ETV Bharat / bharat

ಬಾಂಬ್​ನಂತೆ ಸಿಡಿದ ಜಾರ್ಜಿಂಗ್​ ಇಟ್ಟ ಮೊಬೈಲ್ ಫೋನ್​: ಮನೆಗೆ ಭಾರಿ ಹಾನಿ, ಮೂವರಿಗೆ ತೀವ್ರ ಗಾಯ

author img

By ETV Bharat Karnataka Team

Published : Sep 27, 2023, 10:40 PM IST

ಚಾರ್ಜಿಂಗ್​ ಇಟ್ಟ ವೇಳೆ ಮೊಬೈಲ್​ ಸಿಡಿದು ಮನೆಗೆ ಭಾರಿ ಹಾನಿ ಉಂಟಾಗಿದೆ. ಅಲ್ಲದೇ, ಘಟನೆಯಲ್ಲಿ ಮೂವರು ತೀವ್ರ ಗಾಯಕ್ಕೆ ತುತ್ತಾಗಿದ್ದಾರೆ.

ಮೊಬೈಲ್​ ಸಿಡಿದು ಮನೆಗೆ ಭಾರಿ ಹಾನಿ
ಮೊಬೈಲ್​ ಸಿಡಿದು ಮನೆಗೆ ಭಾರಿ ಹಾನಿ

ನಾಸಿಕ್​ (ಮಹಾರಾಷ್ಟ್ರ) : ಮೊಬೈಲ್​ಗಳು ಸ್ಫೋಟಗೊಳ್ಳುತ್ತಿರುವ ವರದಿಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಮಹಾರಾಷ್ಟ್ರದ ನಾಸಿಕ್​ನಲ್ಲೂ ಇಂಥದ್ದೊಂದು ಸುದ್ದಿಯಾಗಿದೆ. ಜಾರ್ಜ್​ ಮಾಡುವ ವೇಳೆ ಮೊಬೈಲ್​ ಬಾಂಬ್​ನಂತೆ ಸಿಡಿದು ಇಡೀ ಮನೆಯನ್ನು ಧ್ವಂಸ ಮಾಡಿದೆ. ಮನೆಯಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಿಟಕಿ, ವಸ್ತುಗಳು ಸುಟ್ಟು ಭಸ್ಮವಾಗಿವೆ. ಅಲ್ಲದೇ, ಸುತ್ತಮುತ್ತ ಮನೆಗಳಿಗೂ ಹಾನಿಯಾಗಿದೆ.

ಮೊಬೈಲ್ ಫೋನ್ ಸ್ಫೋಟದಿಂದಾಗಿ ಇಷ್ಟು ದೊಡ್ಡ ಪ್ರಮಾಣದ ಹಾನಿ ಸಂಭವಿಸಿರುವುದನ್ನು ಕಂಡು ಸ್ಥಳೀಯರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮೂವರ ಪೈಕಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಚಾರ್ಜಿಂಗ್​ ವೇಳೆ ಸ್ಫೋಟ: ನಾಸಿಕ್‌ನ ಪ್ರತಾಪನಗರದ ತುಷಾರ್ ಜಗತಾಪ್, ಶೋಭಾ ಜಗತಾಪ್ ಮತ್ತು ಬಾಲಕೃಷ್ಣ ಸುತಾರ್ ಗಾಯಗೊಂಡವರು. ಬುಧವಾರ ಮೊಬೈಲ್ ಅನ್ನು ಚಾರ್ಜಿಂಗ್​ಗೆ ಹಾಕಿದ್ದರು. ಈ ವೇಳೆ ಮೊಬೈಲ್​ ದೊಡ್ಡ ಸ್ಫೋಟದೊಂದಿಗೆ ಸಿಡಿದಿದೆ. ಸ್ಫೋಟದ ತೀವ್ರತೆಗೆ ಇಡೀ ಮನೆಯೇ ಹಾನಿಗೀಡಾಗಿದೆ. ಕಿಟಕಿಗಳು ಒಡೆದು ಹೋಗಿವೆ. ಮನೆಗಳಲ್ಲಿದ್ದ ವಸ್ತುಗಳಿಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾಗಿವೆ.

ಜೊತೆಗೆ ನೆರೆಹೊರೆಯ ಮನೆಗಳಿಗೂ ಹಾನಿ ಉಂಟಾಗಿದೆ. ಮನೆಯಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ವಿಷಯ ತಿಳಿದ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಜೇಬಲ್ಲಿದ್ದ ಕೀಪ್ಯಾಡ್ ಫೋನ್ ಸ್ಫೋಟ; ಇತ್ತೀಚೆಗಷ್ಟೇ ಕೇರಳದ ತ್ರಿಶೂರ್​ನಲ್ಲಿ ಇಲಿಯಾಸ್ ಎಂಬ 76 ವರ್ಷದ ವ್ಯಕ್ತಿಯೊಬ್ಬನ ಜೇಬಿನಲ್ಲಿದ್ದ ಕೀ ಪ್ಯಾಡ್ ಫೋನ್ ಸ್ಫೋಟಗೊಂಡಿತ್ತು. ಇದರಿಂದ ಅವರ ಅಂಗಿಗೆ ಬೆಂಕಿ ಹೊತ್ತಿಕೊಂಡಿತ್ತು. ತಕ್ಷಣ ಎಚ್ಚೆತ್ತ ವ್ಯಕ್ತಿ ಜೇಬಿನಿಂದ ಫೋನ್ ತೆಗೆದು ಕೆಳಗೆ ಎಸೆದಿದ್ದರು. ಇದರಿಂದ ದೊಡ್ಡ ಹಾನಿ ತಪ್ಪಿತ್ತು. ಹೋಟೆಲ್‌ನಲ್ಲಿ ಇಲಿಯಾಸ್​ ಟೀ ಕುಡಿಯುತ್ತಾ ಕುಳಿತಿದ್ದಾಗ ಈ ಘಟನೆ ನಡೆದಿತ್ತು. ಇದರ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಸಿಡಿದ ಮೊಬೈಲ್​ ಕಂಪನಿ ವಿರುದ್ಧ ದೂರು: ಇನ್ನೊಂದು ಪ್ರಕರಣದಲ್ಲಿ ಕೇರಳದ ಕೋಯಿಕ್ಕೋಡ್‌ನಲ್ಲಿ ಫಾರಿಸ್ ರೆಹಮಾನ್ ಎಂಬಾತ ಮೊಬೈಲ್​ ಸ್ಫೋಟಗೊಂಡಿದೆ ಎಂದು ಗ್ರಾಹಕರ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ. ಜೀನ್ಸ್​ ಪ್ಯಾಂಟ್​ನಲ್ಲಿ ಮೊಬೈಲ್​ ಇಟ್ಟುಕೊಂಡಿದ್ದಾಗ, ಅದು ಸಿಡಿದಿದೆ. ಇದರಿಂದ ಪ್ಯಾಂಟ್​ಗೆ ಬೆಂಕಿ ತಗುಲಿದೆ. ಮೊಬೈಲ್ ಸಂಪೂರ್ಣ ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿತ್ತು. ಮೊಬೈಲ್​ ಕಂಪನಿಯ ವಿರುದ್ಧ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದ.

ಇದನ್ನೂ ಓದಿ: ಮೊಹಾಲಿ ಕಾರ್ಖಾನೆಯಲ್ಲಿ ರಾಸಾಯನಿಕ ಸ್ಫೋಟದಿಂದ ಭೀಕರ ಅಗ್ನಿ ಅವಘಡ.. 8 ಮಂದಿಗೆ ತೀವ್ರ ಸುಟ್ಟ ಗಾಯ, ಇಬ್ಬರ ಸ್ಥಿತಿ ಗಂಭೀರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.