ETV Bharat / bharat

ಅಜಿತ್​​ಗೆ ನನ್ನ ಬೆಂಬಲ ಇದೇ ಎನ್ನುವವರ ತಲೆಕೆಟ್ಟಿದೆ.. ಶರದ್​ ಪವಾರ್​ ಗರಂ.. ಬಿಜೆಪಿ ವಿರುದ್ಧ ವಾಗ್ದಾಳಿ!

author img

By

Published : Jul 3, 2023, 4:43 PM IST

ಸಹೋದರನ ಪುತ್ರ ಅಜಿತ್​ ಪವಾರ್​ ಪಕ್ಷದ ವಿರುದ್ಧ ಬಂಡಾಯ ಎದ್ದು, ಬಿಜೆಪಿ ಜತೆ ಕೈಜೋಡಿಸಿರುವುದು ಶರದ್​ ಪವಾರ್​ ಅವರನ್ನು ಕೆರಳಿಸಿದೆ. ಈ ನಡುವೆ ಅವರು ರಾಜ್ಯ ಪ್ರವಾಸ ಕೈಗೊಂಡಿದ್ದಾರೆ. ಬಿಜೆಪಿ ವಿರುದ್ಧ ಅವರು ಇದೇ ವೇಳೆ ವಾಗ್ದಾಳಿ ಕೂಡಾ ನಡೆಸಿದ್ದಾರೆ.

sharad-pawar-on-ajit-pawar-and-ncp-split
ಅಜಿತ್​​ಗೆ ನನ್ನ ಬೆಂಬಲ ಇದೇ ಎನ್ನುವವರ ತಲೆಕೆಟ್ಟಿದೆ.. ಶರದ್​ ಪವಾರ್​ ಗರಂ.. ಬಿಜೆಪಿ ವಿರುದ್ಧ ವಾಗ್ದಾಳಿ!

ಸತಾರಾ (ಮಹಾರಾಷ್ಟ್ರ): ಅಜಿತ್ ಪವಾರ್ ಅವರ ಬಂಡಾಯಕ್ಕೆ ತಮ್ಮ ಆಶೀರ್ವಾದ ಇದೆ ಎಂಬ ಊಹಾಪೋಹಗಳನ್ನು ಎನ್​​ಸಿಪಿ ವರಿಷ್ಠ ಶರದ್​ ಪವಾರ್​ ತಳ್ಳಿ ಹಾಕಿದ್ದಾರೆ. ಸೋಮವಾರ ಈ ಬಗ್ಗೆ ಸ್ಪಷ್ಟನೆ ಕೊಟ್ಟಿರುವ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಪಕ್ಷಾಂತರ ಮಾಡಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿದ ಶಾಸಕರ ವಿರುದ್ಧ ಪಕ್ಷ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.

ಸತಾರಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಎನ್‌ಸಿಪಿ ಬಲಪಡಿಸಲು ಮತ್ತು ಪಕ್ಷದ ಕಾರ್ಯಕರ್ತರ ವಿಶ್ವಾಸ ಹೆಚ್ಚಿಸಲು ರಾಜ್ಯಾದ್ಯಂತ ಪ್ರವಾಸ ಪ್ರಾರಂಭಿಸಿದ್ದಾರೆ. ಕೆಲವು ನಾಯಕರ ಕಾರ್ಯಗಳಿಂದ ನಾನು ವಿಚಲಿತನಾಗಿಲ್ಲ. ನಿನ್ನೆ ಶಿಂದೆ ಸಂಪುಟದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವ ಹಕ್ಕು ಪಕ್ಷದ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಅವರಿಗೆ ಇದೆ ಎಂದು ಪವಾರ್ ಇದೇ ವೇಳೆ, ದೃಢಪಡಿಸಿದ್ದಾರೆ.

ಅಜಿತ್​ ಪವಾರ್​ಗೆ ನನ್ನ ಬೆಂಬಲ ಇದೆ ಎನ್ನುವುದು ನೀಚತನ: ಭಾನುವಾರದ ಅಜಿತ್ ಪವಾರ್ ಅವರ ಬಂಡಾಯಕ್ಕೆ ಅವರ ಆಶೀರ್ವಾದವಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಎನ್‌ಸಿಪಿ ಮುಖ್ಯಸ್ಥ, "ಹೀಗೆ ಹೇಳುವುದು ಅತ್ಯಂತ ನೀಚತನಾಗುತ್ತದೆ. ಕೀಳು ಮತ್ತು ಕಡಿಮೆ ಬುದ್ಧಿಮತ್ತೆ ಇರುವವರು ಮಾತ್ರ ಇಂತಹ ಮಾತನಾಡಬಹುದು ಎಂದು ಗರಂ ಆದರು. "ನಾನು ರಾಜ್ಯ ಪ್ರವಾಸಕ್ಕೆ ಹೊರಟಿದ್ದೇನೆ ಮತ್ತು ಕಾರ್ಯಕರ್ತರನ್ನು ಹುರಿದುಂಬಿಸಲು ಹೊರಟಿದ್ದೇನೆ, ಕೆಲವು ನಾಯಕರು ಮಾಡಿದ್ದಕ್ಕೆ ಪಕ್ಷದ ಮೂಲ ಕಾರ್ಯಕರ್ತರು ಭ್ರಮನಿರಸನಗೊಳ್ಳಬಾರದು" ಎಂಬ ಕಾರಣಕ್ಕೆ ರಾಜ್ಯ ಪ್ರವಾಸ ಕೈಗೊಂಡಿದ್ದೇನೆ ಎಂದು ಶರದ್​ ಪವಾರ್​ ಇದೇ ವೇಳೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

ಅಜಿತ್ ಪವಾರ್ ಶಿಬಿರದ ಅನೇಕರು ರಾಜ್ಯಾಧ್ಯಕ್ಷರಿಗೆ ಕರೆ ಮಾಡಿದ್ದಾರೆ. ಅಲ್ಲಿನ ಪರಿಸ್ಥಿತಿಗಳನ್ನು ವಿವರಿಸಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು, ಅಲ್ಲಿವರೆಗೂ ಕಾದು ನೋಡಿ ಎಂದು ಪವಾರ್ ಹೇಳಿದ್ದಾರೆ. ಭಾನುವಾರ, ಅಜಿತ್ ಪವಾರ್, ಎನ್​​ಸಿಪಿ ವಿಭಜಿಸಿ, ಶಿಂದೆ ಸರ್ಕಾರಕ್ಕೆ ಬೆಂಬಲ ನೀಡುವ ಮೂಲಕ, ಎನ್​​​​ಸಿಪಿ ಎಂಟು ನಾಯಕರು, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ, ಶರದ್​ ಪವಾರ್​ ಅವರಿಗೆ ಸೆಡ್ಡು ಹೊಡೆದಿದ್ದಾರೆ.

ಕೋಮು ವಿಭಜನೆ ಸೃಷ್ಟಿಸುವ ಶಕ್ತಿಗಳ ವಿರುದ್ಧ ಹೋರಾಟ ಅಗತ್ಯ ಎಂದ ಪವಾರ್​; ಇದಕ್ಕೂ ಮುನ್ನ ಕರಾಡ್‌ನಲ್ಲಿ ಎನ್‌ಸಿಪಿ ಕಾರ್ಯಕರ್ತರು ಮತ್ತು ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಶರದ್ ಪವಾರ್, ಮಹಾರಾಷ್ಟ್ರ ಮತ್ತು ದೇಶದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ಶಕ್ತಿಗಳ ವಿರುದ್ಧ ಹೋರಾಡುವ ಅಗತ್ಯವಿದೆ ಎಂದು ಪ್ರತಿಪಾದನೆ ಮಾಡಿದರು. ‘ಇತರ ಪಕ್ಷಗಳನ್ನು ಒಡೆಯುವ ಬಿಜೆಪಿಯ ತಂತ್ರಗಳಿಗೆ ನಮ್ಮ ಕೆಲವರು ಬಲಿಯಾಗಿದ್ದಾರೆ’ ಎಂದೂ ಅವರು ಇದೇ ವೇಳೆ ಕಳವಳ ವ್ಯಕ್ತಪಡಿಸಿದರು.

ಯಶವಂತರಾವ್ ಚವ್ಹಾಣ್​ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿದ ಶರದ್​: ಕರಾಡ್​ನಲ್ಲಿ ಶರದ್ ಪವಾರ್, ತಮ್ಮ ಆಪ್ತ ಮತ್ತು ಮಹಾರಾಷ್ಟ್ರದ ಮೊದಲ ಮುಖ್ಯಮಂತ್ರಿ ಯಶವಂತರಾವ್ ಚವ್ಹಾಣ್​ ಅವರ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿದರು. ಅಜಿತ್ ಪವಾರ್ ಎನ್‌ಸಿಪಿ ವಿಭಜನೆ ಮಾಡಿದ ಒಂದು ದಿನದ ನಂತರ, ಗುರು ಪೂರ್ಣಿಮೆಯ ಸಂದರ್ಭದಲ್ಲಿ ದಿವಂಗತ ಚವ್ಹಾಣ್​ ಅವರ ಸ್ಮಾರಕಕ್ಕೆ ಪವಾರ್ ಭೇಟಿ ನೀಡಿ, ಗೌರವ ಸಮರ್ಪಣೆ ಮಾಡಿದ್ದಾರೆ. ಈ ಮೂಲಕ ಪಕ್ಷದ ಬಂಡಾಯಕ್ಕೆ ತಿರುಗೇಟು ನೀಡುವ ಪ್ರಯತ್ನ ಮಾಡಿದ್ದಾರೆ.

"ಮಹಾರಾಷ್ಟ್ರ ಮತ್ತು ದೇಶದಲ್ಲಿ ಕೋಮು ವಿಭಜನೆಯನ್ನು ಸೃಷ್ಟಿಸುವ ಪ್ರಯತ್ನಗಳು ನಡೆಯುತ್ತಿವೆ. ಶಾಂತಿಪ್ರಿಯ ನಾಗರಿಕರಲ್ಲಿ ಭಯವನ್ನು ಉಂಟುಮಾಡುವ ಶಕ್ತಿಗಳ ವಿರುದ್ಧ ನಾವು ಹೋರಾಡಬೇಕಾಗಿದೆ" ಎಂದು ಅವರು ಹೇಳಿದರು. ನಾವು ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಬೇಕಾಗಿದೆ ಎಂದ ಅವರು, "ತಪ್ಪು ರೀತಿಯ ಪ್ರವೃತ್ತಿ" ತಲೆ ಎತ್ತುತ್ತಿದೆ ಮತ್ತು ಅದೇ ಪ್ರವೃತ್ತಿಯು ಪ್ರಜಾಪ್ರಭುತ್ವದ ತತ್ವಗಳ ಮೇಲೆ ಕೆಲಸ ಮಾಡುತ್ತಿರುವ ರಾಜ್ಯದಲ್ಲಿ ಪಕ್ಷವನ್ನು ಒಡೆಯಲು ಪ್ರಯತ್ನಿಸಿದೆ ಎಂದು ದೂರಿದ್ದಾರೆ.

ಇನ್ನು ಕೆಲವೇ ತಿಂಗಳುಗಳಲ್ಲಿ ಜನರ ಬಳಿಗೆ ಹೋಗಲು ಅವಕಾಶ ಸಿಗಲಿದ್ದು, ಅವರ ನೆರವಿನಿಂದ ಈ ಪ್ರವೃತ್ತಿಗಳನ್ನು ಬದಿಗೊತ್ತಿ ಮತ್ತೊಮ್ಮೆ ಜನಸಾಮಾನ್ಯರ ಹಿತದೃಷ್ಟಿಯಿಂದ ಕೆಲಸ ಮಾಡುವ ವ್ಯವಸ್ಥೆ ರೂಪಿಸುತ್ತೇವೆ ಎಂದು ಶರದ್​ ಪವಾರ್ ಶಪಥ ಮಾಡಿದ್ದಾರೆ. ಗುರುಪೂರ್ಣಿಮೆ ದಿನದಂದು ಯಶವಂತರಾವ್ ಚವಾಣ್ ಅವರ ಸ್ಮಾರಕ ಇರುವ ಕರಾಡ್‌ನಿಂದ ಆ ಮಿಷನ್ ಆರಂಭವಾಗಿದೆ ಎಂದು ಅವರು ಹೇಳಿದರು.

ಇದನ್ನು ಓದಿ: Maharashtra Political crisis: ಫಡ್ನವಿಸ್ ಮನೆಯಲ್ಲಿ ರಾಹುಲ್ ನಾರ್ವೇಕರ್ ಸಭೆ: ಜಿತೇಂದ್ರ ಅವ್ಹಾದ್ ಆಕ್ಷೇಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.