ETV Bharat / bharat

ಹೈದರಾಬಾದ್‌-ದುಬೈ ವಿಮಾನ ಹೈಜಾಕ್ ಬೆದರಿಕೆ; ಮೂವರು ಪೊಲೀಸ್​ ವಶಕ್ಕೆ

author img

By ETV Bharat Karnataka Team

Published : Oct 9, 2023, 5:37 PM IST

ಹೈದರಾಬಾದ್-ದುಬೈ ನಡುವೆ ಸಂಚರಿಸುವ ವಿಮಾನವನ್ನು ಹೈಜಾಕ್ ಮಾಡುವುದಾಗಿ ಇಮೇಲ್​ ಮೂಲಕ ಬೆದರಿಕೆ ಹಾಕಿರುವ ಸಂಬಂಧ ಪೊಲೀಸರು ಮೂವರು ಪ್ರಯಾಣಿಕರನ್ನು ವಶಕ್ಕೆ ಪಡೆದಿದ್ದಾರೆ.

Threatening Mail claiming to hijack Hyderabad-Dubai flight
Threatening Mail claiming to hijack Hyderabad-Dubai flight

ಹೈದರಾಬಾದ್​: ಇಲ್ಲಿನ ಶಂಶಾಬಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆಯ ಇಮೇಲ್ ಬಂದಿದ್ದು, ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ವಿನೋದ್, ತಿರುಪತಿ ಮತ್ತು ರಾಕೇಶ್ ಆರೋಪಿಗಳು. ಹೈದರಾಬಾದ್-ದುಬೈ ವಿಮಾನವನ್ನು ಹೈಜಾಕ್ ಮಾಡುವುದಾಗಿ ಆರೋಪಿಗಳು ಇಮೇಲ್‌ನಲ್ಲಿ ತಿಳಿಸಿದ್ದರು. ವಿಮಾನ ಇನ್ನೇನು ಟೇಕ್‌ಆಫ್‌ ಆಗಬೇಕೆನ್ನುವಷ್ಟರಲ್ಲಿ ತಕ್ಷಣ ಹಾರಾಟ ಸ್ಥಗಿತಗೊಳಿಸಲಾಗಿತ್ತು.

ನಂತರ ಎಲ್ಲ ಪ್ರಯಾಣಿಕರನ್ನು ತಪಾಸಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಮೂವರು ಪ್ರಯಾಣಿಕರು ಕೃತ್ಯ ಎಸಗಿರುವ ಬಗ್ಗೆ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆರೋಪಿಗಳು ದುಬೈ ಮೂಲಕ ಇರಾಕ್‌ಗೆ ತೆರಳುತ್ತಿದ್ದರು. ಸದ್ಯ ವಿಮಾನ ನಿಲ್ದಾಣದ ಪೊಲೀಸರಿಗೆ ಒಪ್ಪಿಸಲಾಗಿದೆ. ನಿಗದಿಯಾಗಿದ್ದ ವಿಮಾನ ಹಾರಾಟ ರದ್ದುಗೊಳಿಸಲಾಗಿದ್ದು ಪರ್ಯಾಯವಾಗಿ ಮತ್ತೊಂದು ವಿಮಾನದಲ್ಲಿ ಪ್ರಯಾಣಿಕರನ್ನು ದುಬೈಗೆ ಕಳುಹಿಸಲಾಯಿತು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 40 ದಿನಗಳಲ್ಲಿ ಶಂಶಾಬಾದ್ ವಿಮಾನ ನಿಲ್ದಾಣಕ್ಕೆ ಇಂತಹ ಬೆದರಿಕೆ ಇಮೇಲ್ ಬಂದಿರುವುದು ಇದು ಎರಡನೇ ಬಾರಿ. ಆಗಸ್ಟ್ 29 ರಂದು ಕೂಡಾ ದಾರಿಹೋಕರಿಂದ ಇಂಥದೇ ಮೇಲ್‌ ಬಂದಿತ್ತು. ನಿಲ್ದಾಣದಲ್ಲಿ ಬಾಂಬ್ ಇಡಲಾಗಿದೆ ಎಂದು ತಿಳಿಸಲಾಗಿತ್ತು. ಕೂಡಲೇ ಎಚ್ಚೆತ್ತ ವಿಮಾನ ನಿಲ್ದಾಣದ ಸಿಬ್ಬಂದಿ, ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸಿಐಎಸ್​ಎಫ್​ ತಂಡ ಪರಿಶೀಲನೆ ನಡೆಸಿತ್ತು. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದ ಸಹಾಯದಿಂದ ಇಡೀ ವಿಮಾನ ನಿಲ್ದಾಣವನ್ನು ಶೋಧಿಸಲಾಗಿತ್ತು. ಸುಮಾರು ಒಂದು ಗಂಟೆ ಹುಡುಕಾಟ ನಡೆಸಿದರೂ ಯಾವುದೇ ಬಾಂಬ್ ಪತ್ತೆಯಾಗದ ಕಾರಣ ಹುಸಿ ಕರೆ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ನಂತರ, ಏರ್‌ಪೋರ್ಟ್ ಆಪರೇಷನ್ ಕಂಟ್ರೋಲ್ ಸೆಂಟರ್‌ನಲ್ಲಿ ಸ್ವೀಕರಿಸಿದ ಇಮೇಲ್ ಐಡಿಯ ವಿವರಗಳೊಂದಿಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿತ್ತು. ರಾಜೀವ್ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಮೇಲ್ ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ: ಹಿಂಡಲಗಾ ಜೈಲು ಸ್ಫೋಟಿಸುವುದಾಗಿ ಬೆದರಿಕೆ ಕರೆ: ದೂರು ದಾಖಲಿಸಿದ ಬಂಧಿಖಾನೆ ಡಿಐಜಿಪಿ

ಬೆಳಗಾವಿಯಲ್ಲೂ ಇಂಥದೇ ಘಟನೆ: ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹ, ಬೆಂಗಳೂರು ಕಾರಾಗೃಹ ಮತ್ತು ವಸತಿ ಗೃಹ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಎಂದು ಬಂಧಿಖಾನೆ ಇಲಾಖೆಯ ಉತ್ತರ ವಲಯ ಡಿಐಜಿಪಿ ಟಿ.ಪಿ.ಶೇಷ ಅವರು ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಇಂದು ದೂರು ದಾಖಲಿಸಿದ್ದಾರೆ.

ಮೂರು ಪ್ರತ್ಯೇಕ ಮೊಬೈಲ್ ಸಂಖ್ಯೆಗಳಿಂದ ಭಾನುವಾರ (8 ಅಕ್ಟೋಬರ್) ಕರೆ ಮಾಡಿದ ವ್ಯಕ್ತಿ, ಹಿಂಡಲಗಾ ಕೇಂದ್ರ ಕಾರಾಗೃಹದ ಹಿರಿಯ ವೀಕ್ಷಕರಾದ ಜಗದೀಶ ಗಸ್ತಿ, ಎಸ್.ಎಂ.ಗೋಟೆ ಅವರ ಪರಿಚಿತನೆಂದು ಹೇಳಿ, ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಗಲಭೆ ಸೃಷ್ಟಿಸುತ್ತೇನೆ. ನನ್ನ ಮೇಲೆ ಹಲ್ಲೆ ಮಾಡುತ್ತೇನೆಂದು ಬೆದರಿಕೆ ಹಾಕಿದ್ದಾನೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.