ETV Bharat / bharat

ಟೆಂಪೋ- ಕಾರು ಭೀಕರ ರಸ್ತೆ ಅಪಘಾತ: ಪತಿ, ಪತ್ನಿ, ಮಗ ಸೇರಿ 6 ಮಂದಿ ಸಾವು, ಹಲವರಿಗೆ ಗಾಯ

author img

By

Published : Jul 4, 2023, 10:03 AM IST

Updated : Jul 4, 2023, 12:54 PM IST

ಆಗ್ರಾದಲ್ಲಿ ಸೋಮವಾರ ತಡರಾತ್ರಿ ಟೆಂಪೋ ಮತ್ತು ಕಾರಿನ ನಡುವೆ ಅಪಘಾತ ಸಂಭವಿಸಿದ್ದು 6 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

Agra accident
Agra accident

ಆಗ್ರಾ (ಉತ್ತರ ಪ್ರದೇಶ): ಆಗ್ರಾ ಜಿಲ್ಲೆಯ ಖೇರಗಢ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಸೋಮವಾರ ತಡರಾತ್ರಿ ಸೈಯಾನ್​- ಖೇರಗಢ ರಸ್ತೆಯಲ್ಲಿ ಟೆಂಪೋ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತು. ಟೆಂಪೋದಲ್ಲಿದ್ದ 6 ಮಂದಿ ಸಾವನ್ನಪ್ಪಿದ್ದು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಕಾರು ಚಾಲಕ ಪರಾರಿಯಾಗಿದ್ದು ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ 11.30ರ ಸುಮಾರಿಗೆ ಹತ್ತು ಮಂದಿ ಇದ್ದ ಟೆಂಪೋ ಸೈಯಾನ್​ನಿಂದ ಖೇರಗಡಕ್ಕೆ ಹೋಗುತ್ತಿತ್ತು. ಈ ವೇಳೆ ಎದುರಿನಿಂದ ಬಂದ ಕಾರು ಟೆಂಪೋಗೆ ಡಿಕ್ಕಿ ಹೊಡೆದಿದೆ. ಖೇರಗಢ ಪೊಲೀಸ್ ಠಾಣೆ ವ್ಯಾಪ್ತಿಯ ನಾಗಲಾ ಉದಯ ಗ್ರಾಮದ ನಿವಾಸಿ ಟೆಂಪೋ ಸವಾರ ಜಯಪ್ರಕಾಶ್, ಪತ್ನಿ ಬ್ರಜೇಶ್ದೇವಿ, 12 ವರ್ಷದ ಮಗ ಸುಮಿತ್ ಹಾಗು ವೃದ್ಧ ಬ್ರಜ್ ಮೋಹನ್ ಶರ್ಮಾ, ಟೆಂಪೋ ಚಾಲಕ ಭೋಲಾ ನಿವಾಸಿ ಅಯೆಲಾ ಮತ್ತು ಖೇರಗಢದ ಮನೋಜ್ (30) ಎಂಬವರು ಸಾವನ್ನಪ್ಪಿದ್ದಾರೆ. ಇನ್ನುಳಿದ ನಾಲ್ವರು ಗಾಯಾಳುಗಳಿಗೆ ಎಸ್‌.ಎನ್. ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖೇರಗಢ ಎಸಿಪಿ ಮಹೇಶ್ ಕುಮಾರ್ ಮಾಹಿತಿ ನೀಡಿದರು.

ಕಾರು ಚಾಲಕ ಬಂಟಿ ಹಾಗು ಆತನ ಗೆಳೆಯರಾದ ಪಿಂಕು ಮತ್ತು ಬನಿಯಾ ಎಂಬವರೊಂದಿಗೆ ಖೇರಘರ್‌ನಲ್ಲಿ ಸಂತೋಷ ಕೂಟ ಆಯೋಜಿಸಿದ್ದನಂತೆ. ಇದಾದ ನಂತರ ಬಂಟಿ ಇಬ್ಬರನ್ನೂ ಹಳ್ಳಿಯಲ್ಲಿ ಬಿಟ್ಟು ಕಾರಿನಲ್ಲಿ ಮನೆಗೆ ಬರುತ್ತಿದ್ದ. ಚಾಲಕ ಬಂಟಿ ಪಾನಮತ್ತನಾದ್ದರಿಂದ ಘಟನೆ ಸಂಭವಿಸಿದೆ. ಪಿಂಕು ಮತ್ತು ಬನಿಯಾ ಎಂಬಿಬ್ಬರನ್ನು ಬಂಧಿಸಲಾಗಿದೆ. ಕಾರು ಚಾಲಕನಿಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Khalistan radicals: ಅಮೆರಿಕದ ಭಾರತೀಯ ಕಾನ್ಸುಲೇಟ್‌ ಕಚೇರಿಗೆ ಬೆಂಕಿ ಹಚ್ಚಿದ ಖಲಿಸ್ತಾನಿ ಉಗ್ರರು: ವಿಡಿಯೋ

ಭಕ್ತರಿದ್ದ ವ್ಯಾನ್​ಗೆ ಎಸ್​ಯುವಿ ಕಾರು ಡಿಕ್ಕಿ: ಜುಲೈ 2ರಂದು ಲಖನೌ-ಆಗ್ರಾ ಎಕ್ಸ್‌ಪ್ರೆಸ್‌ವೇಯಲ್ಲಿ ಖಾಡೆಚಾ ಗ್ರಾಮದ ಮುಂಭಾಗ ಭಕ್ತರಿದ್ದ ವ್ಯಾನ್‌ಗೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದಿದೆ. ವ್ಯಾನ್‌ನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಭಕ್ತ ಸಾವನ್ನಪ್ಪಿದ್ದು, ಸುಮಾರು 8 ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಹರಿಶಂಕರ್, ಕೌಶಲ್, ಚಾಲಕ ನೀರಜ್ ರಾಥೋಡ್, ದೀಪಕ್ ಮೌರ್ಯ, ಹಿಮಾಂಶು, ವಿನೀತ್ ಕುಮಾರ್, ಸೋನು ಪುತ್ರ ಗೋವರ್ಧನ್, ಸತ್ಯೇಂದ್ರ ಗಾಯಾಳುಗಳಾಗಿದ್ದರು. ರಿಂಕು (28)ಎನ್ನುವಾಕೆ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾಳೆ. ಮಕಾನ್‌ಪುರ ಹೊರಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಬಿಲ್ಹೌರ್ ಸಿಎಚ್‌ಸಿಗೆ ದಾಖಲಿಸಿದ್ದರು.

ಇದನ್ನೂ ಓದಿ: Balasore train tragedy: ಬಾಲಸೋರ್‌ ತ್ರಿವಳಿ ರೈಲು ದುರಂತಕ್ಕೆ 'ಮಾನವ ಲೋಪ'ವೇ ಕಾರಣ!- ತನಿಖಾ ವರದಿ

Last Updated : Jul 4, 2023, 12:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.