ETV Bharat / bharat

2 ವಿಮಾನಗಳಿಗೆ ಏಕಕಾಲದಲ್ಲಿ ಟೇಕ್‌ಆಫ್, ಲ್ಯಾಂಡಿಂಗ್‌ಗೆ ಅವಕಾಶ! ದೆಹಲಿ ಏರ್‌ಪೋರ್ಟ್‌ನಲ್ಲಿ ತಪ್ಪಿದ ಅತಿದೊಡ್ಡ ದುರಂತ

author img

By ETV Bharat Karnataka Team

Published : Aug 23, 2023, 3:38 PM IST

Updated : Aug 23, 2023, 4:16 PM IST

Runway Incursion Involving Vistara Planes: ದೆಹಲಿ ವಿಮಾನ ನಿಲ್ದಾಣದಲ್ಲಿ ಎರಡು ವಿಸ್ತಾರ ಸಂಸ್ಥೆಯ ವಿಮಾನಗಳಿಗೆ ಒಂದೇ ಸಮಯಕ್ಕೆ ಟೇಕ್​ಆಫ್​ ಹಾಗೂ ಲ್ಯಾಂಡಿಂಗ್​ಗೆ ಏರ್‌ ಟ್ರಾಫಿಕ್​ ಕಂಟ್ರೋಲರ್(ಎಟಿಸಿ) ಅವಕಾಶ ನೀಡಿದ್ದು, ಅದೃಷ್ಟವಶಾತ್‌ ಬಹುದೊಡ್ಡ ಅವಘಡ ತಪ್ಪಿದೆ.

Runway incursion involving Vistara plane at Delhi airport; DGCA to probe incident
ಏಕಕಾಲಕ್ಕೆ ಒಂದೇ ರನ್​ವೇ ಮೇಲೆ ಎರಡು ವಿಮಾನಗಳ ಟೇಕ್​ಆಫ್​, ಲ್ಯಾಂಡಿಂಗ್​ಗೆ ಅನುಮತಿ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು (ಬುಧವಾರ) ಭಾರಿ ವಿಮಾನ ದುರಂತ ತಪ್ಪಿದೆ. ಏಕಕಾಲಕ್ಕೆ ಒಂದೇ ರನ್​ವೇಯಲ್ಲಿ ವಿಸ್ತಾರ ವಿಮಾನಯಾನ ಸಂಸ್ಥೆಯ ಎರಡು ವಿಮಾನಗಳಿಗೆ ಟೇಕ್​ಆಫ್​ ಹಾಗೂ ಲ್ಯಾಂಡಿಂಗ್​ಗೆ ಅವಕಾಶ ನೀಡಲಾಗಿದ್ದು, ಸುದೈವವಶಾತ್​ ವಿಮಾನಗಳ ನಡುವಿನ ಸಂಭವನೀಯ ಅಪಘಾತ ತಪ್ಪಿದೆ. ಈ ಘಟನೆಯ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ.

ಗುಜರಾತ್​ನ ಅಹಮದಾಬಾದ್​ನಿಂದ ದೆಹಲಿಗೆ ಬಂದ ಒಂದು ವಿಮಾನ ಲ್ಯಾಂಡ್​ ಆಗಬೇಕಿತ್ತು. ಮತ್ತೊಂದು ವಿಮಾನ ದೆಹಲಿಯಿಂದ ಪಶ್ಚಿಮ ಬಂಗಾಳದ ಬಗದೋರ್ಗಾಕ್ಕೆ ಟೇಕ್​​ ಆಫ್​ ಮಾಡಬೇಕಿತ್ತು. ಈ ಎರಡೂ ವಿಮಾನಗಳಿಗೆ ಒಂದೇ ಸಮಯಕ್ಕೆ ಒಂದೇ ರನ್​ ವೇ ಮೇಲೆ ಟೇಕ್​ಆಫ್​ ಹಾಗೂ ಲ್ಯಾಂಡಿಂಗ್​ಗೆ ಏರ್‌ ಟ್ರಾಫಿಕ್​ ಕಂಟ್ರೋಲರ್​​ನಿಂದ(ಎಟಿಸಿ) ​ಅವಕಾಶ ನೀಡಲಾಗಿದೆ. ಟ್ರಾಫಿಕ್​ ಕಂಟ್ರೋಲರ್​​ ಅಜಾಗರೂಕತೆಯಿಂದ ಎರಡು ವಿಮಾನಗಳು ಏಕಾಕಾಲಕ್ಕೆ ಕಾರ್ಯಾಚರಣೆ ಮಾಡಿದ್ದರೆ ಭಾರಿ ದುರಂತ ಸಂಭವಿಸುವ ಸಾಧ್ಯತೆ ಇತ್ತು.

ಇದನ್ನೂ ಓದಿ: ನಾಗ್ಪುರದಲ್ಲಿ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್: ಅನಾರೋಗ್ಯಕ್ಕೆ ಒಳಗಾದ ಪ್ರಯಾಣಿಕ, ಆಸ್ಪತ್ರೆಯಲ್ಲಿ ನಿಧನ

ಈ ಕುರಿತು ಡಿಜಿಸಿಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ''ವಿಸ್ತಾರ ವಿಟಿಐ 926 ವಿಮಾನವು ಅಹಮದಾಬಾದ್​ನಿಂದ ದೆಹಲಿಗೆ ಬಂದಿತ್ತು. ಈ ವಿಮಾನ ರನ್​ವೇ 29 ಎಲ್​ನಲ್ಲಿ ಲ್ಯಾಂಡ್​ ಆಗಿತ್ತು. ಆದರೆ, ಏರ್​ಟ್ರಾಫಿಕ್​ ಕಂಟ್ರೋಲರ್​ ನಿರ್ದೇಶನದ ಮೇರೆಗೆ ರನ್​ವೇ 29 ಆರ್​ಗೆ ಕ್ರಾಸ್​ ಮಾಡಿದೆ. ಇದೇ ಸಮಯಕ್ಕೆ ಪಶ್ಚಿಮ ಬಂಗಾಳದ ಬಗದೋರ್ಗಾಕ್ಕೆ ಹಾರಾಟ ಮಾಡಬೇಕಿದ್ದ ಮತ್ತೊಂದು ವಿಸ್ತಾರ ವಿಮಾನಕ್ಕೂ ಇದೇ ರನ್​ವೇ 29 ಆರ್​ನಿಂದ ಟೇಕ್​ಆಫ್​ ಆಗಲು ಏರ್​ ಟ್ರಾಫಿಕ್​ ಕಂಟ್ರೋಲರ್​​ ಅನುಮತಿ ನೀಡಿದ್ದಾರೆ'' ಎಂದು ತಿಳಿಸಿದರು.

ಮತ್ತೊಬ್ಬ ಅಧಿಕಾರಿ ಮಾತನಾಡಿ, ''ಅಹಮದಾಬಾದ್​ ವಿಮಾನಕ್ಕೆ ಲ್ಯಾಂಡಿಂಗ್​ಗೆ ಅವಕಾಶ ನೀಡಿದ್ದನ್ನು ಕಂಟ್ರೋಲರ್​ ಮರೆತು, ಬಗದೋರ್ಗಾಕ್ಕೆ ಟೇಕ್​ಆಫ್​ ಆಗುವ ಮತ್ತೊಂದು ವಿಮಾನಕ್ಕೆ ಅನುಮತಿ ನೀಡಿದ್ದಾರೆ. ತನ್ನ ಪ್ರಮಾದ ಅರಿತ ತಕ್ಷಣವೇ ಬಗದೋರ್ಗಾ ವಿಮಾನದ ಟೇಕ್​ಆಫ್​​ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ಏರ್​ ಕಂಟ್ರೋಲರ್ ​ಅನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ'' ಎಂದರು. (ಪಿಟಿಐ)

Last Updated : Aug 23, 2023, 4:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.