ETV Bharat / bharat

'ಭಾರತದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯ': ವಿಶ್ವ ಆರ್ಥಿಕ ವೇದಿಕೆ ಉದ್ದೇಶಿಸಿ ಮೋದಿ ಭಾಷಣ

author img

By

Published : Jan 17, 2022, 9:51 PM IST

ಕೊರೊನಾ ವೈರಸ್ ಕಾರಣ ಸತತ ಎರಡನೇ ಬಾರಿಗೆ ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಅಜೆಂಡಾ ಸಭೆ ವರ್ಚುವಲ್ ಆಗಿ ನಡೆದಿದ್ದು, ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿ ಮಾತನಾಡಿದರು.

PM at World Economic Forum
PM at World Economic Forum

ನವದೆಹಲಿ: ಇಡೀ ಜಗತ್ತಿಗೆ ಭಾರತ ಭರವಸೆಗಳ ಪುಷ್ಪಗುಚ್ಛ ನೀಡಿದ್ದು, ದೇಶದಲ್ಲಿ ಹೂಡಿಕೆ ಮಾಡಲು ಇದು ಸೂಕ್ತ ಸಮಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಸಮಾವೇಶ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು.


ಭಾರತ ಸದ್ಯ ಕೋವಿಡ್​ನ ಮೂರನೇ ಅಲೆ ಎದುರಿಸುತ್ತಿದೆ. ಈ ಸಮಯವನ್ನು ಆರ್ಥಿಕ ಸುಧಾರಣೆಗೋಸ್ಕರ ನಾವು ಬಳಕೆ ಮಾಡಿಕೊಂಡಿದ್ದೇವೆ. ಈ ದೇಶವು ವಿಶ್ವಕ್ಕೆ ಭರವಸೆಯ ಪುಷ್ಪಗುಚ್ಛ ನೀಡಿದ್ದು, ಅದರಲ್ಲಿ ನಮಗೆ ಅಚಲವಾದ ನಂಬಿಕೆ ಇದೆ. ಭಾರತ ಸರಿಯಾದ ದಿಕ್ಕಿನಲ್ಲಿ ಸುಧಾರಣೆಗಳತ್ತ ಸಾಗಿದ್ದು, ಜಾಗತಿಕ ಆರ್ಥಿಕ ತಜ್ಞರು ಕೂಡ ನಮ್ಮ ನಿರ್ಧಾರಗಳನ್ನು ಶ್ಲಾಘಿಸಿದ್ದಾರೆ. ವಿಶ್ವದ ಅನೇಕ ಆಸೆ-ಆಕಾಂಕ್ಷೆಗಳನ್ನು ನಾವು ಪೂರೈಸುತ್ತಿದ್ದೇವೆ ಎಂದರು.

ಕೇವಲ ಒಂದು ವರ್ಷದಲ್ಲಿ ಭಾರತ ಸುಮಾರು 160 ಕೋಟಿ ಕೋವಿಡ್​ ಡೋಸ್ ನೀಡಿದೆ. 21ನೇ ಶತಮಾನದಲ್ಲಿ ತಂತ್ರಜ್ಞಾನದಲ್ಲಿ ನಾವು ಸಾಕಷ್ಟು ಬಲಿಷ್ಠಗೊಂಡಿದ್ದು, ಭಾರತದ ಅನೇಕ ಪ್ರತಿಭೆಗಳು ಜಗತ್ತಿನಾದ್ಯಂತ ಮಿಂಚುತ್ತಿದ್ದಾರೆ.

ಭಾರತದಲ್ಲಿ ಆರ್ಥಿಕ ಬೆಳವಣಿಗೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸಂಪೂರ್ಣವಾಗಿ ಜಾಗರೂಕತೆ ವಹಿಸಿದ್ದು, ಇಂತಹ ಸಂದರ್ಭದಲ್ಲೂ ಕೋವಿಡ್​​ ಅಲೆ ಜೊತೆ ಹೋರಾಟ ಮುಂದುವರೆದಿದೆ. ಕೋವಿಡ್​ ಸಂದರ್ಭದಲ್ಲಿ ಅನೇಕ ದೇಶಗಳಲ್ಲಿ ಔಷಧಿ ಕಳುಹಿಸುವ ಮೂಲಕ ಲಕ್ಷಾಂತರ ಜನರ ಜೀವ ಉಳಿಸಿದ್ದೇವೆ ಎಂದು ಪ್ರಧಾನಿ ವಿವರಿಸಿದರು.

ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಐಟಿ ವಲಯ ಹಗಲಿರುಳು ಕೆಲಸ ಮಾಡಿದ್ದು, ವಿಶ್ವದಲ್ಲೇ ಹೊಸ ದಾಖಲೆ ನಿರ್ಮಾಣ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಕೆ ಮಾಡಿದಾಗ ಈಗಿನ ಡಿಜಿಟಲ್​​ ವ್ಯವಸ್ಥೆಯಲ್ಲಿ ನಾವು ಮಹತ್ವದ ಸಾಧನೆ ಮಾಡಿದ್ದೇವೆ. ಭಾರತೀಯರು ಹೊಂದಿರುವ ಉದ್ಯಮಶೀಲತಾ ಮನೋಭಾವ, ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದಾಗಿ ಇದು ಸಾಧ್ಯವಾಗಿದೆ ಎಂದರು.

2014ರಲ್ಲಿ ಭಾರತದಲ್ಲಿ ಕೇವಲ 100 ಸ್ಟಾರ್ಟ್​ಅಪ್​​ಗಳಿದ್ದವು. ಆದರೆ, ಇದೀಗ ಅವುಗಳ ಸಂಖ್ಯೆ 60 ಸಾವಿರ ದಾಟಿದೆ. ಮುಂದಿನ 25 ವರ್ಷಗಳಲ್ಲಿ ಹೆಚ್ಚಿನ ಬೆಳವಣಿಗೆ ಸಾಧಿಸಲಿದ್ದು, ಆರ್ಥಿಕವಾಗಿ ಮತ್ತಷ್ಟು ಸಬಲೀಕರಣವಾಗಲಿದೆ ಎಂಬ ಆಶಾಭಾವ ವ್ಯಕ್ತಪಡಿಸಿದರು.

ದಾವೋಸ್ ಸಭೆಯಲ್ಲಿ ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುವಾ ವಾನ್‌ಡರ್ ಲೇಯನ್, ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ಇಂಡೋನೇಷಿಯಾ ಅಧ್ಯಕ್ಷ ಜೋಕೋ ವಿಡೋಡೋ, ಇಸ್ರೇಲಿ ಪ್ರಧಾನಿ ನಫ್ತಾಲಿ ಬೆನೆಟ್, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸೇರಿದಂತೆ ಹಲವು ವಿಶ್ವ ನಾಯಕರು ಪಾಲ್ಗೊಂಡು ಮಾತನಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.