ETV Bharat / bharat

370, 35ಎ ವಿಧಿ ರದ್ದನ್ನು ಮಾನ್ಯ ಮಾಡಲು ಕೋರಿ ಸಲ್ಲಿಸಿದ ಅರ್ಜಿ ವಜಾ ಮಾಡಿದ ಸುಪ್ರೀಂಕೋರ್ಟ್

author img

By

Published : Aug 21, 2023, 2:07 PM IST

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಗಳನ್ನು ನೀಡಿದ್ದ 370 ನೇ ಮತ್ತು 35 ಎ ವಿಧಿಗಳನ್ನು ರದ್ದು ಮಾಡಿದ್ದರ ವಿರುದ್ಧದ ಅರ್ಜಿಗಳ ವಿಚಾರಣೆ ನಡುವೆ, ಸರ್ಕಾರದ ಕ್ರಮವನ್ನು ಮಾನ್ಯಗೊಳಿಸಲು ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿದೆ.

ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್

ನವದೆಹಲಿ: 370 ಮತ್ತು 35 ಎ ವಿಧಿ ರದ್ದು ಮಾಡಿದ್ದನ್ನು ಮಾನ್ಯಗೊಳಿಸಿ ಸಾಂವಿಧಾನಿಕ ಎಂದು ಘೋಷಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್​ ಸೋಮವಾರ ತಿರಸ್ಕರಿಸಿದೆ. ಈ ಮನವಿಯನ್ನು ತಪ್ಪಾಗಿ ಸಲ್ಲಿಸಲಾಗಿದೆ ಎಂದು ಇದೇ ವೇಳೆ ನ್ಯಾಯಪೀಠ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ಈ ಅರ್ಜಿಯನ್ನು ವಜಾ ಮಾಡಿದ್ದಾರೆ. 370 ಮತ್ತು 35 ಎ ವಿಧಿ ರದ್ದಿನ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಯುತ್ತಿರುವ ಹೊತ್ತಲ್ಲೇ ಮಾನ್ಯ ಮಾಡಲು ಕೋರಿರುವುದು ಸರಿಯಲ್ಲ. ಹೀಗಾಗಿ ಅರ್ಜಿಯನ್ನು ತಿರಸ್ಕರಿಸಲಾಗುವುದು ಎಂದು ಪೀಠ ಹೇಳಿದೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ನೇ ವಿಧಿ ಮತ್ತು ಅಲ್ಲಿನ ಜನರ ಕಾಯಂ ನಿವಾಸಕ್ಕೆ ಭದ್ರತೆ ಒದಗಿಸುವ 35ಎ ವಿಧಿಯನ್ನು ರಾಷ್ಟ್ರಪತಿಗಳು ರದ್ದು ಮಾಡಿ ಆದೇಶಿಸಿದ್ದಾರೆ. ಇದರ ವಿರುದ್ಧ ಈಗಾಗಲೇ ಆಕ್ಷೇಪಣೆಗಳು ಬಂದಿದ್ದು, ಅದರ ಅರ್ಜಿಗಳು ವಿಚಾರಣೆ ಹಂತದಲ್ಲಿವೆ. ರದ್ದನ್ನು ಮಾನ್ಯ ಮಾಡುವ ಘೋಷಣೆ ಹೊರಡಿಸಲು ಸಾಧ್ಯವಿಲ್ಲ. ಅದರ ಸಾಂವಿಧಾನಿಕ ಸಿಂಧುತ್ವದ ಪ್ರಶ್ನೆಯು ಈಗಾಗಲೇ ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಸಾಂವಿಧಾನಿಕ ಪೀಠದ ಮುಂದೆ ವಿಚಾರಣೆ: ಸಿಜೆಐ ಚಂದ್ರಚೂಡ್ ನೇತೃತ್ವದ 5 ನ್ಯಾಯಾಧೀಶರ ಸಂವಿಧಾನ ಪೀಠವು ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದ 2019 ರ ರಾಷ್ಟ್ರಪತಿ ಆದೇಶದ ವಿರುದ್ಧ ಅರ್ಜಿಗಳು ಸಲ್ಲಿಕೆಯಾಗಿದ್ದು, ಅವುಗಳ ವಿಚಾರಣೆ ನಡೆಯುತ್ತಿದೆ. ಸಾಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಬಿ.ಆರ್. ಗವಾಯಿ ಮತ್ತು ಸೂರ್ಯಕಾಂತ್ ಅವರು ಇದ್ದು, ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ ಆಗಸ್ಟ್ 2 ರಿಂದ ನಿರಂತರವಾಗಿ ವಾದ- ಪ್ರತಿವಾದ ಆಲಿಸುತ್ತಿದ್ದಾರೆ.

ರದ್ದತಿ ಬಗ್ಗೆ ಕೇಂದ್ರ ಸರ್ಕಾರ ಅಫಿಡವಿಟ್​: ವಿಧಿಗಳ ರದ್ದತಿ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದ್ದು, ಅದರಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನದ ರದ್ದತಿಯನ್ನು ಬಲವಾಗಿ ಸಮರ್ಥಿಸಿಕೊಂಡಿದೆ. 370 ನೇ ವಿಧಿ ರದ್ದಿನ ಬಳಿಕ ಈ ಪ್ರದೇಶದಲ್ಲಾದ ಅಭಿವೃದ್ಧಿ, ಪ್ರಗತಿ, ಭದ್ರತೆ ಮತ್ತು ಸ್ಥಿರತೆ ಬಗ್ಗೆಯೂ ದಾಖಲೆ ನೀಡಿದೆ.

ಭಯೋತ್ಪಾದಕರು ಮತ್ತು ಪ್ರತ್ಯೇಕತಾವಾದಿಗಳ ಸಂಕೋಲೆಗೆ ಸಿಲುಕಿದ್ದ, ನಿತ್ಯವೂ ಹಿಂಸಾಚಾರಕ್ಕೆ ತುತ್ತಾಗಿದ್ದ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲಾಗಿದೆ. ಭಯೋತ್ಪಾದನೆ- ಪ್ರತ್ಯೇಕತಾವಾದಿ ಅಜೆಂಡಾದೊಂದಿಗೆ ನಡೆಯುತ್ತಿದ್ದ ಕಲ್ಲು ತೂರಾಟದ ಘಟನೆಗಳು 2018 ರಲ್ಲಿ 1,767 ರಷ್ಟು ಇದ್ದರೆ, 2023 ರಲ್ಲಿ ಅದು ಶೂನ್ಯಕ್ಕೆ ಇಳಿದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅಳವಡಿಸಿಕೊಂಡಿರುವುದಾಗಿ ಕೇಂದ್ರವು ಸುಪ್ರೀಂಗೆ ತಿಳಿಸಿದೆ. ಸಾಂವಿಧಾನಿಕ ಬದಲಾವಣೆಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಭರದಿಂದ ಸಾಗಿವೆ ಎಂದು ಅಫಿಡವಿಟ್​ನಲ್ಲಿ ಹೇಳಿದೆ.

ಸುಪ್ರೀಂಕೋರ್ಟ್​ನಲ್ಲಿ ವಿಧಿಗಳ ರದ್ದು ಮಾಡಿದ್ದರ ಅರ್ಜಿಗಳ ವಿಚಾರಣೆಯ ಹಂತದಲ್ಲಿಯೇ ಕಾಶ್ಮೀರಿ ಪಂಡಿತರು ಮಧ್ಯಸ್ಥಿಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ಕೇಂದ್ರದ ಕ್ರಮವನ್ನು ಬೆಂಬಲಿಸಿ ಅರ್ಜಿ ಹಾಕಿದ್ದಾರೆ.

ಇದನ್ನೂ ಓದಿ: Chandrayaan-3 Mission: ಇಸ್ರೋ ಸಂಸ್ಥೆಗೆ ಲಭಿಸಿದ 'ಚಂದಮಾಮ'ನ ನೂತನ ಛಾಯಾಚಿತ್ರಗಳು..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.