ನೆಲ್ಲೂರಿನಲ್ಲಿ ರೈಲು ಡಿಕ್ಕಿಯಾಗಿ ಮೂವರು ಸಾವು

author img

By

Published : Jan 22, 2023, 10:05 PM IST

ಆಂಧ್ರದ ನೆಲ್ಲೂರಿನಲ್ಲಿ ರೈಲು ಡಿಕ್ಕಿ

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ರೈಲು ಡಿಕ್ಕಿ- ಮೂವರು ಸಾವು - ಮಹಿಳೆಯನ್ನು ಅಪಘಾತದಿಂದ ತಪ್ಪಿಸಲು ಹೋಗಿ ದುರಂತ

ನೆಲ್ಲೂರು (ಆಂಧ್ರಪ್ರದೇಶ): ರೈಲು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಶನಿವಾರ ರಾತ್ರಿ ನಡೆದಿದೆ. ಗುಡೂರಿನಿಂದ ವಿಜಯವಾಡಕ್ಕೆ ತೆರಳುತ್ತಿದ್ದ ನರಸಾಪುರ ಎಕ್ಸ್‌ಪ್ರೆಸ್‌ ರೈಲು ನಗರದ ಆತ್ಮಕೂರು ಬಸ್‌ ನಿಲ್ದಾಣದ ಬಳಿಯ ರೈಲ್ವೆ ಸೇತುವೆಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮೃತಪಟ್ಟಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಈ ಘಟನೆಯಲ್ಲಿ ಇಬ್ಬರು ಪುರುಷರು ರೈಲು ಹಳಿಗಳ ಮೇಲೆ ಸಾವನ್ನಪ್ಪಿದ್ದರೆ, ಮಹಿಳೆಯೊಬ್ಬರು ಹಳಿಯಿಂದ ಬಿದ್ದು ಸಾವನ್ನಪ್ಪಿದ್ದಾರೆ. ಮೂವರು 45-50 ವರ್ಷ ವಯಸ್ಸಿನವರು ಎಂದು ಅಂದಾಜಿಸಲಾಗಿದೆ. ಮೃತರ ಕೈಯಲ್ಲಿ ಚೀಲಗಳಿದ್ದವು. ಕೆಲವು ಪ್ರತ್ಯಕ್ಷದರ್ಶಿಗಳು ಪುರುಷರು ರೈಲು ಹಳಿಗಳ ಬದಿಯಲ್ಲಿದ್ದಾಗ, ಮಹಿಳೆ ಹಳಿಗಳ ಮೇಲೆ ಇದ್ದರು ಎಂದು ಹೇಳಿದ್ದಾರೆ.

ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಮಾಹಿತಿ ಸಂಗ್ರಹ : ಮಹಿಳೆಯನ್ನು ರೈಲು ಅಪಘಾತದಿಂದ ತಪ್ಪಿಸುವ ಪ್ರಯತ್ನದಲ್ಲಿ ಇಬ್ಬರು ಪುರುಷರು ಅಪಘಾತಕ್ಕೀಡಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಮಾಹಿತಿ ಪಡೆದ ರೈಲ್ವೇ ಮತ್ತು ಸಂತೆಪೇಟೆ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹಗಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಿ ಮೃತರ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

ಪೊಲೀಸರ ಪ್ರಕಾರ, ಮುತ್ಯಾಲಪಾಲೆಂನ ನಿವೃತ್ತ ಉಪನ್ಯಾಸಕ ಪೋಲಯ್ಯ ಅವರು ಪತ್ನಿ ಸುಗುಣಮ್ಮ ಅವರೊಂದಿಗೆ ತಿರುಮಲಕ್ಕೆ ತೆರಳಿ ರೈಲಿನಲ್ಲಿ ನೆಲ್ಲೂರು ತಲುಪಿದ್ದರು. ವಿಜಯವಾಡ ಮೂಲದ ಸರಸ್ವತಿ ರಾವ್ ಎಂಬ ಮತ್ತೊಬ್ಬ ವ್ಯಕ್ತಿ ಪೆದ್ದಾಸುಪತಿಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಪತ್ನಿಯನ್ನು ಭೇಟಿಯಾಗಲು ನೆಲ್ಲೂರಿಗೆ ಬಂದಿದ್ದರು.

ಗುಡೂರಿನಿಂದ ವಿಜಯವಾಡಕ್ಕೆ ಹೋಗುತ್ತಿದ್ದ ನರಸಾಪುರ ಎಕ್ಸ್‌ಪ್ರೆಸ್ ಡಿಕ್ಕಿ: ಈ ಮೂವರು ರೈಲಿನಿಂದ ಇಳಿದು ರೈಲು ನಿಲ್ದಾಣದಿಂದ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದಾಗ ಆತ್ಮಕೂರು ಬಸ್ ನಿಲ್ದಾಣದ ಕೆಳ ಸೇತುವೆಯ ಮೇಲೆ ಗುಡೂರಿನಿಂದ ವಿಜಯವಾಡಕ್ಕೆ ಹೋಗುತ್ತಿದ್ದ ನರಸಾಪುರ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದಿದೆ. ಮಹಿಳೆ ರೈಲು ಹಳಿಯಿಂದ ಬಿದ್ದು ಕೆಳ ಸೇತುವೆಯ ಕೆಳಗೆ ಸಾವನ್ನಪ್ಪಿದರೆ, ಇಬ್ಬರು ಪುರುಷರು ಹಳಿಗಳ ಮೇಲೆ ಸಾವನ್ನಪ್ಪಿದ್ದಾರೆ.

ಒಡಿಶಾದ ಜಾಜ್​ಪುರದಲ್ಲಿ ಹಳಿ ತಪ್ಪಿದ ಗೂಡ್ಸ್​ ರೈಲು.. ಜಾಜ್‌ಪುರದ ಕೊರೈ ನಿಲ್ದಾಣದ ಪ್ರಯಾಣಿಕರಿದ್ದ ಕೊಠಡಿಗೆ ಹಳಿ ತಪ್ಪಿದ ಗೂಡ್ಸ್ ರೈಲಿನ ಬೋಗಿಗಳು ಡಿಕ್ಕಿ ಹೊಡೆದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಈ ದುರ್ಘಟನೆ ನಿನ್ನೆ (ಶನಿವಾರ) ಬೆಳಗ್ಗೆ 6. 45ರ ಸುಮಾರಿಗೆ ಸಂಭವಿಸಿದೆ.

ಜಖಂಗೊಂಡ ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಸಾಧ್ಯತೆ: ಅಧಿಕೃತ ಮೂಲಗಳ ಪ್ರಕಾರ, ಪೂರ್ವ ವಿಭಾಗದ ರೈಲ್ವೆ ವ್ಯಾಪ್ತಿಯ ಕೊರೈ ನಿಲ್ದಾಣದಲ್ಲಿ ಶನಿವಾರ ಮುಂಜಾನೆ ಪ್ರಯಾಣಿಕರು ತಮ್ಮ ಸ್ಥಳಗಳಿಗೆ ತೆರಳಲು ಕಾಯುತ್ತಿದ್ದರು. ಈ ಸಂದರ್ಭದಲ್ಲಿ ಹಳಿ ತಪ್ಪಿದ ಗೂಡ್ಸ್ ರೈಲು ಬೋಗಿಗಳು ಏಕಾಏಕಿ ವಿಶ್ರಾಂತಿ ಕೊಠಡಿಗೆ ನುಗ್ಗಿದೆ. ಅಪಘಾತದಿಂದಾಗಿ ನಿಲ್ದಾಣದ ಕಟ್ಟಡಕ್ಕೂ ಹಾನಿಯಾಗಿದೆ ಎಂಬುದು ತಿಳಿದುಬಂದಿದೆ. ಜಖಂಗೊಂಡ ಅವಶೇಷಗಳ ಅಡಿಯಲ್ಲಿ ಇನ್ನೂ ಅನೇಕರು ಸಿಲುಕಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ. ಮೃತರು ಮತ್ತು ಗಾಯಾಳುಗಳ ಗುರುತುಗಳು ಇನ್ನಷ್ಟೇ ಪತ್ತೆಯಾಗಬೇಕಿದೆ.

ಗಾಯಾಳುಗಳು ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲು: ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು, ಆರ್‌ಪಿಎಫ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಜಾಜ್‌ಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಅತಿ ವೇಗದಲ್ಲಿ ಚಲಿಸುತ್ತಿದ್ದ ರೈಲು, ನಿಲ್ದಾಣದ ಮೂಲಕ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ದುರಂತ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಓದಿ : ಒಡಿಶಾದ ಜಾಜ್‌ಪುರದಲ್ಲಿ ಹಳಿ ತಪ್ಪಿದ ಗೂಡ್ಸ್‌ ರೈಲು: ಇಬ್ಬರು ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.