ETV Bharat / bharat

ರಾಹುಲ್​ ಶಿಕ್ಷೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಗುಜರಾತ್​ ಹೈಕೋರ್ಟ್​ ಜಡ್ಜ್​ ವರ್ಗಾವಣೆಗೆ ಸುಪ್ರೀಂ ಕೊಲಿಜಿಯಂ ಶಿಫಾರಸು

author img

By

Published : Aug 11, 2023, 1:22 PM IST

ಗುಜರಾತ್​ ಹೈಕೋರ್ಟ್​ ನ್ಯಾಯಮೂರ್ತಿ ಎಚ್​ ಎಂ ಪ್ರಚ್ಚಕ್​​ ಅವರನ್ನು ವರ್ಗಾವಣೆ ಮಾಡಲು, ಸಿಜೆಐ ಡಿ ವೈ ಚಂದ್ರಚೂಡ್​ ನೇತೃತ್ವದ ಕೊಲಿಜಿಯಂ ಶಿಫಾರಸು ಮಾಡಿದೆ.

Supreme Court
ಸುಪ್ರೀಂ ಕೋರ್ಟ್​

ನವದೆಹಲಿ: ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣದ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್​ ಹೈಕೋರ್ಟ್​ ನ್ಯಾಯಮೂರ್ತಿ ಎಚ್​ ಎಂ ಪ್ರಚ್ಚಕ್​ ಅವರನ್ನು 'ಉತ್ತಮ ನ್ಯಾಯ ನಿರ್ವಹಣೆ'ಗಾಗಿ ಪಾಟ್ನಾ ಹೈಕೋರ್ಟ್​ಗೆ ವರ್ಗಾವಣೆ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್​, ನೇತೃತ್ವದ ಸುಪ್ರೀಂ ಕೋರ್ಟ್​ ಕೊಲಿಜಿಯಂ ಶಿಫಾರಸು ಮಾಡಿದೆ.

2019 ರಲ್ಲಿ ನಡೆದ ರಾಜಕೀಯ ರ‍್ಯಾಲಿಯಲ್ಲಿ ಮೋದಿ ಉಪನಾಮದ ಬಗ್ಗೆ ಹೇಳಿಕೆ ನೀಡಿದ್ದ ಕುರಿತು ಗುಜರಾತ್​ನ ಬಿಜೆಪಿ ಶಾಸಕ ಪೂರ್ಣೇಶ್​ ಮೋದಿ ಅವರು ಸಲ್ಲಿಸಿದ್ದ ಕ್ರಿಮಿನಲ್​ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರಿಗೆ ವಿಧಿಸಿದ್ದ ಎರಡು ವರ್ಷಗಳ ಶಿಕ್ಷೆಯನ್ನು ತಡೆಯಲು ನ್ಯಾಯಮೂರ್ತಿ ಪ್ರಚ್ಚಕ್​ ನಿರಾಕರಿಸಿದ್ದರು. ಗುಜರಾತ್​ ಹೈಕೋರ್ಟ್​ನಲ್ಲಿ ರಿಲೀಫ್​ ಸಿಗದ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ, ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ಆದರೆ ಸುಪ್ರೀಂಕೋರ್ಟ್​​ನಲ್ಲಿ, ನ್ಯಾಯಮೂರ್ತಿ ಬಿ ಆರ್​ ಗವಾಯಿ ಅವರ ನೇತೃತ್ವದ ಪೀಠ ರಾಹುಲ್​ ಗಾಂಧಿ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದರು.

ಮೋದಿ ಉಪನಾಮದ ವಿರುದ್ಧ ಹೇಳಿಕೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ ರಾಹುಲ್​ ಗಾಂಧಿಗೆ ಸುಪ್ರೀಂ ರಿಲೀಫ್​ ನೀಡಿತ್ತು. 'ಯಾವಾಗ ಒಂದು ಅಪರಾಧವು, ಗುರುತಿಸಲಾಗದ, ಜಾಮೀನು ನೀಡಬಹುದಾದ ಹಾಗೂ ಸಂಯೋಜಿತವಾದಾಗ ವಿಚಾರಣಾ ನ್ಯಾಯಾಧೀಶರು, ಪ್ರಕರಣದಲ್ಲಿ ಸತ್ಯ ಮತ್ತು ಸನ್ನಿವೇಶಗಳ ಆಧಾರದ ಮೇಲೆ ವಿಧಿಸಲಾಗಿರುವ ಶಿಕ್ಷೆಗೆ ನಿಖರವಾದ ಕಾರಣ ನೀಡಬೇಕಿತ್ತು. ಇನ್ನು ಶಿಕ್ಷೆಗೆ ತಡೆಯಾಜ್ಞೆ ನೀಡುವ ಅರ್ಜಿಯನ್ನು ತಿರಸ್ಕರಿಸುವ ವೇಳೆ ಹೈಕೋರ್ಟ್​ ಈ ಬಗ್ಗೆ ಪುಟಗಳಷ್ಟು ವಿವರಣೆ ನೀಡಿದೆಯಾದರೂ, ಗರಿಷ್ಠ ಶಿಕ್ಷೆ ವಿಧಿಸಿದ್ದಕ್ಕೆ ನೀಡಲಾಗಿರುವ ಕಾರಣಗಳಲ್ಲಿ ನಾವು ಗಮನಿಸಿರುವ ಅಂಶಗಳೇ ಇಲ್ಲ ಎಂದು ಹೇಳಿತ್ತು.

ಇದೇ ವೇಳೆ, ರಾಹುಲ್​ ಗಾಂಧಿ ಅವರು ಆಡಿರುವ ಆಪಾದಿತ ಮಾತುಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲ ಹಾಗೂ ಒಬ್ಬ ವ್ಯಕ್ತಿ ತನ್ನ ಸಾರ್ವಜನಿಕ ಜೀವನದಲ್ಲಿ ಸಾರ್ವಜನಿಕ ಭಾಷಣ ಮಾಡುವಾಗ ಸ್ವಲ್ಪ ಮಟ್ಟಿಗಾದರೂ ಸಂಯಮದಿಂದ ವರ್ತಿಸಬೇಕು ಎಂಬ ಅಭಿಫ್ರಾಯವನ್ನು ಇದೇ ವೇಳೆ ಸುಪ್ರೀಂ ಕೋರ್ಟ್​ ಹೇಳಿತ್ತು. ಅಷ್ಟೇ ಅಲ್ಲ ಸೂರತ್​ ಕೋರ್ಟ್ ನೀಡಿದ್ದ ಆದೇಶಕ್ಕೆ ಮಧ್ಯಂತರ ತಡಯಾಜ್ಞೆ ನೀಡಿತ್ತು.

ರಾಹುಲ್​ ಗಾಂಧಿ ಅವರ ದೋಷಾರೋಪಣೆಗೆ ಸುಪ್ರೀ ಕೋರ್ಟ್​ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅವರ ಅನರ್ಹತೆಯನ್ನು ಸ್ಪೀಕರ್​ ಓ ಬಿರ್ಲಾ ಅವರು ವಾಪಸ್​ ಪಡೆದು, ಸಂಸದರಾಗಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: Rahul Gandhi: 'ಇಡೀ ಭಾರತವೇ ನನ್ನ ಮನೆ...': ಸಂಸದರಾಗಿ ಮರಳಿ ಸರ್ಕಾರಿ ಬಂಗಲೆ ಪಡೆದ ರಾಹುಲ್​ ಗಾಂಧಿ ಪ್ರತಿಕ್ರಿಯೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.