ETV Bharat / bharat

ಕೆಸಿಆರ್​ ಪುತ್ರಿ ಕವಿತಾಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ನಕಾರ: ನಾಳೆ ಇಡಿ ಅಧಿಕಾರಿಗಳಿಂದ ಮತ್ತೆ ವಿಚಾರಣೆ

author img

By

Published : Mar 15, 2023, 5:01 PM IST

ದೆಹಲಿ ಮದ್ಯ ನೀತಿ ಹಗರಣದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್​ ಪುತ್ರಿ ಕವಿತಾ ಅವರಿಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ. ಇದರ ಪರಿಣಾಮವಾಗಿ ಕವಿತಾ ಗುರುವಾರ ಇಡಿ ಮುಖ್ಯ ಕಚೇರಿಯಲ್ಲಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕಾಗಿದೆ.

sc-to-hear-kavitha-plea-on-march-24-ed-to-quiz-her-tomorrow-in-delhi
ಕೆಸಿಆರ್​ ಪುತ್ರಿ ಕವಿತಾಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂ ನಕಾರ: ನಾಳೆ ಇಡಿ ಅಧಿಕಾರಿಗಳಿಂದ ಮತ್ತೆ ವಿಚಾರಣೆ

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಹೊರಡಿಸಿರುವ ಸಮನ್ಸ್ ವಿರುದ್ಧ ತೆಲಂಗಾಣದ ಬಿಆರ್‌ಎಸ್ ಪಕ್ಷದ ವಿಧಾನ ಪರಿಷತ್​ ಸದಸ್ಯೆ​ ಕವಿತಾ ಸಲ್ಲಿಸಿದ್ದ ಮನವಿಗೆ ಮಧ್ಯಂತರ ಪರಿಹಾರ ನೀಡಲು ಸುಪ್ರೀಂಕೋರ್ಟ್ ಬುಧವಾರ ನಿರಾಕರಿಸಿದೆ. ಆದಾಗ್ಯೂ, ಮಾರ್ಚ್ 24ರಂದು ಕವಿತಾ ಅರ್ಜಿಯ ವಿಚಾರಣೆ ನಡೆಸಲು ಸರ್ವೋಚ್ಛ ನ್ಯಾಯಾಲಯವು ಸಮ್ಮತಿಸಿದೆ.

ಇದನ್ನೂ ಓದಿ: ಕವಿತಾಗೆ ಕಳುಹಿಸಿದ್ದು ಇಡಿ ಸಮನ್ಸ್ ಅಲ್ಲ.. ಮೋದಿ ಸಮನ್ಸ್ : ಕೆಟಿಆರ್

ಆಮ್​ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್​ ಕೇಜ್ರಿವಾಲ್​ ನೇತೃತ್ವದ ದೆಹಲಿ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಮದ್ಯ ನೀತಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಇದರಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿದೆ. ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರಿಯಾಗಿರುವ ಕವಿತಾ ಕಿಕ್​ಬ್ಯಾಕ್​ ಪಡೆದ ಆರೋಪ ಎದುರಿಸುತ್ತಿದ್ದಾರೆ. ಇದರ ಸಂಬಂಧ ಇಡಿ ಅಧಿಕಾರಿಗಳು ಕವಿತಾರನ್ನು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದಿನ ಇಡಿ ವಿಚಾರಣೆಗೆ ಒಂದು ದಿನ ಮುಂಚಿತವಾಗಿ ಮಾರ್ಚ್ 10ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಕೆಸಿಆರ್ ಪುತ್ರಿ ಉಪವಾಸ ಸತ್ಯಾಗ್ರಹ ನಡೆಸಿದ್ದರು.

24 ರಂದು ವಿಚಾರಣೆಗೆ ಪಟ್ಟಿ: ಇದೇ ಮಾರ್ಚ್ 11ರಂದು ಒಂಬತ್ತು ಗಂಟೆಗಳ ಕಾಲ ಕವಿತಾ ಇಡಿ ವಿಚಾರಣೆಯನ್ನು ಎದುರಿಸಿದ್ದರು. ಮತ್ತೊಂದೆಡೆ, ಕವಿತಾ ಪರ ವಕೀಲರು ಇಡಿ ಸಮನ್ಸ್‌ನಿಂದ ಮುಕ್ತಿ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇಂದು ಸಲ್ಲಿಸಿರುವ ಅರ್ಜಿಯನ್ನು ಆಲಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಮಹಿಳೆಯನ್ನು ಜಾರಿ ನಿರ್ದೇಶನಾಲಯದ ಕಚೇರಿಗೆ ಕರೆಯಬಹುದೇ?. ಇದು ಸಂಪೂರ್ಣವಾಗಿ ನೆಲದ ಕಾನೂನಿಗೆ ವಿರುದ್ಧವಾಗಿದೆ. ಕವಿತಾ ಈಗಾಗಲೇ ಇಡಿ ಮುಂದೆ ಹಾಜರಾಗಿದ್ದಾರೆ. ಆದರೆ, ಮತ್ತೊಮ್ಮೆ ವಿಚಾರಣೆಗೆ ಕರೆಯುತ್ತಿದ್ದಾರೆ ಎಂದು ವಕೀಲರು ನ್ಯಾಯಪೀಠದ ಗಮನಕ್ಕೆ ತಂದರು. ಈ ಮನವಿಯನ್ನು ಆಲಿಸಿದ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮಾರ್ಚ್ 24ರಂದು ವಿಚಾರಣೆಗೆ ಪಟ್ಟಿ ಮಾಡಿದರು.

ಗುರುವಾರ ಮತ್ತೆ ಕವಿತಾ ವಿಚಾರಣೆ: ಸುಪ್ರೀಂಕೋರ್ಟ್​ ತಕ್ಷಣಕ್ಕೆ ಪರಿಹಾರ ನೀಡದ ಪರಿಣಾಮವಾಗಿ ಕವಿತಾ ಈಗ ಗುರುವಾರ ದೆಹಲಿಯ ಇಡಿ ಮುಖ್ಯ ಕಚೇರಿಯಲ್ಲಿ ಮತ್ತೊಮ್ಮೆ ವಿಚಾರಣೆಗೆ ಹಾಜರಾಗಬೇಕಾಗಿದೆ. ಈ ಮೂಲಕ ವಾರದೊಳಗೆ ಎರಡನೇ ಬಾರಿಗೆ ಇಡಿ ಅಧಿಕಾರಿಗಳು ಬಿಆರ್‌ಎಸ್ ನಾಯಕಿಯನ್ನು ಪ್ರಶ್ನೆಗೆ ಒಳಪಡಿಸಲಿದ್ದಾರೆ.

ಬಿಆರ್‌ಎಸ್ ನಾಯಕಿ ವಿರುದ್ಧ ಆರೋಪವೇನು? ಮದ್ಯ ನೀತಿಯ ವಂಚನೆಯ ಸಮಯದಲ್ಲಿ ಕವಿತಾ ಅನೇಕ ಮೊಬೈಲ್ ಫೋನ್‌ ಕರೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಇಡಿ ಅಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೇ, ಕವಿತಾ ಬೇನಾಮಿ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಹೈದರಾಬಾದ್ ಮೂಲದ ಉದ್ಯಮಿ ಅರುಣ್ ರಾಮಚಂದ್ರನ್ ಪಿಳ್ಳೈ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ. ಈ ಹಗರಣಕ್ಕೆ ಸಂಬಂಧಿಸಿದ ವಹಿವಾಟುಗಳ ಬಗ್ಗೆ ಕವಿತಾ ಅವರನ್ನು ತನಿಖಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಇಡಿ ಅಧಿಕಾರಿಗಳಿಂದ ಕವಿತಾ ವಿಚಾರಣೆ: ಬಿಜೆಪಿ ಕಿರುಕುಳದ ವಿರುದ್ಧ ಹೋರಾಡುವುದಾಗಿ ಕೆಸಿಆರ್ ಶಪಥ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.