ETV Bharat / bharat

ರಾಜ್ಯಪಾಲರು ನಾಟಕವಾಡುತ್ತಿದ್ದಾರೆ ಎಂದ ಸ್ಟಾಲಿನ್: ವಿಶೇಷ ಅಧಿವೇಶನದಲ್ಲಿ 10 ಮಸೂದೆಗಳ ಮರು ಅಂಗೀಕಾರ

author img

By ETV Bharat Karnataka Team

Published : Nov 18, 2023, 8:06 PM IST

TN Assembly Special Aession: ತಮಿಳುನಾಡು ವಿಶೇಷ ಅಧಿವೇಶನದಲ್ಲಿ ಇಂದು ರಾಜ್ಯಪಾಲರು ವಾಪಸ್​ ಕಳುಹಿಸಿದ 10 ಮಸೂದೆಗಳನ್ನು ಮರು ಅಂಗೀಕರಿಸಲಾಗಿದೆ.

Tamil Nadu assembly re-adopts bills returned by Guv Ravi
ರಾಜ್ಯಪಾಲರು ನಾಟಕವಾಡುತ್ತಿದ್ದಾರೆ ಎಂದ ಸ್ಟಾಲಿನ್: ವಿಶೇಷ ಅಧಿವೇಶನದಲ್ಲಿ 10 ಮಸೂದೆಗಳ ಮರು ಅಂಗೀಕಾರ

ಚೆನ್ನೈ (ತಮಿಳುನಾಡು): ಮಸೂದೆಗಳಿಗೆ ಅನುಮೋದನೆ ನೀಡುವ ವಿಷಯದಲ್ಲಿ ರಾಜ್ಯಪಾಲ ಆರ್.ಎನ್.ರವಿ ಅವರು ನಾಟಕವಾಡುತ್ತಿದ್ದಾರೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಟೀಕಿಸಿದ್ದಾರೆ. ರಾಜ್ಯಪಾಲರು ವಾಪಸ್​ ಕಳುಹಿಸಿದ ಮಸೂದೆಗಳನ್ನು ಮರು ಅಂಗೀಕರಿಸುವ ನಿಟ್ಟಿನಲ್ಲಿ ಇಂದು ನಡೆದ ವಿಶೇಷ ಅಧಿವೇಶನದಲ್ಲಿ ಈ ಹೇಳಿಕೆ ನೀಡಿದ್ದಾರೆ.

ತಮಿಳುನಾಡಿನಲ್ಲಿ ಸರ್ಕಾರ ಹಾಗೂ ರಾಜ್ಯಪಾಲರ ನಡುವೆ ಸಂಘರ್ಷ ಏರ್ಪಟ್ಟಿದೆ. ಇತ್ತೀಚೆಗೆ ವಿಧೇಯಕಗಳಿಗೆ ಒಪ್ಪಿಗೆ ನೀಡುವಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ರಾಜ್ಯಪಾಲ ರವಿ ಅವರಿಗೆ ಸುಪ್ರೀಂ ಕೋರ್ಟ್​ ಚಾಟಿ ಬೀಸಿದೆ. ಇದರ ನಡುವೆ ಮುಖ್ಯಮಂತ್ರಿ ಸ್ಟಾಲಿನ್ ಶನಿವಾರ ವಿಶೇಷ ಅಧಿವೇಶನ ಕರೆದು ರಾಜ್ಯಪಾಲರು ಹಿಂದಿರುಗಿಸಿದ 10 ಮಸೂದೆಗಳನ್ನು ಮರು ಅಂಗೀಕರಿಸಿದರು.

ಇಂದು ಮಸೂದೆಗಳ ಮರುಪರಿಶೀಲನೆಗೆ ತೆಗೆದುಕೊಳ್ಳುವ ನಿರ್ಣಯವನ್ನು ಮಂಡಿಸಿದ ನಂತರ ಕಾನೂನು, ಕೃಷಿ ಮತ್ತು ಉನ್ನತ ಶಿಕ್ಷಣ ಸೇರಿದಂತೆ ವಿವಿಧ ಇಲಾಖೆಗಳ ಮಸೂದೆಗಳನ್ನು ಸದನವು ಮರು ಅಂಗೀಕರಿಸಿತು. ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಿದ ಸಿಎಂ ಸ್ಟಾಲಿನ್, ರಾಜ್ಯಪಾಲ ಆರ್.ಎನ್.ರವಿ ಅವರು ಸುಪ್ರೀಂ ಕೋರ್ಟ್​ ಚಾಟಿ ಬೀಸಿದ ನಂತರ ಕೆಲವು ಕಡತಗಳಿಗೆ ಅನುಮತಿ ನೀಡುವ ಮೂಲಕ ನಾಟಕವಾಡುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ: ಸುಪ್ರೀಂಕೋರ್ಟ್​ ಚಾಟಿ: ಬಾಕಿ ಇಟ್ಟುಕೊಂಡಿದ್ದ 10 ಮಸೂದೆ ವಾಪಸ್​ ಕಳುಹಿಸಿದ ತಮಿಳುನಾಡು ರಾಜ್ಯಪಾಲ

ರಾಜ್ಯಪಾಲರು ಮಸೂದೆಗಳಿಗೆ ಒಪ್ಪಿಗೆ ನೀಡದಿರುವುದು ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ. ಕೇಂದ್ರ ಸರ್ಕಾರದೊಂದಿಗಿನ ಸಾಮರಸ್ಯದ ಸಂಬಂಧವನ್ನು ಬಳಸಿಕೊಂಡು ರಾಜ್ಯಪಾಲರು ಯೋಜನೆಗಳನ್ನು ಸುಗಮಗೊಳಿಸಲು ಪ್ರಯತ್ನಿಸಬಹುದು. ಆದರೆ, ರಾಜ್ಯಪಾಲರು ಹಾಗೆ ಮಾಡುತ್ತಿಲ್ಲ ಎಂದು ಸ್ಟಾಲಿನ್ ಆರೋಪಿಸಿದರು.

ರಾಜ್ಯಪಾಲರ ಹುದ್ದೆಯು ತೆಗೆದುಹಾಕಬೇಕಾದ ಹುದ್ದೆಯಾಗಿದೆ. ಆದರೆ, ಪ್ರಜಾಪ್ರಭುತ್ವ ಇರುವವರೆಗೆ ಆ ಹುದ್ದೆಗೆ ಅಧೀನವಾಗಿರುವುದು ಸಂಪ್ರದಾಯ. ತಮಿಳುನಾಡು ಶಾಸಕಾಂಗವು ಶಾಸಕಾಂಗವು ಹೇಗೆ ಕಾರ್ಯನಿರ್ವಹಿಸಬೇಕು ಎಂಬ ನಿಯಮಾವಳಿಗಳನ್ನು ರಚಿಸಿದೆ. ಇಂಗ್ಲೆಂಡ್​ನಿಂದ ತಮಿಳುನಾಡು ವಿಧಾನಸಭೆಗೆ ಭೇಟಿ ನೀಡಿದ್ದು ಇದೆ. ತಮಿಳುನಾಡು ದೇಶದ ಎಲ್ಲ ರಾಜ್ಯಗಳ ರಾಜಧಾನಿಯಾಗಿದೆ. ಇಂದು ನಾವು ಕಾಣುತ್ತಿರುವ ಬೆಳವಣಿಗೆಗೆ ನಮ್ಮ ನಾಯಕರು ರೂಪಿಸಿದ ಶಾಸಕಾಂಗ ಕಾರ್ಯಕ್ರಮಗಳೇ ಕಾರಣ ಎಂದರು.

ಮತ್ತೊಂದೆಡೆ, ಮಸೂದೆಗಳನ್ನು ಮರು ಅಂಗೀಕರಿಸುವ ನಿರ್ಣಯ ವಿರೋಧಿಸಿ ಬಿಜೆಪಿ ಶಾಸಕರು, ಸಿಎಂ ಸ್ಟಾಲಿನ್ ಭಾಷಣದ ವೇಳೆಯೇ ಸಭಾತ್ಯಾಗ ಮಾಡಿದರು. ರಾಜ್ಯಪಾಲ ರವಿ ಅವರು ರಾಜ್ಯ ಶಾಸಕಾಂಗವು ಅಂಗೀಕರಿಸಿದ್ದ ವಿಧೇಯಕಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಅಕ್ಟೋಬರ್‌ನಲ್ಲಿ ರಾಜ್ಯ ಸರ್ಕಾರವು ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿನ ವಿಳಂಬದ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.

ಇದನ್ನೂ ಓದಿ: ‘ಬೆಂಕಿಯೊಂದಿಗೆ ಆಟವಾಡುತ್ತಿದ್ದೀರ’.. ಮಸೂದೆಗಳನ್ನು ಮುಂದೂಡಲಾಗುವುದಿಲ್ಲ ಎಂದ ಸುಪ್ರೀಂ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.