ETV Bharat / bharat

ಆರ್‌ಎಸ್‌ಎಸ್‌ 21ನೇ ಶತಮಾನದ ಕೌರವರು: ರಾಹುಲ್‌ ಗಾಂಧಿ

author img

By

Published : Jan 10, 2023, 8:01 AM IST

rahul-gandhi
ಆರ್​ಎಸ್​ಎಸ್​ ಟೀಕಿಸಿದ ರಾಹುಲ್​ ಗಾಂಧಿ

ಆರ್​ಎಸ್​ಎಸ್​ ವಿರುದ್ಧ ತೀವ್ರ ಟೀಕೆ ಮಾಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಂಘದ ಕಾರ್ಯಕರ್ತರನ್ನು ಕೌರವರಿಗೆ ಹೋಲಿಸಿದ್ದಾರೆ. ಜೈ ಶ್ರೀರಾಮ್​ ಘೋಷಣೆ ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಅಂಬಾಲಾ/ಚಂಡೀಗಢ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್​ಎಸ್​ಎಸ್​) ವಿರುದ್ಧ ವಾಕ್ಸಮರ ಮುಂದುವರಿಸಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಂಘದ ಸದಸ್ಯರನ್ನು '21ನೇ ಶತಮಾನದ ಕೌರವರು' ಎಂದು ಜರಿದಿದ್ದಾರೆ. ಅಲ್ಲದೇ, ಅವರು ಹರ ಹರ ಮಹಾದೇವ, ಸೀತಾರಾಮ ಎಂದು ಜಪಿಸುವುದೇ ಇಲ್ಲ. ಇವು ಭಾರತದ ಮೌಲ್ಯಗಳು ಮತ್ತು ತಪಸ್​ ಶಕ್ತಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ.

ತಮ್ಮ ನೇತೃತ್ವದ ಭಾರತ್ ಜೋಡೋ ಯಾತ್ರೆ ನಿನ್ನೆ ಹರಿಯಾಣದ ಅಂಬಾಲಾ ಜಿಲ್ಲೆಗೆ ತಲುಪಿದ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಗಾಂಧಿ, 'ಹರಿಯಾಣ ಮಹಾಭಾರತದ ನಾಡು. ಮೊದಲು ನಾನಿಲ್ಲಿ 21ನೇ ಶತಮಾನದ ಕೌರವರ ಬಗ್ಗೆ ಹೇಳುವೆ. ಅವರು ಖಾಕಿ ಪ್ಯಾಂಟ್ ಧರಿಸುತ್ತಾರೆ, ಕೈಯಲ್ಲಿ ಲಾಠಿಗಳನ್ನು ಹಿಡಿದುಕೊಳ್ಳುತ್ತಾರೆ. ಶಾಖೆಗಳನ್ನು ನಡೆಸುತ್ತಿದ್ದಾರೆ. ದೇಶದ 2- 3 ಕೋಟ್ಯಧಿಪತಿಗಳು ಸಹಿತ ಈ ಕೌರವರ ಜೊತೆಗೆ ನಿಂತಿದ್ದಾರೆ' ಎಂದು ಆರ್​ಎಸ್​ಎಸ್​ ಹೆಸರು ಪ್ರಸ್ತಾಪಿಸದೇ ಪರೋಕ್ಷವಾಗಿ ಗಂಭೀರ ಮತ್ತು ವಿವಾದಿತ ಹೇಳಿಕೆ ನೀಡಿದರು.

'ಪಾಂಡವರು ನೋಟು ಅಮಾನ್ಯೀಕರಣ ಮಾಡಿದ್ದರೇ?, ತಪ್ಪು ಜಿಎಸ್‌ಟಿ ಜಾರಿಗೊಳಿಸಿದ್ದರೇ?, ಇಂತಹ ತಪ್ಪು ನಿರ್ಧಾರಗಳನ್ನು ಅವರು ಎಂದಾದರೂ ಮಾಡಿದ್ದರೇ? ಎಂದಿಗೂ ಮಾಡಿಲ್ಲ. ಕಾರಣ ಅವರು ತಪಸ್ವಿಗಳಾಗಿದ್ದರು. ನೋಟು ಅಮಾನ್ಯೀಕರಣ, ಜಿಎಸ್‌ಟಿ, ಕೃಷಿ ಕಾನೂನುಗಳು ಜಾರಿ ಮಾಡಿ ಈ ನೆಲದ ರೈತರಿಂದ ಭೂಮಿ ಕದಿಯುವ ಬಗ್ಗೆ ಅವರಿಗೆ(ಪ್ರಧಾನಿ) ಗೊತ್ತಿತ್ತು. ಆದರೂ, ಅವರು ಈ ನಿರ್ಧಾರಗಳಿಗೆ ಸಹಿ ಹಾಕಿದರು. ಇದರ ಹಿಂದೆ ಮೂವರು ಕೋಟಿಕುಳಗಳ ಒತ್ತಡವಿದೆ' ಎಂದು ಆರೋಪಿಸಿದರು.

ರಾಮನಷ್ಟೇ ಸೀತೆಯೂ ಮುಖ್ಯ: ಜೈಶ್ರೀರಾಮ್​ ಎಂಬ ಘೋಷಣೆ ಕೂಗುವುದರ ಬಗ್ಗೆಯೂ ಆಕ್ಷೇಪಿಸಿದ ರಾಹುಲ್​ ಗಾಂಧಿ, 'ಆರ್​ಎಸ್​ಎಸ್​ ಕಾರ್ಯಕರ್ತರು ಜೈಶ್ರೀರಾಮ್​ ಎಂಬುದನ್ನು ಬಿಟ್ಟು ಬೇರೆ ಏನೂ ಹೇಳುವುದಿಲ್ಲ. ಜೈ ಸೀತಾರಾಮ, ಹರಹರ ಮಹಾದೇವ ಎಂದು ಕೂಗಲ್ಲ. ನಾನು ಈ ಬಗ್ಗೆ ಹಲವು ಬಾರಿ ಯೋಚಿಸಿದ್ದೇನೆ. ಕಾರಣ ಏನೆಂದರೆ ಭಗವಂತನಾದ ಶಿವನು 'ತಪಸ್ವಿ'. ಆ ತಪಸ್ಸಿನ ಮೇಲೆ ಅವರು ದಾಳಿ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಅವರು ಹರನನ್ನು ಭಜಿಸುವುದಿಲ್ಲ' ಎಂದು ಟೀಕಿಸಿದರು.

'ರಾಮನಷ್ಟೇ ಸೀತಾದೇವಿಯೂ ಮುಖ್ಯ. ಆದರೆ, ಅವರು ಇದನ್ನು ಎಂದಿಗೂ ಹೇಳುವುದಿಲ್ಲ. ಅವರು ಸೀತೆಯನ್ನು ದೂರವಿಟ್ಟಿದ್ದಾರೆ. ನಮ್ಮ ಇತಿಹಾಸ, ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾಂಗ್ರೆಸ್ ಕಾರ್ಯಕರ್ತರು ಸಂಘದವರನ್ನು ಭೇಟಿಯಾದಾಗ ಜೈ ಸೀತಾರಾಮ ಎಂದು ಸ್ವಾಗತಿಸಬೇಕು. ಸೀತೆ ಮತ್ತು ರಾಮ ಇಬ್ಬರೂ ಮುಖ್ಯ' ಎಂದು ರಾಹುಲ್​ ಗಾಂಧಿ ಪ್ರತಿಪಾದಿಸಿದರು.

ಇಂದೂ ಮಹಾಭಾರತ ನಡೆಯುತ್ತಿದೆ: ಅಂದು ಸತ್ಯ, ಧರ್ಮಕ್ಕಾಗಿ ಮಹಾಭಾರತ ಯುದ್ಧವೇ ನಡೆದಿತ್ತು. ಇಂದು ಕೂಡ ಅದೇ ನಡೆಯುತ್ತಿದೆ. ಆದರೆ, ಜನರಿಗೆ ಅದು ಅರ್ಥವಾಗುತ್ತಿಲ್ಲ. ಇದು ಯಾರ ನಡುವಿನ ಹೋರಾಟ ಗೊತ್ತಾ? ಇಲ್ಲಿ ಪಾಂಡವರು ಯಾರು? ಅರ್ಜುನ, ಭೀಮ ಯಾರು ಗೊತ್ತೇ. ಪಾಂಡವರು ಎಂದೂ ದ್ವೇಷ ಹರಡುವ ಮತ್ತು ಅಮಾಯಕರ ಮೇಲೆ ಯಾವುದೇ ಅಪರಾಧ ಮಾಡಿದ ಬಗ್ಗೆ ನೀವು ಕೇಳಿದ್ದೀರಾ ಎಂದು ಜನರನ್ನು ಪ್ರಶ್ನಿಸಿದರು.

ಕೋಟ್ಯಧಿಪತಿಗಳ ವಿರುದ್ಧ ಟೀಕೆ: ಮಹಾಭಾರತವನ್ನು ಉಲ್ಲೇಖಿಸಿದ ರಾಹುಲ್​ ಗಾಂಧಿ, ಅಂದು ಪಾಂಡವರೊಂದಿಗೆ ಕೋಟ್ಯಧಿಪತಿಗಳು ನಿಂತಿದ್ದರೇ? ಅವರೊಂದಿಗೆ ಶ್ರೀಮಂತರು ಇದ್ದಿದ್ದರೆ ಪಾಂಡವರೇಕೆ ಕಾಡಿಗೆ ಹೋಗುತ್ತಿದ್ದರು?. ಅವರ ಬೆಂಬಲ ಇಲ್ಲದಿದ್ದರೂ ಈ ನೆಲದ ಜನರು, ರೈತರು, ಬಡವರು ಜೊತೆಗೆ ನಿಂತಿದ್ದರು. ಅದೇ ರೀತಿ ಭಾರತ್​ ಜೋಡೋ ಯಾತ್ರೆಗೂ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದರು.

ಮೇಡ್​ ಇನ್​ ಕುರುಕ್ಷೇತ್ರ ಇಂಗಿತ: ಶರ್ಟ್‌ಗಳಲ್ಲಿ, ಮೈಕ್‌ಗಳಲ್ಲಿ, ಧರಿಸುವ ಶೂಗಳು, ಮೊಬೈಲ್ ಫೋನ್‌ಗಳ ಹಿಂಭಾಗದಲ್ಲಿ ಮೇಡ್ ಇನ್ ಚೀನಾ ಎಂದು ಬರೆಯಲಾಗಿದೆ. ಈ ಚೀನಾ ನಿರ್ಮಿತ ವಸ್ತುಗಳಿಂದ ಬೇಸತ್ತಿದ್ದೇನೆ. ನನ್ನ ಆಸೆಯೆಂದರೆ, ಬೀಜಿಂಗ್‌ನಲ್ಲಿರುವ ಯುವಕನೊಬ್ಬ 'ಮೇಡ್ ಇನ್ ಕುರುಕ್ಷೇತ್ರ' ಎಂದು ಬರೆದಿರುವ ಫೋನ್ ಅನ್ನು ಹಿಡಿದಿರಬೇಕು ಎಂದು ಬಯಸುವೆ. ಅದನ್ನು ಸರ್ಕಾರ ಮಾಡಬೇಕು ಎಂದು ಹೇಳಿದರು.

ರಾಹುಲ್​ ಗಾಂದಿ ನೇತೃತ್ವದಲ್ಲಿ ಸೆ.7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್​ ಜೋಡೋ ಯಾತ್ರೆ ಜನವರಿ 30 ಕ್ಕೆ ಜಮ್ಮು ಕಾಶ್ಮೀರದ ಶ್ರೀನಗರ ತಲುಪಿ ಅಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡುವುದರೊಂದಿಗೆ ಕೊನೆಗೊಳ್ಳಲಿದೆ. ಪ್ರಸ್ತುತ ಯಾತ್ರೆ ಹರಿಯಾಣದಲ್ಲಿ ಸಾಗುತ್ತಿದ್ದು, ಪಾದಯಾತ್ರೆ ಇದುವರೆಗೆ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ಥಾನ, ದೆಹಲಿ ಮತ್ತು ಉತ್ತರ ಪ್ರದೇಶಗಳನ್ನು ದಾಟಿ ಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಭಾರತ್​​ ಜೋಡೋ ಯಾತ್ರೆಗಿಂದು ಮಹಿಳಾಮಣಿಗಳ ಸಾಥ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.