ರೂಪಾಯಿ ಹಗರಣ ಆಗಿದೆ ಎಂದು ಆರೋಪ ಕೇಳಿ ಬಂದಿತ್ತು. ಈ ಕುರಿತು ತನಿಖೆ ಕೈಗೊಂಡಿರುವ ಸಿಬಿಐ ಹಾಗೂ ಇಡಿ ತನಿಖೆಯ ಭಾಗವಾಗಿ, ದೆಹಲಿ ಮುಖ್ಯಮಂತ್ರಿಯಾಗಿದ್ದ ಮನೀಶ್​ ಸಿಸೋಡಿಯಾ ಅವರನ್ನು ಎಂಟು ಗಂಟೆಗಳ ಕಾಲ ಸುದೀರ್ಘ ವಿಚಾರಣೆ ನಡೆಸಿ, ಕಳೆದ ತಿಂಗಳು 26ರಂದು ಬಂಧಿಸಿತ್ತು.

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಅವರು ನುಣುಚಿಕೊಳ್ಳುವ ಉತ್ತರಗಳನ್ನು ನೀಡಿದ್ದರಿಂದ ಮತ್ತು ಸಾಕ್ಷ್ಯಾಧಾರಗಳೊಂದಿಗೆ ತನಿಖೆಗೆ ಸಹಕರಿಸದ ಕಾರಣ ಅವರನ್ನು ಸಿಬಿಐ ಬಂಧಿಸಿತ್ತು. ನಂತರ ನ್ಯಾಯಾಲಯದ ಮುಂದೆ ಹಾಜರು ಪಡಿಸಿ ಸಿಬಿಐ ಸಿಸೋಡಿಯಾ ಅವರನ್ನು ತಮ್ಮ ಕಸ್ಟಡಿಗೆ ತೆಗೆದುಕೊಂಡಿತ್ತು. ಇದರ ಮಧ್ಯೆ ಸಿಸೋಡಿಯಾ ಅವರು ಕೂಡ ದೆಹಲಿ ನ್ಯಾಯಾಲಯದ ಮುಂದೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಇದರ ವಿಚಾರಣೆ ಮಾರ್ಚ್​ 10 ರಂದು ನಡೆಯಲಿದೆ. ಈ ವಿಚಾರಣೆ ವೇಳೆ ಸಿಬಿಐ ಕೂಡ ತಮ್ಮ ಉತ್ತರವನ್ನು ನೀಡಬೇಕು ಎಂದು ನ್ಯಾಯಾಲಯ ಸಿಬಿಐಗೆ ಸೂಚಿಸಿದೆ.

ಲೆಫ್ಟಿನೆಂಟ್​ ಗವರ್ನರ್​ ವಿ ಕೆ ಸಕ್ಸೇನಾ ಅವರು ಮದ್ಯ ನೀತಿಯಲ್ಲಿ ಭ್ರಷ್ಟಾಚಾರ ನಡೆದಿದೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ ನಂತರ ಹೊಸ ಮದ್ಯ ನೀತಿಯನ್ನು ರದ್ದುಪಡಿಸಲಾಗಿತ್ತು. ಸರ್ಕಾರ ನಿಯಮಗಳನ್ನು ಗಾಳಿಗೆ ತೂರಿ ಮದ್ಯದಂಗಡಿ ಮಾಲೀಕರಿಗೆ ಅನಪೇಕ್ಷಿತ ಲಾಭ ಒದಗಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಮನೀಶ್​ ಸಿಸೋಡಿಯಾ ಅವರು ಮಾಡದಿರುವ ತಪ್ಪಿಗೆ ಆಧಾರರಹಿತ ಆರೋಪಗಳನ್ನು ಒಪ್ಪಿಕೊಳ್ಳುವಂತೆ ಸಿಬಿಐ ಸಿಸೋಡಿಯಾ ಅವರಿಗೆ ಮಾನಸಿಕ ಹಿಂಸೆ ಹಾಗೂ ಕಿರುಕುಳ ನೀಡುತ್ತಿದೆ ಎಂದು ಆಪ್​ ಆರೋಪಿಸಿದೆ.

ಇದನ್ನೂ ಓದಿ: ಮಾ.10ಕ್ಕೆ ಸಿಸೋಡಿಯಾ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್.. ಮತ್ತೆರಡು ದಿನ ಸಿಬಿಐ ವಶಕ್ಕೆ​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.