ETV Bharat / bharat

ಇಡಿ ಅಧಿಕಾರಿಗಳಿಂದ ಕವಿತಾ ವಿಚಾರಣೆ: ಬಿಜೆಪಿ ಕಿರುಕುಳದ ವಿರುದ್ಧ ಹೋರಾಡುವುದಾಗಿ ಕೆಸಿಆರ್ ಶಪಥ

author img

By

Published : Mar 11, 2023, 5:10 PM IST

ಕೇಂದ್ರದಲ್ಲಿ ಆಡಳಿತದಲ್ಲಿರುವ ಬಿಜೆಪಿ ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಸುಳ್ಳು ಆರೋಪಗಳ ಮೂಲಕ ತೆಲಂಗಾಣದ ಸಚಿವರು, ಬಿಆರ್​ಎಸ್​ ಸಂಸದರು ಮತ್ತು ಇತರರಿಗೆ ಕಿರುಕುಳ ನೀಡುತ್ತಿದೆ ಎಂದು ತೆಲಂಗಾಣ ಸಿಎಂ ಕೆಸಿಆರ್ ಆರೋಪಿಸಿದ್ದಾರೆ.

brs-mlc-k-kavitha-appears-before-ed-kcr-vows-to-fight-against-bjps-harassment
ಇಡಿ ಅಧಿಕಾರಿಗಳಿಂದ ಕವಿತಾ ವಿಚಾರಣೆ: ಬಿಜೆಪಿ ಕಿರುಕುಳದ ವಿರುದ್ಧ ಹೋರಾಡುವುದಾಗಿ ಕೆಸಿಆರ್ ಶಪಥ

ನವದೆಹಲಿ/ಹೈದರಾಬಾದ್: ದೆಹಲಿ ಮದ್ಯ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ತೆಲಂಗಾಣದ ಬಿಆರ್‌ಎಸ್ ಪಕ್ಷದ ವಿಧಾನ ಪರಿಷತ್​ ಸದಸ್ಯೆ ಕವಿತಾ ಇಂದು ದೆಹಲಿಯಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ವಿಚಾರಣೆಗೆ ಹಾಜರಾಗಿದ್ದಾರೆ. ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಇಡಿ ಅಧಿಕಾರಿಗಳ ಮುಂದೆ ಹಾಜರಾದ ಕವಿತಾರನ್ನು ಸಂಜೆಯವರೆಗೂ ವಿಚಾರಣೆಗೆ ಒಳಪಡಿಸಲಾಗಿದೆ.

ಮದ್ಯ ನೀತಿ ಹಗರಣದಲ್ಲಿ ಇಡಿ ಅಧಿಕಾರಿಗಳು ಕೆಲ ದಿನಗಳ ಹಿಂದೆ ಕವಿತಾ ಅವರಿಗೆ ಸಮನ್ಸ್​ ಜಾರಿ ಮಾಡಿದ್ದರು. ಈ ನಿಟ್ಟಿನಲ್ಲಿ ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಇರುವ ಕವಿತಾ ಇಂದು ವಿಚಾರಣೆಗೆ ಹಾಜರಾದರು. ಇಡಿ ಕಚೇರಿ ಒಳಗೆ ಪ್ರವೇಶಿಸುವ ಮುನ್ನ ಕವಿತಾ ಎಲ್ಲರಿಗೂ ನಮಸ್ಕರಿಸಿದರು. ಈ ವೇಳೆ, ಸಚಿವ ಶ್ರೀನಿವಾಸ್ ಗೌಡ್ ಕೂಡ ಇದ್ದರು. ಅರುಣ್ ಪಿಳ್ಳೈ ಸೇರಿದಂತೆ ಈಗಾಗಲೇ ಬಂಧಿತರಾಗಿರುವ ಒಂಬತ್ತು ಮಂದಿಯೊಂದಿಗೆ ಕವಿತಾ ಅವರನ್ನು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

  • Delhi | BRS MLC and Telangana CM K Chandrashekar Rao's daughter, K Kavitha at the ED office as she appears before them in connection with the Delhi liquor policy case. pic.twitter.com/pahJ8UmYMO

    — ANI (@ANI) March 11, 2023 " class="align-text-top noRightClick twitterSection" data=" ">

ಕವಿತಾ ವಿಚಾರಣೆಗೆ ಹಾಜರಾದ ಹಿನ್ನೆಲೆಯಲ್ಲಿ ಇಡಿ ಕಚೇರಿ ಮುಂದೆ ಬಿಆರ್‌ಎಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಜಮಾಯಿಸಿದ್ದರು. ಹೀಗಾಗಿ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಯಾರೂ ಒಳಹೋಗದಂತೆ ತಡೆಯಲು ಎಲ್ಲೆಂದರಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ್ದಾರೆ. ಇದಕ್ಕೂ ಮುನ್ನ ಕವಿತಾ ದೆಹಲಿಯ ತುಘಲಕ್ ರಸ್ತೆಯಲ್ಲಿರುವ ತಮ್ಮ ತಂದೆ ಕೆ.ಚಂದ್ರಶೇಖರ್ ರಾವ್ ನಿವಾಸದಿಂದ ಇಡಿ ಕಚೇರಿಗೆ ಆಗಮಿಸಿದರು. ನಿವಾಸಕ್ಕೆ ಪಕ್ಷದ ಮುಖಂಡರು ಭೇಟಿ ಬೆಂಬಲ ಸೂಚಿಸಿ, ಘೋಷಣೆಗಳು ಮೊಳಗಿಸಿದರು.

ಕೆಸಿಆರ್ ಎಚ್ಚರಿಕೆ: ಮತ್ತೊಂದೆಡೆ, ತೆಲಂಗಾಣ ಸಚಿವ ಮತ್ತು ಕವಿತಾ ಸಹೋದರ ಕೆಟಿ ರಾಮರಾವ್ ಮತ್ತು ಕವಿತಾ ಮದ್ಯ ನೀತಿ ಹಗರಣದಲ್ಲಿ ಮುಂದಿನ ನಡೆ ಬಗ್ಗೆ ಶುಕ್ರವಾರ ಮಧ್ಯರಾತ್ರಿಯವರೆಗೂ ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದರು. ಇದೇ ವೇಳೆ ಹೈದರಾಬಾದ್​ನಲ್ಲಿ ಬಿಆರ್‌ಎಸ್ ಅಧ್ಯಕ್ಷ ಮತ್ತು ತೆಲಂಗಾಣ ಸಿಎಂ ಕೆಸಿಆರ್​, ಕೇಂದ್ರದ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಆರ್‌ಎಸ್ ಸಂಸದರು, ಶಾಸಕರು ಹಾಗೂ ಮುಖಂಡರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರೀಯ ಸಂಸ್ಥೆಗಳನ್ನು ಬಳಸಿಕೊಂಡು ಸುಳ್ಳು ಆರೋಪಗಳ ಮೂಲಕ ರಾಜ್ಯದ ಸಚಿವರು, ಪಕ್ಷದ ಸಂಸದರು ಮತ್ತು ಇತರರಿಗೆ ಬಿಜೆಪಿ ಕಿರುಕುಳ ನೀಡುತ್ತಿದೆ. ದೇಶದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದರು.

ಇದೇ ವೇಳೆ ತೆಲಂಗಾಣದಲ್ಲಿ ಬಿಆರ್‌ಎಸ್ ಸಾಧಿಸಿರುವ ಪ್ರಗತಿಯನ್ನು ಅರಗಿಸಿಕೊಳ್ಳಲು ಕೇಸರಿ ಪಕ್ಷಕ್ಕೆ ಸಾಧ್ಯವಾಗುತ್ತಿಲ್ಲ ಎಂದ ಕೆಸಿಆರ್​, ಏಪ್ರಿಲ್ 14ರಂದು 125 ಅಡಿ ಎತ್ತರದ ಬಿಆರ್ ಅಂಬೇಡ್ಕರ್ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು. ಹೈದರಾಬಾದ್​ನ ಎನ್​ಟಿಆರ್ ಕ್ರೀಡಾಂಗಣದಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಭೆಯಲ್ಲಿ ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಅಲ್ಲದೇ, ಏಪ್ರಿಲ್ 30ರಂದು ನೂತನ ಸೆಕ್ರೆಟರಿಯೇಟ್ ಕಟ್ಟಡ ಉದ್ಘಾಟನೆಗೊಳ್ಳಲಿದೆ. ಜೊತೆಗೆ ತೆಲಂಗಾಣ ರಾಜ್ಯ ರಚನೆ ಹೋರಾಟದಲ್ಲಿ ಪ್ರಾಣ ತ್ಯಾಗ ಮಾಡಿದವರ ಸ್ಮರಣಾರ್ಥವಾಗಿ ಇಲ್ಲಿಯೇ ನಿರ್ಮಿಸಲಾಗುತ್ತಿರುವ ಭವ್ಯ ಸ್ಮಾರಕ ಜೂನ್ 1ರಂದು ಉದ್ಘಾಟನೆಗೊಳ್ಳಲಿದೆ. ಈ ವರ್ಷಾಂತ್ಯಕ್ಕೆ ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರೊಂದಿಗೆ ಸಭೆ, ಸಮಾರಂಭಗಳನ್ನು ಆಯೋಜಿಸುವಂತೆ ಕೆಸಿಆರ್​ ಪಕ್ಷದ ಪ್ರತಿನಿಧಿಗಳಿಗೆ ಸೂಚಿಸಿದರು.

ಬಿಆರ್‌ಎಸ್ ಕಾರ್ಯಕರ್ತರು ಪ್ರತಿಭಟನೆ: ಇದರ ನಡುವೆ ಎಂಎಲ್‌ಸಿ ಕೆ ಕವಿತಾ ವಿರುದ್ಧ ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಖಂಡಿಸಿ ಬಿಆರ್‌ಎಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಪ್ರತಿಭಟನೆ ನಡೆಸಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಏಳು ದಿನ ಜಾರಿ ನಿರ್ದೇಶನಾಲಯದ ವಶಕ್ಕೆ ಮನೀಶ್ ಸಿಸೋಡಿಯಾ.. ಹೇಳಿಕೆ ವಾಪಸ್ ಪಡೆಯಲು ಪಿಳ್ಳೈ ನಿರ್ಧಾರ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.