ETV Bharat / bharat

ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣ: ಲಾಲು ಪ್ರಸಾದ್​​ ಯಾದವ್, ಪತ್ನಿ, ಮಗನಿಗೆ ಜಾಮೀನು

author img

By ETV Bharat Karnataka Team

Published : Oct 4, 2023, 1:07 PM IST

ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್​​ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಜಾಮೀನು ನೀಡಿದೆ.

rouse-avenue-court-granted-bail-to-lalu-yadav-rabri-and-tejashwi-yadav-on-land-for-job-scam
ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣ: ಲಾಲು ಪ್ರಸಾದ್​​ ಯಾದವ್, ಪತ್ನಿ, ಮಗನಿಗೆ ಸಿಕ್ತು ಜಾಮೀನು

ನವದೆಹಲಿ: ಉದ್ಯೋಗಕ್ಕಾಗಿ ಭೂ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್​​ ಯಾದವ್, ಅವರ ಪತ್ನಿ ರಾಬ್ರಿ ದೇವಿ ಮತ್ತು ಅವರ ಪುತ್ರ, ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ತಲಾ 50 ಸಾವಿರ ರೂ.ಗಳ ವೈಯಕ್ತಿಕ ಬಾಂಡ್ ಮೇಲೆ ಜಾಮೀನು ಮಂಜೂರು ಮಾಡಿದೆ. ಲಾಲು ಕುಟುಂಬ ಇಂದು ಜಾಮೀನು ಪಡೆಯಲು ದೆಹಲಿಯ ವಿಶೇಷ ಸಿಬಿಐ ನ್ಯಾಯಾಧೀಶೆ ಗೀತಾಂಜಲಿ ಗೋಯಲ್ ಅವರ ಮುಂದೆ ಹಾಜರಾಗಿತ್ತು. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 16ರಂದು ನಡೆಯಲಿದೆ.

ಜುಲೈ 3 ರಂದು ಸಿಬಿಐ ಸಲ್ಲಿಸಿದ ಎರಡನೇ ಪೂರಕ ಚಾರ್ಜ್ ಶೀಟ್ ಅನ್ನು ಗಮನದಲ್ಲಿಟ್ಟುಕೊಂಡು ಸೆಪ್ಟೆಂಬರ್ 23 ರಂದು ನ್ಯಾಯಾಲಯವು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಅಕ್ಟೋಬರ್ 4 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿತ್ತು. ತೇಜಸ್ವಿ ಯಾದವ್ ಅವರಲ್ಲದೇ, ಲಾಲು ಯಾದವ್ ಮತ್ತು ರಾಬ್ರಿ ದೇವಿ ಸೇರಿದಂತೆ ಇತರ 17 ಆರೋಪಿಗಳಿಗೆ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಇವರಲ್ಲಿ ಮೂವರು ರೈಲ್ವೆ ಅಧಿಕಾರಿಗಳು ಸೇರಿದ್ದಾರೆ. ಅವರೆಲ್ಲರೂ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯಬೇಕಾಗಿತ್ತು.

ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಮೂವರು ಮಾಜಿ ರೈಲ್ವೆ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಸಿಬಿಐ ಸೆಪ್ಟೆಂಬರ್ 22 ರಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಮಾಜಿ ಕೇಂದ್ರ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್ ಅವರನ್ನು ವಿಚಾರಣೆಗೆ ಒಳಪಡಿಸಲು ಕೇಂದ್ರ ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ತನಿಖಾ ಸಂಸ್ಥೆ ಸೆಪ್ಟೆಂಬರ್ 12 ರಂದು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿತ್ತು. ಜುಲೈ 3 ರಂದು ಸಲ್ಲಿಸಿದ ಎರಡನೇ ಪೂರಕ ಚಾರ್ಜ್ ಶೀಟ್​ನಲ್ಲಿ ಸಿಬಿಐ ಲಾಲು ಪ್ರಸಾದ್ ಯಾದವ್, ಅವರ ಪತ್ನಿ ರಾಬ್ರಿ ದೇವಿ, ಮಗ ಮತ್ತು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಪಶ್ಚಿಮ ಮಧ್ಯ ರೈಲ್ವೆಯ (ಡಬ್ಲ್ಯುಸಿಆರ್) ಆಗಿನ ಜನರಲ್ ಮ್ಯಾನೇಜರ್ ಮತ್ತು ಡಬ್ಲ್ಯುಸಿಆರ್​ನ ಇಬ್ಬರು ಸಿಪಿಒ ಸೇರಿದಂತೆ 17 ಜನರ ಬಗ್ಗೆ ಪ್ರಕರಣದಲ್ಲಿ ಹೆಸರಿಸಿತ್ತು.

ಈ ಪ್ರಕರಣದಲ್ಲಿ ಎರಡನೇ ಪೂರಕ ಚಾರ್ಜ್ ಶೀಟ್​ನಲ್ಲಿ ತೇಜಸ್ವಿ ಅವರ ಹೆಸರು ಮೊದಲು ಕಾಣಿಸಿಕೊಂಡಿತು. ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರು 2004 ರಿಂದ 2009 ರವರೆಗೆ ರೈಲ್ವೆ ಸಚಿವರಾಗಿದ್ದಾಗ ಮಧ್ಯಪ್ರದೇಶದ ಜಬಲ್ಪುರದ ಪಶ್ಚಿಮ- ಮಧ್ಯ ರೈಲ್ವೆ ವಲಯದ ಗ್ರೂಪ್ ಡಿ ನೇಮಕಾತಿಗೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಲಾಲು ಯಾದವ್ ಮತ್ತು ಇತರ ಆರೋಪಿಗಳು ಅಭ್ಯರ್ಥಿಗಳಿಂದ ಭೂಮಿಯನ್ನು ತೆಗೆದುಕೊಂಡು ಅವರಿಗೆ ಉದ್ಯೋಗ ನೀಡಿದ್ದಾರೆ ಎಂದು ಸಿಬಿಐ ಆರೋಪಿಸಿತ್ತು. ನೇಮಕಾತಿಗಳಿಗೆ ಸಂಬಂಧಿಸಿದಂತೆ ಯಾವುದೇ ಜಾಹೀರಾತು ಅಥವಾ ಸಾರ್ವಜನಿಕ ಸೂಚನೆಯನ್ನು ನೀಡಲಾಗಿಲ್ಲ. ಪಾಟ್ನಾ ನಿವಾಸಿಗಳನ್ನು ಮುಂಬೈ, ಜಬಲ್ಪುರ್, ಕೋಲ್ಕತಾ, ಜೈಪುರ ಮತ್ತು ಹಾಜಿಪುರದಲ್ಲಿರುವ ವಿವಿಧ ರೈಲ್ವೆ ವಲಯಗಳಿಗೆ ಬದಲಿಯಾಗಿ ನೇಮಿಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ಇದನ್ನೂ ಓದಿ: ಒತ್ತಾಯದಿಂದ ಶೌಚಾಲಯ ಕ್ಲೀನ್​ ಮಾಡಿಸಿದ ಆರೋಪ: ಸಂಸದ ಹೇಮಂತ್ ಪಾಟೀಲ್ ವಿರುದ್ಧ ಎಫ್​ಐಆರ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.