ETV Bharat / bharat

ಕರ್ನಾಟಕದ ಮಹಿಳೆಯನ್ನು ಆಕೆಯ ಪೋಷಕರು ಬಂಧಿಸಿಟ್ಟಿರುವುದು ಕಾನೂನು ಬಾಹಿರ ಎಂದ ಸುಪ್ರೀಂ

author img

By ETV Bharat Karnataka Team

Published : Jan 17, 2024, 9:53 PM IST

Updated : Jan 17, 2024, 10:18 PM IST

SC terms Karnataka woman detention by her parents' as illegal
ಪೋಷಕರು ಕಾನೂನು ಬಾಹಿರವಾಗಿ ಬಂಧಿಸಿದ್ದು ಕಾನೂನುಬಾಹಿರ: ಕರ್ನಾಟಕ ಹೈಕೋರ್ಟ್​​ ಮೇಲೆ ಗರಂ ಆದ ಸುಪ್ರೀಂ

ಮಹಿಳೆಯನ್ನು ಆಕೆಯ ಪೋಷಕರು ಬಂಧಿಸಿಟ್ಟಿರುವುದು ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಕೆವಿನ್ ಜಾಯ್ ವರ್ಗೀಸ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠ ಈ ಮಹತ್ವದ ಆದೇಶ ನೀಡಿದೆ.

ನವದೆಹಲಿ: 25ರ ಹರೆಯದ ಮಹಿಳೆಯನ್ನು ಆಕೆಯ ಪೋಷಕರು ಬಂಧಿಸಿಟ್ಟಿರುವುದು ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಇದೇ ವೇಳೆ, ಮಹಿಳೆಗೆ ಸ್ವಾತಂತ್ರ್ಯ ನೀಡುವಂತೆ ಆದೇಶಿಸಿದೆ. ಈ ನಡುವೆ ಈ ಸಂಬಂಧದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್​ ಸರಿಯಾಗಿ ನಿರ್ವಹಣೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ. ಕರ್ನಾಟಕ ಹೈಕೋರ್ಟ್‌ ಈ ಕೇಸ್​ ವಿಚಾರದಲ್ಲಿ "ಸಂವೇದನಾಶೀಲತೆಯ ಸಂಪೂರ್ಣ ಕೊರತೆ" ಹೊಂದಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಇದೇ ವೇಳೆ "ತಕ್ಷಣ ಆಕೆಗೆ ಮುಕ್ತಿ ನೀಡುವಂತೆ" ಮಹಿಳೆಯ ಪೋಷಕರಿಗೆ ನಿರ್ದೇಶಿಸಿದೆ.

ನವೆಂಬರ್ 29, 2023 ರಂದು ಕರ್ನಾಟಕ ಹೈಕೋರ್ಟ್ ನೀಡಿದ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಕೆವಿನ್ ಜಾಯ್ ವರ್ಗೀಸ್ ಅವರ ಮನವಿಯ ಮೇರೆಗೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಈ ಆದೇಶವನ್ನು ನೀಡಿದೆ.

ತನ್ನ ಸಂಗಾತಿಯ ಪೋಷಕರ ವಿರುದ್ಧದ ಹೇಬಿಯಸ್ ಕಾರ್ಪಸ್ ಅರ್ಜಿಯ ಕುರಿತು ಕರ್ನಾಟಕ ಹೈಕೋರ್ಟ್‌ ನೀಡಿರುವ ಆದೇಶವನ್ನು ಪ್ರಶ್ನಿಸಿ ವರ್ಗೀಸ್​​ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು. ಈ ವೇಳೆ ಕರ್ನಾಟಕ ಹೈಕೋರ್ಟ್​ನ ವಿಚಾರಣಾ ನಡಾವಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು. ಬಂಧನದಲ್ಲಿರುವ ವ್ಯಕ್ತಿ ಅಥವಾ ಅವರ ಪರವಾಗಿ ಕಾರ್ಯನಿರ್ವಹಿಸುವ ಯಾರಾದರೂ ತಮ್ಮನ್ನು ಕಾನೂನುಬಾಹಿರವಾಗಿ ಬಂಧಿಸಲಾಗಿದೆ ಎಂದು ಭಾವಿಸಿದರೆ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಕೋರಿ ಹೈಕೋರ್ಟ್​ಗಳು ಅಥವಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬಹುದು.

ಈ ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು, ಮಹಿಳೆಯನ್ನು ಆಕೆಯ ಪೋಷಕರು ಮತ್ತು ಪುರುಷನ ಪೋಷಕರಿಗೆ ನಿರ್ದೇಶನಗಳನ್ನು ರವಾನಿಸುವ ಮೊದಲು ಸಂವಾದ ನಡೆಸಿತು. ಮಹಿಳೆ ವಯಸ್ಸಿಗೆ ಬಂದಿರುವುದರಿಂದ ಅಥವಾ ಪ್ರಬುದ್ಧಳಾಗಿರುವುದರಿಂದ ತನ್ನ ಸಂಗಾತಿಯೊಂದಿಗೆ ಅಥವಾ ಆತನ ಪೋಷಕರೊಂದಿಗೆ ಹೋಗಲು ಸ್ವತಂತ್ರಳು ಎಂಬ ಅಂಶವನ್ನು ಪೀಠ ಗಮನಿಸಿತು.

ಈ ನಡುವೆ ಮಹಿಳೆಯ ಪೋಷಕರು ತಮ್ಮ ಮಗಳ ಇಚ್ಛೆಗೆ ವಿರೋಧವಾಗಿಲ್ಲ ಎಂದು ವಾದಿಸಿದ್ದರು ಮತ್ತು ಸಮಾಜದಲ್ಲಿನ ಇಂದಿನ ಸನ್ನಿವೇಶವನ್ನು ಪರಿಗಣಿಸಿ, ತಮ್ಮ ಮಗಳು ತನ್ನ ಜೀವನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಆರ್ಥಿಕವಾಗಿ ಸ್ಥಿರವಾಗಿರಬೇಕು ಎಂದು ಅವರು ಬಯಸುತ್ತೇವೆ ಎಂದು ತಿಳಿಸಿದ್ದರು. ಅಷ್ಟೇ ಅಲ್ಲ ಒಮ್ಮೆ ಆಕೆ ಆರ್ಥಿಕವಾಗಿ ಸದೃಢಳಾದರೆ, ಆಕೆ ಬಯಸಿದ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರಳಾಗಿದ್ದಾಳೆ ಮತ್ತು ತಮ್ಮ ಏಕೈಕ ಮಗುವಿನ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವುದಾಗಿ ಪೋಷಕರು ಕೋರ್ಟ್​ ಗಮನಕ್ಕೆ ತಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ "ಪ್ರತಿವಾದಿ (ಮಹಿಳೆ) ಪ್ರತಿವಾದಿ ನಂ.4 ಮತ್ತು 5 (ಅವಳ ಪೋಷಕರು) ಮಹಿಳೆಯನ್ನ ನಿರಂತರವಾಗಿ ಬಂಧನದಲ್ಲಿಟ್ಟಿರುವುದು ಕಾನೂನುಬಾಹಿರವಾಗಿದೆ ಎಂದು ನಾವು ಭಾವಿಸುತ್ತೇವೆ" ಎಂದು ಹೇಳಿತು. "ಯಾವುದೇ ಸಂದರ್ಭದಲ್ಲಿ ವಯಸ್ಸಿಗೆ ಬಂದ ಅಥವಾ ಪ್ರಬುದ್ಧತೆ ಬಂದಿರುವ ಹುಡುಗಿಯ ಇಚ್ಛೆಗೆ ವಿರುದ್ಧವಾಗಿ ಏನೂ ಮಾಡಲು ಸಾಧವಿಲ್ಲ. ಹಾಗೂ ನಾನು ಹೇಳಿದಂತೆಯೇ ಕೇಳಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಪೀಠ ಇದೇ ವೇಳೆ ಹೇಳಿದೆ.

ಈ ವಿಚಾರದಲ್ಲಿ ಹೈಕೋರ್ಟ್ ನಡೆದುಕೊಂಡ ರೀತಿಗೆ ಸುಪ್ರೀಂ ಕೋರ್ಟ್ ಕೂಡ ಬೇಸರ ವ್ಯಕ್ತಪಡಿಸಿದೆ. "ಬಂಧನದಲ್ಲಿರುವ ಮಹಿಳೆ ತನ್ನ ವೃತ್ತಿಜೀವನವನ್ನು ಮುಂದುವರಿಸಲು ದುಬೈಗೆ ಹಿಂತಿರುಗಲು ಬಯಸುವುದಾಗಿ ಉಚ್ಚ ನ್ಯಾಯಾಲಯದ ಮುಂದೆ ನಿಸ್ಸಂದಿಗ್ಧವಾಗಿ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಅವರನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಹೈಕೋರ್ಟ್​ ಆದೇಶಿಸಬೇಕಿತ್ತು. ಆದರೆ ಹದಿನಾಲ್ಕು ಬಾರಿ ಪ್ರಕರಣವನ್ನು ಮುಂದೂಡುವುದು ಮತ್ತು ಈಗ ಅದನ್ನು ಅನಿರ್ದಿಷ್ಟವಾಗಿ ಮುಂದೂಡುವುದು ಹೈಕೋರ್ಟ್​​​ನ ಅಸೂಕ್ಷ್ಮತೆಯನ್ನು ತೋರಿಸುತ್ತದೆ ”ಎಂಬುದನ್ನು ಪೀಠವು ಗಮನಿಸಿತು. " ಸಂವೇದನಾಶೀಲತೆ ಕೊರತೆಯ ವಿಧಾನದ ಕಾರಣ, ಅರ್ಜಿದಾರರು (ಪುರುಷ) ಮತ್ತು ಅವರ ಪೋಷಕರು ಬಂಧಿತಳ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ದುಬೈನಿಂದ ಬೆಂಗಳೂರಿಗೆ ಆಗಾಗ್ಗೆ ಪ್ರವಾಸಗಳನ್ನು ಮಾಡಬೇಕಾದ ಪ್ರಸಂಗ ಬರುವಂತೆ ಮಾಡಲಾಗಿತ್ತು ಎಂಬುದನ್ನು ಕೋರ್ಟ್​ ಗಮನಿಸಿ, ಈ ಮಹತ್ವದ ಆದೇಶ ನೀಡಿದೆ.

48 ಗಂಟೆಗಳ ಒಳಗೆ ಪಾಸ್‌ಪೋರ್ಟ್, ಇತರ ಪ್ರಮುಖ ದಾಖಲೆಗಳು ಮತ್ತು ವೈಯಕ್ತಿಕ ವಸ್ತುಗಳನ್ನು ಮಹಿಳೆಗೆ ಹಸ್ತಾಂತರಿಸುವಂತೆ, ಆಕೆಯ ಪೋಷಕರಿಗೆ ಸುಪ್ರೀಂಕೋರ್ಟ್​ ಸೂಚಿಸಿದೆ. ಇದೇ ವೇಳೆ, ಜನವರಿ 22 ರಂದು ಹೆಚ್ಚಿನ ವಿಚಾರಣೆ ನಡೆಸಲಿದೆ.

ಇದನ್ನು ಓದಿ: ಶಿವಸೈನಿಕರ ಕಾದಾಟ: ಸ್ಪೀಕರ್​ಗೆ ಬಾಂಬೆ ಹೈಕೋರ್ಟ್​ ನೋಟಿಸ್ - ಜ.22ಕ್ಕೆ ಸುಪ್ರೀಂನಲ್ಲಿ ಠಾಕ್ರೆ ಬಣದ ಅರ್ಜಿ ವಿಚಾರಣೆಇದನ್ನು ಓದಿ:

Last Updated :Jan 17, 2024, 10:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.