ETV Bharat / bharat

ಗೂಢಚರ್ಯೆ ಬಗ್ಗೆ ಮಾಧ್ಯಮಗಳ ವರದಿ ನಿಜವಾದರೆ ಇದೊಂದು ಗಂಭೀರ ಪ್ರಕರಣ: ಸುಪ್ರೀಂಕೋರ್ಟ್​​

author img

By

Published : Aug 5, 2021, 12:44 PM IST

ರಾಕ್ಷಸ ತಂತ್ರಜ್ಞಾನವಾದ ಪೆಗಾಸಸ್ ನಮ್ಮ ಅರಿವಿಗೆ ಬರದಂತೆ ನಮ್ಮ ಜೀವನದೊಳಗೆ ಪ್ರವೇಶ ಪಡೆದಿದೆ. ಸಾರ್ವಜನಿಕರ ಖಾಸಗಿತನ, ಗೌರವ ಮತ್ತು ಮೌಲ್ಯಗಳಿಗೆ ಪೆಗಾಸಸ್ ಧಕ್ಕೆ ತಂದಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಸುಪ್ರೀಂಕೋರ್ಟ್‌ನಲ್ಲಿ ವಾದಿಸಿದರು.

Supreme Court On Pegasus Snooping row
Pegasus Row..ಮಾಧ್ಯಮಗಳ ವರದಿ ನಿಜವಾದರೆ ಇದೊಂದು ಗಂಭೀರ ಪ್ರಕರಣ: ಸುಪ್ರೀಂಕೋರ್ಟ್​​

ಹೊಸದಿಲ್ಲಿ: ಪೆಗಾಸಸ್ ಸ್ಪೈವೇರ್‌ ಗೂಢಚರ್ಯೆ ಗಂಭೀರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳವನ್ನು(SIT) ರಚಿಸಬೇಕೆಂದು ಒತ್ತಾಯಿಸಿ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್​ ನಡೆಸುತ್ತಿದ್ದು, ಒಂದು ವೇಳೆ ಮಾಧ್ಯಮಗಳ ವರದಿ ನಿಜವಾದರೆ ಇದೊಂದು ಗಂಭೀರವಾದ ವಿಚಾರ ಎಂದು ಅಭಿಪ್ರಾಯಪಟ್ಟಿದೆ.

ಸುಪ್ರೀಂಕೋರ್ಟ್​​​ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಮತ್ತು ನ್ಯಾ.ಸೂರ್ಯಕಾಂತ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠವು ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದು, ಭಾರತದ ಎಡಿಟರ್ಸ್ ಗಿಲ್ಡ್ ಸೇರಿ ಸುಮಾರು 9 ಅರ್ಜಿಗಳ ವಿಚಾರಣೆಯನ್ನು ಕೋರ್ಟ್​ ನಡೆಸುತ್ತಿದೆ.

ಈ ವೇಳೆ ಅರ್ಜಿದಾರರ ಪರವಾಗಿ ಮಾತನಾಡಿದ ಹಿರಿಯ ವಕೀಲ ಕಪಿಲ್ ಸಿಬಲ್, ರಾಕ್ಷಸ ತಂತ್ರಜ್ಞಾನವಾದ ಪೆಗಾಸಸ್ ನಮ್ಮ ಅರಿವಿಗೆ ಬರದಂತೆ ನಮ್ಮ ಜೀವನದೊಳಗೆ ಪ್ರವೇಶ ಪಡೆದಿದೆ. ಸಾರ್ವಜನಿಕರ ಖಾಸಗಿತನ, ಗೌರವ ಮತ್ತು ಮೌಲ್ಯಗಳಿಗೆ ಪೆಗಾಸಸ್ ಧಕ್ಕೆ ತಂದಿದೆ ಎಂದು ವಾದಿಸಿದರು.

ಪೆಗಾಸಸ್ ತಂತ್ರಜ್ಞಾನವನ್ನು ಸರ್ಕಾರಗಳಿಗೆ ಮಾತ್ರ ಮಾರಲಾಗುತ್ತದೆ. ಖಾಸಗಿ ಸಂಸ್ಥೆಗಳು ಇದನ್ನು ಹೊಂದಲು ಅವಕಾಶವಿಲ್ಲ ಎಂದು ಸಿಬಲ್ ಈ ವೇಳೆ ಉಲ್ಲೇಖಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಅವರು, ಮಾಧ್ಯಮಗಳ ವರದಿ ನಿಜವಾದರೆ ಇದೊಂದು ಗಂಭೀರ ವಿಚಾರ. 2019ರಲ್ಲೇ ಪೆಗಾಸಸ್ ವಿರುದ್ಧ ಗೂಢಚರ್ಯೆ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಯಾವುದಾದರೂ ಪ್ರಯತ್ನ ನಡೆದಿದೆಯೇ ಎಂಬುದರ ಬಗ್ಗೆ ನನಗೆ ಹೆಚ್ಚಾಗಿ ಗೊತ್ತಿಲ್ಲ ಎಂದಿದ್ದಾರೆ.

ಇದರ ಜೊತೆಗೆ ಕೆಲವರ ಫೋನ್​​ಗಳು ಟ್ಯಾಪ್​ ಆಗಿರುವ ಆತಂಕಕ್ಕೆ ಒಳಗಾಗಿದ್ದಾರೆ. ಇದಕ್ಕಾಗಿ ದೂರುಗಳು ದಾಖಲಿಸಲು ಟೆಲಿಗ್ರಾಫ್ ಕಾಯ್ದೆ ಇದೆ. ಈ ಮೂಲಕ ಜನರು ದೂರು ದಾಖಲಿಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಎನ್​.ವಿ.ರಮಣ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: Pegasus Snooping row: ಸುಪ್ರೀಂಕೋರ್ಟ್​ನಲ್ಲಿ ಇಂದು ಅರ್ಜಿಗಳ ವಿಚಾರಣೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.